
ಬಾಗಲಕೋಟೆ: ಪರೀಕ್ಷೆಯಲ್ಲಿ ಮಕ್ಕಳು ಫೇಲ್ ಆದರೆ ಹೀನಾಮಾನವಾಗಿ ಬೈಯ್ದು ಬುದ್ಧಿ ಹೇಳುವುದನ್ನು ನೋಡಿದ್ದೇವೆ. ಇನ್ನೂ ಕೆಲವರು ಕಡಿಮೆ ಅಂಕ ಬಂದರೆ ಸಾಕು ಮಕ್ಕಳನ್ನು ಬೈಯ್ದು ಆತ್ಮಸ್ಥೈರ್ಯ ಕುಗ್ಗಿಸುತ್ತಾರೆ. ಆದರೆ ಇಲ್ಲೊಬ್ಬರು ತನ್ನ ಮಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಫೇಲ್ ಆದರೂ ಸಂಭ್ರಮಾಚರಣೆ ಮಾಡಿದ್ದಾರೆ. ಕೇಕ್ ಕತ್ತರಿಸಿ, ಮಗನಿಗೆ ತಿನ್ನಿಸಿ ಬುದ್ಧಿವಾದ ಹೇಳಿದ್ದಾರೆ.

ಎಸ್ಎಸ್ಎಲ್ಸಿ ಆರೂ ವಿಷಯದಲ್ಲಿ ಅನುತ್ತೀರ್ಣನಾದ ಮಗನಿಗೆ ಕೇಕ್ ತಿನ್ನಿಸಿ ಸಂಭ್ರಮ ಮಾಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಎಸ್ಎಸ್ಎಲ್ಸಿಯಲ್ಲಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಧೈರ್ಯ ಹೇಳಿದ್ದಾರೆ ತಂದೆ. ತಾಯಿ, ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬ ಕೇಕ್ ಕತ್ತರಿಸಿ ಸಂಭ್ರಮಿಸಿದೆ.
ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಎಸ್ಎಸ್ಎಲ್ಸಿ ಫೇಲಾದ ವಿದ್ಯಾರ್ಥಿ ಆಗಿದ್ದು, 625 ಅಂಕಗಳಿಗೆ 200 ಅಂಕ ಪಡೆದು ಶೇಕಡ 32ರಷ್ಟು ಅಂಕ ಸಾಧನೆ ಮಾಡಿದ್ದಾನೆ. ಆರಕ್ಕೆ ಆರು ವಿಷಯಗಳಲ್ಲಿ ಅನುತ್ತೀರ್ಣನಾದ ಮಗನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್ನಲ್ಲಿ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದುತ್ತಿದ್ದ ಮಗ, ಅನುತ್ತೀರ್ಣ ಆಗಿದ್ರಿಂದ ಬೇಸರದಲ್ಲಿದ್ದ. ಮಗನ ಬೇಸರ ಕಂಡು ಸರ್ಪ್ರೈಜ್ ಆಗಿ ಕೇಕ್ ತಂದು ಕತ್ತರಿಸಿ, ತಿನ್ನಿಸಿದ ಕುಟುಂಬ. ಮುಂದೆ ಪರೀಕ್ಷೆ ಕಟ್ಟಿ ಪಾಸ್ ಆಗುವಂತೆ ಬುದ್ಧಿವಾದ ಹೇಳಿದೆ. ಪರೀಕ್ಷೆ ಒಂದೇ ಜೀವನವಲ್ಲ ಮತ್ತೆ ಪ್ರಯತ್ನ ಮಾಡು ಎಂದು ಬೆನ್ನು ತಟ್ಟಿ ಧೈರ್ಯ ತುಂಬಿದ್ದಾರೆ.








