• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸರ್ಕಾರಗಳ ದೃಷ್ಟಿಯಲ್ಲಿ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯೇ ಸಾಧನೆಯಾಗಿಬಿಡುತ್ತಿದೆ

ಪ್ರತಿಧ್ವನಿ by ಪ್ರತಿಧ್ವನಿ
May 23, 2026
in ಅಂಕಣ
0
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
Share on WhatsAppShare on FacebookShare on Telegram

ನಾ ದಿವಾಕರ
ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ ಅಲ್ಲಾಡಿದಾಗ. ಇದು ಸಾರ್ವತ್ರಿಕ ಸತ್ಯ (Universal Truth). ಕೋವಿದ್‌ 19 ಭಾರತಕ್ಕೆ ಈ ವಿಶಿಷ್ಟ ವಿದ್ಯಮಾನವನ್ನು ಪರಿಣಾಮಕಾರಿಯಾಗಿ ಪರಿಚಯಿಸಿದೆ. ವೈರಸ್‌ ಓಡಿಸಲು ಜಾಗಟೆ ಬಡಿದು, ಚಪ್ಪಾಳೆ ತಟ್ಟುವ ದೇಶ, ಆರ್ಥಿಕ ಸಂಕಷ್ಟ ಎದುರಾದಾಗ ಸೊಂಟದ ಪಟ್ಟಿ ಬಿಗಿ ಮಾಡಿಕೊಳ್ಳುವುದು ಅತಿಶಯವೇನಲ್ಲ. ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಪಲ್ಲಟಗಳು ಎಲ್ಲ ದೇಶಗಳನ್ನೂ ತಲ್ಲಣಗೊಳಿಸಿದ್ದು, ʼ ಭಾರತ ಸುರಕ್ಷಿತವಾಗಿದೆ ʼ ಎಂಬ ಘೋಷಣೆಯ ನಡುವೆಯೂ, ತಳಸಮಾಜದ ಆರ್ಥಿಕ ತಳಮಳಗಳು ಸರ್ಕಾರವನ್ನು ವಿಚಲಿತಗೊಳಿಸಿವೆ.

ADVERTISEMENT

ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಿತವ್ಯಯದ ಸೂತ್ರವೊಂದನ್ನು ಅನುಸರಿಸಲು ಕೋರಿದ್ದಾರೆ. ಈ ಸೂತ್ರಗಳ ಒಟ್ಟು ಅರ್ಥ ಎಂದರೆ ಖರ್ಚು ಕಡಿಮೆ ಮಾಡಿ ಎಂದಷ್ಟೇ . 80 ಕೋಟಿ ಜನರು ತಿಂಗಳ ಪಡಿತರಕ್ಕೆ ಸರ್ಕಾರವನ್ನು ಅವಲಂಬಿಸಿರುವುದರಿಂದ ಈ ಸೂತ್ರಗಳು ಅನ್ವಯಿಸುವುದು ಉಳಿದ 60+ ಕೋಟಿ ಜನತೆಗೆ ಮಾತ್ರ. ಇದ್ದವರು ಮಾತ್ರ ಉಳಿತಾಯ ಮಾಡಲು ಸಾಧ್ಯ. ಈ ಸಂದೇಶಗಳ ಔದಾತ್ಯ ಏನೇ ಇರಲಿ, ಜನಸಾಮಾನ್ಯರು ಸ್ವಲ್ಪ ಮಟ್ಟಿಗಾದರೂ ಪರಿಪಾಲಿಸುತ್ತಾರೆ. ಭಾರತೀಯ ಪ್ರಜಾಪ್ರಭುತ್ವದ ವಿಶಿಷ್ಟ (ವಿಕೃತ) ಲಕ್ಷಣ ಎಂದರೆ ಈ ರೀತಿಯ ಉಪದೇಶಗಳು ರಾಜಕೀಯ ಪಕ್ಷಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಉಪ್ಪರಿಗೆಯ ಮೇಲೆ ಕುಳಿತವರಿಗೆ ಹಸಿವು-ಬಡತನ ಮನರಂಜನೆಯ ವಿದ್ಯಮಾನಗಳಾಗಿ ಮಾತ್ರ ಕಾಣುತ್ತದೆ.

ಐಷಾರಾಮಿ ಸಮಾಜದ ವ್ಯಂಗ್ಯ
ಶ್ರೀಮಂತಿಕೆ ಮತ್ತು ಅಪಾರ ಸಂಪತ್ತಿನ ಶೇಖರಣೆಯನ್ನು ವೈಭವೀಕರಿಸಿ ಕೊಂಡಾಡುವ ಅಸಹ್ಯಕರ ಪ್ರವೃತ್ತಿಯೊಂದು ಭಾರತವನ್ನು ಆವರಿಸಿಕೊಳ್ಳುತ್ತಿರುವಾಗಲೇ ಬಡತನವನ್ನು ಅಣಕಿಸುವ ವಿಕೃತ ಮನೋಭಾವವೂ ದಟ್ಟವಾಗುತ್ತಿದೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ಮಿತವ್ಯಯದ ಸೂತ್ರ ಮತ್ತು ರಾಜಕೀಯ ಸಮಾವೇಶಗಳು, ವಿದೇಶ ಪ್ರವಾಸಗಳ ಮೂಲಕ ನೋಡಬೇಕಿದೆ. ಪೆಟ್ರೋಲ್‌ ಡೀಸೆಲ್‌ ಮಿತಬಳಕೆ, ಚಿನ್ನದ ಖರೀದಿಗೆ ಕಡಿವಾಣ, ಅನಗತ್ಯ ವಿದೇಶ ಪ್ರಯಾಣಕ್ಕೆ ವಿರಾಮ, ಅಡುಗೆ ಎಣ್ಣೆಯ ಮಿತಬಳಕೆ, ಸಾವಯವ ಕೃಷಿಯ ಅನುಸರಣೆ, ಮನೆಯಿಂದಲೇ ಕೆಲಸ ಮಾಡುವುದು ಮತ್ತು ಸ್ವದೇಶಿ ಉತ್ಪನ್ನಗಳ ಖರೀದಿ, ಈ ಎಲ್ಲ ಉಪಕ್ರಮಗಳೂ ಅಂತಿಮವಾಗಿ ನೆರವಾಗುವುದು ಆರ್ಥಿಕತೆಯ ಸುಸ್ಥಿರತೆಗೆ. ಇದಕ್ಕಾಗಿ ತ್ಯಾಗ ಮಾಡಬೇಕಿರುವುದು ತಳಸಮಾಜದ ದುಡಿಯುವ ಜನತೆ.

ಈ ಜನತೆಗೆ ತ್ಯಾಗ ಮಾಡುವುದು ಹೊಸತೇನಲ್ಲ. ಈಗಾಗಲೇ ಕಾರ್ಮಿಕ ಹಕ್ಕುಗಳನ್ನು, ಉದ್ಯೋಗ ಖಾತರಿಯನ್ನು, ಕನಿಷ್ಠ ಕೂಲಿಯನ್ನು ತ್ಯಾಗ ಮಾಡಿ ಆಗಿದೆ. ಈಗ ಮತದಾನದ ಹಕ್ಕನ್ನೂ ತ್ಯಾಗ ಮಾಡಲಾಗುತ್ತಿದೆ. ಎಲ್ಲವೂ ದೇಶದ ಒಳಿತಿಗಾಗಿ. ಆದರೆ ಈ ʼ ತ್ಯಾಗಮಯಿಗಳು ʼ ಆಳವಾದ ಕಂದಕದೊಳಗೆ ನಿಂತು ಉಪ್ಪರಿಗೆಯ ಕಡೆ ಅಸಹಾಯಕ ನೋಟ ಬೀರಿದಾಗ ಏನೆಲ್ಲಾ ನೋಡಬೇಕಿದೆ ! ರಾಜತಾಂತ್ರಿಕ ಅನಿವಾರ್ಯತೆಗಳಿಗೆ ಬದ್ಧರಾಗಿ ವಿದೇಶ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿಗಳು ಒಂದೆಡೆಯಾದರೆ ಮತ್ತೊಂದೆಡೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಮೂರು ವರ್ಷದ ಆಳ್ವಿಕೆಯನ್ನು ಸಂಭ್ರಮಿಸುವ ʼ ಸಾಧನಾ ಸಮಾವೇಶ ʼ. ಇಷ್ಟಕ್ಕೇ ನಿಲ್ಲುವುದಿಲ್ಲ ಈ ಸಮಾವೇಶವನ್ನು ಖಂಡಿಸುತ್ತಿರುವ ರಾಜ್ಯ ಬಿಜೆಪಿ ಈಗಾಗಲೇ ʼಅಭಿಮಾನೋತ್ಸವ ʼ ಸಂಪನ್ನಗೊಳಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ನಾಲ್ಕು ಕಡೆ ʼ ಬೃಹತ್‌ ಸಮಾವೇಶಗಳನ್ನು ʼ ನಡೆಸುವುದಾಗಿ ಘೋಷಿಸಿದೆ. ಮತ್ತೊಂದೆಡೆ ಜನರಿಗಾಗಿಯೇ ಇರುವ ಜನತಾ ದಳ ಈಗಾಗಲೇ ಜನತಾ ಸಮಾವೇಶಗಳನ್ನು ಪೂರೈಸಿದೆ.

“ ಕೇಕ್‌ ಕತ್ತರಿಸುವವರು ಸಂಭ್ರಮಿಸುತ್ತಿರಲಿ ನೀವು ದೀಪ ಆರಿಸಿ ಎಣ್ಣೆ ಉಳಿಸಿ ” ಎಂಬ ಪ್ರಮೇಯವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಢಾಳಾಗಿ ಕಾಣಿಸುವುದು ರಾಜ್ಯ ಸರ್ಕಾರದ ʼ ಸಾಧನಾ ಸಮಾವೇಶ ʼ ಮತ್ತು ರಾಜಕೀಯ ನಾಯಕರ ಬೆಂಗಾವಲು ವಾಹನಗಳ ಮೆರವಣಿಗೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮೂರು ವರ್ಷ ಪೂರೈಸಿದೆ. ನಾಯಕತ್ವದ ಪೈಪೋಟಿಯ ನಡುವೆ ಇದೇ ಒಂದು ಮಹತ್ತರ ಸಾಧನೆ. ಬಿಜೆಪಿ ಮತ್ತು ಜೆಡಿಎಸ್‌ ದೃಷ್ಟಿಯಲ್ಲಿ ಸರ್ಕಾರಕ್ಕೆ ಮೂರು ತುಂಬಿರುವುದೇ ಸಹಿಸಲಾರದ ಸಂಕಟ. ಮೊದಲ ದಿನದಿಂದಲೇ ಸಿದ್ದರಾಮಯ್ಯ ಸರ್ಕಾರದ ಪತನ, ಮುಖ್ಯಮಂತ್ರಿಯ ಬದಲಾವಣೆಗಳ ಬಗ್ಗೆ ಜಪ ಮಾಡುತ್ತಿದ್ದ ಬಿಜೆಪಿ ನಾಯಕರು ಐದಾರು ಸಂದರ್ಭಗಳಲ್ಲಿ ಪತನದ ದಿನವನ್ನೂ ನಿಗದಿಪಡಿಸಿದ್ದರು. ಸಹಜವಾಗಿಯೇ ಈ ಸಮಾವೇಶ ಅವರಿಗೆ ಸಹಿಸಲಸಾಧ್ಯ.

ಪ್ರಜಾಪ್ರಭುತ್ವದ ಅಣಕ
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿರುವ ಮತ್ತೊಂದು ದುರ್ನಡತೆ ಎಂದರೆ, ಪಕ್ಷ ಯಾವುದೇ ಇರಲಿ ಬಹುಮತ ಪಡೆದೋ, ಕಸರತ್ತುಗಳನ್ನು ಮಾಡಿಯೋ ಸರ್ಕಾರ ರಚಿಸಿದ ಕೂಡಲೇ ವಿರೋಧ ಪಕ್ಷಗಳು ಸರ್ಕಾರದ ಪತನವನ್ನು ನಿರೀಕ್ಷಿಸಲಾರಂಭಿಸುತ್ತವೆ ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಇನ್ನೂ ತಳವೂರುವ ಮುನ್ನವೇ ಡಿಎಂಕೆ ನಾಯಕ ಸ್ಟ್ಯಾಲಿನ್‌, ಈ ಸರ್ಕಾರ ಆರು ತಿಂಗಳೊಳಗೆ ಪತನವಾಗುತ್ತದೆ ಎಂದು ಭವಿಷ್ಯ ನುಡಿದುಬಿಟ್ಟಿದ್ದಾರೆ. ಏಕೆ ಈ ಅಸಹನೆ ? ಒಂದು ಚುನಾಯಿತ ಸರ್ಕಾರ ಪೂರ್ಣಾವಧಿ ಆಳ್ವಿಕೆ ನಡೆಸಲಿ ಎನ್ನುವ ಮನೋಭಾವವೇ ಮಾಸಿಹೋಗುತ್ತಿದೆಯೇ ? ಮತದಾರರ ಆಯ್ಕೆಯನ್ನು ಸಮ್ಮಾನಿಸಲೂ ಒಪ್ಪದ ಅಸಹಿಷ್ಣುತೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗುತ್ತದೆ. ಈ ಅಸಹಿಷ್ಣುತೆಯೇ ಸರ್ಕಾರವನ್ನು ಹೇಗಾದರೂ ಬೀಳಿಸುವ ವಾಮ ಮಾರ್ಗಗಳಿಗೆ ಕಾರಣವಾಗುತ್ತದೆ. ಮಧ್ಯಪ್ರದೇಶ, ಗೋವಾ, ಮಹಾರಾಷ್ಟ್ರ ನೆನಪಾಗಬೇಕು.
ಕರ್ನಾಟಕ ಸರ್ಕಾರ ಐದು ವರ್ಷ ಪೂರೈಸಲಿದೆ ಎಂಬ ಸಮಾಧಾನ ಮತದಾರರಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುತ್ತದೆ. ಏಕೆಂದರೆ ಸದ್ಯಕ್ಕೆ ಅವರ ಕುರ್ಚಿ ಅಲುಗಾಡುವುದಿಲ್ಲ. ಈ ಹಿನ್ನೆಲೆಯಲ್ಲೇ ತುಮಕೂರಿನಲ್ಲಿ ನಡೆದ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶದ ಕಡೆಗೆ ಮಿಂಚುನೋಟ ಹರಿಸಬಹುದು. ಯಾವುದೇ ಸರ್ಕಾರವಾಗಲಿ ತಾನು ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕ ಬಾಧ್ಯತೆಯಾಗುವುದೇ ಹೊರತು ʼಸಾಧನೆʼ ಎನಿಸಿಕೊಳ್ಳುವುದಿಲ್ಲ. ಹಾಗೆ ಭಾವಿಸಲೂ ಕೂಡದು. ʼ ಸಾಧನೆ ʼ ಎಂದರೆ ಈ ಭರವಸೆಗಳನ್ನು ಮೀರಿ, ಜನರ ನಿರೀಕ್ಷೆಗಳನ್ನೂ ದಾಟಿ ಕೈಗೊಂಡ ಆಡಳಿತ ನೀತಿಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದು. ಬಹುಶಃ ಭಾರತದ ಯಾವುದೇ ರಾಜ್ಯದಲ್ಲೂ, ಕೇಂದ್ರದಲ್ಲೂ ಸಹ ಇದನ್ನು ಕಾಣುವುದು ಕಷ್ಟ.

ಅಪಾರದರ್ಶಕ ಆಡಳಿತ ವ್ಯವಸ್ಥೆ
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ʼ ಶ್ವೇತ ಪತ್ರ ʼ (White paper) ಎಂಬ ವಿಶಿಷ್ಟ ವಿದ್ಯಮಾನ ಜಾರಿಯಲ್ಲಿತ್ತು. ಬಹುಶಃ ಮಿಲೆನಿಯಂ ಮಕ್ಕಳಿಗೆ ಇದರ ಅರ್ಥವೂ ತಿಳಿದಿರುವುದಿಲ್ಲ. ಚುನಾಯಿತ ಸರ್ಕಾರಗಳು ತಮ್ಮ ಆಡಳಿತದ ಸಾಧನೆಗಳು, ದೇಶದ/ರಾಜ್ಯದ ಆರ್ಥಿಕ ಸ್ಥಿತಿ (ಉದಾಹರಣೆಗೆ: ಹಿಂದಿನ ಮತ್ತು ಪ್ರಸ್ತುತ ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಹೋಲಿಕೆ) ಅಥವಾ ಯಾವುದೇ ದೊಡ್ಡ ಬಿಕ್ಕಟ್ಟಿನ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಚಿತ್ರಣ ನೀಡಲು ಬಳಸುವ ಸಾಂವಿಧಾನಿಕ ದಸ್ತಾವೇಜು. ಇದು ಮಾಹಿತಿ ದತ್ತಾಂಶ ಸಮೇತ ಜನತೆಯ ಮುಂದೆ ಇರಿಸಬಹುದಾದ ಒಂದು ಪ್ರಮಾಣೀಕೃತ, ಪ್ರಶ್ನಿಸಬಹುದಾದ ದಾಖಲೆ. ಸಾಧನಾ ಸಮಾವೇಶದಲ್ಲಿರುವ ಆತ್ಮರತಿಯ ಧ್ವನಿ ಇಲ್ಲಿರಲು ಸಾಧ್ಯವಿಲ್ಲ. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸರ್ಕಾರಗಳು ಕನ್ನಡಿಯಲ್ಲಿ ನೋಡಿಕೊಳ್ಳಬೇಕೆಂದರೆ ಶ್ವೇತ ಪತ್ರ ನೆರವಾಗುತ್ತದೆ.
ದುರದೃಷ್ಟವಶಾತ್‌ ಭಾರತೀಯ ಪ್ರಜಾಪ್ರಭುತ್ವದಲ್ಲಿ ʼ ಉತ್ತರದಾಯಿತ್ವ ʼ (Accountability) ಎಂಬ ಉದಾತ್ತ ಕಲ್ಪನೆ ಸಮಾಧಿಯಾಗಿರುವ ಹಾಗೆಯೇ ಈ ʼ ಶ್ವೇತಪತ್ರ ʼ (White paper) ಎಂಬ ಕನ್ನಡಿಯೂ ಒಡೆದು ಚೂರಾಗಿದೆ. ಸಾಧನಾ ಸಮಾವೇಶಗಳಲ್ಲಿ ತಾವು ಜಾರಿಗೊಳಿಸಿದ ನೀತಿಗಳನ್ನೇ ವೈಭವೀಕರಿಸಿ ಜನಸಾಮಾನ್ಯರನ್ನು ಮತ್ತಷ್ಟು ಭ್ರಮಾಧೀನಗೊಳಿಸುವ ರಾಜಕೀಯ ಪಕ್ಷಗಳು ತಮ್ಮ ಆಡಳಿತದಲ್ಲಿ ಇರುವ ವೈಫಲ್ಯಗಳನ್ನು ನೆಪಮಾತ್ರಕ್ಕೂ ಉಲ್ಲೇಖಿಸುವುದಿಲ್ಲ. ಭರವಸೆಯ ಹೊರತಾಗಿಯೂ ಜಾರಿಯಾಗದ ನೀತಿಗಳನ್ನಾಗಲಿ, ವರ್ತಮಾನದ ಸಂದರ್ಭಕ್ಕೆ ಅಗತ್ಯವಾದ ಹೊಸ ನೀತಿ ಯೋಜನೆಗಳನ್ನಾಗಲಿ ಪ್ರಸ್ತಾಪಿಸುವುದೂ ಇಲ್ಲ. ಹೆಚ್ಚೆಂದರೆ ಮತ್ತಷ್ಟು ಭರವಸೆಗಳನ್ನು ಉತ್ಪಾದಿಸಿ ಪ್ರಸರಣ ಮಾಡಲಾಗುತ್ತದೆ. ಈ ತಾತ್ಕಾಲಿಕ ಉತ್ಪಾದನಾ ಘಟಕವನ್ನು (Production Plant) ನಡೆಸಲು ತೆರಿಗೆದಾರರ ಕೋಟ್ಯಂತರ ರೂಗಳನ್ನು ವ್ಯಯ ಮಾಡಲಾಗುತ್ತದೆ.

ಜನಕಲ್ಯಾಣ – ಅರ್ಧಸತ್ಯದ ಬೆನ್ನೇರಿ
ಇತ್ತೀಚಿನ ರಾಜಕೀಯ ಫ್ಯಾಷನ್‌ ಎಂದರೆ ಜನಕಲ್ಯಾಣ ಆರ್ಥಿಕತೆಯ (Welfare Economics) ಗ್ಯಾರಂಟಿ ಯೋಜನೆಗಳು. ಗ್ಯಾರಂಟಿಯ ಭರವಸೆಗಳಿಲ್ಲದೆ ಯಾವ ಪಕ್ಷವೂ ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಸುಡು ವಾಸ್ತವವನ್ನು ಒಪ್ಪಲೇಬೇಕಿದೆ. ತಮಿಳುನಾಡು ಚುನಾವಣೆಗಳಲ್ಲಿ ವಿಜಯ್‌ ಶೂನ್ಯದಿಂದ ಉದ್ಭವಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಒಂದು ನಿದರ್ಶನ. ಸರ್ಕಾರಗಳ ಸಾಧನೆ ಎಂದರೂ ಈ ಗ್ಯಾರಂಟಿಗಳ ಪರಿಣಾಮಕಾರಿ ನಿರ್ವಹಣೆ ಮತ್ತು ವಿತರಣೆಯಷ್ಟೇ ಆಗಿರುತ್ತದೆ. ಮೋದಿ ಸರ್ಕಾರವೂ ಇದೇ ಮಾದರಿಯನ್ನು ಅನುಸರಿಸುತ್ತದೆ. ʼ ಬಡತನ/ದಾರಿದ್ರ್ಯ ನಿರ್ಮೂಲನೆ ʼ (Poverty Alliviation )ಯ ಕಲ್ಪನೆ ಚರಿತ್ರೆಗೆ ಸೇರಿದ್ದು, ಈಗ ʼ ಬಡತನ/ದಾರಿದ್ರ್ಯ ನಿರ್ವಹಣೆ ʼ (Poverty Management) ಸ್ವೀಕೃತ ಮಾದರಿಯಾಗಿರುವುದರಿಂದ, ಸಮರ್ಪಕ ನಿರ್ವಹಣೆಯೇ ʼ ಸಾಧನೆ ʼ ಎನಿಸಿಕೊಳ್ಳುತ್ತದೆ.

ಸಿದ್ದರಾಮಯ್ಯ ಸರ್ಕಾರದ ತುಮಕೂರು ಸಮಾವೇಶದಲ್ಲಿ ಕಾಣುವುದೂ ಇಷ್ಟೇ. ಯೋಜನೆಗಳ ಮಹಾಪೂರ, ಭರವಸೆಗಳ ಜಲಪಾತ ಮುಂತಾದ ರೋಚಕ ಪದಗಳು ಜನಸಾಮಾನ್ಯರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ಸಂಭ್ರಮಾಚರಣೆಯಲ್ಲಿ ರಾಜ್ಯದ ಜನತೆ, ವಿಶೇಷವಾಗಿ ಕಾಂಗ್ರೆಸ್ ಬೆಂಬಲಿಗರು, 2023ರ ನಿರೀಕ್ಷೆಗಳನ್ನೇ ಮರೆತುಬಿಡುತ್ತಾರೆ. ತಳಸಮಾಜದ ಭ್ರಮಾಧೀನ ಸಾಮಾನ್ಯ ಜನರು ತಾವು 2023ರಲ್ಲಿ ಕಂಡ ಕನಸುಗಳನ್ನೂ ಮರೆತುಬಿಡುತ್ತಾರೆ. ದಲಿತರ, ಮಹಿಳೆಯರ, ಕಾರ್ಮಿಕರ ಹಾಗೂ ಗ್ರಾಮೀಣ ದುಡಿಯುವ ವರ್ಗಗಳ ಬೆಂಬಲದೊಂದಿಗೆ ಆಯ್ಕೆಯಾದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹೇಗೋ ಸರಿದೂಗಿಸುತ್ತಿದೆ. ಆದರೆ ಇದರಿಂದ ಸರ್ಕಾರದ ಮೇಲಿನ ಋಣಭಾರ ಎಷ್ಟು ಎನ್ನುವುದನ್ನು ಖಚಿತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಶ್ವೇತಪತ್ರ ಉಪಯುಕ್ತವಾಗುವುದು ಇಂತಹ ಸನ್ನಿವೇಶಗಳಲ್ಲೇ.

ಅಬಾಧಿತ ಜನವಿರೋಧಿ ಕಾನೂನುಗಳು
ಅಲ್ಪ ಸಂಖ್ಯಾತರನ್ನು, ದಲಿತ ಸಮುದಾಯಗಳನ್ನು ಬಾಧಿಸುವ ಮತ್ತು ಸಂವಿಧಾನದ ಆಶಯಗಳನ್ನೇ ಧಿಕ್ಕರಿಸುವ, ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ಭರವಸೆಯನ್ನೇ ಕಾಂಗ್ರೆಸ್‌ ಸರ್ಕಾರ ಮರೆತುಹೋದಂತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವೇ ಹಿಂಪಡೆದಿದ್ದರೂ, ರಾಜ್ಯದಲ್ಲಿ ಅದು ಇನ್ನೂ ಊರ್ಜಿತವಾಗಿದೆ. 2013ರಲ್ಲಿ ಜಾರಿಗೊಳಿಸಿದ ಭೂ ಸ್ವಾಧೀನ ಕಾಯ್ದೆ ಮತ್ತು ಅದರಲ್ಲಿನ ಕೆಲವು ನಿಯಮಗಳನ್ನು ಮಾರುಕಟ್ಟೆ ಪರವಾಗಿ ಸಡಿಲಗೊಳಿಸಿದ ಮತ್ತೊಂದು ರೈತವಿರೋಧಿ ಭೂ ಸ್ವಾಧೀನ ( ತಿದ್ದುಪಡಿ ಕಾಯ್ದೆ ) 2019 ಎರಡೂ ಸಹ ಇಂದಿಗೂ ಚಾಲ್ತಿಯಲ್ಲಿವೆ. ಈ ರೈತ ವಿರೋಧಿ ಕಾನೂನುಗಳ ಫಲವೇ ರಾಜ್ಯದ ವಿವಿಧೆಡೆ ಕೃಷಿ ಭೂಮಿಯ ಸ್ವಾಧೀನ ಅಡೆತಡೆಯಿಲ್ಲದೆ ಸಾಗುತ್ತಿದೆ.
ಮೈಸೂರು ಸಮೀಪದ ಗುಡುಮಾದನ ಹಳ್ಳಿಯಲ್ಲಿ ನಿಮ್ಹಾನ್ಸ್‌ ಸಂಸ್ಥೆಯನ್ನು ಸ್ಥಾಪಿಸಲು ನೂರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಯೋಜನೆ, ರೈತರ ಹೋರಾಟಗಳಿಗೆ ಮಣಿದು ಸದ್ಯಕ್ಕೆ ಸ್ಥಗಿತಗೊಂಡಿದೆ. ದೇವನಹಳ್ಳಿ ಸಮೀಪದ ಚನ್ನರಾಯಪಟ್ಟಣದಲ್ಲೂ ಸಹ ರೈತರ ಹೋರಾಟ ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಆದರೆ ಇದು ಸರ್ಕಾರದ ಗುರಿಯನ್ನು ಬದಲಾಯಿಸುವುದಿಲ್ಲ. ಏಕೆಂದರೆ ಭೂ ಸ್ವಾಧೀನ ಕಾಯ್ದೆ ಇನ್ನೂ ಜಾರಿಯಲ್ಲಿದೆ. ಇದೇ ಕಾಯ್ದೆಯ ಅನುಸಾರವೇ ಬಿಡದಿ ಟೌನ್‌ಷಿಪ್‌, ಗ್ರೇಟರ್‌ ಮೈಸೂರು, ಗ್ರೇಟರ್‌ ಬೆಂಗಳೂರು ಯೋಜನೆಗಳು ಚಾಲ್ತಿಯಲ್ಲಿವೆ. ಮರಗಳ ಹನನವಾಗದೆ, ಅರಣ್ಯ ನಾಶವಾಗದೆ ನಗರೀಕರಣ ಮತ್ತು ನಗರ ವಿಸ್ತರಣೆ ಸಾಧ್ಯವಾಗುವುದಿಲ್ಲ ಎಂಬ ಸರಳ ವಾಸ್ತವವನ್ನು ಗಮನಿಸಬೇಕಿದೆ.

ದೊಡ್ಡಬಳ್ಳಾಪುರ, ಆನೇಕಲ್‌, ದೇವನಹಳ್ಳಿ, ಮೈಸೂರು, ಬಿಡದಿ ಈ ಭಾಗಗಳಲ್ಲಿ ರೈತರ ಹೋರಾಟಗಳು ತೀವ್ರವಾಗುತ್ತಿದ್ದು, ರಾಜ್ಯ ಸರ್ಕಾರದ ಭೂ ಸ್ವಾಧೀನ ಮತ್ತು ಕಾರ್ಪೋರೇಟ್‌ ಶಕ್ತಿಗಳ ಭೂ ದಾಹ ಕೊಂಚ ಹಿನ್ನಡೆ ಎದುರಿಸುತ್ತಿವೆ. ಆದರೆ ಅಂತಿಮ ಗೆಲುವು ರೈತರ ಪರ ನಿರೀಕ್ಷಿಸಬಹುದೇ ? ಈ ಪ್ರಶ್ನೆಗೆ ಹೌದು ಎನ್ನಲಾಗುವುದಿಲ್ಲ. ಏಕೆಂದರೆ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳು ಸೂತ್ರ ನಿರ್ವಹಿಸುತ್ತವೆ. ಪರಿಸರ ವಿನಾಶ ಮತ್ತು ಕೃಷಿ ಭೂಮಿಯ ನಾಶ ವರ್ತಮಾನದ ಅಭಿವೃದ್ಧಿ ಮಾದರಿಯಲ್ಲಿ ಸಹಿಸಿಕೊಳ್ಳಬೇಕಾದ ಅನಿವಾರ್ಯ ಪ್ರಕ್ರಿಯೆಗಳು ಎಂದೇ ಸರ್ಕಾರಗಳು ವಾದಿಸುತ್ತವೆ. ಸಿದ್ದರಾಮಯ್ಯ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ರೈತರ ಹಿತ ರಕ್ಷಿಸುತ್ತೇವೆ ಎಂಬ ಒಣ ಮಾತುಗಳು ಬಿಳಿ ಹಾಳೆಯ ಮೇಲಿನ ಚುಕ್ಕೆಗಳಾಗಿ ಮಾತ್ರ ಕಾಣುತ್ತವೆ. ರೈತರು ಮಾತ್ರ ದಿನನಿತ್ಯ ರಸ್ತೆಗಳಲ್ಲೇ ಇರುತ್ತಾರೆ.

ಸಾಧನೆಗಳ ತೆರೆಮರೆಯ ವಾಸ್ತವಗಳು
ಕರಾವಳಿಯ ಕೋಮು ಗಲಭೆಗಳನ್ನು ನಿಯಂತ್ರಿಸಿರುವುದು ಸರ್ಕಾರದ ಸಾಧನೆಯೇ ಸರಿ. ಆದರೆ ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಏರುತ್ತಲೇ ಇರುವುದು ಏನನ್ನು ಸೂಚಿಸುತ್ತದೆ ? 2025ರಲ್ಲಿ ರಾಜ್ಯದಲ್ಲಿ 1211 ಕೊಲೆಗಳು ನಡೆದಿವೆ, ಮೈಸೂರಿನಲ್ಲೇ 18 ಘಟನೆಗಳು ವರದಿಯಾಗಿವೆ. ಕರ್ನಾಟಕ ಮಹಿಳಾ ಆಯೋಗದ ವರದಿಯ ಅನುಸಾರ ರಾಜ್ಯದಲ್ಲಿ ಮಹಿಳಾ ದೌರ್ಜನ್ಯಗಳು 2024-25ರಲ್ಲಿ 2,907 ದಾಖಲಾಗಿದ್ದು, ಕಳೆದ ವರ್ಷ 2025-26ರಲ್ಲಿ 4,482 ಪ್ರಕರಣಗಳು ವರದಿಯಾಗಿವೆ. ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ಕಿರುಕುಳಗಳು ಹೆಚ್ಚಾಗಿವೆ. ಎಸ್‌ಸಿ-ಎಸ್‌ಟಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಶೇಕಡಾ 37ರಷ್ಟು ಹೆಚ್ಚಾಗಿವೆ. ಪೋಕ್ಸೋ ಆರೋಪಿಗಳನ್ನೂ ಸಂಭ್ರಮದಿಂದ ಮೆರವಣಿಗೆ ಮಾಡಲಾಗುತ್ತಿರುವ ರಾಜ್ಯದಲ್ಲಿ ಸಾಮಾಜಿಕ ದೌರ್ಜನ್ಯಗಳನ್ನು ನಿಯಂತ್ರಿಸಬೇಕಾದರೆ, ದೂರದೃಷ್ಟಿಯ ಆಡಳಿತ ಅಗತ್ಯ. ಕಾಂಗ್ರೆಸ್‌ ಸರ್ಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ.
ಮತ್ತೊಂದೆಡೆ ಆಶಾ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಹೆಚ್ಚಿನ ವೇತನ ಮತ್ತು ಸೇವಾ ಭದ್ರತೆಗಾಗಿ ನಿರಂತರ ಹೋರಾಡುತ್ತಲೇ ಇದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳು ರಾಜ್ಯದ ಶ್ರಮಿಕ ವರ್ಗದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ, ಮನರೇಗಾ (MNREGA) ಯೋಜನೆಯ ಸ್ಥಾನವನ್ನು ಆಕ್ರಮಿಸುವ ವಿಬಿ ಗ್ರಾಮ್‌ ಜಿ ಯೋಜನೆಯಿಂದ ಗ್ರಾಮೀಣ ಉದ್ಯೋಗಕ್ಕೆ ಎಷ್ಟು ಪೆಟ್ಟು ಬೀಳುತ್ತದೆ ಎಂಬ ಆತಂಕ ಸರ್ಕಾರವನ್ನು ಕಾಡಿರಲೇಬೇಕು ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ SIR ಪ್ರಕ್ರಿಯೆ ಜೂನ್‌ 20ರಿಂದ ಆರಂಭವಾಗಲಿದೆ. ಕೆಪಿಎಸ್‌ ಮಾಗ್ನೆಟ್‌ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು ಅವಸಾನದತ್ತ ಸಾಗುತ್ತಿವೆ. ಈ ಆತಂಕ, ತಳಮಳಗಳಿಗೆ ಸರ್ಕಾರದ ಸ್ಪಂದನೆ ಹೇಗಿದೆ ? ಸಾಧನಾ ಸಮಾವೇಶದಲ್ಲಿ ಇದರ ಛಾಯೆಯೂ ಕಾಣದಿರುವುದು ವಿಷಾದಕರ. ಸಾಧನೆಗಳಿಗೆ ಬೆನ್ನು ತಟ್ಟಿಕೊಳ್ಳುವ ಮುನ್ನ ಕನ್ನಡಿಯಲ್ಲಿ ಚಹರೆ ನೋಡಿಕೊಳ್ಳುವ ವ್ಯವಧಾನವನ್ನು ನಮ್ಮ ಸರ್ಕಾರಗಳು ಇನ್ನೂ ರೂಢಿಸಿಕೊಳ್ಳಬೇಕಿದೆ.

ಒಳಮೀಸಲಾತಿಯ ವಿವಾದವನ್ನು ತಾತ್ಕಾಲಿಕವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ ಸರ್ಕಾರ ದಲಿತ ಚಳುವಳಿಯಲ್ಲಿ ಪ್ರಬಲ ಫಲಾನುಭವಿ ವರ್ಗಗಳನ್ನು ಸಂತೈಸುವಲ್ಲಿ ಯಶಸ್ವಿಯಾಗಿದೆ. ಇದೇನೂ ಸಾಧನೆಯಲ್ಲ, ಸಮಯಸಾಧಕತನ ಅಷ್ಟೇ. ಏಕೆಂದರೆ ಈಗಲೂ ಸಹ ಅಲೆಮಾರಿ ಸಮುದಾಯಕ್ಕೆ ಸಲ್ಲಬೇಕಾದ ನ್ಯಾಯ ದೊರೆತಿಲ್ಲ. ಆದರೆ ಸಂಘಟನಾತ್ಮಕವಾಗಿ ದುರ್ಬಲವಾಗಿರುವ ಕಾರಣದಿಂದ, ಇತರ ದಲಿತ ಸಮುದಾಯ/ಸಂಘಟನೆಗಳ ತಾತ್ವಿಕ ಬೆಂಬಲವೂ ಇಲ್ಲದಿರುವುದರಿಂದ, ಅಲೆಮಾರಿ ಸಮುದಾಯ ತನ್ನ ಹೋರಾಟವನ್ನು ಏಕಾಂಗಿಯಾಗಿ ಮುನ್ನಡೆಸಬೇಕಿದೆ. ಬಂಡವಾಳಶಾಹಿ ವ್ಯವಸ್ಥೆ ಹೇಗೆ ವರ್ಗ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕವೇ ತಳಸಮಾಜದಲ್ಲಿ ಇರಬೇಕಾದ ವರ್ಗಪ್ರಜ್ಞೆಯನ್ನು ಶಿಥಿಲಗೊಳಿಸುತ್ತದೆ ಎನ್ನುವುದಕ್ಕೆ ಕಾಂಗ್ರೆಸ್‌ ಸರ್ಕಾರದ ಈ ನೀತಿ ಸಾಕ್ಷಿಯಾಗಿದೆ.
ದೇಶದ ಜನಸಾಮಾನ್ಯರಿಗೆ ʼ ಮಿತವ್ಯಯ ʼ ಮತ್ತು ಸರಳ ಜೀವನದ ಬೋಧನೆ ಮಾಡುವ ರಾಜಕೀಯ ಪಕ್ಷಗಳು ಆಳ್ವಿಕೆಯ ಕೇಂದ್ರಗಳಲ್ಲಿ ಮತ್ತು ಆಡಳಿತ ಯಂತ್ರಗಳ ಮೂಲಕ ಮಾಡುವ ದುಂದು ವೆಚ್ಚವನ್ನು ಕಡಿಮೆ ಮಾಡುವುದು ನೈತಿಕ ನಡೆಯಾದೀತು. ಕಾಂಗ್ರೆಸ್‌ ಸರ್ಕಾರ ಇನ್ನುಳಿದ ಎರಡು ವರ್ಷಗಳಲ್ಲಿ ʼನಾಯಕತ್ವದʼ ಕಸರತ್ತುಗಳನ್ನು ಬದಿಗಿಟ್ಟು ರಾಜ್ಯದ ಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಕಡೆ ಗಮನಹರಿಸಬೇಕಿದೆ. ರಾಜ್ಯದ ಮತದಾರರು 2023ರಲ್ಲಿ ಆಯ್ಕೆ ಮಾಡಿರುವುದು ಪ್ರಜಾಸತ್ತಾತ್ಮಕ ಆಳ್ವಿಕೆಯನ್ನೇ ಹೊರತು ನಿರ್ದಿಷ್ಟ ನಾಯಕರನ್ನಲ್ಲ. ಈ ಆಳ್ವಿಕೆಯು ಜನಪರ ಇರಬೇಕಾದರೆ ಅದರ ಅಂಗಳದ ಉಪ್ಪರಿಗೆಯಲ್ಲಿರುವ ಪ್ರತಿನಿಧಿಗಳಿಗೆ ನೆಲದ ವಾಸ್ತವಗಳ ( Ground Realities ) ಅರಿವಿರಬೇಕು. ಹಾಗೆಯೇ ತಳಸಮಾಜದ ನಾಡಿಮಿಡಿತವೂ ಅರ್ಥವಾಗಬೇಕು. ಆಗ ಸಾಧನಾ ಸಮಾವೇಶಗಳು ಆತ್ಮರತಿಯ ಮೇಳವಾಗುವ ಬದಲು ಆತ್ಮವಿಮರ್ಶೆಯ ಶಾಲೆಯಾಗುತ್ತದೆ.
ಈ ಎಚ್ಚರ ಕಾಂಗ್ರೆಸ್‌ ನಾಯಕರಲ್ಲಿದ್ದರೆ ಸಾಕು.
-೦-೦-೦-೦-೦-

Tags: Achievement Conventionbjp karnatakaCongress GovernmentConstitutional DutyConstitutional ValuesDalit PoliticsDemocracy DebateFarmers protestgovernanceGovernment Policiesindian democracyJDSKarnataka CongressKarnataka Politicsna divakarapolitical analysisPolitical CommentaryPolitical CriticismPoliticsPublic Accountabilitysiddaramaiahsocial JusticeWelfare EconomicsWelfare PoliticsWhite Paper
Previous Post

ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

Next Post

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 22, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
Next Post
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada