ಪ್ರಜಾಪ್ರಭುತ್ವದ ಬೇರುಗಳು ಶಿಥಿಲವಾಗಲು ಭ್ರಷ್ಟಾಚಾರದ ಆಲದ ಬೇರುಗಳು ವ್ಯಾಪಿಸಿರುವುದೇ ಕಾರಣ
ಬಂಡವಾಳಶಾಹಿ ಆರ್ಥಿಕತೆಯ ಮೂಲ ಲಕ್ಷಣ ಎಂದರೆ ಅಧಿಕಾರ ಕೇಂದ್ರಗಳ ಮೇಲೆ ಹಣಕಾಸು ಮಾರುಕಟ್ಟೆಯ ಸಂಪೂರ್ಣ ಹಿಡಿತವನ್ನು ಸಾಧಿಸುವುದು, ತನ್ಮೂಲಕ ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಆಡಳಿತ ವ್ಯವಸ್ಥೆಯಲ್ಲಿ ಚಲನಶೀಲ ಬಂಡವಾಳದ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಕಾಪಾಡಿಕೊಂಡುಬರುವುದು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಔದ್ಯಮಿಕ ವಲಯ ಅಧಿಕಾರ ರಾಜಕಾರಣದ ಸಾಮೀಪ್ಯ ಹಾಗೂ ಸಾಂಗತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಲೇ ತನ್ನ ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂಡವಾಳದ ಮುಕ್ತ ಹರಿವು ಮತ್ತು ವಿಸ್ತರಣೆಗೆ ನೇರವಾಗಿ ನೆರವಾಗುವುದು ಚುನಾವಣಾ ಪ್ರಕ್ರಿಯೆ ಹಾಗೂ ಅಧಿಕಾರ ಕೇಂದ್ರಗಳ ವಿಕೇಂದ್ರೀಕರಣ.
ತಳಮಟ್ಟದಲ್ಲಿ ಜನಸಾಮಾನ್ಯರ ಕೈಗೆ ಅಧಿಕಾರ ಕೊಡುವ ಉದಾತ್ತ ಧ್ಯೇಯದೊಂದಿಗೆ ಜಾರಿಯಾಗುವ ವಿಕೇಂದ್ರೀಕರಣ ನೀತಿಗಳು ಸಾಂಸ್ಥಿಕವಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದಾದರೂ, ಭೌತಿಕವಾಗಿ ಬಂಡವಾಳಶಾಹಿಯ ನಿಯಂತ್ರಣ ಶಕ್ತಿಯನ್ನು ಮೇಲಿನಿಂದ ಕೆಳಗಿನವರೆಗೂ ವಿಸ್ತರಿಸಲು ಮುಕ್ತ ಅವಕಾಶ ಮಾಡಿಕೊಡುತ್ತಲೇ ಇರುತ್ತವೆ. ಆರ್ಥಿಕತೆಯ ಎಲ್ಲ ವಲಯಗಳಲ್ಲಿ ತನ್ನ ಬೇರುಗಳನ್ನು ಹರಡುವ ಬಂಡವಾಳ ತನ್ನ ಔದ್ಯಮಿಕ ಬಲದಿಂದಲೇ ಅಧಿಕಾರ ಕೇಂದ್ರಗಳ ವ್ಯಾಪ್ತಿಯನ್ನೂ ಆಕ್ರಮಿಸಿಕೊಂಡು, ಚುನಾವಣಾ ರಾಜಕಾರಣದ ಒಂದು ಭಾಗವಾಗಿ ವ್ಯವಸ್ಥೆಯೊಳಗೆ ತನ್ನ ಭದ್ರಕೋಟೆಯನ್ನು ನಿರ್ಮಿಸಿಕೊಳ್ಳುತ್ತದೆ. ಭಾರತ ಈಗ ಅನುಸರಿಸುತ್ತಿರುವ ನವ ಉದಾರವಾದದ ಆರ್ಥಿಕ ನೀತಿಗಳು ಹಾಗೂ ಆಪ್ತ ಬಂಡವಾಳಶಾಹಿ (Crony capitalism) ವ್ಯವಸ್ಥೆಯು ಈ ವಿಸ್ತರಣೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಅಧಿಕಾರ ಕೇಂದ್ರಗಳ ಆವರಣದಲ್ಲಿ
ಹಾಗಾಗಿಯೇ ಗ್ರಾಮ ಪಂಚಾಯತ್ ಹಂತದಿಂದ ಸಂಸತ್ತಿನವರೆಗೂ ನಡೆಯುವ ಪ್ರಜಾಸತ್ತಾತ್ಮಕ ಚುನಾವಣೆಗಳು ಸಂಪೂರ್ಣವಾಗಿ ಹಣಕಾಸು ವ್ಯವಹಾರದ ಚೌಕಟ್ಟಿನೊಳಗೇ ನಡೆಯುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಅಧಿಕಾರ ಗದ್ದುಗೆ ಏರುವವರೆಗೂ ಅಭ್ಯರ್ಥಿಗಳು ಔದ್ಯಮಿಕ ಮಾರುಕಟ್ಟೆಯ ಮೂಲಕವೇ ಪೋಷಿಸಲ್ಪಡುತ್ತಾರೆ. ಚುನಾವಣೆಗಳ ಸಂದರ್ಭದಲ್ಲಿ ಹಣ-ವಸ್ತುಗಳನ್ನು ಹಂಚುವ ಒಂದು ಅನಿಷ್ಟ ಪ್ರಕ್ರಿಯೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಈ ಹಂತದಿಂದಲೇ ಆರಂಭವಾಗುವ ಅವಿನಾಭಾವ ಸಂಬಂಧಗಳಲ್ಲಿ ರಾಜಕೀಯ ಪಕ್ಷಗಳೊಡನೆ ಔದ್ಯಮಿಕ ಸಂಸ್ಥೆಗಳೊಂದಿಗೇ ಆಧ್ಯಾತ್ಮಿಕ ಮಠಮಾನ್ಯಗಳೂ, ಧಾರ್ಮಿಕ ಕೇಂದ್ರಗಳೂ, ಮಾರುಕಟ್ಟೆ ಪ್ರಾಬಲ್ಯ ಹೊಂದಿರುವ ಕಾರ್ಪೋರೇಟ್ ಉದ್ದಿಮೆಗಳೂ ಪರಸ್ಪರ ಬೆಸೆದುಕೊಳ್ಳುತ್ತವೆ. ಈ ಒಂದು ಪ್ರಕ್ರಿಯೆಯನ್ನೇ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ನಾವು ಗಮನಿಸಬೇಕಿದೆ.
ಬಂಡವಾಳಿಗ (ಬೂರ್ಷ್ವಾ) ರಾಜಕೀಯ ಪಕ್ಷಗಳು ಎಷ್ಟೇ ಸಭ್ಯ-ಪ್ರಾಮಾಣಿಕ ಚಾರಿತ್ರ್ಯದ ಮುಖವಾಡ ಧರಿಸಿದರೂ ತೆರೆಮರೆಯಲ್ಲಿ ನಡೆಯುವ ಕಸರತ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚುನಾವಣೆಗಳ ಸಂದರ್ಭಗಳಲ್ಲಿ ಟಿಕೆಟ್ ಹಂಚಿಕೆ ಎನ್ನುವುದು ಒಂದು ವ್ಯವಸ್ಥಿತ ಜಾಲದಲ್ಲೇ ನಡೆಯುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಣ್ಣ ಹಳ್ಳಿಯಿಂದ ದೆಹಲಿಯವರೆಗೂ ವಿಸ್ತರಿಸುವ ಈ ಜಾಲದ ಭಾಗಿದಾರರಾಗಿಯೇ ಮಧ್ಯವರ್ತಿಗಳೂ, ವಶೀಲಿಬಾಜಿ ವ್ಯಕ್ತಿ-ಸಂಘಟನೆಗಳೂ, ಲಾಬಿಕೋರ ಏಜೆಂಟರೂ ಮತ್ತು ಪ್ರಧಾನ ನಾಯಕರ ಹಿಂಬಾಲಕರಾಗಿಯೇ ಗುರುತಿಸಿಕೊಳ್ಳುವ ತಳಮಟ್ಟದ ಕಾರ್ಯಕರ್ತರೂ ಕಂಡುಬರುತ್ತಾರೆ. ಈ ಜಾಲದ ಲಕ್ಷ್ಮಣರೇಖೆಯನ್ನು ದಾಟಿ ಯಾವುದೇ ವ್ಯಕ್ತಿಯೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವುದು ಅಸಾಧ್ಯವಾಗುತ್ತದೆ. ಜನಪ್ರತಿನಿಧಿಯಾಗಲು ಬಯಸುವ ವ್ಯಕ್ತಿಗಳಿಗೆ ತಮ್ಮ ವ್ಯಕ್ತಿಗತ ಪ್ರಾಮಾಣಿಕತೆ, ನಿಷ್ಠೆ, ಅರ್ಹತೆಗಳಿಗಿಂತಲೂ ತಾವು ನಿರ್ವಹಿಸಲು ಸಾಧ್ಯವಾಗಬಹುದಾದ ಚುನಾವಣಾ ಮಾರುಕಟ್ಟೆಯ ವ್ಯಾಪ್ತಿ ನಿರ್ಣಾಯಕವಾಗುತ್ತದೆ. ಆದ್ದರಿಂದಲೇ ಸ್ಪರ್ಧಾತ್ಮಕ ವಾತಾವರಣದಲ್ಲಿ ಹಲವಾರು ಪ್ರಾಮಾಣಿಕ ರಾಜಕಾರಣಿಗಳು ಅಂತಿಮ ಕಣದಿಂದ ದೂರವೇ ಉಳಿಯುತ್ತಾರೆ.
ಈ ಭ್ರಷ್ಟ ಪರಂಪರೆಯ ಪರಿಣಾಮವಾಗಿಯೇ ಇಂದಿನ ರಾಜಕಾರಣದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿ ತನ್ನ ಜನಸೇವೆಯ ಮೂಲಕ ಅಥವಾ ಸಾಮಾಜಿಕ ಚಟುವಟಿಕೆಗಳ ಮೂಲಕ, ಗ್ರಾಮಮಟ್ಟದಿಂದ ಒಂದೊಂದೇ ಮೆಟ್ಟಿಲೇರುತ್ತಾ ವಿಧಾನಸಭೆಯನ್ನೋ, ಸಂಸತ್ ಭವನವನ್ನೋ ತಲುಪುವುದು ಅಪರೂಪವಾಗಿದೆ. ಮೂರು ದಶಕಗಳ ಹಿಂದೆ ಈ ಭ್ರಷ್ಟ ಪರಂಪರೆ ಇನ್ನೂ ಮೊಳೆಯುವ ಹಂತದಲ್ಲಿದ್ದಾಗ, ಯುವ ಸಮೂಹ ರಾಜಕೀಯ ಪ್ರವೇಶಿಸುವ ಮೂಲಕ ಸುಧಾರಣೆ ಸಾಧ್ಯವಾಗಬಹುದು ಎಂಬ ಆಶಯ ವ್ಯಕ್ತವಾಗುತ್ತಿತ್ತು. ಆದರೆ ಈ ಆಶಯ ಗರಿಗೆದರುವ ಮುನ್ನವೇ ಭಾರತವನ್ನು ನವ ಉದಾರವಾದ ಮತ್ತು ಮಾರುಕಟ್ಟೆ ಬಂಡವಾಳವು ಆಕ್ರಮಿಸಿತ್ತು. ಔದ್ಯಮಿಕ ಸಾಮ್ರಾಜ್ಯದ ವಿಸ್ತರಣೆಗಾಗಿ ರಾಜಕೀಯ ಶಕ್ತಿಗಳನ್ನು ಆಶ್ರಯಿಸುವ ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ನೆಪದಲ್ಲಿ ಸರ್ಕಾರಗಳ ಆಡಳಿತ ನೀತಿಗಳನ್ನೂ ಪ್ರಭಾವಿಸಲು ಆರಂಭಿಸಿದ್ದು ಈ ಹಂತದಲ್ಲೇ.
ಕಾರ್ಪೋರೇಟ್ ಮಾರುಕಟ್ಟೆಯ ಹಿಡಿತ
ಕಳೆದ ಎರಡು ದಶಕಗಳಲ್ಲಿ ಸರ್ಕಾರಗಳ ಅರಣ್ಯ ಕಾಯ್ದೆಗಳು, ಪರಿಸರ ನೀತಿಗಳು, ಕಾರ್ಮಿಕ ಕಾನೂನುಗಳು ಹಾಗೂ ಔದ್ಯಮಿಕ ವಿಸ್ತರಣೆಗಾಗಿನ ಭೂ ಸ್ವಾಧೀನ ನಿಯಮಗಳಲ್ಲಿ ಉಂಟಾದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಂಡವಾಳಶಾಹಿ ಮತ್ತು ಚುನಾವಣಾ ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧಗಳನ್ನೂ ಗ್ರಹಿಸಬಹುದು. 2014ರ ಲೋಕಸಭಾ ಚುನಾವಣೆಗಳಲ್ಲಿ ಕಾರ್ಪೋರೇಟ್ ಔದ್ಯಮಿಕ ವಲಯ ನೇರವಾಗಿ ತನ್ನ ಪ್ರಭಾವ ಬೀರಿದ್ದನ್ನು ಆನಂತರದಲ್ಲಿ ಜಾರಿಯಾಗುತ್ತಿರುವ ಕಾಯ್ದೆ ಕಾನೂನುಗಳಲ್ಲೇ ಗುರುತಿಸಬಹುದು. ತದನಂತರದಲ್ಲಿ ಕೆಲವು ರಾಜ್ಯ ಸರ್ಕಾರಗಳಲ್ಲಿ ನಡೆದ “ಆಪರೇಷನ್” ಹೆಸರಿನ ಪಕ್ಷಾಂತರದ ಪ್ರಹಸನಗಳು ಹಾಗೂ ಸರ್ಕಾರಗಳ ಬದಲಾವಣೆಗಳ ಹಿಂದೆಯೂ ಇದೇ ಬಂಡವಾಳದ ಪ್ರಭಾವ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಬಿಜೆಪಿ ಅನುಸರಿಸುತ್ತಿರುವ ಹಿಂದುತ್ವ ರಾಜಕಾರಣ ಈ ಔದ್ಯಮಿಕ ಬಂಡವಾಳದ ಪ್ರಮುಖ ಫಲಾನುಭವಿಯಾಗಿರುವುದು ಗುಟ್ಟಿನ ಮಾತೇನಲ್ಲ.
ಚೈತ್ರಾ ಕುಂದಾಪುರ ಶೂನ್ಯದಲ್ಲಿ ಉದ್ಭವಿಸುವ ವ್ಯಕ್ತಿಯಲ್ಲ. ಉತ್ತಮ ಚರ್ಚಾಪಟುವಾಗಿ ಶಾಲಾ ಕಾಲೇಜು ಮಟ್ಟದಲ್ಲಿ ಗುರುತಿಸಿಕೊಂಡ ಒಬ್ಬ ಬಾಲಕಿ ಸಮಾಜಮುಖಿಯಾಗದೆ ಕೋಮುದ್ವೇಷ ಮತ್ತು ಮತೀಯ ರಾಜಕಾರಣದತ್ತ ಹೊರಳಿದ್ದಾಗಲೀ, ಕರಾವಳಿ ಕರ್ನಾಟಕದ ದ್ವೇಷ ರಾಜಕಾರಣದ ಕಾರ್ಖಾನೆಯಲ್ಲಿ ಪ್ರಧಾನ ವಾಹಕಿಯಾಗಿ ಕಾರ್ಯನಿರ್ವಹಿಸಿದ್ದಾಗಲೀ ನಮ್ಮ ಸಮಾಜವನ್ನು ರೂಪಿಸುತ್ತಿರುವ ಅಧಿಕಾರ ರಾಜಕಾರಣದ ಸ್ವರೂಪವನ್ನು ಸೂಚಿಸುತ್ತದೆ. ಈ ಮಹಿಳೆ ಕಳೆದ ಚುನಾವಣೆಗಳಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆದರೆ ಈಕೆಯನ್ನು ಸಲಹುವ ಒಂದು ಸಾಂಸ್ಥಿಕ ವ್ಯವಸ್ಥೆ ನಮ್ಮ ನಡುವಿನ ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೇ ಉಸಿರಾಡುತ್ತಿರುವುದನ್ನು ಗಮನಿಸಬೇಕಿದೆ. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ನಾಯಕರು ಅಧಿಕೃತವಾಗಿ ಈಕೆಗೂ ತಮ್ಮ ಪಕ್ಷಕ್ಕೂ ನೇರ ಸಂಬಂಧ ಇಲ್ಲ ಎಂದು ಘೋಷಿಸಿದರೂ, ಚೈತ್ರಾ ಹಗಲುರಾತ್ರಿ ಲೆಕ್ಕಿಸದೆ ಮಾಡಿದ ದ್ವೇಷ ರಾಜಕಾರಣದ ಫಲಾನುಭವಿಗಳಾರು ? ಈ ಪ್ರಶ್ನೆಗೆ ರಾಜಕೀಯ ನಾಯಕರೇ ಉತ್ತರಿಸಬೇಕು.
ಆದರೆ ಇದರಿಂದಾಚೆಗೆ ಯೋಚಿಸಬೇಕಿರುವುದು ಚೈತ್ರಾ ಪ್ರಕರಣದಲ್ಲಿ ಭಾಗಿಯಾಗಿರುವ ಖಾವಿಧಾರಿಯ ಬಗ್ಗೆ, ಉದ್ಯಮಿಯ ಬಗ್ಗೆ ಮತ್ತು ಬಂಡವಾಳ ಮಾರುಕಟ್ಟೆಯ ನಿರ್ವಾಹಕರ ಬಗ್ಗೆ. ತಡವಾಗಿಯಾದರೂ ಬಂಧನಕ್ಕೊಳಗಾಗಿರುವ ಖಾವಿಧಾರಿ ಮಠೋದ್ಯಮಿ ಅಭಿನವ ಹಾಲಶ್ರೀ ಮತ್ತು ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಚುನಾವಣಾ ರಾಜಕಾರಣ ಮತ್ತು ಹಣಕಾಸು ಭ್ರಷ್ಟಾಚಾರದ ಪ್ರಧಾನ ಕೊಂಡಿಗಳಾಗಿ ಕಾಣುತ್ತಾರೆ. ಚೈತ್ರಾ ಕುಂದಾಪುರ ಅವರಂತಹ ಛದ್ಮವೇಷಧಾರಿ ಸಾಂಸ್ಕೃತಿಕ ಪರಿಚಾರಕರು ದ್ವೇಷೋದ್ಯಮಿಗಳಾಗಿ ಈ ಭ್ರಷ್ಟಾಚಾರದ ಜಾಲದಲ್ಲಿ ಬಳಕೆಯಾಗುವ ವಾಹಕಗಳಾಗಿ ಪರಿಣಮಿಸುತ್ತಾರೆ. ಚುನಾವಣೆಗಳಲ್ಲಿ ಟಿಕೆಟ್ ಕೊಡಿಸುವುದೇ ಒಂದು ದಂಧೆಯಾಗಿ ಮಾರ್ಪಟ್ಟಿರುವುದಾದರೆ, ಆನಂತರದ ಸ್ಪರ್ಧೆ, ಆಯ್ಕೆ, ಅಧಿಕಾರ ಗ್ರಹಣ ಮತ್ತು ಆಡಳಿತ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಇದೇ ಬಂಡವಾಳದ ಹರಿವು ಎಂತಹ ಭೀಕರ ಪರಿಣಾಮಗಳನ್ನು ಬೀರಬಹುದು ಎನ್ನುವುದು ನಮ್ಮ ಮುಂದಿನ ಜಟಿಲ ಪ್ರಶ್ನೆಯಾಗಬೇಕಿದೆ. ಭ್ರಷ್ಟಾಚಾರದ ಬೇರುಗಳು ಅಧಿಕಾರಶಾಹಿಯಿಂದಾಚೆಗೆ ಎಲ್ಲ ವಲಯಗಳಲ್ಲೂ ಹರಡಿರುವುದನ್ನು ಈ ಘಟನೆಗಳು ಸೂಚಿಸುತ್ತವೆ.
ಈ ಪ್ರಕ್ರಿಯೆಯಲ್ಲಿ ಔದ್ಯಮಿಕ ವಲಯ, ಕಾರ್ಪೋರೇಟ್ ಮಾರುಕಟ್ಟೆ, ಆಧ್ಯಾತ್ಮಿಕ ಉದ್ಯಮ ಹಾಗೂ ಸೈದ್ಧಾಂತಿಕ ರಾಜಕಾರಣ ಇವೆಲ್ಲವನ್ನೂ ಸಾಂಸ್ಥಿಕ ಬಂಡವಾಳದ ಹರಿವು ಹಾಗೂ ಹಣಕಾಸು ಬಂಡವಾಳದ ಚಲನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕೋಮುವಾದ, ಮತಾಂಧತೆ, ಜಾತಿ ರಾಜಕಾರಣ ಮತ್ತು ದ್ವೇಷ ರಾಜಕಾರಣದ ಕಾಲಾಳುಗಳಾಗಿ ಕಾರ್ಯನಿರ್ವಹಿಸುವ ಬೃಹತ್ ಕಾರ್ಯಪಡೆಯೊಂದು ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದು, ಈ ಸಾಂಸ್ಕೃತಿಕ ರಾಜಕೀಯ ಪರಿಚಾರಕರನ್ನು ಸಲಹುವ ಸಾಂಸ್ಥಿಕ ಶಕ್ತಿಗಳನ್ನೂ ಭೇದಿಸಬೇಕಿದೆ. ಮುಖ್ಯಮಂತ್ರಿಯ ಆಯ್ಕೆಯೇ ಮಠಮಾನ್ಯಗಳ ಪ್ರಭಾವಳಿಯಲ್ಲಿ ನಡೆಯುವ ಒಂದು ಅಪ್ರಜಾತಾಂತ್ರಿಕ ಬೆಳವಣಿಗೆಗೆ ಕರ್ನಾಟಕ ಸಾಕ್ಷಿಯಾಗಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜಾತಿ ಕೇಂದ್ರಿತ ಮಠಗಳ ಪ್ರಭಾವ ಹೆಚ್ಚಾಗಿರುವುದನ್ನೂ ಕಂಡಿದ್ದೇವೆ.
ಭ್ರಷ್ಟ ವ್ಯವಸ್ಥೆಯ ಹೊಸ ಆಯಾಮ
ಚೈತ್ರಾ ಕುಂದಾಪುರ ಘಟನೆ ಈಗ ಈ ಪ್ರಕ್ರಿಯೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿದೆ. ಟಿಕೆಟ್ ಹಂಚಿಕೆಯ ಹಂತದಲ್ಲೇ ತಮ್ಮ ಪ್ರಭಾವಿ ವಲಯವನ್ನು ವಿಸ್ತರಿಸಿಕೊಳ್ಳುವ ಔದ್ಯಮಿಕ ವಲಯದ ತಂತ್ರಗಾರಿಕೆಯ ಅಡಿಯಲ್ಲೇ ಆಧ್ಯಾತ್ಮಿಕ ಕೇಂದ್ರಗಳು ತಮ್ಮ ಬಾಹುಗಳನ್ನು ಚಾಚಿರುವ ಒಂದು ಸುಳಿವನ್ನು ಈ ಪ್ರಕರಣ ಬಯಲು ಮಾಡಿದೆ. ಇದಕ್ಕೆ ಕಾರಣಗಳೂ ಇವೆ. ನವ ಉದಾರವಾದ ಪೋಷಿಸುತ್ತಿರುವ ಮಾರುಕಟ್ಟೆ ಕೇಂದ್ರಿತ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ಯೋಗಕ್ಷೇಮ, ವಿಮೆ ಹಾಗೂ ಹಣಕಾಸು ಕ್ಷೇತ್ರದ ಎಲ್ಲ ನೆಲೆಗಳಲ್ಲೂ ಜಾತಿ ಕೇಂದ್ರಿತ ಮಠಮಾನ್ಯಗಳು, ವಿವಿಧ ಧಾರ್ಮಿಕ ಸಂಸ್ಥೆಗಳು ತಮ್ಮ ಬಾಹುಗಳನ್ನು ಚಾಚಿಕೊಳ್ಳುತ್ತಿವೆ. ಮಾರುಕಟ್ಟೆಯೊಡನೆ ನೇರ ಸಂಪರ್ಕ ಹೊಂದಿರುವ ಈ ಸಾಂಸ್ಥಿಕ ವಲಯದ ಚೌಕಟ್ಟಿನಲ್ಲೇ ತಮ್ಮ ಕ್ಷೇತ್ರದ ಜನತೆಯನ್ನು ಆಕರ್ಷಿಸಿ, ಮತಬ್ಯಾಂಕುಗಳನ್ನು ಸೃಷ್ಟಿಸಿಕೊಳ್ಳುವ ರಾಜಕೀಯ ನಾಯಕರಿಗೆ ಜಾತಿ-ಧರ್ಮ ಮತ್ತು ಅಧ್ಯಾತ್ಮ ಇವೆಲ್ಲವೂ ತಾತ್ಕಾಲಿಕ ಮುಖವಾಡಗಳಾಗುತ್ತವೆ. ಜಾತಿ-ಉಪಜಾತಿ-ಪಂಗಡ-ಉಪಪಂಗಡಕ್ಕೊಂದು ಸಾಂಸ್ಕೃತಿಕ ಕೇಂದ್ರ ಇರುವ ಕರ್ನಾಟಕದಲ್ಲಿ ಇದು ಸುಲಭವೂ ಆಗಿರುತ್ತದೆ.
ಈ ವಿಶಾಲ ಸಾಂಸ್ಥಿಕ ಜಾಲದಲ್ಲೇ ಯುವ ಸಮೂಹವೂ ಸಹ ಸಿಕ್ಕಿಹಾಕಿಕೊಳ್ಳುತ್ತದೆ. ಜಾತ್ಯತೀತತೆಯ ಸೋಗಿನಲ್ಲಿ ಜಾತ್ಯಾಧಾರಿತ ಮತಬ್ಯಾಂಕುಗಳನ್ನು ಸೃಷ್ಟಿಸಿಕೊಳ್ಳುವ, ಧರ್ಮ ರಕ್ಷಣೆಯ ಹೆಸರಿನಲ್ಲಿ ಕಾವಲುಪಡೆಗಳನ್ನು ಪೋಷಿಸುವ ರಾಜಕೀಯ ಪಕ್ಷಗಳಿಗೆ ಯುವ ಸಮೂಹ ಸುಲಭವಾಗಿ ಒಲಿಯುವುದೂ ಸಹ ಇದೇ ಸಾಂಸ್ಥಿಕ ಜಾಲದಲ್ಲೇ. ನಿರುದ್ಯೋಗ, ಸಾಮಾಜಿಕ ಅಭದ್ರತೆ ಮತ್ತು ಅಸ್ಥಿರತೆಯನ್ನು ಎದುರಿಸುತ್ತಿರುವ ಬೃಹತ್ ಸಂಖ್ಯೆಯ ಯುವ ಸಂಕುಲವು ರಾಜಕೀಯ ಆಮಿಷಗಳಿಗೆ ಒಲಿಯುವಷ್ಟೇ ಸುಲಭವಾಗಿ ಜಾತಿ-ಧರ್ಮಗಳ ಅಸ್ಮಿತೆಗಳಿಗೂ ಒಲಿಯುತ್ತಾರೆ. ಯುವ ಸಮೂಹದ ಸುಸ್ಥಿರ ಬದುಕನ್ನು ಖಾತರಿಪಡಿಸಬೇಕಾದ ಅರ್ಥವ್ಯವಸ್ಥೆ ಮಾರುಕಟ್ಟೆಯ ಅಣತಿಯಂತೆ ನಡೆಯುತ್ತಿರುವಂತೆಯೇ, ಈ ಯುವ ಸಂಕುಲವನ್ನು ಸಮೂಹಸನ್ನಿಗೊಳಪಡಿಸುವ ಮತೀಯ ಚಿಂತನಾವಾಹಿನಿಗಳು ಇದೇ ಮಾರುಕಟ್ಟೆಯನ್ನೇ ಬಳಸಿಕೊಂಡು, ಯುವಜನತೆಯ ನಡುವೆ ದ್ವೇಷಕಾರುವ ದ್ವೇಷೋದ್ಯಮದ ಕಾಲಾಳುಗಳನ್ನು ಸೃಷ್ಟಿಸುತ್ತವೆ. ಚೈತ್ರಾ ಕುಂದಾಪುರ ಅವರಂತಹ ಯುವ ಪೀಳಿಗೆ ಈ ವಿಷವರ್ತುಲದ ಒಂದು ಉತ್ಪನ್ನವಾಗಿ ಕಾಣುತ್ತಾರೆ.
ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ದಂಧೆಯಲ್ಲೇ ನೂರಾರು ಕೋಟಿ ರೂಗಳ ವ್ಯವಹಾರ ನಡೆದಿರುವುದಾದರೆ, ಚುನಾವಣಾ ರಾಜಕಾರಣದಲ್ಲಿ ಎಷ್ಟು ಹಣ ಹರಿದಾಡಬಹುದು, ಯಾವ ಮೂಲಗಳಿಂದ ಬರಬಹುದು, ಎಲ್ಲಿಗೆ ತಲುಪಬಹುದು ಎನ್ನುವುದನ್ನು ಊಹಿಸುವುದು ಸುಲಭ. ಮೇಲ್ನೋಟಕ್ಕೆ ಅಧಿಕಾರಶಾಹಿಯಲ್ಲಿ ಗೋಚರಿಸುವ ಹಣಕಾಸು ಭ್ರಷ್ಟಾಚಾರದ ಬೇರುಗಳು ಇರುವುದು ಈ ಅಧಿಕಾರ ರಾಜಕಾರಣದ ಆವರಣದಲ್ಲಿ. ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುತ್ತೇವೆ ಎಂಬ ಮಹತ್ವಾಕಾಂಕ್ಷೆಯ ಘೋಷಣೆಗಳ ನಡುವೆಯೇ ಅನಾವರಣಗೊಳ್ಳುವ ಈ ಭ್ರಷ್ಟ ಪರಂಪರೆಯ ಬೇರುಗಳು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲೇ ಇರುತ್ತವೆ. ಅಧಿಕಾರಶಾಹಿಯನ್ನು, ಜನಪ್ರತಿನಿಧಿಗಳನ್ನು ಪೋಷಿಸುವಂತೆಯೇ ಬಂಡವಾಳ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆಧ್ಯಾತ್ಮಿಕ-ಧಾರ್ಮಿಕ-ಸಾಂಸ್ಕೃತಿಕ ವಲಯಗಳನ್ನೂ ಪೋಷಿಸುತ್ತಲೇ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುತ್ತದೆ.
ಜಾತಿ-ಧರ್ಮ-ಅಧ್ಯಾತ್ಮ ಮತ್ತು ಚುನಾವಣಾ ರಾಜಕಾರಣವನ್ನು ಬೆಸೆಯುವ ಬಂಡವಾಳ ಮತ್ತು ಮಾರುಕಟ್ಟೆ ನಮ್ಮ ಯುವ ಸಂಕುಲವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳುತ್ತಿರುವುದನ್ನು ಗಮನಿಸುತ್ತಿದ್ದೂ ಮೌನವಾಗಿರುವ ನಮ್ಮ ನಡುವಿನ ಬೌದ್ಧಿಕ ವಲಯ ಈಗಲಾದರೂ ಜಾಗೃತವಾಗಬೇಕಿದೆ. ಭ್ರಷ್ಟಾಚಾರ ಎಂಬ ಆಲದ ಮರದ ಬೇರುಗಳು ಸಾಮಾನ್ಯ ಜನರ ಬದುಕಿನ ಎಲ್ಲ ಮಜಲುಗಳಲ್ಲೂ ವ್ಯಾಪಿಸುತ್ತಿರುವುದು ನಮ್ಮ ನಡುವೆ ಢಾಳಾಗಿ ಕಾಣುವ ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ತಾರತಮ್ಯಗಳಿಗೂ ಕಾರಣವಾಗಿದೆ. ಅಸ್ಮಿತೆಯ ರಾಜಕಾರಣ ನಮ್ಮನ್ನು ದೃಷ್ಟಿಹೀನರನ್ನಾಗಿ ಮಾಡುವ ಮುನ್ನ ಎಚ್ಚೆತ್ತುಕೊಂಡರೆ, ಈಗ ಕವಿದಿರುವ ತೆಳು ಪೊರೆಯನ್ನು ಹೋಗಲಾಡಿಸಿ, ಉಜ್ವಲ ಭವಿಷ್ಯದ ಹಾದಿಯತ್ತ ಕಣ್ಣು ಹಾಯಿಸಬಹುದು. ಇದು ಪ್ರಗತಿಪರ ಎನಿಸಿಕೊಳ್ಳುವ ಯಾವುದೇ ಜನಪರ ಚಳುವಳಿಗಳ ಆದ್ಯತೆಯಾಗಬೇಕಿದೆ.