ಮುಂಚಿತವಾಗಿ ರೈಲು ಟಿಕೆಟ್ ಬುಕ್ ಮಾಡಿಕೊಂಡಿದ್ದರೂ ಸಮಯಕ್ಕೆ ರೈಲು ನಿಲ್ದಾಣ ತಲುಪದೆ ರೈಲು ಮಿಸ್ ಮಾಡಿಕೊಳ್ಳುವ ಘಟನೆಗಳು ಹಲವರ ಬದುಕಿನಲ್ಲಿ ಸಂಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ “ಅದೇ ಟಿಕೆಟ್‌ನಲ್ಲಿ ಬೇರೆ ರೈಲಿನಲ್ಲಿ ಪ್ರಯಾಣಿಸಬಹುದು” ಎಂಬ ಭಾವನೆ ಅನೇಕ ಪ್ರಯಾಣಿಕರಲ್ಲಿ ಇರುತ್ತದೆ. ಆದರೆ ಈ ಕುರಿತು ಭಾರತೀಯ ರೈಲ್ವೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ರೈಲ್ವೆ ನಿಯಮಗಳ ಪ್ರಕಾರ, ಪ್ರತಿಯೊಂದು ಟಿಕೆಟ್ ಕೂಡ ನಿರ್ದಿಷ್ಟ ರೈಲು, ದಿನಾಂಕ ಹಾಗೂ ವರ್ಗದ ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಹೀಗಾಗಿ ನೀವು ಬುಕ್ ಮಾಡಿಕೊಂಡಿದ್ದ ರೈಲು ಮಿಸ್ ಆದರೆ, ಅದೇ ಟಿಕೆಟ್ ಬಳಸಿಕೊಂಡು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಲು ಸಾಮಾನ್ಯವಾಗಿ ಅವಕಾಶ ಇರುವುದಿಲ್ಲ.ವಿಶೇಷವಾಗಿ ರಿಸರ್ವ್ಡ್ ಟಿಕೆಟ್ ಹೊಂದಿರುವವರಿಗೆ ಈ ನಿಯಮ ಕಟ್ಟುನಿಟ್ಟಾಗಿ ಅನ್ವಯವಾಗುತ್ತದೆ. ಉದಾಹರಣೆಗೆ, ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಅಥವಾ ಎಸಿ ಟಿಕೆಟ್ ಬುಕ್ ಮಾಡಿಕೊಂಡಿದ್ದರೆ ಮತ್ತು ಆ ರೈಲು ಮಿಸ್ ಆದರೆ, ಅದೇ ಟಿಕೆಟ್‌ನಲ್ಲಿ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಹತ್ತಲು ಸಾಧ್ಯವಿಲ್ಲ.

ಅನ್‌ರಿಸರ್ವ್ಡ್ ಅಥವಾ ಜನರಲ್ ಟಿಕೆಟ್‌ಗಳ ವಿಷಯದಲ್ಲಿ ಮಾತ್ರ ಸ್ವಲ್ಪ ವಿನಾಯಿತಿ ಇದೆ. ರೈಲು ನಿಲ್ದಾಣದ ಕೌಂಟರ್ ಅಥವಾ ‘ಯುಟಿಎಸ್’ ಆಪ್ ಮೂಲಕ ಪಡೆದ ಜನರಲ್ ಟಿಕೆಟ್ ಬಳಸಿಕೊಂಡು ಅದೇ ಮಾರ್ಗದ ಇತರ ರೈಲುಗಳ ಜನರಲ್ ಕೋಚ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ.ಆದರೆ ಈ ಅವಕಾಶ ಟಿಕೆಟ್‌ನಲ್ಲಿರುವ ದಿನಾಂಕ ಮತ್ತು ಗಮ್ಯಸ್ಥಾನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಜನರಲ್ ಟಿಕೆಟ್ ಸುಮಾರು ಮೂರು ಗಂಟೆಗಳ ಕಾಲ ಮಾನ್ಯವಾಗಿರುತ್ತದೆ. ಆ ಅವಧಿಯೊಳಗೆ ಬೇರೆ ರೈಲು ಹತ್ತಿದರೆ ಸಮಸ್ಯೆಯಾಗುವುದಿಲ್ಲ.
ಕೆಲವೊಮ್ಮೆ ಕನೆಕ್ಟಿಂಗ್ ರೈಲು ತಡವಾದ ಕಾರಣ ಮುಂದಿನ ರೈಲು ಮಿಸ್ ಆಗಬಹುದು. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಒಂದೇ ಪಿಎನ್‌ಆರ್ ಸಂಖ್ಯೆಯಲ್ಲಿ ಪ್ರಯಾಣ ಬುಕ್ ಮಾಡಿದ್ದರೆ ಅಧಿಕಾರಿಗಳು ಸಹಾಯ ಮಾಡುವ ಸಾಧ್ಯತೆ ಹೆಚ್ಚು.

ಈ ಮುನ್ನೆಚ್ಚರಿಕೆಗಳು ಅಗತ್ಯ
- ಪ್ರಯಾಣಕ್ಕೆ ಕನಿಷ್ಠ 30 ರಿಂದ 45 ನಿಮಿಷ ಮೊದಲು ರೈಲು ನಿಲ್ದಾಣ ತಲುಪುವುದು ಒಳಿತು
- ಪ್ಲಾಟ್‌ಫಾರ್ಮ್ ಸಂಖ್ಯೆಯನ್ನು ಮುಂಚಿತವಾಗಿ ಪರಿಶೀಲಿಸಬೇಕು
- ಮೊಬೈಲ್ ಆಪ್‌ಗಳ ಮೂಲಕ ರೈಲಿನ ಲೈವ್ ಸ್ಟೇಟಸ್ ಗಮನಿಸಬೇಕು
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ರೈಲು ಮಿಸ್ ಆಗುವಂತಹ ಅನಗತ್ಯ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.






