ಬೆಳಗಾವಿ: ಪಂಚಮಸಾಲಿ ಹೋರಾಟ ಸಮೀತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕಾಶಪ್ಪನವರ್ ರಾಜೀನಾಮೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮ ಸಮಾಜದ ಒಳಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದನ್ನು ನಾವ್ಯಾರೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಹಜವಾಗಿ ರಾಜೀನಾಮೆ ಕೊಟ್ಟಿರಬಹುದು. ಆದರೆ ಈ ತರಹದ ನಿರ್ಣಯಗಳು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿನಯ್ ಕುಲಕರ್ಣಿ ಪತ್ನಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನಾಗುತ್ತೆ ಅನ್ನೋದನ್ನು ಹೇಳೋಕೆ ಸಾಧ್ಯವಿಲ್ಲ. ಧಾರವಾಡ ಜಿಲ್ಲೆಗೆ ನಿರ್ಬಂಧ ಇರೋದ್ರಿಂದ ನನ್ನ ಪತ್ನಿಯೇ ಕ್ಷೇತ್ರವನ್ನು ನೋಡುತ್ತಿದ್ದಾರೆ. ನಾನು ಎರಡೂವರೆ ವರ್ಷದಿಂದ ಧಾರವಾಡಕ್ಕೆ ಹೋಗಿಲ್ಲ. ನಾನು ಧಾರವಾಡದ ಬಾರ್ಡರ್ಗೆ ಬಂದಾಗ ಕ್ಷೇತ್ರದ ಜನರು ನನ್ನನ್ನು ಭೇಟಿ ಮಾಡುತ್ತಾರೆ. ಧಾರವಾಡದಲ್ಲಿ ಯಾರಿಲ್ಲ ಅಂದಾಗ ನನ್ನ ಪತ್ನಿಯೇ ಪಕ್ಷ ಸಂಘಟನೆಯ ಕಾರ್ಯವನ್ನು ಮಾಡುತ್ತಾಳೆ ಎಂದು ಹೇಳಿದ್ದಾರೆ.
ಶಿಗ್ಗಾಂವಿಯಿಂದ ಈ ಬಾರಿ ಚುನಾವಣೆ ಕಣಕ್ಕಿಳಿಯುವ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಮುಖಂಡರು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅಂತಾ ನೋಡೋಣಾ. ನಾನು ಶಿಗ್ಗಾಂವಿ ಕ್ಷೇತ್ರಕ್ಕೆ ಡಿಮ್ಯಾಂಡ್ ಮಾಡಿಲ್ಲ. ಧಾರವಾಡದ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಪಕ್ಷದ ನಿರ್ಣಯ ನೋಡೋಣ, ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ . ಮುಂದೇನಾಗುತ್ತೆ ನೋಡೋಣ ಎಂದಿದ್ದಾರೆ.