ಹೊಸ ವರ್ಷ 2022ರಿಂದ ಸಿದ್ದಉಡುಪು ಮತ್ತು ಪಾದರಕ್ಷೆಗಳ ಮೇಲಿನ GSTಅನ್ನು ತಾತ್ಕಾಲಿಕವಾಗಿ ಮುಂದೂಡಲು ಜಿಎಸ್ಟಿ ಮಂಡಳಿಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಘೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 1ರಿಂದ ನೂತನ ನಿಯಮಗಳು ಜಾರಿಗೆ ಬರಬೇಕಿತ್ತು ಆದರೆ, ದೇಶಾದ್ಯಂತ ಇದಕ್ಕೆ ವರ್ತಕರಿಂದ ಮತ್ತು ವ್ಯಾಪಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 46ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಸೆಪ್ಟೆಂಬರ್ ನಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಬಟ್ಟೆ ಹಾಗೂ ಪಾದರಕ್ಷೆಗಳ ಮೇಲಿನ 5% ಜಿಎಸ್ಟಿಯನ್ನು 12%ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಕೇಂದ್ರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಲಾಗಿತ್ತು. ರಾಜ್ಯಗಳಾದ ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜನವರಿ 1ರಂದು ಒಂದು ದಿನ ಅಂಗಡಿಯನ್ನು ಮುಚ್ಚುವ ಮೂಲಕ ವ್ಯಾಪಾರಿಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸುವುದಾಗಿ ತಿಳಿಸಿದ್ದರು.
ಈ ವಿಚಾರವನ್ನು ತೀವ್ರವಾಗಿ ಖಂಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರ ಅಮಿತ್ ಮಿತ್ರಾ, ಹೊಸ ನೀತಿಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ 1ಲಕ್ಷ ಜವಳಿ ಕಾರ್ಖಾನೆಗಳು ಮತ್ತು 15ಲಕ್ಷ ಉದ್ಯೋಗವನ್ನು ಕಸಿದುಕೊಳ್ಳಲು ಮುಂದಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದರು.