‘ಜೈಲೇ ಸುರಕ್ಷಿತ, ಪೆರೋಲ್ ಬೇಡ, ಜಾಮೀನೂ ಬೇಡ’: ಹೊರ ಬರಲು ಖೈದಿಗಳ ನಿರಾಕರಣೆ

ಜೈಲಿನಿಂದ ಹೇಗಾದರೂ ಒಮ್ಮೆ ಹೊರಬರಬೇಕೆಂದು ಜೈಲುವಾಸ ಅನುಭವಿಸುವ ಬಹುತೇಕ ಖೈದಿಗಳು ಬಯಸುತ್ತಾರೆ. ಹಾಗಾಗಿಯೇ, ಜಾಮೀನು ಅಥವಾ ಪೆರೋಲ್ ಲಭಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಪಡುತ್ತಾರೆ. ಆದರೆ ಉತ್ತರ ಪ್ರದೇಶದ ಖೈದಿಗಳು ತಮಗೆ ಪೆರೋಲ್ ಬೇಡವೇ ಬೇಡ, ನಾವು ಜೈಲಿನಲ್ಲೇ ಇರುತ್ತೇವೆ, ಇಲ್ಲಿಯೇ ಸುರಕ್ಷಿತರಾಗಿದ್ದೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಹೊರ ಜಗತ್ತಿನಲ್ಲಿ ತನ್ನ ಕರಾಳ ಪ್ರಭಾವ ಬೀರುತ್ತಿರುವ ಕೋವಿಡ್19 ಗೆ ಹೆದರಿ, ಉತ್ತರ ಪ್ರದೇಶದ 21 ಖೈದಿಗಳು ತಮ್ಮನ್ನು ಪೆರೋಲ್‌ನಲ್ಲಿ ಹೊರಕ್ಕೆ ಬಿಡದಂತೆ ಅಧಿಕಾರಿಗಳನ್ನು ಕೋರಿಕೊಂಡಿದ್ದಾರೆ. ತಮ್ಮ ಜೈಲು ಶಿಕ್ಷೆ ಅವಧಿಯನ್ನು ತಾತ್ಕಾಲಿಕ ಅಮಾನತ್ತು ಮಾಡುವ ‘ಪೆರೋಲ್’ಅನ್ನೇ ಈ ಖೈದಿಗಳು ನಿರಾಕರಿಸಿದ್ದು ಅಧಿಕಾರಿಗಳನ್ನು ಹುಬ್ಬೇರುವಂತೆ ಮಾಡಿದೆ.

ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಮೀರತ್, ಮಹಾರಾಜಗಂಜ್, ಗೋರಖ್‌ಪುರ ಮತ್ತು ಲಕ್ನೋ ಸೇರಿದಂತೆ ಒಟ್ಟು ಒಂಭತ್ತು ಜೈಲುಗಳಲ್ಲಿರುವ 21 ಖೈದಿಗಳು ಈ ವಿನಂತಿ ಮಾಡಿದ್ದಾರೆಂದು ಜೈಲು ಆಡಳಿತ ಮಹಾನಿರ್ದೇಶಕ ಆನಂದ್ ಕುಮಾರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾವು ಹೊರಗೆ ಹೋಗುವುದಿಲ್ಲವೆಂದು ಮನವಿ ಮಾಡಿಕೊಂಡ ಖೈದಿಗಳಲ್ಲಿ, ಕೋವಿಡ್ ಕುರಿತಾದ ಆತಂಕವಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊರ ಜಗತ್ತಿಗೆ ಕಾಲಿಟ್ಟರೆ, ತಮ್ಮ ಬದುಕಿಗೆ ಏನು ಮಾಡಬೇಕೆಂದೂ ಅವರಿಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜೈಲಿನಲ್ಲಿ ಸರಿಯಾದ ಸಮಯಕ್ಕೆ ಆಹಾರ ದೊರಕುತ್ತದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ, ಹಾಗಾಗಿ ಜೈಲಿನಲ್ಲಿ ಇರುವುದು ಅವರಿಗೆ ಸುರಕ್ಷಿತ ಭಾವ ನೀಡಿದೆ. ಒಂದು ವೇಳೆ ಜೈಲಿನಿಂದ ಹೊರ ಹೋದರೆ, ಬದುಕಲು ಕಷ್ಟಪಡಬೇಕಾಗುತ್ತದೆ ಎಂದು ಖೈದಿಗಳು ತಿಳಿಸಿರುವುದಾಗಿ ಆನಂದ್ ಕುಮಾರ್ ಹೇಳಿದ್ದಾರೆ.

ಜೈಲಿನ ಆಡಳಿತವು ಖೈದಿಗಳ ಈ ಮನವಿಯನ್ನು ಗೌರವಪೂರ್ವಕವಾಗಿ ಕಾಣುತ್ತದೆ ಹಾಗೂ ಅವರ ಬೇಡಿಕೆಯನ್ನು ಈಡೇರಿಸುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಇದುವರೆಗೂ ಸುಮಾರು 2200 ಖೈದಿಗಳನ್ನು ಮಧ್ಯಂತರ ಪೆರೋಲ್ ಮೇಲೆಯೂ, ಸುಮಾರು 9200 ಖೈದಿಗಳನ್ನು ಮಧ್ಯಂತರ ಜಾಮೀನಿನ ಆಧಾರದಲ್ಲೂ ಬಿಡುಗಡೆಗೊಳಿಸಲಾಗಿದೆ. ಒಟ್ಟಾರೆ 11,500 ಖೈದಿಗಳನ್ನು ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ, ಉನ್ನತ ಅಧಿಕಾರಿಗಳ ಸಮಿತಿಯ ಶಿಫಾರಸು ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...