ಮೂಲ : ಎಸ್ ವೈ ಖುರೇಷಿ
ಕನ್ನಡಕ್ಕೆ ; ನಾ ದಿವಾಕರ
ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ಮತದಾನವನ್ನು ಮೂಲಭೂತ ಹಕ್ಕು ಎಂದು ಗುರುತಿಸುವಂತೆ ಆಗ್ರಹಿಸುವ ಮೂಲಕ ಹೊಸ ಸಾಂವಿಧಾನಿಕ ಚರ್ಚೆಗೆ ಅವಕಾಶ ಕಲ್ಪಿಸಿದ್ದಾರೆ. ಮೇಲ್ನೋಟಕ್ಕೆ ಈ ಆಗ್ರಹವು ವಾಡಿಕೆಯ ಮಾತಿನಂತೆ ಅಥವಾ ಅಸಾಧಾರಣವೇನೂ ಅಲ್ಲದ ಹೇಳಿಕೆಯಂತೆ ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ಆಳುವವರನ್ನು ಆಯ್ಕೆ ಮಾಡುವ ಜನತೆಯ ಹಕ್ಕುಗಳಿಗಿಂತಲೂ ಮೂಲಭೂತ ಎನಿಸುವ ಹಕ್ಕು ಯಾವುದಿರಲು ಸಾಧ್ಯ ? ಆದರೂ ಏಳು ದಶಕಗಳಿಗೂ ಹೆಚ್ಚು ಕಾಲ ಭಾರತದ ಸರ್ವೋಚ್ಛ ನ್ಯಾಯಾಲಯವು ನಿರಂತರವಾಗಿ ಮತದಾನದ ಹಕ್ಕು ಮೂಲಭೂತ ಹಕ್ಕು ಆಗುವುದಿಲ್ಲ , ಬದಲಾಗಿ ಅದು ಶಾಸನವಿಹಿತ (Statutory) ಹಕ್ಕು ಮಾತ್ರ ಎಂದೇ ಹೇಳುತ್ತಾ ಬಂದಿದೆ.

ನ್ಯಾಯಾಂಗದ ಈ ನಿಲುವು ಈಗಾಗಲೇ ಸ್ಥಾಪಿತವಾಗಿದ್ದರೂ ಸಹ, ನಿರಂತರ ವಿಕಸನಗೊಳ್ಳುತ್ತಿರುವ ಸ್ವತಃ ನ್ಯಾಯಾಲಯದ ನ್ಯಾಯಶಾಸ್ತ್ರದ ನೆಲೆಯಲ್ಲಿ ಈ ನಿಲುವಿಗೆ ಸಮ್ಮತಿಸುವುದು ಕಷ್ಟವಾಗುತ್ತದೆ. ಹಲವಾರು ಸರಣಿ ಹೆಗ್ಗುರುತು ನಿರ್ಧಾರಗಳಲ್ಲಿ (Landmark Decisions) ನ್ಯಾಯಾಲಯವು ಮತದಾರರನ್ನು ನಿಷ್ಕ್ರಿಯ ಶಾಸನವಿಹಿತ ನೆಲೆಯಿಂದ ಸಕ್ರಿಯ ಸಾಂವಿಧಾನಿಕ ಭಾಗಿದಾರರ ನೆಲೆಗೆ ಪರಿವರ್ತಿಸಿದೆ. ತತ್ಪರಿಣಾಮವಾಗಿ ಕುತೂಹಲಕಾರಿ ವಿರೋಧಾಭಾಸವೂ ಸೃಷ್ಟಿಯಾಗಿದೆ. ಮತ ಚಲಾವಣೆಯ ಕ್ರಿಯೆಯನ್ನು ಇಂದಿಗೂ ಶಾಸನವಿಹಿತ (Statutory) ಎಂದೇ ಪರಿಗಣಿಸಲಾಗುತ್ತಿದ್ದರೂ ಈ ಕ್ರಿಯೆಯ ವಿಭಿನ್ನ ಮಗ್ಗುಲುಗಳು ಈಗಾಗಲೇ ಸಾಂವಿಧಾನಿಕ ರಕ್ಷಣೆಯನ್ನು ಪಡೆದುಕೊಂಡಿವೆ.

ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ನಿಲುವನ್ನು ನಾವು ಎನ್.ಪಿ. ಪೊನ್ನುಸ್ವಾಮಿ vs ಚುನಾವಣಾಧಿಕಾರಿ (Returning Offier)1952 ಮೊಕದ್ದಮೆಯಲ್ಲಿ ಗುರುತಿಸಬಹುದು. ಈ ಪ್ರಕರಣದಲ್ಲಿ ನ್ಯಾಯಾಲಯವು ಮತ ನೀಡುವ ಹಕ್ಕು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇವೆರಡೂ ಸಾಮಾನ್ಯ ಕಾನೂನು ಹಕ್ಕುಗಳು ಅಲ್ಲ (Common Law rights) ಬದಲಾಗಿ ಶಾಸನದ ಮೂಲಕ ಸೃಷ್ಟಿಸಲಾಗಿರುವ ಹಕ್ಕುಗಳು ಎಂದು ವ್ಯಾಖ್ಯಾನಿಸಿತ್ತು. ಇದೇ ತಾತ್ವಿಕ ನಿಲುವನ್ನು ಜ್ಯೋತಿ ಬಸು ಮತ್ತಿತರರು vs ದೇಬಿ ಗೋಸಾಲ್ ಮತ್ತಿತರರು (1982) ಮೊಕದ್ದಮೆಯಲ್ಲಿ ಮರುದೃಢೀಕರಿಸಲಾಗಿತ್ತು. ನ್ಯಾಯಮೂರ್ತಿ ಒ. ಚಿನ್ನಪ್ಪರೆಡ್ಡಿ ತಮ್ಮ ತೀರ್ಪಿನಲ್ಲಿ “ ಆಯ್ಕೆ ಮಾಡುವ ಹಕ್ಕು ಪ್ರಜಾಪ್ರಭುತ್ವಕ್ಕೆ ಮೂಲಭೂತವಾದರೂ ಅದು ಮೂಲಭೂತ ಹಕ್ಕೂ ಅಲ್ಲ ಸಾಮಾನ್ಯ ಕಾನೂನು ಹಕ್ಕೂ ಅಲ್ಲ ಬದಲಾಗಿ ಸ್ಪಷ್ಟವಾದ ಶಾಸನವಿಹಿತ ಹಕ್ಕು ” ಎಂದು ಹೇಳಿದ್ದರು. ಕುಲದೀಪ್ ನಯ್ಯರ್ vs ಭಾರತದ ಒಕ್ಕೂಟ (2006) ಮೊಕದ್ದಮೆಯಲ್ಲಿ ಸಾಂವಿಧಾನಿಕ ಪೀಠವು ಇದೇ ನಿಲುವನ್ನು ಪುನರುಚ್ಛರಿಸುತ್ತಾ ಪ್ರಜಾಸತ್ತೆಯು ಸಂವಿಧಾನದ ಮೂಲ ಸಂರಚನೆಯಾದರೂ , ಮತ ಚಲಾಯಿಸುವ ವೈಯುಕ್ತಿಕ ಹಕ್ಕು ಶಾಸನಗಳ ಮೂಲಕ ನಿರ್ಧಾರವಾಗುತ್ತದೆ, ಮೂಲತಃ ಪ್ರಜಾಪ್ರಾತಿನಿಧ್ಯ ಕಾಯ್ದೆಯ (RPA)ಮೂಲಕ ನಿರ್ಧರಿಸಲ್ಪಡುತ್ತದೆ ಎಂದು ಹೇಳಿತ್ತು.

ಈ ಧೋರಣೆಯ ಹಿಂದಿರುವ ತರ್ಕವು ಅರ್ಥವಾಗುವಂತಹುದು. ಸಂವಿಧಾನವು ಭಾಗ 3ರಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಮತ ನೀಡುವ ಹಕ್ಕನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಆದ್ದರಿಂದ ಚುನಾವಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಸತ್ತು ಅರ್ಹತೆಯ ಮತ್ತು ಅನರ್ಹತೆಯ ಮಾನದಂಡಗಳನ್ನು ನಿಷ್ಕರ್ಷೆ ಮಾಡುವ ಅವಕಾಶವನ್ನು ಪಡೆದಿರುತ್ತದೆ. ಆದರೆ ಈ ವಾದ ಇಲ್ಲಿಗೇ ನಿಲ್ಲುವುದಿಲ್ಲ
.
ಚುನಾವಣಾ ಪ್ರಕ್ರಿಯೆಯ ಸಾಂವಿಧಾನೀಕರಣ (Constitutionalising)
ಈ ಶತಮಾನದ ಆರಂಭದಲ್ಲಿ ನ್ಯಾಐಾಲಯವು ಚುನಾವಣಾ ಪ್ರಕ್ರಿಯೆಯನ್ನು ಸಾಂವಿಧಾನೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಭಾರತೀಯ ಒಕ್ಕೂಟ vs ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (2002) ಮೊಕದ್ದಮೆಯಲ್ಲಿ ನ್ಯಾಯಾಲಯವು, ಮತದಾರರಿಗೆ ಅಭ್ಯರ್ಥಿಗಳ ಅಪರಾಧಿಕ ಹಿನ್ನೆಲೆ, ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಹಣಕಾಸು ಆಸ್ತಿಯ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಇರುವುದಾಗಿ ಹೇಳಿತ್ತು. ಈ ಹಕ್ಕನ್ನು ನೇರವಾಗಿ , ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಧರಿಸುವ ಸಂವಿಧಾನದ ಅನುಚ್ಛೇದ 19(1)(ಎ) ವ್ಯಾಪ್ತಿಯಲ್ಲಿ ಗುರುತಿಸಲಾಗಿತ್ತು. ಮತದಾರರಿಗೆ ಸಮರ್ಪಕವಾದ ಮಾಹಿತಿ ಇಲ್ಲದೆ ಹೋದರೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟೀಕರಿಸಿತ್ತು.
ಒಂದು ವರ್ಷ ಕಳೆದ ನಂತರ, ಪಿಯುಸಿಎಲ್ vs ಭಾರತೀಯ ಒಕ್ಕೂಟ (2003) ಮೊಕದ್ದಮೆಯಲ್ಲಿ ನ್ಯಾಯಾಲಯವು ಬಹಳ ಮುಖ್ಯವಾದ ವ್ಯತ್ಯಾಸವನ್ನು ಗುರುತಿಸಿತ್ತು. ಮತದಾನದ ಹಕ್ಕು ಶಾಸನವಿಹಿತ ಎಂದು ಪುನರುಚ್ಛರಿಸುತ್ತಲೇ ನ್ಯಾಯಾಲಯವು ಮತದಾನದ ಸ್ವಾತಂತ್ರ್ಯ, ಅಂದರೆ ತಿಳುವಳಿಕೆಯಿಂದ ಆಯ್ಕೆ ಮಾಡುವ ಸ್ವಾತಂತ್ರ್ಯವು, ಅನುಚ್ಛೇದ 19(1)(ಎ)ಯ ರಕ್ಷಣೆ ಪಡೆಯುವ ಮೂಲಭೂತ ಹಕ್ಕು ಎಂದು ವ್ಯಾಖ್ಯಾನಿಸಿತ್ತು.
2003ರಲ್ಲಿ ಬಹಳ ಕುತೂಹಲಕಾರಿಯಾದ ಬೆಳವಣಿಗೆಯಲ್ಲಿ NOTA (None of the Above) ತೀರ್ಪು ಹೊರಬಂದಿತ್ತು. NOTA , ಅಂದರೆ ಅಭ್ಯರ್ಥಿಗಳ ಪೈಕಿ ಯಾರನ್ನೂ ಒಪ್ಪದ , ಆಯ್ಕೆಯನ್ನು ಗುರುತಿಸುವ ಮೂಲಕ ನ್ಯಾಯಾಲಯವು , ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸುವ ಮತದಾರರ ನಿರ್ಧಾರ, ಸಂವಿಧಾನದ ಅನುಚ್ಛೇದ 19(1)(ಎ) ಅಡಿಯಲ್ಲಿ ನೇರವಾಗಿ ರಕ್ಷಿಸಲ್ಪಡುವ ರಾಜಕೀಯ ಅಭಿವ್ಯಕ್ತಿ ಎಂದು ವ್ಯಾಖ್ಯಾನಿಸಿತ್ತು. ಮುಂದುವರೆದು ನ್ಯಾಯಾಲಯವು ಮತಪತ್ರದ (Ballot) ಗೋಪ್ಯತೆಯ ನಿಯಮವು ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡದ ಮತದಾರರಿಗೂ ಅನ್ವಯಿಸುತ್ತದೆ ಎಂದು ಹೇಳಿತ್ತು.
ಇದು ಬಹುಮುಖ್ಯವಾದ ಸಾಂವಿಧಾನಿಕ ಅಸಂಗತತೆಯನ್ನು (Anomaly) ಉಂಟುಮಾಡುತ್ತದೆ. ತಿಳಿಯುವ ಹಕ್ಕು (Rigth to Know) ಮೂಲಭೂತವಾದದ್ದು ಎನ್ನುವುದನ್ನು ನ್ಯಾಯಾಲಯವು ಪರಿಣಾಮಕಾರಿಯಾಗಿ ಎತ್ತಿಹಿಡಿದಿದೆ. ಹಾಗೆಯೇ ತಿಳುವಳಿಕೆಯ ಆಯ್ಕೆ (Informed Choice)ಯ ಸ್ವಾತಂತ್ರ್ಯವನ್ನೂ ಮೂಲಭೂತ ಎಂದು ಪರಿಗಣಿಸಿದೆ. ಮತಪತ್ರದ (Ballot) ಗೋಪ್ಯತೆಯೂ ಮೂಲಭೂತ ಎಂದು ಹೇಳಿದೆ. ಹಾಗೆಯೇ ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸುವ ಹಕ್ಕು ಸಹ ಸಾಂವಿಧಾನಿಕ ರಕ್ಷಣೆ ಪಡೆಯುತ್ತದೆ ಎಂದು ಹೇಳಿದೆ. ಆದಾಗ್ಯೂ ಮತ ಚಲಾವಣೆಯ ಕ್ರಿಯೆಯನ್ನು ಮಾತ್ರ ಶಾಸನವಿಹಿತ ಅರ್ಹತೆ (Statutory entitlement) ಎಂದೇ ಪರಿಗಣಿಸಲಾಗುತ್ತಿದೆ.

ಸಂವಿಧಾನವು ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸುವ ಹಕ್ಕನ್ನು ರಕ್ಷಿಸುವುದೇ ಆದರೆ , ಆಯ್ಕೆ ಮಾಡುವ ಹಕ್ಕನ್ನು ಏಕೆ ರಕ್ಷಿಸಲಾಗುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇತ್ತೀಚಿನ ಸಾಂವಿಧಾನಿಕ ನ್ಯಾಯಶಾಸ್ತ್ರವೂ ಸಹ ಈ ದಿಕ್ಕಿನಲ್ಲಿ ಸೂಚಿಸುತ್ತದೆ. ಅನೂಪ್ ಬರನ್ವಾಲ್ vs ಭಾರತೀಯ ಒಕ್ಕೂಟ (2023) ಮೊಕದ್ದಮೆಯಲ್ಲಿ ನ್ಯಾಯಮೂರ್ತಿ ಅಜಯ್ ರಸ್ಟೋಗಿ ತಮ್ಮ ಪ್ರತ್ಯೇಕ ಅಭಿಪ್ರಾಯವನ್ನು ದಾಖಲಿಸಿ, ಮತದಾನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವುದನ್ನು ಸ್ಪಷ್ಟವಾಗಿ ಅನುಮೋದಿಸಿದ್ದಾರೆ. ಈ ದೃಷ್ಟಿಕೋನವು ಬಹುಮತ ಪಡೆಯದೆ ಹೋದರೂ ಸಾಂವಿಧಾನಿಕ ಪೀಠವು ಪದೇಪದೇ ಮತದಾನವನ್ನು ಸಾಂವಿಧಾನಿಕ ಹಕ್ಕು ಎಂದೇ ವ್ಯಾಖ್ಯಾನಿಸಿದೆಯೇ ಹೊರತು ಕೇವಲ ಶಾಸನಬದ್ಧ ಹಕ್ಕು ಎಂದು ಹೇಳಿಲ್ಲ. ಇದು ನ್ಯಾಯಿಕ ಗ್ರಹೀತದಲ್ಲಿ ಪ್ರಮುಖವಾದ ತಿರುವು ಎಂದು ಹೇಳಬಹುದು. ನ್ಯಾಯಾಲಯವು ಇನ್ನೂ ಮತದಾನವನ್ನು ಮೂಲಭೂತ ಹಕ್ಕಿನ ಹಂತಕ್ಕೆ ಎತ್ತರಿಸದೆ ಇರಬಹುದು ಆದರೆ ನಿಸ್ಸಂದೇಹವಾಗಿ, ಈ ಹಿಂದಿನ ನಿರ್ಧಾರಗಳಲ್ಲಿ ಪ್ರಧಾನವಾಗಿ ಕಾಣಬಹುದಾದ ಸೀಮಿತವಾದ ಶಾಸನಬದ್ಧತೆಯ ಪರಿಕಲ್ಪನೆಯನ್ನು ಮೀರಿ ಹೋಗಿದೆ.
ಮೂಲ ಸಂರಚನೆಯ ತತ್ವದ (Basic Structure Doctrine) ಮಸೂರದಿಂದ ನೋಡಿದಾಗ ಈ ಅಸಂಗತತೆ ಇನ್ನೂ ಸ್ಪಷ್ಟವಾಗುತ್ತದೆ. ಕೇಶವಾನಂದ ಭಾರತಿ vs ಕೇರಳ ರಾಜ್ಯ (1973) ಮೊಕದ್ದಮೆಯ ನಂತರದಲ್ಲಿ ನ್ಯಾಯಾಲಯವು ಪ್ರಜಾತಂತ್ರವು ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಪದೇ ಪದೇ ಹೇಳುತ್ತಾ ಬಂದಿದೆ. ಇಂದಿರಾ ನೆಹರು ಗಾಂಧಿ vs ಶ್ರೀ ರಾಜ್ ನಾರಾಯಣ್ ಮತ್ತೋರ್ವ (1975) ಮೊಕದ್ದಮೆಯಲ್ಲಿ ನ್ಯಾಯಾಲಯವು ಮುಕ್ತ-ನ್ಯಾಯಯುತ ಚುನಾವಣೆಗಳು ಪ್ರಜಾಪ್ರಭುತ್ವದ ಲಕ್ಷಣ ಎಂದು ಹೇಳಿದೆ. ತದನಂತರದ ತೀರ್ಪುಗಳಲ್ಲೂ ಸಹ ಇದೇ ತತ್ವವನ್ನು ಪುನರುಚ್ಛರಿಸಿದೆ.

ಪ್ರಜಾಪ್ರಭುತ್ವ ಆರಂಭವಾಗುವುದು ಮತಗಳಿಂದ
ಆದರೆ ಪ್ರಜಾಪ್ರಭುತ್ವದ ಅಸ್ತಿತ್ವ ಅಮೂರ್ತತೆಯಲ್ಲಿರುವುದಿಲ್ಲ. ಇದು ಚುನಾವಣೆಗಳ ಮೂಲಕ ಕಾರ್ಯಗತವಾಗುತ್ತದೆ, ಚುನಾವಣೆಗಳು ತಮ್ಮ ನ್ಯಾಯಸಮ್ಮತತೆಯನ್ನು (Legitimacy) ಮತಪತ್ರದ ಮೂಲಕ ಜನತೆಯ ಭಾಗವಹಿಸುವಿಕೆಯಿಂದ ಪಡೆದುಕೊಳ್ಳುತ್ತದೆ. ಜನಪ್ರಿಯ ಸಾರ್ವಭೌಮತ್ವವನ್ನು ಪ್ರಯೋಗಿಸುವಲ್ಲಿ ಮತ (Vote) ಪ್ರಧಾನ ಸಾಧನವಾಗುತ್ತದೆ. ಮತಗಳ ಮುಖಾಂತರವೇ “ ಜನತೆಯಾದ ನಾವು” (We the people) ಕಾಲಕಾಲಕ್ಕೆ ಪ್ರಭುತ್ವದ ನ್ಯಾಯಸಮ್ಮತತೆಯನ್ನು ನವೀಕರಿಸಿ ಸರ್ಕಾರಗಳನ್ನು ಉತ್ತರದಾಯಿಯಾಗಿಸುತ್ತೇವೆ.
ಪ್ರಜಾಪ್ರಭುತ್ವವು ಸಂವಿಧಾನದ ಮೂಲ ಸಂರಚನೆಯ ಭಾಗವಾಗಿದ್ದಲ್ಲಿ, ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಶವಾಗಿದ್ದಲ್ಲಿ, ಪ್ರಜೆಗಳ ಮತದಾನದ ಹಕ್ಕು ಸಾಂವಿಧಾನಿಕ ಅಂತಃಸತ್ವದಿಂದ ಹೊರಗಿರುವುದನ್ನು ವಿವರಿಸುವುದು ಬಹಳ ಕಷ್ಟವಾಗುತ್ತದೆ. ಪ್ರಜಾಪ್ರಭುತ್ವವು ಸಂವಿಧಾನಕ್ಕೆ ಮೂಲ ಎಂದು ಹೇಳುತ್ತಲೇ ಜನತೆಯ ಹಕ್ಕು ಕೇವಲ ಶಾಸನ ಬದ್ಧ ಹಕ್ಕು ಎಂದು ಹೇಳುವುದು ಅಸಮಂಜಸ (Incongruous) ಎನಿಸುತ್ತದೆ. ಮತದಾರರಿಲ್ಲದ ಪ್ರಜಾಪ್ರಭುತ್ವವನ್ನು ಊಹಿಸಲೂ ಸಾಧ್ಯವಿಲ್ಲ.
ಹಾಗೆಂದ ಮಾತ್ರಕ್ಕೆ ಮತದಾನದ ಪ್ರತಿಯೊಂದು ಅಂಶವನ್ನೂ ಪರಿಪೂರ್ಣ ಮೂಲಭೂತ ಹಕ್ಕು (Absolute Fundamental Right) ಎಂದು ಪರಿಗಣಿಸಿ ನಿಯಮಗಳಿಂದ ಹೊರತುಪಡಿಸಬೇಕಿಲ್ಲ. ಸಂಸತ್ತು ಚುನಾವಣೆಗಳನ್ನು ನಡೆಸಲು ಅವಶ್ಯಕವಾದ ಕೆಲವು ಅರ್ಹತಾ ಮಾನದಂಡಗಳನ್ನು , ಅನರ್ಹತೆಯ ನಿಬಂಧನೆಗಳನ್ನು ರೂಪಿಸುತ್ತಲೇ ಇರಬಹುದು. ವಯೋಮಿತಿಯ ಅಗತ್ಯತೆ, ಮತದಾರರ ಪಟ್ಟಿ, ವಾಸಸ್ಥಳದ ನಿಬಂಧನೆಗಳು, ಭ್ರಷ್ಟ ಚಟುವಟಿಕೆಗಳಿಗಾಗಿ ಅನರ್ಹತೆ ಇನ್ನಿತರ ನಿಯಂತ್ರಕ ನಿಬಂಧನೆಗಳು (Regulatory Provisions) ನಿಯಮಬದ್ಧ ಚುನಾವಣೆಗಳ ಅವಿಭಾಜ್ಯ ಅಂಶ.
ಸಾಂವಿಧಾನಿಕ ಮಾನ್ಯತೆ ಪಡೆಯಬೇಕಾಗಿರುವುದು ಕೇವಲ ಕಾರ್ಯವಿಧಾನದ ವಿವರಗಳು ಮಾತ್ರ ಅಲ್ಲ ಬದಲಾಗಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅರ್ಹ ಪ್ರಜೆ-ನಾಗರಿಕರ ಹಕ್ಕು.

ಸಂವಿಧಾನದ ಅನುಚ್ಛೇದ 326 ನ್ನು ಪರಿಶೀಲಿಸಿದಾಗ ಇದು ನಿರ್ದಿಷ್ಟವಾಗಿ ಸ್ಪಷ್ಟತೆ ಪಡೆಯುತ್ತದೆ. ಈ ಅನುಚ್ಛೇದವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ಸಾರ್ವತ್ರಿಕ ವಯಸ್ಕ ಮತದಾನವನ್ನು ಆಧರಿಸಿರಬೇಕು ಎಂದು ಸ್ಪಷ್ಟಪಡಿಸುತ್ತದೆ. 18 ವರ್ಷ ದಾಟಿದ ಪ್ರತಿಯೊಬ್ಬ ಪ್ರಜೆಯೂ, ಕೆಲವು ಸೀಮಿತ ಅನರ್ಹತೆಯ ಮಾನದಂಡಗಳನ್ನು ಹೊರತುಪಡಿಸಿ, ಸಾಂವಿಧಾನಿಕವಾಗಿ ಮತದಾರರಾಗಿ ನೋಂದಣಿಗೆ ಅರ್ಹರಾಗಿರುತ್ತಾರೆ. ಈ ಅರ್ಹತೆಯ ಮೂಲ ಶಾಸನ ಅಲ್ಲ ಬದಲಾಗಿ ಖುದ್ದು ಸಂವಿಧಾನವೇ ಆಗಿದೆ. ಪ್ರಜಾಪ್ರಾತಿನಿಧ್ಯ ಕಾಯ್ದೆಗಳು (RPA) ಈ ಸಾಂವಿಧಾನಿಕ ಆದೇಶವನ್ನು ಕಾರ್ಯಗತಗೊಳಿಸುತ್ತವೆ ಅಷ್ಟೆ.
ಹೀಗಾಗಿ, ಮತದಾನದ ಕ್ರಿಯೆ ಮತ್ತು ನಿಯಮಗಳು ಶಾಸನಬದ್ಧವಾಗಿದ್ದರೂ, ಮತದಾರ ಎಂದು ಪರಿಗಣಿಸಲ್ಪಡುವ ಪ್ರಜೆಗಳ ಹಕ್ಕು ನೇರವಾಗಿ ಸಂವಿಧಾನದಿಂದಲೇ ನಿರ್ಧರಿಸಲ್ಪಡುತ್ತದೆ. ಸಾಂವಿಧಾನಿಕವಾಗಿ ಅನುಮತಿಸಲ್ಪಟ್ಟ ಇತಿಮಿತಿಗಳಿಂದ ಹೊರತುಪಡಿಸಿ, ಮತದಾರರ ಪಟ್ಟಿಯಿಂದ ಹೊರಗಿಡುವುದು ಸಾಂವಿಧಾನಿಕ ಖಾತರಿಗೆ (Constitutional Guarantee) ಧಕ್ಕೆ ಉಂಟುಮಾಡುತ್ತದೆ.
ನ್ಯಾಯಾಲಯವು ಮರುಪರಿಶೀಲಿಸಬೇಕಾದ ವಿಷಯ
ಶಾಸನಬದ್ಧ ಮತ್ತು ಸಾಂವಿಧಾನಿಕ ಹಕ್ಕುಗಳ ನಡುವಿನ ವ್ಯತ್ಯಾಸ , ಗಣತಂತ್ರದ ಆರಂಭದ ದಿನಗಳಲ್ಲಿ , ಚುನಾವಣಾ ನ್ಯಾಯಶಾಸ್ತ್ರವು ಇನೂ ಶೈಶಾವಸ್ಥೆಯಲ್ಲಿದ್ದಾಗ, ಉಪಯುಕ್ತ ಉದ್ದೇಶಗಳನ್ನು ಈಡೇರಿಸಿರಬಹುದು. ಆದರೆ ನ್ಯಾಯಾಲಯದ ತೀರ್ಪುಗಳೇ ಹಂತಹಂತವಾಗಿ ಮತದಾನದ ವಿವಿಧ ಮಗ್ಗುಲುಗಳನ್ನು ಸಾಂವಿಧಾನೀಕರಣಗೊಳಿಸುವ (Constitutionalising) ಮೂಲಕ ಈ ವ್ಯತ್ಯಾಸವನ್ನು ಮಸುಕಾಗಿಸಿವೆ.

ಬಹುಶಃ ಎಲ್ಲ ಹಳೆಯ ತಾತ್ವಿಕ ನಿಲುವುಗಳನ್ನು ಮರುಪರಿಶೀಲನೆಗೊಳಪಡಿಸುವ ಕಾಲ ಒದಗಿಬಂದಿದೆ. ಪ್ರಜಾಪ್ರಭುತ್ವ ಹಾಗೂ ಮುಕ್ತ-ನ್ಯಾಯಯುತ ಚುನಾವಣೆಗಳೇ ಮೂಲ ಸಂರಚನೆಯಾಗಿರುವ ಸಂವಿಧಾನದಲ್ಲಿ ಪ್ರಜೆಯ ಮತವು (Vote) ಸಾಂವಿಧಾನಿಕವಾಗಿ ಅನಾಥವಾಗಿರಲು ಸಾಧ್ಯವಿಲ್ಲ. ಮತಪತ್ರ (Ballot) ಕೇವಲ ಸಂಸತ್ತು ನೀಡಿರುವ ಶಾಸನಬದ್ಧ ಸವಲತ್ತು (Statutory Privilege) ಅಲ್ಲ. ಅದು ಜನಪ್ರಿಯ ಸಾರ್ವಭೌಮತ್ವವನ್ನು (Popular Sovereignty) ಅಭಿವ್ಯಕ್ತಿಸುವ ಸಾಧನವಾಗಿದ್ದು ಇದರ ಮುಖಾಂತರವೇ ಗಣತಂತ್ರವು ಕಾಲಕಾಲಕ್ಕೆ ತನ್ನ ಪ್ರಜಾಸತ್ತಾತ್ಮಕ ನ್ಯಾಯಸಮ್ಮತತೆಯನ್ನು ನವೀಕರಿಸುತ್ತಿರುತ್ತದೆ.
ಮೇಲಾಗಿ, ಸಂವಿಧಾನವು ಪ್ರತಿಯೊಬ್ಬ ಅಭ್ಯರ್ಥಿಯನ್ನೂ ತಿರಸ್ಕರಿಸುವ ಹಕ್ಕನ್ನು ರಕ್ಷಿಸುವುದೇ ಆದರೆ, ಅದು ಒಬ್ಬರನ್ನು ಆಯ್ಕೆ ಮಾಡುವ ಹಕ್ಕನ್ನು ನಿರಾಕರಿಸುವುದು ಸಾಧ್ಯವಿಲ್ಲ.
( ಮೂಲ : In India Voting cannot remain merely a statutory right – ದ ಹಿಂದೂ 7 ಜುಲೈ 2026)
(ಮೂಲ ಲೇಖಕರು : ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು )






