ನಾ ದಿವಾಕರ
ಬೆಂಗಳೂರು:ಮಾ.೨೬: ಎಡಪಕ್ಷಗಳನ್ನು ಹೊರತುಪಡಿಸಿ ಭಾರತದ ಯಾವುದೇ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ವಿರೋಧವನ್ನು ಎದುರಿಸದ ನವ ಉದಾರವಾದಿ ಆರ್ಥಿಕ ನೀತಿಗಳು ಕಳೆದ ಮೂರು ದಶಕಗಳಿಂದಲೇ ಭಾರತದ ಆರ್ಥಿಕ ಭೂಪಟವನ್ನು ಬದಲಿಸುತ್ತಲೇ ಬಂದಿವೆ. 1990ರ ನಂತರದಲ್ಲಿ ಮೂರು ವಿಭಿನ್ನ ಸಿದ್ಧಾಂತಗಳ ಸರ್ಕಾರಗಳನ್ನು ಭಾರತದ ದುಡಿಯುವ ಜನತೆ ಚುನಾಯಿಸಿದ್ದರೂ, ದೇಶದ ಕಾರ್ಮಿಕ ಕಾನೂನುಗಳು ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳಿಂದಲೇ ನಿರ್ಧರಿಸಲ್ಪಡುತ್ತಿವೆ. ಕಾರ್ಮಿಕ ವರ್ಗ ಈ ಶ್ರಮಿಕ ವಿರೋಧಿ ನೀತಿಗಳನ್ನು ಧರಣಿ, ಮುಷ್ಕರ, ಚಳುವಳಿ, ಹೋರಾಟಗಳ ಮೂಲಕ ವಿರೋಧಿಸುತ್ತಲೇ ಬಂದಿದ್ದರೂ, ಬಹುಪಾಲು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆಯ ಕೊರತೆ ಇರುವುದರಿಂದ, ಆಡಳಿತಾರೂಢ ಪಕ್ಷಗಳಿಗೆ, ಮಾರುಕಟ್ಟೆ ಪ್ರೇರಿತ ಕಾಯ್ದೆಗಳನ್ನು ಜಾರಿಗೊಳಿಸುವುದು ಸುಲಭವಾಗುತ್ತಿದೆ. ದೇಶದ ಜನಸಂಖ್ಯೆಯ ಶೇ 75ರಷ್ಟಿರುವ ಒಂದು ಬೃಹತ್ ಶ್ರಮಿಕ ವರ್ಗವು ತನ್ನ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಹಸನಾಗಿಸುವಂತಹ ಒಂದು ರಾಜಕೀಯ ಶಕ್ತಿಯನ್ನು ಕಾಣಲು ಸಾಧ್ಯವಾಗದಿರುವುದು ಸ್ವತಂತ್ರ ಭಾರತದ ದುರಂತವೇ ಸರಿ.
ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯಲ್ಲಿ ಶ್ರಮರಹಿತ ಉತ್ಪಾದನೆ ಮತ್ತು ಶ್ರಮಿಕರಹಿತ ಸೇವೆಯನ್ನು ಪೋಷಿಸುವ ಮೂಲಕವೇ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ತನ್ನ ಪಾರಮ್ಯವನ್ನು ಸಾಧಿಸುತ್ತದೆ. ಬಂಡವಾಳಶಾಹಿಯು ಎದುರಿಸುತ್ತಿರುವ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಬಂಡವಾಳಿಗರ ಕೂಟಗಳು, ವಾಣಿಜ್ಯ ಒಕ್ಕೂಟಗಳು ಸರ್ಕಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತವೆ. ನಾಲ್ಕನೆಯ ಔದ್ಯೋಗಿಕ ಕ್ರಾಂತಿ ಎನ್ನಲಾಗುವ ಡಿಜಿಟಲ್ ಯುಗದಲ್ಲಿ ಒಂದು ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತ ಜಾಗತಿಕ ಬಂಡವಾಳದ ವಿಸ್ತರಣೆ ಮತ್ತು ಆಧಿಪತ್ಯಕ್ಕೆ ಸೂಕ್ತವಾದಂತಹ ಆರ್ಥಿಕ ನೀತಿಗಳನ್ನೇ ಅನುಸರಿಸುತ್ತಿದ್ದು, ಇದಕ್ಕೆ ಪೂರಕವಾಗಿಯೇ ಕಾರ್ಮಿಕ ಕಾಯ್ದೆಗಳನ್ನೂ ತಿದ್ದುಪಡಿ ಮಾಡುತ್ತಿದೆ. ಕೇಂದ್ರ ಸರ್ಕಾರ 2021ರಲ್ಲಿ ಜಾರಿಗೊಳಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳು, ಸ್ವತಂತ್ರ ಭಾರತದ ಚಾರಿತ್ರಿಕ ಕಾರ್ಮಿಕ ಕಾಯ್ದೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಸಂಹಿತೆಗಳ ಚೌಕಟ್ಟಿನಲ್ಲೇ ವಿವಿಧ ರಾಜ್ಯ ಸರ್ಕಾರಗಳು ತಮ್ಮ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡುತ್ತಿವೆ.
ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ

ಇದೇ ಹಾದಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರ ಇತ್ತೀಚೆಗೆ 1948ರ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023, ವಿಧೇಯಕಕ್ಕೆ ಉಭಯ ಸದನಗಳ ಅಂಗೀಕಾರವನ್ನೂ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಸಹಜವಾಗಿರುವ ಧೋರಣೆಯಲ್ಲೇ, ರಾಜ್ಯ ಸರ್ಕಾರ ಈ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಯಾವುದೇ ಚರ್ಚೆಗೊಳಪಡಿಸದೆ ಅಂಗೀಕರಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿಧೇಯಕವನ್ನು ವಿರೋಧಿ ಸದನದಿಂದ ಹೊರನಡೆಯುವ ಮೂಲಕ, ಸರ್ಕಾರದ ಹಾದಿಯನ್ನು ಸುಗಮಗೊಳಿಸಿವೆ. ಬಿಜೆಪಿಯ ವಿಧಾನಪರಿಷತ್ ಸದಸ್ಯರೊಬ್ಬರು ತಮ್ಮದೇ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ. 1948ರ ಕಾರ್ಖಾನೆಗಳ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಕೈಗಾರಿಕೆಗಳಲ್ಲಿ ದೈನಂದಿನ ದುಡಿಮೆಯ ಅವಧಿಯನ್ನು ಗರಿಷ್ಟ 12 ಗಂಟೆಗೆ ಹೆಚ್ಚಿಸಲಾಗಿದ್ದು, ವಾರದ ಗರಿಷ್ಟ ಅವಧಿಯನ್ನು 48 ಗಂಟೆಗಳಾಗಿ ಉಳಿಸಿಕೊಳ್ಳಲಾಗಿದೆ.
ಕೈಗಾರಿಕೆ ಉತ್ಪಾದನಾ ವಲಯದಲ್ಲಿ ಭಾರತ ಚೀನಾಗಿಂತಲೂ ಹಿಂದುಳಿದಿರುವುದರಿಂದ, ಈ ಕಾಯ್ದೆಯ ಮೂಲಕ ದುಡಿಮೆಯ ಅವಧಿಯನ್ನು ಹೆಚ್ಚಿಸಿ, ಹೆಚ್ಚಿನ ಉತ್ಪಾದನೆಯನ್ನು ಉತ್ತೇಜಿಸಲು ಯೋಜಿಸಲಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ನೂತನ ವಿಧೇಯಕದ ಅನುಸಾರ ವಿರಾಮದ ಅವಧಿಯನ್ನೂ ಸೇರಿದಂತೆ ದಿನಕ್ಕೆ 9 ಗಂಟೆಗಳಷ್ಟಿದ್ದ ದುಡಿಮೆಯ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಲಾಗಿದೆ. ಬಿಡುವಿನ ಸಮಯ ಇಲ್ಲದೆಯೇ ಕಾರ್ಮಿಕರನ್ನು ಸತತ ಆರುಗಂಟೆಗಳವರೆಗೆ ದುಡಿಸಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ವಾರದ ಗರಿಷ್ಟ ಅವಧಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವುದರಿಂದ ಕಾರ್ಮಿಕರು ವಾರದಲ್ಲಿ ನಾಲ್ಕು ದಿನ ಮಾತ್ರ ದುಡಿಮೆಯಲ್ಲಿ ತೊಡಗಿರುತ್ತಾರೆ. ಈ ಅವಧಿಯನ್ನು ಮೀರಿದ ಹೆಚ್ಚುವರಿ ದುಡಿಮೆಗೆ , ನಿಗದಿತ ವೇತನದ ದುಪ್ಪಟ್ಟು ಓವರ್ ಟೈಂ ವೇತನವನ್ನು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಕೆಲಸದ ಒತ್ತಡಗಳು ಹೆಚ್ಚಾಗಿರುವ ಸಮಯದಲ್ಲಿ ಕಾರ್ಮಿಕರನ್ನು ಹೆಚ್ಚುವರಿ ದುಡಿಮೆಯಲ್ಲಿ ತೊಡಗಿಸುವ ಅಧಿಕಾರವನ್ನು ಕಾರ್ಖಾನೆ ಮಾಲೀಕರಿಗೆ ನೀಡಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ಗರಿಷ್ಟ 75 ಗಂಟೆಗಳಷ್ಟಿದ್ದ ಓವರ್ ಟೈಂ ದುಡಿಮೆಯನ್ನು 145 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಈ ತಿದ್ದುಪಡಿ ವಿಧೇಯಕದ ಮೂಲಕ ಮಹಿಳಾ ಕಾರ್ಮಿಕರನ್ನೂ ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವ ಅವಕಾಶವನ್ನೂ ಕಾರ್ಖಾನೆಯ ಮಾಲೀಕರಿಗೆ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ದುಡಿಯಲು ಇಚ್ಚಿಸುವ ಮಹಿಳಾ ಕಾರ್ಮಿಕರಿಂದ ಸಮ್ಮತಿ ಪತ್ರವನ್ನು ಪಡೆದುಕೊಂಡು, ಸೂಕ್ತ ಭದ್ರತೆಯನ್ನು ಒದಗಿಸುವ ಮೂಲಕ ಬಳಸಿಕೊಳ್ಳಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಉತ್ಪಾದನಾ ವಲಯದಲ್ಲಿ ತೀವ್ರವಾಗಿರುವ ಜಾಗತಿಕ ಪೈಪೋಟಿಯ ಹಿನ್ನೆಲೆಯಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ, ಕಾರ್ಮಿಕ ಕಾಯ್ದೆಗಳನ್ನು ಸಡಿಲಗೊಳಿಸಲಾಗಿದೆ ಎಂದು ಸರ್ಕಾರ ವಿಧೇಯಕವನ್ನು ಸಮರ್ಥಿಸಿಕೊಂಡಿದೆ.
ಕಾರ್ಪೋರೇಟ್ ಮಾರುಕಟ್ಟೆಗೆ ಪೂರಕ

ಬದಲಾಗುತ್ತಿರುವ ಭಾರತದಲ್ಲಿ ಉತ್ಪಾದನಾ ಕ್ಷೇತ್ರದ ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಆಧುನಿಕ ಸ್ವೆಟ್ಷಾಪ್ಗಳಾಗಿ ಪರಿಣಮಿಸುತ್ತಿರುವುದನ್ನು ಗಮನಿಸಿದಾಗ, ಈ ಕಾಯ್ದೆಗಳು ಕಾರ್ಮಿಕರ ಚಾರಿತ್ರಿಕ ಹೋರಾಟಗಳ ಪರಂಪರೆಯನ್ನೇ ಅಣಕಿಸುವಂತೆ ಕಾಣುತ್ತವೆ. ದಿನಕ್ಕೆ ಎಂಟು ಗಂಟೆಯ ದುಡಿಮೆ, ಎಂಟು ಗಂಟೆಯ ವಿಶ್ರಾಂತಿ ಮತ್ತು ಎಂಟು ಗಂಟೆಯ ಸಾಮಾಜಿಕ ಜೀವನ ಎನ್ನುವ ಅಲಿಖಿತ ನಿಯಮ ಜಗತ್ತಿನಾದ್ಯಂತ ಜಾರಿಯಲ್ಲಿದ್ದು, ಈ ಪರಂಪರೆಗೆ ಶತಮಾನದ ಇತಿಹಾಸವೂ ಇದೆ. ಪ್ರತಿ ವ್ಯಕ್ತಿಗೂ ತನ್ನ ಜೀವನ-ಜೀವನೋಪಾಯದ ದುಡಿಮೆಯ ಹೊರತಾಗಿ, ತನ್ನದೇ ಆದ ಖಾಸಗಿ ಬದುಕು, ಸಾಮಾಜಿಕ ಜೀವನ ಮತ್ತು ದೈಹಿಕ ವಿಶ್ರಾಂತಿಯ ಅಗತ್ಯತೆಗಳನ್ನು ಈ ಎಂಟು ಗಂಟೆಯ ನಿಯಮ ಸಾರಿ ಹೇಳುತ್ತದೆ. ದಿನಕ್ಕೆ ಗರಿಷ್ಟ ಎಂಟು ಗಂಟೆಗಳ ದುಡಿಮೆಯ ಅವಧಿಗಾಗಿ ನಡೆದ ಕಾರ್ಮಿಕರ ಹೋರಾಟಕ್ಕೆ 130 ವರ್ಷಗಳ ಇತಿಹಾಸವಿರುವಂತೆಯೇ, ಇಂದಿಗೂ ವಿಶ್ವ ಕಾರ್ಮಿಕರು ಆಚರಿಸುವ ಮೇ ದಿನದ ಪ್ರಸ್ತುತತೆಯೂ ಹೆಚ್ಚಾಗುತ್ತಲಿದೆ. ತನ್ನ ಬದುಕಿಗಾಗಿ ದುಡಿಮೆ ಮಾಡುವ ಯಾವುದೇ ವ್ಯಕ್ತಿಗೆ ತನ್ನದೇ ಆದ ಸಾಮಾಜಿಕ ಬದುಕನ್ನೂ ರೂಪಿಸಿಕೊಳ್ಳುವ ಹಕ್ಕು ಇರುತ್ತದೆ. ಈ ಸಾಮಾಜಿಕ ಬದುಕಿಗೆ ಅಗತ್ಯವಾದ ಕೌಟುಂಬಿಕ ಜೀವನ, ಮನರಂಜನೆ, ಬಾಹ್ಯ ಜಗತ್ತಿನ ಒಡನಾಟ ಇವುಗಳಿಗಾಗಿಯೇ ದಿನದ ಕೆಲವು ಗಂಟೆಗಳನ್ನು ಕಾರ್ಮಿಕರು ಮೀಸಲಿಡಬೇಕಾಗುತ್ತದೆ. ಹೆಚ್ಚಿನ ದುಡಿಮೆಯ ಮೂಲಕ ಕಾರ್ಮಿಕ ವರ್ಗವನ್ನು ಈ ಸೌಲಭ್ಯದಿಂದ ವಂಚಿಸುವುದು, ಬಂಡವಾಳಶಾಹಿ ಮಾರುಕಟ್ಟೆಯ ಕ್ರೌರ್ಯದ ಒಂದು ಭಾಗವೇ ಆಗಿದೆ.
ಈ ಕ್ರೌರ್ಯದ ಪರಾಕಾಷ್ಠೆಯನ್ನು ನವ ಉದಾರವಾದದ ಆರ್ಥಿಕ ನೀತಿಗಳಲ್ಲಿ ಕಾಣುತ್ತಿದ್ದೇವೆ. ಜೀವನ ನಿರ್ವಹಣೆಗೂ ನಿಲುಕದ ಪಿಂಚಣಿಯನ್ನು ಕೋಟ್ಯಂತರ ನಿವೃತ್ತ ಕಾರ್ಮಿಕರಿಗೆ ನೀಡುವ ಹೊಸ ಪಿಂಚಣಿ ಯೋಜನೆಯ ವಿರುದ್ಧ ಈಗಾಗಲೇ ದೇಶಾದ್ಯಂತ ಜನಾಂದೋಲನ ಆರಂಭವಾಗಿದ್ದು ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಲು ಮುಂದಾಗಿವೆ. ಮೂರು ನಾಲ್ಕು ದಶಕಗಳ ಕಾಲ ತಮ್ಮ ಬೆವರಿನ ದುಡಿಮೆಯ ಮೂಲಕ ದೇಶದ ಒಟ್ಟು ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಮಿಕರಿಗೆ ಅವರ ನಿವೃತ್ತಿಯ ನಂತರ ನೀಡುವ ಪಿಂಚಣಿಯು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಅರ್ಥಶಾಸ್ತ್ರಜ್ಞರ ಪ್ರತಿಪಾದನೆಯೇ ಹೊಸ ಪಿಂಚಣಿ ಯೋಜನೆಗೆ ಆಧಾರವಾಗಿದೆ. ಪಿಂಚಣಿ ಸೌಲಭ್ಯವಿಲ್ಲದ, ಭವಿಷ್ಯನಿಧಿಯೂ ಇಲ್ಲದ ಕೋಟ್ಯಂತರ ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ನೂತನ ಪಿಂಚಣಿ ಯೋಜನೆಯಡಿ ನೀಡುವ ಪಿಂಚಣಿಯು ಕಾರ್ಮಿಕರ ನಿವೃತ್ತಿ ನಂತರದ ಜೀವನವನ್ನು ಸಂಪೂರ್ಣವಾಗಿ ಪರಾವಲಂಬನೆಗೆ ಒಳಪಡಿಸುವಂತಿದೆ.
ಈ ಜಟಿಲ ಸಮಸ್ಯೆಗಳ ನಡುವೆಯೇ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಸೇವಾ ವಲಯದ ಕಾರ್ಮಿಕರು, ಪೌರ ಕಾರ್ಮಿಕರು, ಸ್ವಚ್ಚತಾ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕೋಟ್ಯಂತರ ದುಡಿಯುವ ಜನರು ತಮ್ಮ ಬದುಕು ಕಟ್ಟಿಕೊಳ್ಳುವುದಕ್ಕಾಗಿ ದಿನನಿತ್ಯ ಹೋರಾಡುವಂತಾಗಿದೆ. ಶಾಶ್ವತ ನೌಕರಿ ಎಂಬ ಪರಿಕಲ್ಪನೆಯನ್ನೇ ಬುಡಮೇಲು ಮಾಡಿರುವ ನವ ಉದಾರವಾದದ ಆರ್ಥಿಕ ನೀತಿಗಳು, ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ವಲಯಗಳಲ್ಲೂ ಸಹ ಗುತ್ತಿಗೆ ಆಧಾರಿತ ದುಡಿಮೆಯನ್ನು ಸಾರ್ವತ್ರಿಕಗೊಳಿಸಿವೆ. ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗೂ ವಿಸ್ತರಿಸುವ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿರುವ ಸರ್ಕಾರಗಳು, ಅತಿಥಿ ಉಪನ್ಯಾಸಕ/ಬೋಧಕರನ್ನು ನೇಮಕ ಮಾಡುವ ಮೂಲಕ, ವಿದ್ಯಾರ್ಜನೆ ಪೂರೈಸಿದ ಯುವ ಜನತೆಗೆ ಒಂದು ಸುಸ್ಥಿರ ಬದುಕು ರೂಪಿಸಿಕೊಳ್ಳುವ ಮಾರ್ಗಗಳನ್ನೂ ಕಸಿದುಕೊಳ್ಳುತ್ತಿವೆ. ದುಡಿಮೆಯ ಖಾಯಮಾತಿಗಾಗಿ ಹೋರಾಡುತ್ತಿರುವ ಕಾರ್ಮಿಕರಲ್ಲಿ ಸ್ವಚ್ಚತಾ ಕಾರ್ಮಿಕರು, ಪೌರ ಕಾರ್ಮಿಕರು ಇರುವಂತೆಯೇ ಬೋಧಕ ಸಿಬ್ಬಂದಿಯೂ ಇದ್ದಾರೆ. ಬ್ಯಾಂಕಿಂಗ್ ವಲಯವನ್ನೂ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಅನುಸರಿಸುವ ಮೂಲಕ, ಶಾಶ್ವತ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ.
ಶೋಷಣೆಯ ಹೊಸ ಮಾರ್ಗಗಳು

ಈ ಸಂದರ್ಭದಲ್ಲೇ ರಾಜ್ಯ ಸರ್ಕಾರ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕಾರ್ಖಾನೆ ನೌಕರರ ದುಡಿಮೆಯ ಅವಧಿಯನ್ನು ಹೆಚ್ಚಿಸಿದೆ. ಓವರ್ಟೈಂ ವೇತನವನ್ನು ಆಮಿಷದ ರೀತಿಯಲ್ಲಿ ಉಪಯೋಗಿಸುವ ಉದ್ಯಮಿಗಳು, ಕಾರ್ಖಾನೆ ಮಾಲೀಕರು, ವಾರದಲ್ಲಿ ಗರಿಷ್ಠ 48 ದುಡಿಮೆಯ ಗಂಟೆಗಳ ನಿಯಮಗಳನ್ನೂ ಉಲ್ಲಂಘಿಸಿ, ಕಾರ್ಮಿಕರನ್ನು ಮತ್ತಷ್ಟು ಶೋಷಣೆಗೊಳಪಡಿಸುವುದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ತಮ್ಮ ಸಾಮಾಜಿಕ ಬದುಕಿನಿಂದ ವಿಮುಖರಾಗಿ ದುಡಿಮೆಯಲ್ಲೇ ಜೀವ ಸವೆಸುವ ಶ್ರಮಿಕರ ಸಂಖ್ಯೆ ಹೆಚ್ಚಾಗಲು ಈ ನೂತನ ವಿಧೇಯಕ ರಹದಾರಿಯಾಗಿ ಪರಿಣಮಿಸುತ್ತದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ದುಡಿಯುವ ಅವಕಾಶವನ್ನು ಕಲ್ಪಿಸಿರುವ ಸರ್ಕಾರವು, ಮಹಿಳೆಯರ ರಕ್ಷಣೆಯ ಬಗ್ಗೆ ಯಾವ ಕ್ರಮಗಳನ್ನು ಕೈಗೊಂಡಿದೆ ಎನ್ನುವುದನ್ನೂ ಪರಿಶೀಲಿಸಬೇಕಾಗಿದೆ.
ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರು ಎದುರಿಸುವ ಸಮಸ್ಯೆಗಳು ಹಲವು ಬಗೆಯಲ್ಲಿ ಕಂಡುಬರುತ್ತದೆ. ಮಹಿಳೆಯರು ಹಗಲು ಹೊತ್ತಿನಲ್ಲೇ ಧೈರ್ಯದಿಂದ ಓಡಾಡಲು ಹೆದರುವಂತಹ ಪರಿಸ್ಥಿತಿಯಲ್ಲಿ ನಮ್ಮ ಸಮಾಜ ಇದೆ. ತಮ್ಮ ವಸತಿನೆಲೆಯಿಂದ ದೂರದಲ್ಲಿರುವ ಕಾರ್ಖಾನೆಗಳಿಗೆ ರಾತ್ರಿ ಪಾಳಿಯಲ್ಲಿ ದುಡಿಯಲು ಹೋಗುವ ಮಹಿಳೆಯರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುವುದೇ ಅಲ್ಲದೆ, ಎಳೆಯ ಮಕ್ಕಳೊಂದಿಗೆ ದುಡಿಯುವವರಿಗೆ ಶಿಶುಪಾಲನೆಯ ವ್ಯವಸ್ಥೆಯನ್ನೂ ಒದಗಿಸಬೇಕಾಗುತ್ತದೆ. ಬೆಳಗಿನಿಂದ ಸಂಜೆಯವರೆಗೂ ಕುಟುಂಬ ನಿರ್ವಹಣೆಯಲ್ಲೇ ಹೈರಾಣಾಗುವ ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯಬೇಕೆಂದರೆ, ಕೌಟುಂಬಿಕ ನೆಲೆಯಲ್ಲೂ ಸಹ ಹಲವು ಬದಲಾವಣೆಗಳು ಅಗತ್ಯವಾಗುತ್ತವೆ. ಪಿತೃಪ್ರಧಾನತೆಯಿಂದ ಇಂದಿಗೂ ಮುಕ್ತವಾಗದ ನಮ್ಮ ಸಮಾಜದಲ್ಲಿ ಮಹಿಳಾ ಕಾರ್ಮಿಕರಿಗೆ ದುಡಿಮೆಯ ನಂತರದ ಅವಧಿಯಲ್ಲಿ ಎಷ್ಟು ವಿಶ್ರಾಂತಿ ಲಭ್ಯವಾಗಬಹುದು ಎಂಬ ಗಂಭೀರ ಪ್ರಶ್ನೆಯನ್ನೂ ಪರಿಗಣಿಸಬೇಕಾಗಿದೆ. ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳಾ ಕಾರ್ಮಿಕ ವರ್ಗವನ್ನು ಮತ್ತಷ್ಟು ಹೈರಾಣಾಗಿಸಲು ನೂತನ ವಿಧೇಯಕವು ಅವಕಾಶಗಳನ್ನು ಕಲ್ಪಿಸುತ್ತದೆ.
ದುಡಿಮೆಯ ಅವಧಿಯನ್ನು ಹೆಚ್ಚಿಸುವ ಮೂಲಕ ಅಸಂಘಟಿತ ವಲಯದಲ್ಲೂ ಸಹ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುವ ಹುನ್ನಾರವನ್ನು ಈ ನೂತನ ಕಾರ್ಮಿಕ ಕಾಯ್ದೆಯಲ್ಲಿ ಕಾಣಬಹುದಾಗಿದೆ. ಕಡಿಮೆ ಸಂಖ್ಯೆಯ ಕಾರ್ಮಿಕರ ಮೂಲಕ ಹೆಚ್ಚಿನ ಉತ್ಪಾದನೆಯನ್ನು ಸಾಧಿಸುವ ಮೂಲಕ ಬಂಡವಾಳಿಗರ, ಕಾರ್ಖಾನೆ ಮಾಲೀಕರ ಮತ್ತು ಹೊರಗುತ್ತಿಗೆ ಉದ್ದಿಮೆಗಳ ಲಾಭಾಂಶವನ್ನು ಹೆಚ್ಚಿಸುವ ಮಾರುಕಟ್ಟೆ ನೀತಿಗೆ ಸರ್ಕಾರದ ಕಾಯ್ದೆ ಅವಕಾಶ ನೀಡುತ್ತದೆ. ವಾರದ ನಾಲ್ಕು ದಿನಗಳಲ್ಲಿ 48 ಗಂಟೆಗಳ ದುಡಿಮೆ ಮಾಡುವ ಕಾರ್ಮಿಕ ವರ್ಗ ಉಳಿದ ಎರಡು ದಿನಗಳು ಕೈಕಟ್ಟಿ ಕೂರುವುದಿಲ್ಲ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ. ಆ ಎರಡು ದಿನಗಳಲ್ಲೂ ಕಾರ್ಮಿಕರ ಶ್ರಮಶಕ್ತಿಯನ್ನು ಬಳಸಿಕೊಳ್ಳುವ ಹೊಸ ಶೋಷಣೆಯ ಮಾರ್ಗಗಳನ್ನು ಈ ಕಾಯ್ದೆ ಕಲ್ಪಿಸುತ್ತದೆ. ತಮ್ಮ ಜೀವನ ನಿರ್ವಹಣೆಗಾಗಿ ಕಾರ್ಮಿಕರೂ ಸಹ ಓವರ್ಟೈಂ ವೇತನ ಪಡೆದು ಅಥವಾ ಅದನ್ನೂ ಪಡೆಯದೆಯೂ ವಾರವಿಡೀ ದುಡಿಯುವ ಮೂಲಕ ತಮ್ಮ ಸಾಮಾಜಿಕ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಮನುಷ್ಯನನ್ನು ಯಾಂತ್ರೀಕರಣಗೊಳಿಸುವ ಪ್ರಯತ್ನಗಳು ನಡೆದಿದ್ದಂತೆಯೇ ಇಂದೂ ಸಹ ಕಾರ್ಮಿಕರ ಶ್ರಮಶಕ್ತಿಯನ್ನು ನಿರಂತರವಾಗಿ ಬಳಸುವ ಮೂಲಕ ಶ್ರಮಜೀವಿಗಳನ್ನು ಯಂತ್ರಗಳಂತೆ ಬಳಸುವ ಮಾರುಕಟ್ಟೆ ತಂತ್ರಗಳಿಗೆ ಕಾರ್ಮಿಕರು ತುತ್ತಾಗುತ್ತಿದ್ದಾರೆ.
ಕಾರ್ಮಿಕ ಸಂಘರ್ಷ ಮತ್ತು ವರ್ಗಪ್ರಜ್ಞೆ
ಈ ಕರಾಳ ಶಾಸನದ ವಿರುದ್ಧ ದೇಶಾದ್ಯಂತ ಕಾರ್ಮಿಕ ಸಮೂಹ ಪ್ರತಿರೋಧ ವ್ಯಕ್ತಪಡಿಸಿದೆ. ಭಗತ್ ಸಿಂಗ್ ಹುತಾತ್ಮನಾದ ಮಾರ್ಚ್ 23ರಂದೇ ದೇಶವ್ಯಾಪಿ ಮುಷ್ಕರ ನಡೆಸುವ ಮೂಲಕ ಕಾರ್ಮಿಕ ಸಂಘಟನೆಗಳು ಐಕ್ಯತೆಯೊಂದಿಗೆ ಈ ಕರಾಳ ಮಸೂದೆಯನ್ನು ವಿರೋಧಿಸಿವೆ. ದುರಂತ ಎಂದರೆ ಎಡಪಕ್ಷಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷವೂ ಈ ಮಸೂದೆಯ ವಿರುದ್ಧ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿಲ್ಲ. ಅಥವಾ ತಮ್ಮ ಚುನಾವಣಾ ಪ್ರಣಾಳಿಕೆಯ ಮೂಲಕ ಕಾರ್ಮಿಕರ ಪರವಾದ ಒಂದು ಧ್ವನಿಯನ್ನೂ ಮೂಡಿಸಿಲ್ಲ. ಕಾರ್ಮಿಕ ಕಾಯ್ದೆಗಳನ್ನೂ ಒಳಗೊಂಡಂತೆ ಆಡಳಿತ ನೀತಿಗಳನ್ನು ನಿರ್ಧರಿಸಿ ಜಾರಿಗೊಳಿಸುವ ಸಂಸತ್ತು ಮತ್ತು ವಿಧಾನಸಭೆಗಳ ಕಲಾಪಗಳಲ್ಲಿ ಕಾರ್ಮಿಕರ ಪರ ಎನಿಸುವಂತಹ ಒಂದೇ ಒಂದು ಧ್ವನಿಯೂ ಸಹ ಇತ್ತೀಚಿನ ದಿನಗಳಲ್ಲಿ ದಾಖಲಾಗಿಲ್ಲ. ಹಾಗಾಗಿಯೇ ಕೇಂದ್ರ ಸರ್ಕಾರವೂ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ ನೂತನ ಸಂಹಿತೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿದೆ. ಕರ್ನಾಟಕ ಸರ್ಕಾರವೂ ಈ ಹೊಸ ತಿದ್ದುಪಡಿ ವಿಧೇಯಕವನ್ನು ಮಂಡಿಸಿದೆ.

ಭಾರತದ ಶ್ರಮಿಕ ವರ್ಗಕ್ಕೆ ಒಂದು ರಾಜಕೀಯ ಧ್ವನಿ ಇಲ್ಲವಾಗಿರುವುದರಿಂದಲೇ ನವ ಉದಾರವಾದದ ಕ್ರೂರ ಬಾಹುಗಳು ಶ್ರಮಜೀವಿಗಳನ್ನು ಶೋಷಿಸುವ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿವೆ. ಎಡಪಕ್ಷಗಳ ಸಂಯೋಜಿತ ಕಾರ್ಮಿಕ ಸಂಘಟನೆಗಳು ನಿರಂತರ ಹೋರಾಟಗಳ ಮೂಲಕ ಕರಾಳ ಕಾರ್ಮಿಕ ಕಾನೂನುಗಳನ್ನು ವಿರೋಧಿಸುತ್ತಲೇ ಬಂದಿದ್ದರೂ, ಈ ಸಂಘಟನೆಗಳ ಮೂಲಕ ಕಾರ್ಮಿಕರಲ್ಲಿ ಸೃಷ್ಟಿಯಾಗುವ ವರ್ಗಪ್ರಜ್ಞೆ ಸೀಮಿತವಾಗಿದ್ದು, ರಾಜಕೀಯ ನೆಲೆಯಲ್ಲಿ ಪರಿಣಾಮಕಾರಿಯಾಗುತ್ತಿಲ್ಲ. ಕಾರ್ಮಿಕರು ತಮ್ಮ ಹೋರಾಟದ ಹೆಜ್ಜೆಗಳಲ್ಲಿ ರೂಢಿಸಿಕೊಳ್ಳುವ ವರ್ಗಪ್ರಜ್ಞೆಯೊಂದಿಗೆ ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿಕೊಳ್ಳದೆ ಹೋದರೆ, ಕಾರ್ಮಿಕ ಹೋರಾಟಗಳು ಕೇವಲ ನೌಕರಿ/ವೇತನ/ಭವಿಷ್ಯನಿಧಿ/ಪಿಂಚಣಿ ಮತ್ತು ಇತರ ಸೌಲಭ್ಯಗಳ ಚೌಕಟ್ಟಿನೊಳಗೇ ಪರ್ಯವಸಾನ ಹೊಂದುತ್ತವೆ ಕೆಂಬಾವುಟ ಹಿಡಿದು ಸರ್ಕಾರಗಳ ಕರಾಳ ಕಾರ್ಮಿಕ ನೀತಿಗಳ ವಿರುದ್ಧ ಹೋರಾಡುವ ಲಕ್ಷಾಂತರ ಕಾರ್ಮಿಕರು ಚುನಾವಣೆಗಳ ಸಂದರ್ಭದಲ್ಲೀ ಇದೇ ಕಾನೂನುಗಳನ್ನು ಜಾರಿಗೊಳಿಸುವ ಬಂಡವಾಳಿಗ ಪಕ್ಷಗಳ ಹಿಂಬಾಲಕರಾಗಿರುವುದು ವಾಸ್ತವ.
ಈ ಸಂದರ್ಭದಲ್ಲಿ ಶತಮಾನ ಕಾಲದ ಕಾರ್ಮಿಕ ಹೋರಾಟದ ಫಲಾನುಭವಿಗಳು ತಮ್ಮ ಹಿತವಲಯದ ಕೂಪದಿಂದ ಹೊರಬರಲಾಗದೆ, ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನೂ ಮೌನ ಸಮ್ಮತಿಯ ಮೂಲಕ ಅನುಮೋದಿಸುವ ಒಂದು ವಿಶಿಷ್ಟ ಸನ್ನಿವೇಶವನ್ನೂ ನಾವು ಕಾಣುತ್ತಿದ್ದೇವೆ. ಮತ್ತೊಂದೆಡೆ ಶ್ರಮಜೀವಿ ವರ್ಗಗಳನ್ನು ಜಾತಿ, ಮತಧರ್ಮ ಮತ್ತು ಇತರ ಅಸ್ಮಿತೆಗಳ ಮೂಲಕ ವಿಭಜಿಸುವ ರಾಜಕೀಯ ತಂತ್ರಗಾರಿಕೆ ಈ ಶೋಷಣೆಯ ಮಾರ್ಗಗಳಿಗೆ ಹೊಸ ರಹದಾರಿಗಳನ್ನು ಸೃಷ್ಟಿಸುತ್ತಿದೆ. ಉತ್ಪಾದನಾ ವಲಯ, ನಾಗರಿಕ ಸೇವೆ ಮತ್ತು ಇತರ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ದುಡಿಯುವ ಕೋಟ್ಯಂತರ ಸಂಖ್ಯೆಯ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ನೀಡುವ ಜವಾಬ್ದಾರಿ ಹೊತ್ತಿರುವ ಒಂದು ಬೃಹತ್ ಕಾರ್ಮಿಕ ಸಮುದಾಯ ವರ್ತಮಾನದ ರಾಜಕಾರಣದಲ್ಲಿ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿ ತನ್ನ ಜವಾಬ್ದಾರಿಯನ್ನು ಮರೆತಿರುವುದು ಶತಮಾನದ ದುರಂತ ಎನ್ನಬಹುದು. ಸುಶಿಕ್ಷಿತ ಹಿತವಲಯದ ಈ ನಿಷ್ಕ್ರಿಯತೆ ಮತ್ತು ವೈಫಲ್ಯವೇ ಶ್ರಮಿಕ ವರ್ಗದ ಹೋರಾಟಗಳ ಹಿನ್ನಡೆಗೂ ಕಾರಣವಾಗುತ್ತಿದೆ. ಹಾಗೆಯೇ ಬಂಡವಾಳ ಹಾಗೂ ಮಾರುಕಟ್ಟೆಯ ಆಧಿಪತ್ಯಕ್ಕೂ ನೆರವಾಗುತ್ತಿದೆ. ರಾಜಕೀಯ ವರ್ಗಪ್ರಜ್ಞೆಯನ್ನು ರೂಢಿಸಿಕೊಳ್ಳದೆ ಇರುವ ಒಂದು ಬೃಹತ್ ಕಾರ್ಮಿಕ ಸಮೂಹ ನಮ್ಮ ನಡುವೆ ಇರುವುದನ್ನು ವಿಷಾದದಿಂದಲೇ ಗುರುತಿಸಬೇಕೀದೆ.
-೦-೦-೦-






