ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಮಚಂದ್ರೇಗೌಡರು ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹೋದ್ಯೋಗಿಯಾಗಿದ್ದ ಅವರು ಪಕ್ಷದ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ಸಕ್ರಿಯರಾಗಿದ್ದರು.

ಆರ್‌ಎಸ್‌ಎಸ್ ಹಿನ್ನೆಲೆಯ ರಾಮಚಂದ್ರೇಗೌಡರು 1953ರಲ್ಲಿ ಸಂಘವನ್ನು ಸೇರಿದ್ದು, 1970ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಬಿಜೆಪಿ ಹಿಂದಿನ ರೂಪವಾದ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರು ನಗರ ನಿಗಮಕ್ಕೆ ಆಯ್ಕೆಯಾದ ಮೊದಲ ಕಾರ್ಪೊರೇಟರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಅವರು ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

2010ರಲ್ಲಿ ವೈದ್ಯಕೀಯ ಕಾಲೇಜುಗಳ ನೇಮಕಾತಿ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಹೈಕೋರ್ಟ್ ಪ್ರಕರಣದಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಸುಮಾರು ಐದು ದಶಕಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ ರಾಮಚಂದ್ರೇಗೌಡರು 2018ರಲ್ಲಿ ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿದ್ದರು. ಅವರ ನಿಧನಕ್ಕೆ ಬಿಜೆಪಿ ನಾಯಕರು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಚಿವ ರಾಮಚಂದ್ರೇಗೌಡ ಅವರ ಅಗಲಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಶ್ರೀ ರಾಮಚಂದ್ರ ಗೌಡರ ನಿಧನದ ವಾರ್ತೆ ತಿಳಿದು ಬಹಳ ದುಃಖವಾಯಿತು. ಶ್ರೀಯುತರು ನನ್ನ ಆತ್ಮೀಯರಾಗಿದ್ದರು ಹಾಗೂ ಮೊದಲ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಂಪುಟ ಸದಸ್ಯರಾಗಿದ್ದರು. ಅವರು ಸ್ನೇಹಶೀಲರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು.ಶ್ರೀ ರಾಮಚಂದ್ರ ಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರು, ಅಭಿಮಾನಿಗಳು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.






