ಕೋವಿಡ್ 19 – ಲಸಿಕೆಯೇ ಅಂತಿಮ ಅಸ್ತ್ರ

ಭಾರತದಲ್ಲಿ SARS-Cov-2 (ಕೋವಿಡ್ 2 ) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ   ಈ ವರ್ಷ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 200 ಕೋಟಿ ಡೋಸಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮೇ 14 ರಂದು ಅಧಿಕೃತವಾಗಿ ಘೋಷಿಸಿದೆ. ಸರ್ಕಾರದ ಈ ಧ್ಯೇಯ ಮತ್ತು ಗುರಿ ಶ್ಲಾಘನೀಯ.  ಭಾರತ  ನೂರು ಕೋಟಿ ಜನರಿಗೆ ತಲಾ ಎರಡು ಡೋಸ್ ಲಸಿಕೆ ನೀಡುವುದರ ಮೂಲಕ ಭಾರತ ಸಮರ್ಪಕವಾಗಿ ಹಿಂಡು ಪ್ರತಿರಕ್ಷಾ (Herd immunity) ಸಾಮರ್ಥ್ಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಈ 200 ಕೋಟಿ ಲಸಿಕೆಗಳ ಉತ್ಪಾದನೆಯ ಗುರಿ ಆಕರ್ಷಣೀಯವಾಗಿ ಕಾಣುತ್ತದೆ. ಆದರೆ ಸಮಸ್ಯೆ ಇರುವುದು ಲಸಿಕೆ ನೀಡುವುದರಲ್ಲಿ ಮಾತ್ರವೇ ಅಲ್ಲ. ಲಸಿಕೆಗಳು ಜೀವ ರಕ್ಷಕವೇನೋ ಹೌದು, ಆದರೆ ಶೀಘ್ರಗತಿಯಲ್ಲಿ, ಸಾಮೂಹಿಕವಾಗಿ ಲಸಿಕೆಯನ್ನು ಮತ್ತೆ ಮತ್ತೆ ನೀಡುವುದರ ಮೂಲಕ ಮಾತ್ರವೇ ಜನರ ಜೀವ ರಕ್ಷಣೆ ಸಾಧ್ಯ.

2019ರ ಲೋಕಸಭಾ ಚುನಾವಣೆಗಳಲ್ಲಿ, ಕೇವಲ ಐದು ವಾರಗಳ ಅವಧಿಯಲ್ಲಿ ಭಾರತದ 60 ಕೋಟಿ ಜನರು 10 ಲಕ್ಷ ಮತಗಟ್ಟೆಗಳ ಮೂಲಕ ಮತ ಚಲಾವಣೆ ಮಾಡಿದ್ದರು. ಇದರ ಮೇಲ್ವಿಚಾರಣೆಗೆ ಒಂದು ಕೋಟಿ ಚುನಾವಣಾ ಅಧಿಕಾರಿಗಳು ನಿಯೋಜಿಸಲ್ಪಟ್ಟಿದ್ದರು. ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಈ ರೀತಿಯ ಕ್ರೋಢೀಕರಣವನ್ನು ಒಂದು ದೇಶದಲ್ಲಿ ಮಾಡಲು ಸಾಧ್ಯ ಎನ್ನುವುದಾದರೆ, ಐದು ವಾರಗಳ ಅವಧಿಯಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡುವುದು ಕಷ್ಟವಾಗಲಿಕ್ಕಿಲ್ಲ.  ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಭಾರತ ಐದು ವಾರಗಳ ಅವಧಿಯಲ್ಲಿ , ನೆನಪಿಡಿ ಐದು ತಿಂಗಳಲ್ಲಿ ಅಲ್ಲ, ಶೇ 75ರಷ್ಟು ಜನಸಂಖ್ಯೆಗೆ ಲಸಿಕೆಯನ್ನು ನೀಡಲು ಸಿದ್ಧವಾಗಬೇಕಿದೆ.

ಮೇ 23ರವರೆಗೆ ಭಾರತದಲ್ಲಿ ಶೇ 10.9ರಷ್ಟು ಜನರಿಗೆ ಮೊದಲನೆ ಡೋಸ್ ಲಸಿಕೆ ನೀಡಲಾಗಿದ್ದು, ಶೇ 4ರಷ್ಟು ಜನಕ್ಕೆ 2ನೆಯ ಡೋಸ್ ನೀಡಲಾಗಿದೆ.  2021ರ ಜನವರಿ 15ರಂದು ಕೇಂದ್ರ ಸರ್ಕಾರ ಲಸಿಕೋತ್ಸವವನ್ನು ಆರಂಭಿಸಿದ ನಂತರ ದಿನಂಪ್ರತಿ ಸರಾಸರಿ 15 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ.  ಈ ವರ್ಷದ ಆಗಸ್ಟ್ ಮತ್ತು ಡಿಸೆಂಬರ್ ನಡುವಿನ 5 ತಿಂಗಳಲ್ಲಿ ಒಂದು ವೇಳೆ ಭಾರತದಲ್ಲಿ  210 ಕೋಟಿ ಲಸಿಕೆಯನ್ನು ಉತ್ಪಾದಿಸಿದರೂ, ಈ ಬೃಹತ್ ಉತ್ಪಾದನೆಯ ಜೊತೆಗೆ ದೇಶದಲ್ಲಿ ಪ್ರತಿದಿನ 14.4 ದಶಲಕ್ಸ (1 ಕೋಟಿ 44 ಲಕ್ಷ) ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಆದರೆ ಭಾರತದ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಈಗಿರುವ ಮೂಲ ಸೌಕರ್ಯಗಳ ಹತ್ತುಪಟ್ಟು ಹೆಚ್ಚಿನ ಸೌಕರ್ಯಗಳು ಬೇಕಾಗುತ್ತದೆ. ಈ ಮಟ್ಟಿಗೆ ಮೂಲ ಸೌಕರ್ಯಗಳು ಇಲ್ಲ ಎನ್ನುವುದು ಸಷ್ಟ.  ಈ ಕಾರ್ಯಾಚರಣೆಯಲ್ಲಿ ಸಶಸ್ತ್ರ ಸೇನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಹೋದರೆ ಭಾರತ ತನ್ನ ಕಾರ್ಯಾಚರಣೆಯಲ್ಲಿ ಸೋಲುತ್ತದೆ.  ಆಸ್ಪತ್ರೆಯಿಂದ ಹೊರಗೂ ದುಡಿಯುತ್ತಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತ, ಪ್ರತಿಯೊಬ್ಬ ವೈದ್ಯ, ಪ್ರತಿಯೊಬ್ಬ ವೈದ್ಯಕೀಯ ಸಹಾಯಕರು, ಮತ್ತು ಸಮಸ್ತ ಶುಷ್ರೂಷಕ ಸಿಬ್ಬಂದಿಯನ್ನು ಲಸಿಕಾ ಕಾರ್ಯಾಚರಣೆಯಲ್ಲಿ ತೊಡಗಿಸಬೇಕಾಗುತ್ತದೆ. ಲಸಿಕೆಯ ಮೂಲಕ ಅಥವಾ ಹಿಂಡು ಪ್ರತಿರಕ್ಷೆಯನ್ನು ಸಾಧಿಸುವ ಮೂಲಕ ಮಾತ್ರವೇ ಭಾರತವನ್ನು ಕೋವಿದ್ 19ನಿಂದ ರಕ್ಷಿಸಲು ಸಾಧ್ಯ.

ಹರಡುತ್ತಿರುವ ವೈರಣು ರೂಪಾಂತರ ಹೊಂದುತ್ತಲೇ ಹೋಗುತ್ತದೆ. ಹಾಗಾಗಿ ಸೋಂಕು ತಗುಲುವವರಲ್ಲಿ ಪ್ರತಿರಕ್ಷೆಯನ್ನು ಸೃಷ್ಟಿಸುವ ಮೂಲಕ ಮಾತ್ರವೇ ಈ ರೂಪಾಂತರ ಪ್ರಕ್ರಿಯೆಯನ್ನು ಮತ್ತು ಪುನರಾವರ್ತನೆಯನ್ನು ತಡೆಗಟ್ಟಲು ಸಾಧ್ಯ. ಈ ಪ್ರತಿರಕ್ಷೆಯನ್ನು ಸಾಧಿಸಲು ಸೋಂಕು ತಗುಲುವುದು ಒಂದು ವಿಧಾನವಾದರೆ ಮತ್ತೊಂದು ವಿಧಾನ ಲಸಿಕೆಯ ಮೂಲಕ ನಿರ್ಬಂಧಿಸುವುದು. ಪ್ರಸ್ತುತ ಲಸಿಕೋತ್ಸವದ ಸಮಸ್ಯೆ ಎಂದರೆ ಅತಿ ಹೆಚ್ಚು ಬೃಹತ್ ಜನಸಂಖ್ಯೆಯ ನಡುವೆ ಲಸಿಕೆ ಕಾರ್ಯಾಚರಣೆ ಚಾಲನೆಯೇ ಆಗಿಲ್ಲ. ಅಥವಾ ಲಸಿಕೆಯ ಪ್ರಮಾಣ ಸಮರ್ಪಕವಾಗಿಲ್ಲ. ಇಂತಹ ಬೃಹತ್ ಜನಸಂಖ್ಯೆಯ ನಡುವೆ ವೈರಾಣು ಶೀಘ್ರವಾಗಿ ಹರಡುತ್ತದೆ, ರೂಪಾಂತರಗೊಳ್ಳುತ್ತದೆ ಮತ್ತು ಪುನರಾವರ್ತನೆಯಾಗುತ್ತದೆ. ಹಾಗಾಗಿ ಕ್ಷಿಪ್ರಗತಿಯಲ್ಲಿ ಲಸಿಕೆಯನ್ನು ಎಲ್ಲರಿಗೂ ನೀಡುವ ಕಾರ್ಯಾಚರಣೆಯನ್ನು ಕೈಗೊಳ್ಳದಿದ್ದರೆ, ಭಾರತದಲ್ಲಿ ಹೊಸ ರೂಪಾಂತರಿ ಸೋಂಕು ಹರಡುತ್ತಲೇ ಹೋಗುತ್ತದೆ. ಸೋಂಕಿತರ ಸಂಖ್ಯೆಯಲ್ಲಿನ ಏರಿಳಿತವೂ ನಿರಂತರವಾಗಿಬಿಡುತ್ತದೆ.  ಇದು ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯ ಎರಡಕ್ಕೂ ಸಂಚಕಾರ ತರುವಂತಹ ವಿದ್ಯಮಾನಗಳು.

ಇನ್‍ಫ್ಲೂಯೆಂಜಾ ರೀತಿಯೇ SARS-Cov-2 (ಕೋವಿದ್2)  ಸಹ ನಮ್ಮ ನಡುವೆ ಶಾಶ್ವತವಾಗಿ ಉಳಿಯುತ್ತದೆ. ಇದಲ್ಲದಿದ್ದರೆ ಮತ್ತೊಂದು ಸ್ವರೂಪದಿಂದ ಜನರು ಸೋಂಕು ಅನುಭವಿಸಬೇಕಾಗುತ್ತದೆ. ಇನ್ನೂ ಹೆಚ್ಚು ಜನರು ಸೋಂಕಿತರಾಗುತ್ತಾರೆ. ಈ ಸಂದರ್ಭದಲ್ಲಿ ಕ್ಷಿಪ್ರ ಗತಿಯಲ್ಲಿ ಲಸಿಕೆ ನೀಡುವುದರ ಮೂಲಕ, ಹೆಚ್ಚಿನ ಜನತೆಗೆ ಸತತವಾಗಿ ಲಸಿಕೆಯನ್ನು ನೀಡುವ ಮೂಲಕ ಈ ಸಾಂಕ್ರಾಮಿಕದ ಸೋಂಕನ್ನು ತಡೆಗಟ್ಟಲು ಸಾಧ್ಯ . ಕಾಲೋಚಿತವಾಗಿ ಕಾಣಿಸಿಕೊಳ್ಳುವ  ಈ ಸೋಂಕನ್ನು ಸಮರ್ಥವಾಗಿ ಎದುರಿಸಲು, ಸೋಂಕಿತರ ಸಂಖ್ಯೆ ಕಡಿಮೆ ಇದ್ದಾಗಲೇ ಕ್ರಮ ಕೈಗೊಂಡರೆ ಸಾವಿನ ಪ್ರಮಾಣವನ್ನು ತಪ್ಪಿಸಬಹುದು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೋಂಕು ತಗುಲುವುದನ್ನು ತಪ್ಪಿಸಲು ಸಾಧ್ಯ. ಈ ರೀತಿಯ ಒಂದು ವ್ಯವಸ್ಥಿತ ಕಾರ್ಯಾಚರಣೆಯ ಮೂಲಕ ಮಾತ್ರವೇ ನಮ್ಮ ಅರ್ಥವ್ಯವಸ್ಥೆಯನ್ನೂ ಸುಸ್ಥಿರವಾಗಿರಿಸಲು ಸಾಧ.

ದೇಶದ ಸಮಸ್ತ ಜನತೆಗೆ ಲಸಿಕೆ ನೀಡುವುದು ಕೇವಲ ಒಂದೇ ಬಾರಿಗೆ ಪೂರ್ಣಗೊಳ್ಳುವ ಕ್ರಿಯೆ ಅಲ್ಲ ಎನ್ನುವುದನ್ನು ನಮ್ಮ ಸರ್ಕಾರಗಳು ಅರ್ಥಮಾಡಿಕೊಳ್ಳದಿರುವುದು ದುರಂತ. ಲಸಿಕೋತ್ಸವ ನಿರಂತರವಾಗಿ ನಡೆಯುತ್ತಲ ಇರಬೇಕಾಗುತ್ತದೆ. ಬದಲಾಗುತ್ತಿರುವ ಪ್ರತಿಯೊಂದು ಋತುಮಾನದಲ್ಲೂ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ವೈರಾಣುಗಳು ಮತ್ತು ಸೋಂಕಿನ ಪ್ರಮಾಣವನ್ನು ಎದುರಿಸಲು ಹೊಸ ರೋಗ ನಿರ್ಬಂಧಕ ಲಸಿಕೆಗಳನ್ನು ತಯಾರಿಸುತ್ತಲೇ ಇರಬೇಕಾಗುತ್ತದೆ.  ಹೊಸ ರೂಪಾಂತರಿ ವೈರಾಣು, ಹೊಸ ಸ್ವರೂಪಗಳಲ್ಲಿ  ವ್ಯಾಪಕವಾಗಿ ಹರಡುವ ಮುನ್ನವೇ ಪ್ರತಿರಕ್ಷೆಯನ್ನು ಸಾಧಿಸುವಂತಹ ಲಸಿಕೆಗಳನ್ನು ಸಂಶೋಧಿಸಿ, ನಿರ್ಬಂಧಕ ಶಕ್ತಿಯನ್ನು ಹೆಚ್ಚಿಸುವುದು ಅತ್ಯವಶ್ಯವಾಗುತ್ತದೆ.

ಎಲ್ಲ ಲಸಿಕೆಗಳೂ ಒಂದೇ ರೀತಿಯಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ. ಅತಿ ಹೆಚ್ಚು ಫಲಪ್ರದತೆ ಇರುವ ಲಸಿಕೆಗಳು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿರುತ್ತವೆ.  ಲಸಿಕೆ ಉತ್ಪಾದಕರ ದೃಷ್ಟಿಯಲ್ಲಿ , ಒಂದು ನಿರ್ದಿಷ್ಟ ಅವಧಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಉತ್ಪಾದಿಸುವುದು ಮಾತ್ರವೇ ಮುಖ್ಯವಾಗುವುದಿಲ್ಲ,  ಈ ಲಸಿಕೆಗಳ ಫಲಪ್ರದತೆ, ವೈದ್ಯಕೀಯ ಪರಾಮರ್ಶೆ ಮತ್ತು ಮಾರುಕಟ್ಟೆಯ ಸರಬರಾಜು ಸಹ ಇಲ್ಲಿ ಮುಖ್ಯವಾಗುತ್ತದೆ. ಹಾಗೆಯೇ ಲಸಿಕೆಯ ಉತ್ಪಾದಕರಿಗೆ, ಆಧುನಿಕೀಕರಣಗೊಂಡ ಲಸಿಕೆಯನ್ನು, ಆ ಸಂದರ್ಭದ ಸೋಂಕಿನ ಹಿನ್ನೆಲೆಯಲ್ಲಿ ಫಲಪ್ರದವಾಗಿ ಉತ್ಪಾದಿಸುವುದು ಮತ್ತು ಮುಂದೆ ಕಾಣಿಸಿಕೊಳ್ಳಬಹುದಾದ ಸಂಭಾವ್ಯ ವೈರಾಣು ಸ್ವರೂಪಕ್ಕೆ ತಕ್ಕುದಾದ ಲಸಿಕೆಯನ್ನು ಉತ್ಪಾದಿಸುವುದೂ ಮುಖ್ಯವಾಗುತ್ತದೆ.

ರಷ್ಯಾದ ಸ್ಪುಟ್ನಿಕ್ ಮತ್ತು ಚೀನಾದ ಸಿನೋಫಾರ್ಮ್ ಲಸಿಕೆಗಳನ್ನು ಮೂರನೆಯ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸುವ ಮುನ್ನವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಈ ಎರಡೂ ಲಸಿಕೆಗಳನ್ನು ಕಡಿಮೆ ಆದಾಯದ ರಾಷ್ಟ್ರಗಳು ಮತ್ತು ಮಧ್ಯಮ ಅರ್ಥಸ್ಥಿತಿಯ ರಾಷ್ಟ್ರಗಳು ತುರ್ತುಸ್ಥಿತಿಯಲ್ಲಿ ಬಳಸಲು ಅವಕಾಶವನ್ನೂ ನೀಡಿವೆ. ಈ ಎರಡೂ ಲಸಿಕೆಗಳನ್ನು ಯೋರೋಪಿನ ವೈದ್ಯಕೀಯ ಔಷಧೀಯ ಸಂಸ್ಥೆಯೊಂದು ಪರಿಶೀಲಿಸುತ್ತಿದೆ. ಮೇ 7ರಂದು ವಿಶ್ವ ಆರೋಗ್ಯ ಸಂಸ್ಥೆ ಸಿನೋಫಾರ್ಮ್ ಲಸಿಕೆಯನ್ನು ತುರ್ತುಸ್ಥಿತಿಯಲ್ಲಿ ಬಳಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಸ್ಪುಟ್ನಿಕ್ ಲಸಿಕೆಗೂ ಅನುಮೋದನೆ ದೊರೆಯುತ್ತದೆ. ಆದರೆ ವೈದ್ಯಕೀಯ ಪ್ರಯೋಗದ ನಿಯಮಾವಳಿಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ಮಾಹಿತಿ ಮತ್ತು ವಿಶ್ಲೇಷಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಈ ಲಸಿಕೆಗಳಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅನುಮೋದನೆ ದೊರೆಯುವುದು ಅನುಮಾನಾಸ್ಪದವೇ ಆಗಿದೆ.

ಲಸಿಕೆಗಳ ಫಲಪ್ರದತೆಯನ್ನು ಕುರಿತು ಯೋಚಿಸುವಾಗ, ಆಡಳಿತನೀತಿ ನಿರೂಪಕರು ಮತ್ತು ಲಸಿಕೆ ಉತ್ಪಾದಕರು, ಒಮ್ಮೆ ಸಿಷೆಲ್ಸ್ ದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಒಳಿತು. ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಜನತೆಗೆ ಲಸಿಕೆಯನ್ನು ನೀಡಿದ ದೇಶವಾಗಿ ಸಿಷೆಲ್ಸ್ ಹೊರಹೊಮ್ಮಿದೆ. ಅಲ್ಲಿನ ಶೇ 60ರಷ್ಟು ಜನರಿಗ ಲಸಿಕೆಯನ್ನು ನೀಡಲಾಗಿದೆ. ಆದರೆ ಅಲ್ಲಿ ಮತ್ತೊಮ್ಮೆ ಕೋವಿಡ್ ಸೋಂಕು ತೀವ್ರವಾಗುತ್ತಿದ್ದು ಪುನಃ ಲಾಕ್‍ಡೌನ್ ವಿಧಿಸಲಾಗಿದೆ.  ಸಿಷೆಲ್ಸ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪಡೆದ ಜನರ ಪೈಕಿ ಶೇ 57ರಷ್ಟು ಜನರು, ಯುಎಇ ದೇಶ ಒದಗಿಸಿದ,  ಸಿನೋಫಾರ್ಮ್ ಲಸಿಕೆ ಪಡೆದಿದ್ದಾರೆ. ಇನ್ನು ಶೇ 43ರಷ್ಟು ಜನರಿಗೆ ಭಾರತದ ಸಿರಮ್ ಸಂಸ್ಥೆ ಉತ್ಪಾದಿಸಿದ ಅಸ್ಟ್ರಾಜೆಂಕಾ ಲಸಿಕೆಯನ್ನು ನೀಡಲಾಗಿದೆ.   ತಲಾ, ಸರಾಸರಿ ಸೋಂಕಿತರ ಸಂಖ್ಯೆಯನ್ನು ಪರಿಗಣಿಸಿದರೆ ಸಿಷೆಲ್ಸ್‍ನಲ್ಲಿ ಸೋಂಕು ಭಾರತಕ್ಕಿಂತಲೂ ಹೆಚ್ಚಾಗಿದೆ. ಲಸಿಕೆ ಉತ್ಪಾದಕರು ಹೇಳಿಕೊಳ್ಳುವಂತೆ, ಎಲ್ಲ ಲಸಿಕೆಗಳಲ್ಲೂ ಫಲಪ್ರದತೆಯನ್ನು ಕಾಣಲಾಗುವುದಿಲ್ಲ.  ಹಾಗಾಗಿ ಲಸಿಕೆ ಉತ್ಪಾದಕರು ನಿಗದಿತ ಉತ್ಪಾದನೆಯ ಪ್ರಮಾಣದಂತೆಯೇ ಫಲಪ್ರದತೆಗೂ ಉತ್ತರದಾಯಿತ್ವ ಹೊರಬೇಕಾಗುತ್ತದೆ. ಅಷ್ಟೇ ಅಲ್ಲದೆ ಲಸಿಕೆಗಳು ಬಿಡುಗಡೆಯಾದ ನಂತರ ನಡೆಯುವ ವೈದ್ಯಕೀಯ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನೂ ಕಾಪಾಡಿಕೊಳ್ಳಬೇಕಾಗುತ್ತದೆ.

ಭಾರತದ ಸಮಸ್ತ ಪ್ರಜೆಗಳೂ ಸುರಕ್ಷತೆ ಪಡೆಯುವವರೆಗೂ ನಾವು ಸುರಕ್ಷಿತವಲ್ಲ.  ಐದು ತಿಂಗಳ ಅವಧಿಯಲ್ಲಿ 210 ಕೋಟಿ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎನ್ನುವ ಸರ್ಕಾರದ ಘೋಷಣೆ ಸ್ವಾಗತಾರ್ಹವೇ ಆದರೂ, ಈ ಲಸಿಕೆಯ ಖರೀದಿ, ವಿತರಣೆ ಮತ್ತು ಎಲ್ಲ ರಾಜ್ಯಗಳಿಗೂ ಪೂರೈಸುವಂತಹ ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ನಿರ್ವಹಿಸುವ ಕೇಂದ್ರೀಯ ಲಸಿಕಾ ಏಜೆನ್ಸಿಯನ್ನು ಸ್ಥಾಪಿಸದೆ ಈ ರೀತಿ ಘೋಷಿಸುವುದರಿಂದ, ಲಸಿಕೆ ನೀಡುವ ಪ್ರಕ್ರಿಯೆಯಲ್ಲೇ ಅಸಮತೆ ಉಂಟುಮಾಡುತ್ತದೆ. ಇದರಿಂದ ಈಗಾಗಲೇ ಭಾರತದಲ್ಲಿ ತಾಂಡವಾಡುತ್ತಿರುವ ವೈದ್ಯಕೀಯ ಸೌಕರ್ಯಗಳ ಅಸಮಾನತೆ ಮತ್ತು ಅಸಮತೆ ಇನ್ನೂ ಉಲ್ಬಣಿಸುತ್ತದೆ.  ಶ್ರೀಮಂತರು-ಬಡವರು, ಗ್ರಾಮೀಣ-ನಗರ ಹೀಗೆ ಈಗಿರುವ ಕಂದರಗಳೊಡನೆ ನಾವು ಲಸಿಕೆಯ ಕಂದರವನ್ನೂ ಸೃಷ್ಟಿಸಿದಂತಾಗುತ್ತದೆ.

ಭಾರತ ತನ್ನ ಪ್ರಮಾದಗಳಿಂದಲೇ ಪಾಠ ಕಲಿಯಬೇಕಿದೆ.  ಭಾರತ ಸರ್ಕಾರ ತನ್ನ ಅಹಮಿಕೆ ಮತ್ತು ವಿಶೇಷಾಧಿಕಾರಗಳ ಪರಿಕಲ್ಪನೆಯನ್ನು ಬದಿಗಟ್ಟು, ಕೊರೋನಾ ವಿರುದ್ಧ ಲಭ್ಯವಿರುವ ಏಕೈಕ ಅಸ್ತ್ರ, ಲಸಿಕೆಯನ್ನು ಪೂರೈಸುವತ್ತ ಗಮನ ಹರಿಸಬೇಕಿದೆ.  ಕೊರೋನಾದ ಎರಡು ಅಲೆಗಳಲ್ಲಿ ಭಾರತದಲ್ಲಿ ಅಸಂಖ್ಯಾತ ಸಾವುಗಳು ಸಂಭವಿಸಿವೆ. ಈ ಸಾವುಗಳನ್ನು ತಡೆಗಟ್ಟಬಹುದಿತ್ತು, ಆದರೆ ಸಾಧ್ಯವಾಗಿಲ್ಲ.  ಈ ರೀತಿಯ ಸಾವು ನೋವುಗಳು, ಸಂಕಷ್ಟಗಳು, ದುಸ್ಥಿತಿ, ಮತ್ತು ಆರ್ಥಿಕ ನಿಶ್ಶಕ್ತಿಯನ್ನೂ ತಡೆಗಟ್ಟಬೇಕೆಂದರೆ ಭಾರತ ಲಸಿಕೆಯ ಬಗ್ಗೆ ಗಮನಹರಿಸಬೇಕಿದೆ.  ಒಂದು ವೇಳೆ ನಾವು ವಿಫಲವಾದರೆ, ನಾವೇಕೆ ಒಗ್ಗಟ್ಟಿನಿಂದ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಮುಂದಿನ ಹಲವು ಪೀಳಿಗೆಗಳ  ಪ್ರಶ್ನೆಯನ್ನ ಎದುರಿಸುತ್ತಲೇ ಇರಬೇಕಾಗುತ್ತದೆ.

ಮೂಲ:  ಜೋಸೆಫ್ ಬ್ರಿಟೋ (ದ ಹಿಂದೂ 26-5-21)

ಅನುವಾದ : ನಾ ದಿವಾಕರ

( ಜೋಸೆಫ್ ಬ್ರಿಟೋ, ಲಂಡನ್ನಿನ ಸಂತ ಮೇರಿ ಆಸ್ಪತ್ರೆಯ ಶಿಶುವೈದ್ಯ ತುರ್ತು ಚಿಕಿತ್ಸಾ ಘಟಕದ ಹಿರಿಯ ಗೌರವ ಉಪನ್ಯಾಸಕರು ಮತ್ತು ಸಲಹೆಗಾರರಾಗಿದ್ದವರು )

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...