ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ತರುಣ್ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿದ್ದರಿಂದ ಭಾರತೀಯ ಮಹಿಳೆಯರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ತೀರ್ಪಿನ ವಿಮರ್ಶೆ ಅಥವಾ ಪ್ರಕರಣದ ಸಾಕ್ಷ್ಯಗಳ ಮೌಲ್ಯಮಾಪನ ಈ ಲೇಖನದ ಉದ್ದೇಶವಲ್ಲ. ಅಲ್ಲದೆ ಗೋವಾ ರಾಜ್ಯವು ಈಗಾಗಲೇ ಮೇಲ್ಮನವಿ ಸಲ್ಲಿಸಿದೆ ಮತ್ತು ಈ ತೀರ್ಪು ಪುನರ್ಪರಿಶೀಲನೆಗೆ ಒಳಪಡಲೂಬಹುದು.
ಪಿತೃಪ್ರಭುತ್ವ ಮತ್ತು ಅತಿರೇಕದಿಂದ ಬಳಲುತ್ತಿರುವ ದೇಶದಲ್ಲಿ ಮಹಿಳೆಯರ ಗೌರವ ಮತ್ತು ಸ್ವಾಭಿಮಾನ ಬಹುದೊಡ್ಡ ಸವಾಲಾಗಿದೆ. ನ್ಯಾಯಾಧೀಶ ಕ್ಷಮಾ ಜೋಶಿಯವರ ಪ್ರಕಾರ ಭಾರತೀಯ ಮಹಿಳೆಯರು ವಿಧೇಯರು ಮತ್ತು ದುರ್ಬಲರಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ ಆದರೆ ಅವರು ಅದನ್ನು ಉಲ್ಲಂಘಿಸಿದರೆ ತಮ್ಮನ್ನು ಸಾಮಾಜಿಕವಾಗಿ ಸತ್ತಂತೆಯೇ ಪರಿಗಣಿಸಬೇಕಾಗುತ್ತದೆ.
ಸಾಮೂಹಿಕ ಉಪಪ್ರಜ್ಞೆಯಲ್ಲಿ ಆಳವಾಗಿ ಹೂತುಹೋಗಿರುವ ಶತಮಾನಗಳ ಸಾಮಾಜಿಕ ಸಾಂಸ್ಕೃತಿಕ ದಾಸ್ಯದ ಪರಿಣಾಮವಾಗಿ ಪ್ರಗತಿಪರವಲ್ಲದ ಮತ್ತು ರೂಢೀಗತ ಕಲ್ಪನೆಗಳು ಮಾತ್ರ ಕಾನೂನಿನ ಕಾರ್ಯವಿಧಾನದ ಅಂಶಗಳು ಎಂದು ಕರೆಯಲ್ಪಡುತ್ತವೆ ಎಂಬುವುದನ್ನು ಹೊರತು ಪಡಿಸಿ ಈ ತೀರ್ಪು ಇನ್ನೇನನ್ನೂ ಧ್ವನಿಸುವುದಿಲ್ಲ . ತೀರ್ಪಿನ ನಂತರ ಕೋಟ್ಯಾಂತರ ಭಾರತೀಯ ಮಹಿಳೆಯರು ಏನೆಂದು ಭಾವಿಸಬೇಕು ಎಂದು ವಿವರಿಸುತ್ತಾ, ಪತ್ರಕರ್ತೆ ರೋಹಿಣಿ ಮೋಹನ್ ಅವರು “ನಾನು ಎಂದಾದರೂ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದರೆ ಅದನ್ನು ಎಂದಿಗೂ ವರದಿ ಮಾಡುವುದಿಲ್ಲ (ಪ್ರತಿಯೊಬ್ಬ ಭಾರತೀಯ ಮಹಿಳೆಯೂ ತನ್ನ ಜೀವನದಲ್ಲಿ ಅನುಭವಿಸುವ ಸಾಧ್ಯತೆ ಇದೆ) ಎಂದು ನಾನು ಈಗಾಗಲೇ ನಿರ್ಧರಿಸಿದ್ದೇನೆ ನಾನು” ಎಂದು ಹೇಳುತ್ತಾರೆ.
ತೀರ್ಪಿನಲ್ಲಿ ಖುಲಾಸೆಗೊಳ್ಳಲು ಒಂದು ಪ್ರಮುಖ ಕಾರಣವೆಂದರೆ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರು ತೋರಿಸಬೇಕಾದ ರೀತಿಯ ನಡವಳಿಕೆಯನ್ನು ಸಂತ್ರಸ್ತೆ ಪ್ರದರ್ಶಿಸಲಿಲ್ಲ ಎನ್ನುವುದು. ” ಪ್ರಾಸಿಕ್ಯೂಟ್ರಿಕ್ಸ್ ಮುಂದೆ ತೋರಿಸಲಾದ ಫೋಟೋಗಳಲ್ಲಿ ಹರ್ಷಚಿತ್ತವಿದೆ ಮತ್ತು ಸಂತ್ರಸ್ತೆಯ ಮುಖದ ಮೇಲೆ ಮಂದಹಾಸವಿದೆ, ತೊಂದರೆಗೊಳಗಾದ ಲಕ್ಷಣಗಳಿಲ್ಲ, ಭಯಭೀತರಾಗಿಲ್ಲ ಅಥವಾ ಯಾವುದೇ ರೀತಿಯಲ್ಲಿ ಆಘಾತಕ್ಕೊಳಗಾದ ರೀತಿಯಿಲ್ಲ” ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಬರೆದಿದ್ದಾರೆ.
ಭಾರತದ ವಕೀಲರು ಇಂತಹ ಊಹೆಗಳಲ್ಲಿಮ ನ್ಯೂನತೆಗಳನ್ನು ಪದೇ ಪದೇ ಒತ್ತಿ ಹೇಳಿದ್ದಾರೆ. ಉದಾಹರಣೆಗೆ, ವೃಂದಾ ಗ್ರೋವರ್ “ಅತ್ಯಾಚಾರಕ್ಕೊಳಗಾದವನು ಪ್ರತಿಕ್ರಿಯಿಸಬಹುದಾದ ಒಂದು ನಿರ್ದಿಷ್ಟ ರೀತಿ ಇದೆ ಎಂದು ನಂಬುವುದು ಒಂದು ತಪ್ಪು ಕಲ್ಪನೆ ಮತ್ತು ಸುಳ್ಳಾಗಿದೆ” ಎಂದು ಬರೆಯುತ್ತಾರೆ. ಫ್ಲೇವಿಯಾ ಆಗ್ನೆಸ್ ಕೂಡ ” ಅತ್ಯಾಚಾರಕ್ಕೊಳಗಾದವರು ವರ್ತಿಸಬೇಕಾದ ಒಂದು ನಿರ್ದಿಷ್ಟ ಮಾರ್ಗವಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಭಾವಿಸುತ್ತದೆ” ಎಂದು ವಿಷಾದಿಸುತ್ತಾರೆ.
ಅತ್ಯಾಚಾರದ ನಂತರದ ಸಾಮಾನ್ಯ ನಡವಳಿಕೆಯನ್ನು ಯಾರು ವ್ಯಾಖ್ಯಾನಿಸುತ್ತಾರೆ ಮತ್ತು ಹೇಗೆ? ಈ ನ್ಯಾಯಾಧೀಶರಿಗೆ ನೈತಿಕತೆಯ ಪಾಲಕರಾಗಲು ಮತ್ತು ಅತ್ಯಾಚಾರದ ನಂತರ ಭಾರತೀಯ ಮಹಿಳೆಯರು ವರ್ತಿಸಬೇಕಾದ ನಿರ್ದಿಷ್ಟ ಮಾರ್ಗವಿದೆ ಎಂದು ನಿರ್ಧರಿಸಲು ಯಾರು ಅಧಿಕಾರ ನೀಡಿದ್ದಾರೆ? ಬಹುಶಃ ಅಂತಹ ತೀರ್ಪುಗಳನ್ನು ನೀಡುವ ನ್ಯಾಯಾಧೀಶರು ಆದರ್ಶ ಭಾರತೀಯ ಮಹಿಳೆಯ ಅತ್ಯಾಚಾರದ ನಂತರದ ಆದರ್ಶ ನಡವಳಿಕೆಯ ಕೈಪಿಡಿಯನ್ನು ಪ್ರಕಟಿಸಬೇಕು,ಇದರಿಂದ ‘ಆದರ್ಶ ಭಾರತೀಯ ನಾರಿ’ ಅತ್ಯಾಚಾರದ ನಂತರ ಆ ಪುಸ್ತಕವನ್ನು ಅನುಸರಿಸಬಹುದು. ಸಂತ್ರಸ್ತೆ ಆ ಕಾಲ್ಪನಿಕ ನಡಾವಳಿಯನ್ನು ಅನುಸರಿಸದಿದ್ದರೆ ಮತ್ತು ಅವಳ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳುವಷ್ಟು ಬಲವಾದ ಇಚ್ಛಾಶಕ್ತಿಯಿದ್ದರೆನ್ಯಾಯಾಧೀಶರ ತರ್ಕದಂತೆ ಅವಳ ದೂರು ಸುಳ್ಳಾಗಿರಬೇಕು.
ಸಾಮಾಜಿಕ ರೂಢಿಗತಗಳನ್ನು ಬಳಸಿಕೊಂಡು ಸಾಮಾನ್ಯವಲ್ಲದ್ದನ್ನು ವ್ಯಾಖ್ಯಾನಿಸುವಲ್ಲಿನ ಮೂಲಭೂತ ಸಮಸ್ಯೆ ಎಂದರೆ ಸಾಮಾಜಿಕ ಮಾನದಂಡಗಳ ಬಗ್ಗೆ ಸಾರ್ವತ್ರಿಕ ಒಪ್ಪಿಗೆ ಇಲ್ಲ ಎಂದು ಸಾಲ್ ಮೆಕ್ಲಿಯೋಡ್ ಹೇಳುತ್ತಾರೆ. ಹಾಗೆಯೇ ಮನುಷ್ಯರಲ್ಲಿ ‘ಸಾಮಾನ್ಯ’ ನಡವಳಿಕೆ ಅನ್ನುವುದು ಇಲ್ಲವೇ ಇಲ್ಲ.
ಹೆಚ್ಚಿನ ಜನಸಾಮಾನ್ಯರಿಗೆ ಅತ್ಯಾಚಾರದ ಕಲ್ಪನೆಗಳು ಮತ್ತು ಸಂತ್ರಸ್ತೆಯ ಅತ್ಯಾಚಾರದ ನಂತರದ ನಡವಳಿಕೆಯ ಬಗೆಗಿನ ಊಹೆಗಳು ಎಲ್ಲಿಯೋ ಕೇಳುವುದರ ಮೂಲಕ, ಬೆಳೆದು ಬಂದ ಪರಿಸರ, ಕೌಟುಂಬಿಕ ಮೌಲ್ಯಗಳು ಅಥವಾ ಭಾರತೀಯ ಚಲನಚಿತ್ರಗಳಲ್ಲಿ ಅವರು. ನೋಡುವ ಸಾಮಾಜಿಕ-ಸಾಂಸ್ಕೃತಿಕ ವಾತಾವರಣದ ಮೂಲಕ ರೂಪುಗೊಳ್ಳುತ್ತದೆ. ಭಾರತೀಯ ಚಿತ್ರಗಳಲ್ಲಿ ಅತ್ಯಾಚಾರಕ್ಕೊಳಗಾಗುವವರು ಸಾಮಾನ್ಯವಾಗಿ ನಾಯಕನ ಸಹೋದರಿ. ಕಥೆಗೆ ಅವಳ ಏಕೈಕ ಕೊಡುಗೆ ಎಂದರೆ ಅತ್ಯಾಚಾರದ ನಂತರ ನಾಚಿಕೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತು ಹೀರೋಗೆ ಪ್ರತೀಕಾರ ತೀರಿಸಿಕೊಳ್ಳುವ ಕಾರಣವನ್ನು ಒದಗಿಸುವುದು. ಚಲನಚಿತ್ರಗಳ ದೃಶ್ಯ ಚಿತ್ರಣದ ಸಿದ್ಧ ಸೂತ್ರವು ಸಾಮೂಹಿಕ ಉಪಪ್ರಜ್ಞೆಯ ಮೇಲೆ ಬೀರುವ ಅಪಾರ ಪ್ರಭಾವವನ್ನು ಗಮನಿಸಿದರೆ , ನ್ಯಾಯಾಲಯದ ತೀರ್ಪುಗಳೂ ಸಹ ಇವೇ ಚಿತ್ರಣದ ಮೇಲೆ ರೂಪುಗೊಂಡಿವೆ ಎಂದು ದುಃಖದಿಂದಲೇ ಹೇಳಬೇಕಾಗುತ್ತದೆ.
2004ರ ಪಪ್ಪು ಮತ್ತು ಯೂನಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂತ್ರಸ್ತೆಯ ಹಿಂದಿನ ಜೀವನವು ಕೋರ್ಟ್ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ . “ಒಂದು ನಿರ್ದಿಷ್ಟ ಪ್ರಕರಣದಲ್ಲಿ ಸಂತ್ರಸ್ತೆಯು ಅಸಾಮಾನ್ಯ ಲೈಂಗಿಕ ನಡವಳಿಕೆಯನ್ನು ಹೊಂದಿದ್ದರೂ ಸಹ ಅವಳು ನಿರಾಕರಿಸುವ ಹಕ್ಕನ್ನು ಹೊಂದಿದ್ದಾಳೆ ಮತ್ತು ಎಲ್ಲರಿಗೂ ಲೈಂಗಿಕ ಸಂಪರ್ಕಕ್ಕೆ ತನ್ನನ್ನು ಒಪ್ಪಿಸಿಕೊಳ್ಳದೇ ಇರುವ ಹಕ್ಕನ್ನು ಹೊಂದಿದ್ದಾಳೆ. ಏಕೆಂದರೆ ಅವಳು ಯಾರೊಬ್ಬರಿಂದಲೂ ಅಥವಾ ಪ್ರತಿಯೊಬ್ಬರಿಂದಲೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ವಸ್ತು ಅಥವಾ ಬೇಟೆಯಲ್ಲ” ಎಂದು ಹೇಳಿದೆ.
ತೇಜ್ಪಾಲ್ ಪ್ರಕರಣದಲ್ಲಿ, ನ್ಯಾಯಾಧೀಶರು ಅಂತಹ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿ, ಅವರು ಸಂತ್ರಸ್ತೆಯ ಹಿಂದಿನ ಲೈಂಗಿಕ ನಡವಳಿಕೆಯನ್ನು ಅವಲಂಬಿಸಿಲ್ಲ ಎಂದು ಹೇಳಿದ್ದಾರೆ. ಆದರೆ ತೀರ್ಪು ಅದರ ಸತ್ಯಾಸತ್ಯತೆಯ ಮೇಲೆ ಅನುಮಾನವನ್ನು ಉಂಟುಮಾಡುತ್ತದೆ. ಯಾಕೆಂದರೆ ತೀರ್ಪಿನ ನಂತರದ ಪುಟಗಳಲ್ಲಿ ಸಂತ್ರಸ್ತೆಯು ‘ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಚೆಲ್ಲಾಟವಾಡುವ ಮತ್ತು ಲೈಂಗಿಕ ಸಂಭಾಷಣೆ’ ನಡೆಸಿದ್ದಾರೆ ಎಂದು ಆಪಾದನೆ ಹೊರಿಸಲಾಗಿದೆ. ಆದರೆ ತೇಜ್ಪಾಲ್ ಅವರ ಭೂತದ ಬಗ್ಗೆ ಯಾವುದೇ ರೀತಿಯ ವಿಚಾರಣೆ ನಡೆದಿರುವುದು ಕಂಡುಬಂದಿಲ್ಲ.
ಸಂತ್ರಸ್ತೆ ತಾನಿರುವ ಲೋಕೇಶನ್ನ್ನು ಆರೋಪಿಗೆ ಕಳುಹಿಸಿದ್ದಾರೆ ಮತ್ತು ಘಟನೆ ನಡೆದ ನಂತರ ಗೋವಾದಲ್ಲೇ ಉಳಿದುಕೊಂಡಿದ್ದಾರೆ ಎಂಬ ಅಂಶವೂ ಸಹ ಆಕೆಯ ವಿರುದ್ಧದ ತೀರ್ಪು ನೀಡಲು ಬಳಕೆಯಾಗಿದೆ. ಇದು ಸಂತ್ರಸ್ತೆ ತಕ್ಷಣ ಸ್ಥಳವನ್ನು ಬಿಟ್ಟು, ಎಲ್ಲವನ್ನೂ ತ್ಯಜಿಸಿ ಅಪರಾಧದ ನಂತರ ತಲೆಮರೆಸಿಕೊಳ್ಳಬೇಕು ನಿರೀಕ್ಷಿಸುವಂತಿದೆ.
ಪ್ರಸ್ತುತ ಸಂದರ್ಭದಲ್ಲಿ, ಅಪರಾಧವು ಅವಳ ಸ್ವಂತ ಊರಿನಲ್ಲಿ ನಡೆಯದೆ ಬೇರೆ ಊರಿನಲ್ಲಿ ನಡೆದಿದೆ ಮತ್ತು ‘ಪ್ರಮಾಣಿತ ನಡವಳಿಕೆ’ಯಂತೆ ಆಕೆ ಅದೇ ಊರಿನಲ್ಲಿ ಇರಲು ಇಚ್ಛಿಸಿದರೂ ಅಲ್ಲಿ ಉಳಿಯುವಂತಿಲ್ಲ. ಈ ಥಿಯರಿಯ ಪ್ರಕಾರ ಯೋಚಿಸುವುದಾದರೆ ತನ್ನ ಸ್ವಂತ ಮನೆಯಲ್ಲಿ ಅತ್ಯಾಚಾರಕ್ಕೊಳಗಾದ ‘ಆದರ್ಶ ಭಾರತೀಯ ನಾರಿ’ (ಬಹುಪಾಲು ಜನರು ತಿಳಿದಿರುವಂತೆ) ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಹತ್ತಿರದ ನದಿಗೆ ಅಥವಾ ಬಾವಿಗೆ ಜಿಗಿಯಬೇಕು
ದುರದೃಷ್ಟವಶಾತ್, ಅತ್ಯಾಚಾರ ಸಂತ್ರಸ್ತೆಗೆ ‘ಸಾಮಾನ್ಯ’ ನಡವಳಿಕೆಯನ್ನು ರೂಪಿಸಿರುವುದು ನ್ಯಾಯಾಧೀಶೆ ಜೋಶಿ ಒಬ್ಬರೇ ಅಲ್ಲ. 2016ರ ರಾಜಾ ಮತ್ತು ಇತರರ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಸಂತ್ರಸ್ತೆಯ ಸಾಕ್ಷ್ಯವನ್ನು ಅನುಮಾನಿಸಿತ್ತು ಏಕೆಂದರೆ ಪರೀಕ್ಷೆಯ ಸಮಯದಲ್ಲಿ ಮತ್ತು ಅಪರಾಧದ ನಂತರ ಅವಳ ನಡವಳಿಕೆ “ಸಾಮಾನ್ಯ ಮಾನವ ನಡವಳಿಕೆಗೆ ಹೊಂದಿಕೆಯಾಗುವುದಿಲ್ಲ” ಎಂದು ತೀರ್ಪು ನೀಡಿತ್ತು. 2017ರ ಮಹಮೂದ್ ಫಾರೂಕಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತೀರ್ಪಿನಲ್ಲೂ ಮತ್ತೊಂದು ಉದಾಹರಣೆ ಕಂಡುಬರುತ್ತದೆ.
2020ರ ರಾಕೇಶ್ ಬಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನ ತೀರ್ಪಿನಲ್ಲೂ ಇದೇ ರೀತಿಯ ಪೂರ್ವಾಗ್ರಹವಿತ್ತು. ಇದರಲ್ಲಿ ‘ಭಾರತೀಯ ಮಹಿಳೆಯರು ಅತ್ಯಾಚಾರಕ್ಕೊಳಗಾದ ನಂತರ ನಿದ್ರಿಸುವುದು ಸಾಮಾನ್ಯವಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದರು. ಈ ತೀರ್ಪನ್ನು ವಿರೋಧಿಸಿ ನ್ಯಾಯಮೂರ್ತಿ ದೀಕ್ಷಿತ್ಗೆ ಹದಿನೇಳು ಸಂಸ್ಥೆಗಳು ಮತ್ತು ಹಲವಾರು ವ್ಯಕ್ತಿಗಳು ಬಹಿರಂಗ ಪತ್ರವೊಂದನ್ನು ಬರೆದಿದ್ದರು. “ಪಿತೃಪ್ರಧಾನ ವ್ಯವಸ್ಥೆಯ ತಾರತಮ್ಯದ ರಚನೆಗಳನ್ನು ಬೇರುಸಹಿತ ಕಿತ್ತುಹಾಕಲು ಕಳೆದ ದಶಕಗಳಿಂದ ಶ್ರಮಿಸುತ್ತಿರುವ ನಮ್ಮನ್ನು ನ್ಯಾಯಾಂಗದ ತೀರ್ಪು ತೀವ್ರವಾಗಿ ನಿರಾಶೆಗೊಳಪಡಿಸಿದೆ ” ಎಂದು ಆ ಪತ್ರಗಳಲ್ಲಿ ಹೇಳಲಾಗಿತ್ತು.
ಸಿಜೆಐಗೆ ಬರೆದ ಬಹಿರಂಗ ಪತ್ರವೊಂದರಲ್ಲಿ ವಕೀಲೆ ಅಪರ್ಣಾ ಭಟ್, “ಅತ್ಯಾಚಾರ ಘಟನೆಯ ನಂತರ ಸಂತ್ರಸ್ತರು ಅನುಸರಿಸಬೇಕಾದ ಪ್ರೋಟೋಕಾಲ್ ಕಾನೂನಿನಲ್ಲಿ ಬರೆಯಲ್ಪಟ್ಟಿದೆಯೇ ಮತ್ತದನ್ನು ನಾನು ತಿಳಿದಿಲ್ಲವೇ?” ಎಂದು ಪ್ರಶ್ನಿಸಿದ್ದರು ವಿವಾದಾತ್ಮಕ ಪ್ಯಾರಾಗ್ರಾಫ್ನ ಉತ್ತರಾರ್ಧವನ್ನು ನಂತರ ತೆಗೆದುಹಾಕಲಾಯಿತು.
ಸುಪ್ರೀಂ ಕೋರ್ಟ್ ಸಾಕಷ್ಟು ಪ್ರಗತಿಪರ ತೀರ್ಪುಗಳನ್ನು ನೀಡಿದ್ದು ಇಚ್ಛಾಶಕ್ತಿ ಇದ್ದರೆ ಅವನ್ನು ಅನುಸರಿಸುವ ವಿಫುಲ ಅವಕಾಶಗಳು ಕೆಳ ನ್ಯಾಯಾಲಯಕ್ಕೆ ಇವೆ. ನಿಪುನ್ ಸಕ್ಸೇನಾ (2018) ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ “ಸಂತ್ರಸ್ತೆ ತನ್ನ ವಿರುದ್ಧ ನಡೆದ ಅಪರಾಧವನ್ನು ಪೊಲೀಸರ ಬಳಿ ವಿವವರವಾಗಿ ಹೇಳುವಷ್ಟು ಬಲಶಾಲಿಯಾಗಿದ್ದರೆ ಅವಳು ಸಾಮಾನ್ಯವಾಗಿ ನ್ಯಾಯಾಲಯದಲ್ಲೂ ಸಹ ಹೆಚ್ಚಿನ ಸಹಾಯವನ್ನು ಪಡೆಯುವುದಿಲ್ಲ” ಎಂದಿದೆ.
ಚಂದ್ರಪ್ರಕಾಶ್ ಕೆವಾಲ್ ಚಂದ್ ಜೈನ್ (1990) ಪ್ರಕರಣದಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಯ ಸ್ಥಾನವು ಸಂತ್ರಸ್ತೆಯ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಧಿಕಾರದಲ್ಲಿರುವ ವ್ಯಕ್ತಿಯು ಯಾವಾಗಲೂ ಸರ್ಕಾರಿ ಅಧಿಕಾರಿಯಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಖಾಸಗಿ ಉದ್ಯೋಗದಾತನು ಸಹ ಬಲಿಪಶುವನ್ನು ಇಚ್ಛೆಯಂತೆ ನೇಮಿಸಿಕೊಳ್ಳುವ ಅಥವಾ ವಜಾ ಮಾಡುವ ಅಧಿಕಾರವನ್ನು ಹೊಂದಿರುತ್ತಾನೆ, ಅವರನ್ನು ಅಧಿಕಾರದಲ್ಲಿರುವ ವ್ಯಕ್ತಿ ಎಂದು ಪರಿಗಣಿಸಬೇಕು ಎಂದಿತ್ತು. ಅದೇ ಪ್ರಕರಣದಲ್ಲಿ, ನ್ಯಾಯಾಲಯವು “ಅಪರಾಧವನ್ನು ವಸ್ತು ವಿವರಗಳಲ್ಲಿ ದೃಢೀರಿಸದ ಹೊರತು ತನ್ನ ಸಂಕಟದ ಕಥೆಯನ್ನು ನಂಬಲಾಗುವುದಿಲ್ಲ ಎಂದು ಮಹಿಳೆಗೆ ಹೇಳುವುದು ಗಾಯಕ್ಕೆ ಅವಮಾನವನ್ನು ಸವರಿದಂತೆ” ಎಂದು ಹೇಳಿದೆ. ಆದರೆ ದುರದೃಷ್ಟವಶಾತ್ ತೇಜ್ಪಾಲ್ ಪ್ರಕರಣದಲ್ಲಿ ನ್ಯಾಯಾಧೀಶೆ ಜೋಶಿ ಈ ರೀತಿಯ ಗಾಯಕ್ಕೆ ಅವಮಾನವನ್ನು ಸವರಿದ್ದಾರೆ.
ಭಾರ್ವಾಡಾ ಭೋಗಿನ್ಭಾಯ್ ಹಿರ್ಜಿಭಾಯ್ (1983) ನಲ್ಲಿ, “ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡುವ ಹುಡುಗಿ ಅಥವಾ ಮಹಿಳೆಯ ಸಾಕ್ಷ್ಯವನ್ನು ಅನುಮಾನ, ಅಪನಂಬಿಕೆ ಅಥವಾ ಅನುಮಾನದಿಂದ ಕೂಡಿದ ಮಸೂರಗಳಿಂದ ಅಳವಡಿಸಲಾಗಿರುವ ಕನ್ನಡಕಗಳ ಸಹಾಯದಿಂದ ಏಕೆ ನೋಡಬೇಕು? ಹಾಗೆ ಮಾಡುವುದು ಪುರುಷ ಪ್ರಾಬಲ್ಯದ ಸಮಾಜದಲ್ಲಿ ಪುರುಷ ಪಕ್ಷಪಾತದ ಆರೋಪವನ್ನು ಸಮರ್ಥಿಸುತ್ತದೆ. ಭಾರತದಲ್ಲಿ ಹೆಣ್ಣು ಅಥವಾ ಮಹಿಳೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂಬುವುದು ತೀರಾ ವಿರಳ. ಈ ಹೇಳಿಕೆಯು ಸಾಮಾನ್ಯವಾಗಿ ನಗರ ಮತ್ತು ಗ್ರಾಮೀಣ ಸಮಾಜ ಎರಡೂ ಸಂದರ್ಭದಲ್ಲಿ ನಿಜ. ಅತ್ಯಾಧುನಿಕ, ಅಷ್ಟೊಂದು ಅತ್ಯಾಧುನಿಕವಲ್ಲದ ಮತ್ತು ಆಧುನಿಕವಲ್ಲಷ ಸಮಾಜದ ಸನ್ನಿವೇಶದಲ್ಲಿಯೂ ಇದು ದೊಡ್ಡ ಸತ್ಯವಾಗಿದೆ ” ಎಂದು ಹೇಳಿದೆ.
ಅಪರ್ಣಾ ಭಟ್ (2021) ರಲ್ಲಿ ಲೈಂಗಿಕ ಅಪರಾಧದ ಪ್ರಕರಣಗಳ ವಿಚಾರಣೆ ನಡೆಸುವಾಗ ‘ಒಳ್ಳೆಯ ಮಹಿಳೆಯರು ಲೈಂಗಿಕವಾಗಿ ಪರಿಶುದ್ಧರು’, ‘ಕುಡಿಯುವ ಮತ್ತು ಧೂಮಪಾನ ಮಾಡುವ ಮಹಿಳೆಯರು ಅಡ್ವಾನ್ಸ್ಡ್ ಲೈಂಗಿಕತೆ’ಯನ್ನು ಬಯಸುತ್ತಾರೆ ಅಥವಾ ‘ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆ ಅತ್ಯಾಚಾರಕ್ಕೆ ಒಪ್ಪಿಗೆ ನೀಡುತ್ತಾರೆ’ ಎಂದು ಭಾವಿಸುವಂತಹ ಕಾಮೆಂಟ್ಗಳನ್ನು ಮಾಡುವುದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಿಷೇಧಿಸಿದ್ದಾರೆ. ಮಧ್ಯಪ್ರದೇಶದ ಹೈಕೋರ್ಟ್ನ ‘ರಾಖಿ’ ಆದೇಶವನ್ನು ಬದಿಗಿಟ್ಟು ಈ ಆದೇಶ ನೀಡಲಾಗಿದೆ.
ನ್ಯಾಯಾಂಗ ಆದೇಶಗಳು ಮತ್ತು ತೀರ್ಪುಗಳಲ್ಲಿ ವಿಷಾದನೀಯವಾಗಿ ಪ್ರತಿಫಲಿಸುವ ಪಿತೃ ಪ್ರಧಾನ ಮತ್ತು ದ್ವೇಷಪೂರಿತ ವರ್ತನೆಗಳ ವ್ಯಾಪಕವಾದ ಕ್ಯಾನ್ವಾಸ್ ಅನ್ನು ಉದ್ದೇಶಿಸಿ, ಸುಪ್ರೀಂ ಕೋರ್ಟ್ ನಾರ್ವೇಯನ್ ನಾಟಕಕಾರ ಮತ್ತು ನಾಟಕ ನಿರ್ದೇಶಕ ಹೆನ್ರಿಕ್ ಇಬ್ಸೆನ್ ಅವರನ್ನು ಉಲ್ಲೇಖಿಸಿ, “ಒಬ್ಬ ಮಹಿಳೆ ಇಂದಿನ ಸಮಾಜದಲ್ಲಿ ತಾನಾಗಿಯೇ ಬದುಕಲು ಸಾಧ್ಯವಿಲ್ಲ ಇದು ಪ್ರತ್ಯೇಕವಾಗಿ ಪುರುಷ ಪ್ರಧಾನ ಸಮಾಜವಾಗಿದ್ದು, ಪುರುಷರಿಂದ ರೂಪಿಸಲ್ಪಟ್ಟ ಕಾನೂನುಗಳು ಮತ್ತು ಸ್ತ್ರೀಯರ ನಡವಳಿಕೆಯನ್ನು ಪುರುಷರ ದೃಷ್ಟಿಕೋನದಿಂದ ನಿರ್ಣಯಿಸುವ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ” ಎಂದು ಹೇಳಿತ್ತು.
ವಾಸ್ತವವಾಗಿ, ಅಪರ್ಣಾ ಭಟ್ (2021)ರಲ್ಲಿ, ಆದರ್ಶ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಪೂರ್ವಗ್ರಹವು ಲೈಂಗಿಕ ದೌರ್ಜನ್ಯದ ಜೀವಂತ ಅನುಭವಗಳನ್ನೇ ಅನರ್ಹಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಿದೆ. ಅತ್ಯಾಚಾರಕ್ಕೆ ಪ್ರತಿರೋಧ, ಗೋಚರ ದೈಹಿಕ ಗಾಯಗಳನ್ನು ಹೊಂದಿರುವುದು, ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವುದು, ಅಪರಾಧವನ್ನು ತಕ್ಷಣ ವರದಿ ಮಾಡುವುದು ಇತ್ಯಾದಿಗಳ ರೂಢಿಗತ ಕಲ್ಪನೆಗಳಿಂದ ದೂರವಿರುವುದು ಕಂಡುಬರುವ ಮಹಿಳೆಯರ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತದೆ. ಆದರೂ ಈ ತೀರ್ಪು ಪ್ರಕಟವಾದ ಕೇವಲ ಎರಡು ತಿಂಗಳ ನಂತರ ತೇಜ್ಪಾಲ್ ಪ್ರಕರಣದಲ್ಲಿ ನಮಗೆ ಮತ್ತೆ ಪೂರ್ವಗ್ರಹಪೀಡಿತ ತೀರ್ಪು ಬಂದಿರುವುದು ದುರದೃಷ್ಟಕರ.
ಮೂಲ- ದಿ ವೈರ್