ಹೈದರಾಬಾದ್ ಆಸ್ಪತ್ರೆವೊಂದರ ಬಿಲ್ ಕಟ್ಟಲಾಗದೆ ಒದ್ದಾಡುತ್ತಿದ್ದ ಮಂಡ್ಯ ಮೂಲದ ಕುಟುಂಬವೊಂದರ ನೆರವಿಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಡಿಕೊಂಡ ಮನವಿಗೆ ತೆಲಂಗಾಣ ಸರ್ಕಾರ ತಕ್ಷಣ ಸ್ಪಂದಿಸಿದ ಹಿನ್ನೆಲೆಯಲ್ಲಿ ಮಂಡ್ಯ ವ್ಯಕ್ಯಿಯ ಶವವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಮಂಡ್ಯ ಮೂಲದ ಮಂಜುನಾಥ್ ಎಂಬುವವರು ಹೈದರಾಬಾದ್ ನ ಮೆಡಿಕೊವರ್ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಅವರ ಚಿಕಿತ್ಸೆ ವೆಚ್ಚ 7.50 ಲಕ್ಷ ರುಪಾಯಿ ಆಗಿತ್ತು. ಆದರೆ ಮಂಜುನಾಥ್ ಅವರ ಪತ್ನಿ ಶಶಿಕಲಾ ಅವರಿಗೆ 2.00 ಲಕ್ಷ ಮಾತ್ರ ಕಟ್ಟಲು ಸಾಧ್ಯವಾಗಿತ್ತು. ಉಳಿದ ಹಣ ಕಟ್ಟದೆ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪಟ್ಟು ಹಿಡಿಯಿತು. ಶಶಿಕಲಾ ಅವರು ದಿಕ್ಕು ತೋಚದಾದರು.
ಈ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಬಂತು. ಇಂದು ಸಂಜೆ 6.45ಕ್ಕೆ ತೆಲಾಂಗಣ ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ಶಿವಕುಮಾರ್ ಅವರು, “ಶಶಿಕಲಾ ಮಂಜುನಾಥ್ ಅವರ ಕುಟುಂಬ ಸಂಕಷ್ಟದಲ್ಲಿದೆ. ಮೆಡಿಕವರ್ ಆಸ್ಪತ್ರೆ ಆಡಳಿತ ಮಂಡಳಿ ಮಂಜುನಾಥ್ ಅವರ ಶವ ನೀಡುತ್ತಿಲ್ಲ. ಶಶಿಕಲಾ ಅವರ ನೆರವಿಗೆ ಬರುವಂತೆ ಮನವಿ ಮಾಡಿದ್ದರು.
ಅರ್ಧ ಗಂಟೆಯಲ್ಲಿ ಇದಕ್ಕೆ ಸ್ಪಂದಿಸಿದ ತೆಲಂಗಾಣ ಟಿಆರ್ ಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), “ಶಿವಕುಮಾರ್ ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ದಯವಿಟ್ಟು ಅವರ ಸಂಪರ್ಕ ವಿವರ ನೀಡಿ. ನಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವರು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಸ್ಪಂದಿಸಿದ ಡಿ.ಕೆ. ಶಿವಕುಮಾರ್ ಅವರು ಶಶಿಕಲಾ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ತೆಲಾಂಗಣ ಸರಕಾರ ಅಗತ್ಯ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಂಜುನಾಥ್ ಅವರ ಶವವನ್ನು ಆಸ್ಪತ್ರೆ ಆಡಳಿತ ಮಂಡಳಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದೆ.