ನವದೆಹಲಿ: ಮಾಸಿಕ ₹1,100 ಪಿಂಚಣಿ ಪಡೆಯಲು ಬ್ಯಾಂಕ್‌ಗೆ ತೆರಳಿದ್ದ ವೃದ್ಧರೊಬ್ಬರ ಖಾತೆಯಲ್ಲಿ ಏಕಾಏಕಿ ಸುಮಾರು ₹760 ಕೋಟಿ ಹಣ ಕಾಣಿಸಿಕೊಂಡಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಘಟನೆ ಆಧರಿತ ಎಐ ವಿಡಿಯೋಗಳು ಹರಿದಾಡುತ್ತಿದ್ದು, ಇದು ನಿಜವೇ ಎಂಬ ಪ್ರಶ್ನೆ ಇದೀಗ ಹಲವರಲ್ಲಿ ಮೂಡಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ವೃದ್ಧರು ತಮ್ಮ ಪಿಂಚಣಿ ಹಣವನ್ನು ಪಡೆಯಲು ಬ್ಯಾಂಕ್‌ಗೆ ಹೋಗುತ್ತಾರೆ. ಆಗ ಬ್ಯಾಂಕ್ ಸಿಬ್ಬಂದಿ ಖಾತೆ ಪರಿಶೀಲಿಸಿದಾಗ ಸುಮಾರು ₹7,59,69,51,951.16 ಬ್ಯಾಲೆನ್ಸ್ ತೋರಿಸುತ್ತಿದೆ ಎಂದು ಹೇಳಲಾಗುತ್ತದೆ. ಈ ಮೊತ್ತವನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಲ್ಲಿದ್ದವರು ಆಶ್ಚರ್ಯಗೊಂಡಿರುವ ದೃಶ್ಯಗಳು ವಿಡಿಯೋದಲ್ಲಿ ಇದೆ. ಒಂದೊಂದು ಕಡೆ ಒಂದೊಂದು ಮಾಹಿತಿಯಿದ್ದು, ವೃದ್ಧ ಹಾಗೂ ಅವರ ಮಗ ಅವರ ಖಾತೆಯಲ್ಲಿ ₹760 ಕೋಟಿ ಹಣ ಇರುವುದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಯಾವ ಬ್ಯಾಂಕ್, ಯಾವ ರಾಜ್ಯ ಅಥವಾ ಯಾವ ವ್ಯಕ್ತಿ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಸಂಬಂಧಪಟ್ಟ ಬ್ಯಾಂಕ್ ಅಥವಾ ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಇದು ಎಷ್ಟು ಸತ್ಯ ಎನ್ನುವುದು ಸದ್ಯ ಯಾರಿಗೂ ಗೊತ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವರು ಇದು ಸುಳ್ಳು ಸುದ್ದಿ ಎಂದರೆ, ಇನ್ನೂ ಕೆಲವರು ಇದು ತಾಂತ್ರಿಕ ದೋಷ ಅಥವಾ ಸಾಫ್ಟ್‌ವೇರ್ ಸಮಸ್ಯೆಯಿಂದ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ವೃದ್ಧರ ಖಾಸಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವುದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಈ ವೈರಲ್ ವಿಡಿಯೋದಲ್ಲಿನ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದ್ದರಿಂದ ಅಧಿಕೃತ ಮಾಹಿತಿ ಅಥವಾ ಬ್ಯಾಂಕ್‌ನ ಸ್ಪಷ್ಟನೆ ಬಂದ ಬಳಿಕವೇ ಈ ಘಟನೆಯ ಸತ್ಯಾಸತ್ಯತೆ ತಿಳಿಯಲಿದೆ.






