Bowring and Lady Curzon Hospital ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ Karnataka Lokayukta ತನಿಖೆ ಪೂರ್ಣಗೊಳಿಸಿ ಮಹತ್ವದ ವರದಿ ಸಿದ್ಧಪಡಿಸಿದೆ. ಕಳೆದ ತಿಂಗಳು 29ರಂದು ನಗರದಲ್ಲಿ ಸುರಿದ ಭಾರೀ ಮಳೆಯಿಂದ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಮೃತಪಟ್ಟಿದ್ದು, ಇನ್ನೂ 7 ಮಂದಿ ಗಾಯಗೊಂಡಿದ್ದರು.ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದರು. ಜಿಲ್ಲಾ ನ್ಯಾಯಾಧೀಶರು, ಇಂಜಿನಿಯರ್‌ಗಳು ಹಾಗೂ ಪೊಲೀಸರ ತಂಡದ ಸಹಯೋಗದಲ್ಲಿ ನಡೆಸಿದ ತನಿಖೆಯಲ್ಲಿ ಗೋಡೆ ಕುಸಿತಕ್ಕೆ ಕಾರಣವಾದ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.
ಲೋಕಾಯುಕ್ತ ವರದಿ ಪ್ರಕಾರ, ಭಾರತೀಯ ಕಟ್ಟಡ ಸಂಹಿತೆಯ ಪ್ರಕಾರ ಸಾರ್ವಜನಿಕ ಕಟ್ಟಡಗಳ ಸುತ್ತಮುತ್ತ 1.5 ರಿಂದ 2.4 ಮೀಟರ್ ಎತ್ತರದ ಗೋಡೆ ನಿರ್ಮಿಸಬೇಕು. ಆದರೆ ಕುಸಿದ ಗೋಡೆಯ ಎತ್ತರ ಸುಮಾರು 2.8 ಮೀಟರ್ ಇದ್ದು, ಅದರ ಹಿಂದೆ ಸುಮಾರು 1.8 ಮೀಟರ್ ಎತ್ತರಕ್ಕೆ ಮಣ್ಣು ತುಂಬಲಾಗಿತ್ತು. ಆ ಒತ್ತಡ ತಡೆಯುವ ರೀತಿಯ ‘ಎರ್ಥ್ ರಿಟೈನಿಂಗ್ ಸ್ಟ್ರಕ್ಚರ್’ ನಿರ್ಮಿಸದೇ, ಸಾಮಾನ್ಯ ಗೋಡೆ ನಿರ್ಮಾಣ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಇದೇ ವೇಳೆ ಮಳೆನೀರು ಸರಿಯಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದು, ನೀರು ಇಂಗಿ ರಂಧ್ರದ ಒತ್ತಡ ಹೆಚ್ಚಾಗುವುದು ಹಾಗೂ ಮಣ್ಣಿನ ಒತ್ತಡದಿಂದ ಗೋಡೆ ಕುಸಿದಿದೆ ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.
2008-09ರಲ್ಲಿ ಲಾರಿ ಡಿಕ್ಕಿಯಿಂದ ಹಾನಿಗೊಂಡಿದ್ದ ಗೋಡೆಯ ಮೇಲೆಯೇ ಮರುನಿರ್ಮಾಣ ಮಾಡಲಾಗಿತ್ತು ಎನ್ನುವ ಅಂಶವೂ ವರದಿಯಲ್ಲಿ ಬಹಿರಂಗವಾಗಿದೆ. 2009ರಿಂದ 2016ರವರೆಗೆ ಖಾಲಿ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕಟ್ಟಡ ಅವಶೇಷಗಳನ್ನೂ ಅಲ್ಲಿ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.ಆಸ್ಪತ್ರೆಯಲ್ಲಿ ಇಂಜಿನಿಯರ್ ಹುದ್ದೆ ಖಾಲಿಯಾಗಿದ್ದರೂ ನೇಮಕಾತಿ ಮಾಡದಿರುವುದು, ಪಾದಚಾರಿ ಮಾರ್ಗ ಅತಿಕ್ರಮಣ ತೆರವುಗೊಳಿಸದಿರುವುದು ಹಾಗೂ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಸೇರಿದಂತೆ ಹಲವು ಆಡಳಿತಾತ್ಮಕ ವೈಫಲ್ಯಗಳನ್ನು ಲೋಕಾಯುಕ್ತ ವರದಿ ಉಲ್ಲೇಖಿಸಿದೆ.
ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ, ಹೈಕೋರ್ಟ್ ನಿರ್ದೇಶನದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ನಗರದಾದ್ಯಂತ ಇಂತಹ ಅಪಾಯಕಾರಿಯಾದ ಕಟ್ಟಡಗಳನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.





