ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಹೋರಾಟ ನಡೆಸಿ ದೇಶದ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಪ್ರತಿಭಟನೆಯಿಂದಲ್ಲ, ಜ್ಯೋತಿಷಿಯೊಬ್ಬರು ಅವರ ಭವಿಷ್ಯದ ಬಗ್ಗೆ ನೀಡಿರುವ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಅಭಿಯಾನವು ನಂತರ ದೆಹಲಿಯ ಜಂತರ್ ಮಂತರ್ ವರೆಗೆ ತಲುಪಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ಅಮೆರಿಕದ ಬೋಸ್ಟನ್‌ನಲ್ಲಿ ಇದ್ದ ಅಭಿಜಿತ್ ದೀಪ್ಕೆ, ಅಭಿಯಾನಕ್ಕೆ ಸಿಕ್ಕ ಬೆಂಬಲದ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿ ಸ್ವತಃ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಜ್ಯೋತಿಷಿಯೊಬ್ಬರು ಅಭಿಜಿತ್ ದೀಪ್ಕೆ ಅವರ ಭವಿಷ್ಯದ ಕುರಿತು ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ದೀಪ್ಕೆ ಅವರ ಮುಂದಿನ ಜೀವನದಲ್ಲಿ ಹಲವು ಸವಾಲುಗಳು ಎದುರಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜ್ಯೋತಿಷಿಯ ಪ್ರಕಾರ, ಸಂಖ್ಯಾಶಾಸ್ತ್ರದ ಆಧಾರದಲ್ಲಿ 2, 4 ಮತ್ತು 8 ಸಂಖ್ಯೆಗಳ ಪ್ರಭಾವ ಹೊಂದಿರುವವರ ಜೀವನದಲ್ಲಿ ಏರಿಳಿತಗಳು ಹೆಚ್ಚು ಕಂಡುಬರುತ್ತವೆ. ಇದೇ ಹಿನ್ನೆಲೆಯಲ್ಲಿ ದೀಪ್ಕೆ ಅವರ ಯಶಸ್ಸು ದೀರ್ಘಕಾಲ ಉಳಿಯದೇ, ಮುಂದಿನ ದಿನಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.ಅಷ್ಟೇ ಅಲ್ಲದೆ, ಮುಂದಿನ ವರ್ಷ ಅಭಿಜಿತ್ ದೀಪ್ಕೆ ಅವರಿಗೆ ಹೆಚ್ಚು ಒತ್ತಡದ ಪರಿಸ್ಥಿತಿ ಎದುರಾಗಬಹುದು. ಪರಿಸ್ಥಿತಿ ಪ್ರತಿಕೂಲವಾದರೆ ಕಾನೂನು ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಇವು ಜ್ಯೋತಿಷಿಯ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅವುಗಳಿಗೆ ಯಾವುದೇ ವೈಜ್ಞಾನಿಕ ಅಥವಾ ಅಧಿಕೃತ ಆಧಾರವಿಲ್ಲ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.






