ಭಾಗ 1
ಕಳೆದ ಮೂರೂವರೆ ದಶಕಗಳಲ್ಲಿ ಭಾರತ ಕಂಡಂತಹ ಜನಾಂದೋಲನಗಳನ್ನು ಗಮನಿಸಿದಾಗ ತಮ್ಮ ಉದ್ದೇಶಿತ ಗುರಿಯನ್ನು ಸಾಧಿಸಿರುವ, ತಾರ್ಕಿಕ ಅಂತ್ಯ (Logical End) ತಲುಪಿರುವ ಚಳುವಳಿಗಳು ಕೆಲವೇ ಕಾಣುತ್ತವೆ. ರೈತ ಮುಷ್ಕರ, ಸಿಎಎ/ಎನ್ಆರ್ಸಿ ಹೋರಾಟ ಮತ್ತು ಈಗ ಕಂಡಿರುವ ಜೆನ್ ಝೀ ಹೋರಾಟ. ಉಳಿದ ಹೋರಾಟಗಳ ಸಾಫಲ್ಯ ವೈಫಲ್ಯಗಳಿಂದಾಚೆ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ತಮ್ಮ ಅಂತಿಮ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೂ, ಈ ಮೂರೂ ಆಂದೋಲನಗಳು ಕೇಂದ್ರ ಸರ್ಕಾರದ ದಬ್ಬಾಳಿಕೆ ಮತ್ತು ಹಿಂಸಾತ್ಮಕ ಪ್ರತಿಕ್ರಿಯೆಯನ್ನೂ ಲೆಕ್ಕಿಸದೆ ತಮ್ಮ ಗುರಿಯೆಡೆಗೆ ಸಾಗಿ ಉದ್ದೇಶಿತ ಗುರಿ ತಲುಪಿವೆ. ಆದರೆ ಮೂರೂ ಆಂದೋಲನಗಳು ಕ್ರಮಿಸಬೇಕಾದ ದಾರಿ ಇನ್ನೂ ಉಳಿದಿದೆ ಎನ್ನುವ ಎಚ್ಚರ ನಮ್ಮೊಳಗಿರಬೇಕಾಗುತ್ತದೆ.

ಈ ಮೂರೂ ಆಂದೋಲನಗಳನ್ನು ಬೆಸೆಯುವ ಸಮಾನ ಎಳೆ ಎಂದರೆ, ಮೇಲ್ನೋಟಕ್ಕೆ ಸಂಘಟಿತ ಹೋರಾಟವಾಗಿಯೇ ಕಂಡರೂ, ಆಂತರಿಕವಾಗಿ ಬಾಧಿತ, ನೊಂದ ವರ್ಗಗಳು ಯಾವುದೇ ನಿರ್ದಿಷ್ಟ ಸ್ಥಾಪಿತ ಸಂಘಟನೆಗಳನ್ನು ಪ್ರತಿನಿಧಿಸಿರಲಿಲ್ಲ. ಮತ್ತೊಂದು ಸಮಾನ ಅಂಶವೆಂದರೆ, ಹೋರಾಟದ ಕಣಕ್ಕಿಳಿದವರು ಪ್ರಭುತ್ವದ ಎಲ್ಲ ಚಿತ್ರಹಿಂಸೆಗಳನ್ನೂ ಸಹಿಸಿಕೊಂಡು, ಆತ್ಮಸ್ಥೈರ್ಯದೊಂದಿಗೆ ಮುನ್ನಡೆದ ವಿಧಾನ. ಈ ಮೂರೂ ಹೋರಾಟಗಳ ಹಿಂದೆ ಇಡೀ ದೇಶದ ಪ್ರಜ್ಞಾವಂತ ಮನಸ್ಸುಗಳು ಸೈದ್ಧಾಂತಿಕ, ಬೌದ್ಧಿಕ, ಮಾನಸಿಕ ಹಾಗೂ ಸಂಘಟನಾತ್ಮಕ ಬೆಂಬಲ ನೀಡಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಬಹುಮಟ್ಟಿಗೆ ಸ್ಥಾಪಿತ ರಾಜಕಾರಣದಿಂದ ಹೊರತಾದ ಹೋರಾಟಗಳಾಗಿಯೇ ರೂಪುಗೊಂಡ ಈ ಆಂದೋಲನಗಳು ಅಂತಿಮವಾಗಿ ಬಿಂಬಿಸಿದ್ದು , ಆಳುವ ವರ್ಗಗಳ ಆಡಳಿತ ನೀತಿಗಳಿಂದ ಬಾಧಿತರಾದ ತಳಸ್ತರದ ಜನತೆಯ ಹತಾಶೆ, ಆಕ್ರೋಶ ಮತ್ತು ಆತಂಕಗಳನ್ನು.

ವಿಘಟನೆಯ ವಾತಾವರಣದ ಹೋರಾಟಗಳು
ಸಮಾನಾಂತರವಾಗಿ ನೋಡಿದಾಗ ಈ ಮೂರೂ ಯಶಸ್ವಿ ಆಂದೋಲನಗಳಲ್ಲಿ ಕಾಣುವುದು ಸಂಘಟಿತ ಶಕ್ತಿ ಮತ್ತು ವಿಘಟಿತ ಹೋರಾಟಗಳನ್ನು ಒಗ್ಗೂಡಿಸಿದ ಒಂದು ವಿಶಿಷ್ಟ ವಿದ್ಯಮಾನ. ಪ್ರಬಲ ಸರ್ಕಾರಗಳ ವಿರುದ್ಧ ಯಾವುದೇ ಹೋರಾಟಗಳಲ್ಲಿ ಇರಬೇಕಾದ ಗುಣ ಎಂದರೆ ʼ ಸಂಘಟಿತ ಶಕ್ತಿ ʼ (Organised Strength) ಮತ್ತು ಸಾಮೂಹಿಕ ನಾಯಕತ್ವ (Collective Leadership) . ಈ ಹೋರಾಟಗಳ ಗೆಲುವಿನ ಶ್ರೇಯವನ್ನು ಯಾವುದೇ ನಿರ್ದಿಷ್ಟ ಸ್ಥಾಪಿತ ಸಂಘಟನೆ ಅಥವಾ ಪಕ್ಷ ತನ್ನದಾಗಿಸಿಕೊಳ್ಳಲು ಸಾಧ್ಯವೇ ಆಗದಿರುವುದನ್ನು ಭವಿಷ್ಯದ ದೃಷ್ಟಿಯಿಂದ ಹೇಗೆ ನೋಡುವುದು ? ಅಸ್ತಿತ್ವ, ಅಸ್ಮಿತೆ ಮತ್ತು ಸಂಘಪ್ರತಿಷ್ಠೆಗಳ ನಡುವೆ ವಂಚಿತ ಜನತೆ (Decieved People) ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ಆಯ್ಕೆ ಮಾಡಿದ್ದು ಬೀದಿ ಹೋರಾಟಗಳನ್ನು, ಧರಣಿ, ಮುಷ್ಕರ, Rally ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು.

ಏಕೆ ಹೀಗೆ ಎಂದು ಯೋಚಿಸುವುದಕ್ಕಿಂತಲೂ, ಸಾಂಸ್ಥಿಕ ದೃಷ್ಟಿಕೋನದಿಂದ (Institutional Perspective) ಹೊರನಿಂತು ನೋಡಿದರೆ, ಭಾರತದ ಸಾಮಾನ್ಯ ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಲು ಸದಾ ಸಿದ್ಧವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ತಮ್ಮ ಅನ್ನ ಬೆಳೆಯುವ ಹಕ್ಕುಗಳಿಗಾಗಿ ಹೋರಾಡಿದ ರೈತರು, ತಮ್ಮ ಪೌರತ್ವದ ಹಕ್ಕಿಗಾಗಿ ಹೋರಾಡಿದ ಸಿಎಎ ಹೋರಾಟಗಾರರು, ಶೈಕ್ಷಣಿಕ ಭವಿಷ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿ ಯುವಜನರು ನವ ಭಾರತವನ್ನು ಕಾಡುತ್ತಿರುವ ಮೂರು ಪ್ರಧಾನ ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿದ್ದಾರೆ. ಈ ಮೂರೂ ಹಕ್ಕುಗಳು ದೇಶವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುವುದರಿಂದ, ಅಂಚಿಗೆ ತಳ್ಳಲ್ಪಟ್ಟವರು (Marginalised), ನಿರ್ಲಕ್ಷಿತರು (Neglected ) ಮತ್ತು ವಂಚಿತರು (Deceived) ಈ ಹೋರಾಟಗಳಿಗೆ ಜನಾಂದೋಲನದ ಸ್ವರೂಪವನ್ನು ಕಲ್ಪಿಸಿದ್ದಾರೆ.

ಜಂತರ್ ಮಂತರ್ ಹೋರಾಟದ ಗೆಲುವು ವಿಸ್ಮೃತಿಗೆ ಜಾರುವ ಮುನ್ನ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ದೇಶಾದ್ಯಂತ, ವಿಶೇಷವಾಗಿ ಉತ್ತರದ ರಾಜ್ಯಗಳಲ್ಲಿ, ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ನಿರಂತರವಾಗಿ ನಡೆಯುತ್ತಿರುವ ಕಾರ್ಮಿಕ ಹೋರಾಟಗಳು. ಈ ಹೋರಾಟಗಳಲ್ಲಿ ಸ್ಥಾಪಿತ ಕಾರ್ಮಿಕ ಸಂಘಗಳಷ್ಟೇ ಅಲ್ಲದೇ, ಸ್ವತಂತ್ರ ಸಂಘಗಳೂ ಸಹ ಪಾಲ್ಗೊಂಡಿದ್ದು, ನೂರಾರು ಕಾರ್ಮಿಕರು ಪೊಲೀಸ್ ದಬ್ಬಾಳಿಕೆಗೆ ಗುರಿಯಾಗಿದ್ದಾರೆ. ಇದರ ಜೊತೆಗೇ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ರಾಜ್ಯಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕಾರ್ಮಿಕರು, ಅತಿಥಿ ಉಪನ್ಯಾಸಕ/ಶಿಕ್ಷಕರು ತಮ್ಮ ಬೀದಿ ಹೋರಾಟಗಳನ್ನು ಮುಂದುವರೆಸಿದ್ದಾರೆ. ಅಸ್ಮಿತೆ/ಅಸ್ತಿತ್ವಗಳಿಂದಾಚೆ ನೋಡಿದಾಗ, ಭಾರತವನ್ನು ಕಾಡುತ್ತಿರುವ ʼ ಜೀವನೋಪಾಯದ ಪ್ರಶ್ನೆ ʼ (Question of Livelihood) ಇಲ್ಲಿ ಎದ್ದು ಕಾಣುತ್ತದೆ.
ಯುವಜನಾಂದೋಲನದ ಹೊಸ ಹಾದಿ
ವಿದ್ಯಾರ್ಥಿ ಯುವಜನರ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮತ್ತು 36 ದಿನಗಳ ಜಂತರ್ ಮಂತರ್ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ವಿದ್ಯಾರ್ಥಿ ಸಂಘಟನೆಗಳು (ಬಹುಪಾಲು ಎಡಪಂಥೀಯ) ಈ ಎಲ್ಲ ಜಟಿಲ ಸಿಕ್ಕುಗಳನ್ನು ಪ್ರತಿನಿಧಿಸುತ್ತವೆ. ಲಕ್ಷಾಂತರ ಜನರನ್ನು ಸಂಘಟಿಸಿದ ಈ ಹೋರಾಟದಲ್ಲಿ ಧ್ವನಿಸಿದ್ದು ಜೆನ್ ಝೀ ಅಥವಾ ಮಿಲೆನಿಯಲ್ ಮಕ್ಕಳ ನೋವಿನ ಧ್ವನಿ ಮತ್ತು ವಂಚಿತ ಜನಸಂಖ್ಯೆಯ ಹತಾಶೆ ಮತ್ತು ಆತಂಕಗಳು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಈ ಯಶಸ್ವಿ ಹೋರಾಟದ ಒಂದು ಅಂಶ ಮಾತ್ರ. ಪ್ರವೇಶ ಪರೀಕ್ಷೆಗಳ ಸುಧಾರಣಾ ಕ್ರಮಗಳು ಮತ್ತೊಂದು ಆಯಾಮ. ಆದರೆ ಜಂತರ್ ಮಂತರ್ನಲ್ಲಿ ಮೊಳಗಿದ ಧ್ವನಿಗಳಿಗೆ ಕಿವಿಗೊಟ್ಟರೆ ವಿಕಸಿತ ಭಾರತದ ಆಂತರ್ಯದಲ್ಲಿ ಅವಿತಿರುವ ಎಲ್ಲ ವಂಚಿತ-ನಿರ್ಲಕ್ಷಿತ ಸಮಾಜಗಳ ಹತಾಶೆಯನ್ನು ಗುರುತಿಸಬಹುದು.

ಈ ಹಿನ್ನೆಲೆಯಲ್ಲಿ ಜಂತರ್ ಮಂತರ್ ವಿದ್ಯಮಾನಗಳನ್ನು ಹೇಗೆ ಗ್ರಹಿಸಬಹುದು ? ಭಾರತದ ಯುವಶಕ್ತಿಯ ಪ್ರದರ್ಶನ ಎಂಬ ಅತಿರೇಕದ ವರ್ಣನೆಗೆ ಹೋಗದೆ ಬಲಿಷ್ಠ ಸರ್ಕಾರವೊಂದನ್ನು ಮಂಡಿಯೂರುವಂತೆ ಮಾಡಿದ ಜನಾಂದೋಲನದ ಒಂದು ಆಯಾಮವಾಗಿ ನೋಡಿದಾಗ ಯುವಜನತೆ ಮುಂಚೂಣಿಯಲ್ಲಿ ನಿಂತು ನಡೆಸಿದ ಈ ಹೋರಾಟ ಭವಿಷ್ಯದ ಜನಾಂದೋಲನಗಳಿಗೆ ಒಂದು ಬೆಳಕಿಂಡಿಯ ಹಾಗೆ ಕಾಣುತ್ತದೆ. ಜನತೆಯ ಹಕ್ಕೊತ್ತಾಯಗಳಿಗೆ ಸುಲಭವಾಗಿ ಬಗ್ಗದ ಸರ್ಕಾರವೊಂದು ಈ ಹೋರಾಟಗಳಿಂದ ಆತಂಕಕ್ಕೊಳಗಾಗಿರುವುದು, ತದನಂತರ ಕೈಗೊಂಡಿರುವ ಉಪಕ್ರಮಗಳಿಂದಲೇ ಸ್ಪಷ್ಟವಾಗುತ್ತದೆ. ನೀಟ್ ಪತ್ರಿಕೆಗಳ ಸೋರಿಕೆ ಮತ್ತು 21 ಶಿಕ್ಷಣಾರ್ಥಿಗಳ ಆತ್ಮಹತ್ಯೆ ಸರ್ಕಾರವನ್ನು ಎಚ್ಚರಿಸಲಿಲ್ಲ ಆದರೆ ಈ ದುರವಸ್ಥೆಯ ವಿರುದ್ಧ ದೆಹಲಿಯಲ್ಲಿ ಮೊಳಗಿದ ಯುವದನಿ ಇಡೀ ವ್ಯವಸ್ಥೆಯನ್ನು ಧಿಗ್ಗನೆದ್ದು ಕುಳಿತುಕೊಳ್ಳುವಂತೆ ಮಾಡಿದೆ. ಜನದನಿಗೆ (peoplesʼ voice) , ಅದರಲ್ಲೂ ಯುವದನಿಗೆ (Youth Voice) ಇರುವ ಶಕ್ತಿಯನ್ನು ಇನ್ನಾದರೂ ಬಿಜೆಪಿ ನಾಯಕತ್ವ ಗ್ರಹಿಸಬೇಕಿದೆ.
ಸರ್ಕಾರದ ಕ್ರೂರ ದಬ್ಬಾಳಿಕೆಯ ನಡುವೆ
2020-21ರ ದೇಶವ್ಯಾಪಿ ಮುಷ್ಕರದ ಸಂದರ್ಭದಲ್ಲಿ ಆಡಳಿತ ಕ್ರೌರ್ಯದ ಮೆದು ಸ್ವರೂಪದ ಪುನರಾವರ್ತನೆಯನ್ನು ಜಂತರ್ ಮಂತರ್ನಲ್ಲಿ ಗುರುತಿಸಬಹುದಾದರೂ, ಅಲ್ಲಿ ನೆರೆದಿದ್ದ ಯುವಜನರಲ್ಲಿದ್ದ ಹೋರಾಟದ ಸ್ಫೂರ್ತಿ ಮತ್ತು ಗುರಿ ತಲುಪುವ ಛಲ ಎಲ್ಲವನ್ನೂ ನಿಷ್ಫಲಗೊಳಿಸಿದ್ದು ಆಶಾದಾಯಕ ಬೆಳವಣಿಗೆ. ಹಿಂದುತ್ವ ಪರಿಚಾರಕರಾದ , ಅರ್ನಬ್ ಗೋಸ್ವಾಮಿ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಈ ಹೋರಾಟದ ಹಿಂದೆ ಚೀನಾದ ಧನ ಸಹಾಯ, ಅಮೆರಿಕದ ಸಿಐಎ ಬೆಂಬಲ, ಕಲ್ಪಿತ ತುಕಡೇ ತುಕಡೇ ಗ್ಯಾಂಗ್ ಪ್ರೋತ್ಸಾಹ ಇತ್ಯಾದಿ ಸುಳ್ಳು ನಿರೂಪಣೆಗಳನ್ನು (False Narratives) ಅವ್ಯಾಹತವಾಗಿ ಹರಿಸಿದರೂ ದೇಶದ ʼಪ್ರಜ್ಞಾವಂತ ನಾಗರಿಕರುʼ (ಹಿಂದುತ್ವ ಸರಳುಗಳಿಂದ ಹೊರಗಿರುವವರು) ನಂಬಲೂ ಇಲ್ಲ, ಸಮ್ಮಾನಿಸಲೂ ಇಲ್ಲ. ಇದಕ್ಕೆ ಕಾರಣ ಯುವ ಸಮೂಹ ಇನ್ನೂ ವೇಗವಾಗಿ, ವ್ಯಾಪಕವಾಗಿಇ ವಾಸ್ತವಗಳನ್ನು ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ಪ್ರಚಾರ ಮಾಡಿದ್ದರು.
ಹಾಗಾಗಿ ರೈತ ಮುಷ್ಕರದ ಸಂದರ್ಭದಲ್ಲಿ ದೇಶವನ್ನು ನಂಬಿಸಿದ ರೀತಿಯಲ್ಲಿ ಈ ಬಾರಿ ಸಾಧ್ಯವಾಗಲಿಲ್ಲ. ಬದಲಾಗಿ ಗೋದಿ ಮೀಡಿಯಾ ಎಂದೇ ಕರೆಯಲ್ಪಡುವ ವಂದಿಮಾಗಧ ಟಿವಿ ವಾಹಿನಿಗಳು ಅಪಹಾಸ್ಯಕ್ಕೊಳಗಾದವು. ದೇಶದ ಯುವದನಿಯಲ್ಲಿ ಅಡಗಿರುವ ಹತಾಶೆಯನ್ನು ಗ್ರಹಿಸಲು ವಿಫಲವಾದ ಮುಖ್ಯವಾಹಿನಿ ಸಂವಹನ ಮಾಧ್ಯಮಗಳು ಇನ್ನಾದರೂ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಬೇಕಿದೆ. ಹೋರಾಟಗಾರರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ ಎಂಬ ಕೇರಳದ ಬಿಜೆಪಿ ನಾಯಕ, ಹೊಸಕಿ ಹಾಕಬೇಕಿತ್ತು ಎನ್ನುವ ಸಂಸದೆ ಈ ವಕ್ರದೃಷ್ಟಿಯ ದನಿಗಳು ಬಿಜೆಪಿಯ ಆಂತರಿಕ ಕೊಳಕನ್ನು ಪ್ರದರ್ಶಿಸಿದೆ. ತಮ್ಮ ಕುಂದುಕೊರತೆಗಳನ್ನು ದೇಶದ ಮುಂದಿಡುತ್ತಿರುವ ವಿದ್ಯಾರ್ಥಿ ಯುವಜನರನ್ನು ʼಸದೆಬಡಿಯುವʼ ಮನಸ್ಥಿತಿಯೇ ವಿಕಸಿತ ಭಾರತದ ಅವನತಿಗೆ ಕಾರಣವಾಗಬಹುದು.
ಈ ವಕ್ರಾಭಿಪ್ರಾಯಗಳ (Crooked Opinions) ಹೊರತಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಒಮ್ಮೆಯೂ ಸಹ ʼಘುಸ್ಬೈಟಿಯಾ ʼ (ನುಸುಳುಕೋರರು) ಪದವನ್ನು ಬಳಸದೆ ಇರುವುದು ಇಡೀ ಸನ್ನಿವೇಶದ ವಾಸ್ತವಿಕ ಚಿತ್ರಣ ನೀಡುತ್ತದೆ. ಹಿಂದುತ್ವದ ಪ್ರಖರ ವಾಗ್ಮಿಗಳು ಈಗಲೂ ಹೇಳುತ್ತಿರುವ ಹಾಗೆ ಸಿಜೆಪಿ ಹೋರಾಟಕ್ಕೆ ಚೀನಾ,ಪಾಕಿಸ್ತಾನ, ಬಾಂಗ್ಲಾ ಇತ್ಯಾದಿ ಸಂಪರ್ಕ ಇದ್ದಿದ್ದರೆ, ಕೇಂದ್ರ ಸರ್ಕಾರ ಆ ಯುವ ಶಕ್ತಿಯೊಡನೆ ಮಾತುಕತೆಗೆ ಮುಂದಾಗಿದ್ದೇಕೆ ? ಆಂದೋಲನದ ಯಾವುದೇ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಲಿಲ್ಲವೇಕೆ ? ಬಹುಶಃ ಈ ಆಂದೋಲನ ಸರ್ಕಾರದ ಅಡಿಪಾಯವನ್ನೇ ಅಲುಗಾಡಿಸುವ ಸಾಧ್ಯತೆಗಳನ್ನು ಮನಗಂಡಿರುವುದರಿಂದಲೇ ಕೇಂದ್ರ ಸರ್ಕಾರ ಮಾತುಕತೆಗಳಿಗೆ ಮುಂದಾಗಿರುವುದು ಸ್ಪಷ್ಟ. ಈ ಅಪಾಯಗಳನ್ನು ಅರಿತೆ ಸರ್ಕಾರ ಕ್ಷಿಪ್ರಗತಿಯಲ್ಲಿ ಪರೀಕ್ಷಾ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರಕ್ಕೆ ಯುವಜನಾಂಗದ ನಾಡಿಮಿಡಿತ ಅಥವಾ ಆಂತರಿಕ ನೋವು ಅರ್ಥವಾಗಿದ್ದರೆ, ಈ ಕ್ರಮಗಳನ್ನು ಕೈಗೊಳ್ಳಲು ಲಕ್ಷಾಂತರ ವಿದ್ಯಾರ್ಥಿ ಯುವ ಜನರು 36 ದಿನಗಳ ಹೋರಾಟ ನಡೆಸಬೇಕಿರಲಿಲ್ಲ.
ಪ್ರಜಾಪ್ರಭುತ್ವದ ಮೌಲ್ಯಗಳ ಶೋಧದಲ್ಲಿ
ಪ್ರಜಾಪ್ರಭುತ್ವ ತನ್ನ ಅರ್ಥವನ್ನು ಕಂಡುಕೊಳ್ಳುವುದೇ ಆಡಳಿತ ಪಕ್ಷಗಳಲ್ಲಿರುವ ಸೂಕ್ಷ್ಮ ಸಂವೇದನೆ ಮತ್ತು ಸ್ಪಂದನೆಯ ಗುಣಗಳ ಮೂಲಕ. ಕಳೆದ 12 ವರ್ಷಗಳಲ್ಲಿ ಬಿಜೆಪಿ ಈ ಎರಡೂ ಔದಾತ್ಯಗಳನ್ನು ಕಳೆದುಕೊಂಡಿದೆ. ಪ್ರತಿರೋಧ ಎಂದರೆ ದೇಶ ವಿರೋಧಿ ಎಂಬ ಸಮೀಕರಣವನ್ನು ಉತ್ಪಾದಿಸಿ, ವಿತರಣೆ ಮಾಡುವ ಹಿಂದುತ್ವ ಸಂಘಟನೆಗಳ, ವಾಟ್ಸಾಪ್ ವಿಶ್ವವಿದ್ಯಾಲಯದ ಬೌದ್ಧಿಕ ವಲಯ ಈ ಎರಡೂ ಮೌಲ್ಯಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದೆ. ಇಲ್ಲಿಂದಲೇ ನಮ್ಮದೇ ಮಕ್ಕಳನ್ನು ಗುಂಡಿಟ್ಟು ಕೊಲ್ಲುವ, ಹೊಸಕಿ ಹಾಕುವ ಮನಸ್ಥಿತಿಯೂ ಸೃಷ್ಟಿಯಾಗುತ್ತದೆ. ಯುವ ಜನಾಂದೋಲನಕ್ಕೆ ಮಣಿದು ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ವಿವಿಧ ಪರೀಕ್ಷೆಗಳ ನಿರ್ವಹಣೆ ಮತ್ತು ವೈಫಲ್ಯಗ ಳಿಗೆ ನೈತಿಕ ಜವಾಬ್ದಾರಿಯನ್ನು ಒಪ್ಪಿಕೊಳ್ಳದೆ ತಮ್ಮ ರಾಜೀನಾಮೆ ಪತ್ರದಲ್ಲಿ “ ಪ್ರತಿಭಟನೆಯಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ದೇಶ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸುವ ಉದ್ದೇಶವಿತ್ತು” ಎಂದು ಹೇಳಿರುವುದು ಅಧಿಕಾರದ ದರ್ಪ ಮತ್ತು ವೈಯುಕ್ತಿಕ ಅಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ.

ಪ್ರಜಾತಂತ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷವಾದರೂ, ಯಾವುದೇ ಸಿದ್ಧಾಂತ ಅನುಸರಿಸಿದರೂ, ಕನಿಷ್ಠ ಅಪರಾಧಿ ಪ್ರಜ್ಞೆ, ಪಾಪ ಪ್ರಜ್ಞೆ ಇರಬೇಕು. ನವ ಭಾರತ ಇದನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದಲೇ ಸಾಮಾಜಿಕ ಮೌಲ್ಯಗಳು ಪಾತಾಳಕ್ಕೆ ಕುಸಿಯುತ್ತಿವೆ, ಸಮಾಜದ ಎಲ್ಲ ಮಗ್ಗುಲುಗಳೂ ಅವನತಿಯತ್ತ ಸಾಗುತ್ತಿವೆ. ಗುಜರಾತ್ನಲ್ಲಿ ತಾತ್ಕಾಲಿಕವಾಗಿ ಬಿಡುಗಡೆಯಾಗಿದ್ದ ಅತ್ಯಾಚಾರಿಗಳಿಗೆ ಸಾರ್ವಜನಿಕ ಸನ್ಮಾನ ಮಾಡಿದ್ದ ಸಮಾಜವೇ , ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಅವರನ್ನೂ ಸನ್ಮಾನಿಸಿದೆ. ಸೂಕ್ಷ್ಮ ಸಂವೇದನೆ ಮತ್ತು ಸ್ಪಂದನೆ ನಶಿಸಿಹೋಗಿರುವ ಸಮಾಜದಲ್ಲಿ ಮಾತ್ರ ಇಂತ ವಿಕೃತಿಗಳನ್ನು ಕಾಣಲು ಸಾಧ್ಯ. ಇದನ್ನು ಪುಷ್ಟೀಕರಿಸುವಂತೆ, ಈವರೆಗೂ ಪ್ರಧಾನಮಂತ್ರಿಯಿಂದಾಗಲೀ, ಕೇಂದ್ರ ಸರ್ಕಾರದಿಂದಾಗಲೀ ಆತ್ಮಹತ್ಯೆಗೀಡಾದ 21 ಶಿಕ್ಷಣಾರ್ಥಿಗಳಿಗೆ ಅನುಕಂಪ ವ್ಯಕ್ತವಾಗಿಲ್ಲ, ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನದ ಮಾತುಗಳು ಕೇಳಿಬಂದಿಲ್ಲ.

ಯುವ ಜನಾಂಗದ ಈ ಹೋರಾಟದ ಯಶಸ್ಸನ್ನು ಗುರುತಿಸಬೇಕಿರುವುದು ಸರ್ಕಾರದ ಪ್ರತಿಕ್ರಿಯೆಯಲ್ಲಿ. ವಿರೋಧ ಪಕ್ಷಗಳಿಗೆ ಸಣ್ಣ ಅವಕಾಶವನ್ನೂ ಕಲ್ಪಿಸದಿರುವ, ವಿರೋಧಿಗಳನ್ನು ಸದಾ ʼ ದೇಶದ್ರೋಹಿಗಳೆಂದು ʼ ಬಿಂಬಿಸುವ ಬಿಜೆಪಿ ಆಧಿಪತ್ಯದ ಪಕ್ಷ ರಾಜಕಾರಣದಲ್ಲಿ ಈ ಹೋರಾಟವು ಒಂದು ನಿರ್ಣಾಯಕ ಕ್ಷಣವನ್ನು ಬಿಂಬಿಸುತ್ತದೆ. NEET ಮತ್ತಿತರ ಪದವಿ-ಸ್ನಾತಕೋತ್ತರ ವ್ಯಾಸಂಗದ ಪ್ರವೇಶ ಪರೀಕ್ಷೆಗಳು ಮೂಲತಃ ಸೀಮಿತ ಅವಕಾಶಗಳಿರುವ ವ್ಯವಸ್ಥೆಯೊಳಗೆ ಭಾರತದ ಯುವ ಜನತೆ ಪ್ರವೇಶಿಸಲು ಇರುವ ಒಂದು ದ್ವಾರ. ತದನಂತರ ಉತ್ತಮ ಉದ್ಯೋಗಾವಕಾಶಗಳು ದೊರೆಯುವ ಭರವಸೆಯೊಂದಿಗೆ ಯುವ ಜನತೆ ಈ ಪ್ರವೇಶಕ್ಕಾಗಿ ಹಾತೊರೆಯುತ್ತಾರೆ. ವರ್ತಮಾನದ ಭಾರತದಲ್ಲಿ ಉದ್ಯೋಗಗಳು ಅಸಂಘಟಿತ ವಲಯದಲ್ಲಿ ಮಾತ್ರ ಕಾಣುತ್ತಿದ್ದರೂ, ಯುವಜನತೆ ಭವಿಷ್ಯದ ಬದುಕು ಕಟ್ಟಲು ಇದನ್ನೇ ಹಂಬಲಿಸುತ್ತಿರುವುದು ವಾಸ್ತವ.
ಈ ಹಿನ್ನೆಲೆಯಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆತ್ಮಹತ್ಯೆಗಳು ಸಮಾಜದ ಅಂತಃಪ್ರಜ್ಞೆಯನ್ನು ಕಲಕಿಬಿಟ್ಟಿದೆ. ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರುವ ಪ್ರವೇಶ ಪರೀಕ್ಷೆಯ ಸಂಸ್ಥೆಗಳು ನರೇಂದ್ರಮೋದಿ ಅವರ ನೆಚ್ಚಿನ “ ನ ಖಾವೂಂಗಾ ನ ಖಾನೇ ದೂಂಗಾ” (ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ) ಎಂಬ ಘೋಷಣೆಗೆ ಮಾನ್ಯತೆಯನ್ನೇ ನೀಡಿಲ್ಲ. ತತ್ಪರಿಣಾಮವಾಗಿ ತಮ್ಮ ಶಾಲಾ ಪರೀಕ್ಷೆಗಳ ಪರಿಶ್ರಮದ ಜೊತೆಗೇ NEET ಪರೀಕ್ಷೆ ಬರೆದಿದ್ದ 20 ಲಕ್ಷಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ಪತ್ರಿಕೆಯ ಸೋರಿಕೆಯ ಪರಿಣಾಮವಾಗಿ ಮತ್ತೊಮ್ಮೆ ಬರೆಯಬೇಕಾಯಿತು. ಹಲವು ವಿದ್ಯಾರ್ಥಿಗಳು ಈ ಅಗ್ನಿಪರೀಕ್ಷೆಯಲ್ಲಿ ಬದುಕುಳಿಯಲಾಗಲಿಲ್ಲ. ಇಂದಿಗೂ ಸಹ ಈ ಕಳೆದುಹೋದ ಮಕ್ಕಳ ತಂದೆ ತಾಯಿಯರ ಆಂತರ್ಯದ ವೇದನೆ-ಯಾತನೆ-ತಳಮಳ ಮತ್ತು ಶೋಕ ಸಾರ್ವಜನಿಕ ಸಂಕಥನದ ವಿಷಯವಾಗಿಲ್ಲ. ಇಡೀ ಸಮಾಜವೇ ಅಸೂಕ್ಷ್ಮವಾಗಿರುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೇ ?
ಮುಂದುವರೆಯುವುದು ,,,,,,






