ರಾಜ್ಯದಲ್ಲಿ ಉಚಿತ ಯೋಜನೆಗಳ ಘಮಲು ಜನರ ಮೂಗಿಗೆ ಬಡಿಯುತ್ತಿದೆ. ಬಡವರು, ಮಧ್ಯಮ ವರ್ಗದ ಜನರು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅದರಲ್ಲೂ ಜೂನ್ 11, ಭಾನುವಾರ ಜಾರಿಯಾಗ್ತಿರೋ ಶಕ್ತಿ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಣ್ಣು ಎಂದು ಮೂದಲಿಕೆಗೆ ಒಳಗಾಗಿದ್ದ ಸ್ತ್ರೀ ಕುಲಕ್ಕೆ ಸಿದ್ದರಾಮಯ್ಯ ಸರ್ಕಾರ ಬಸ್ನಲ್ಲಿ ಉಚಿತ ಸಂಚಾರದ ವ್ಯವಸ್ಥೆ ಮಾಡಿದೆ. ಐಶಾರಾಮಿ ಬಸ್ ಹೊರತುಪಡಿಸಿ ಎಲ್ಲಾ ಬಸ್ಗಳಲ್ಲೂ ಉಚಿತವಾಗಿ ರಾಜ್ಯದ ಒಳಗೆ ಸಂಚಾರ ಮಾಡಲು ಅವಕಾಶ ಸಿಗುತ್ತಿದೆ. ಕೆಲವೊಂದಿಷ್ಟು ಮಹಿಳೆಯರು ಸರ್ಕಾರ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಆದರೆ ನಾನು ದಿನನಿತ್ಯವೂ ಟಿಕೆಟ್ ಕೊಂಡು ಸಂಚಾರ ಮಾಡ್ತೇವೆ ಎನ್ನುವ ಮಾತು ಬರುತ್ತಿಲ್ಲ.

ಕಾಂಗ್ರೆಸ್ ಸರ್ಕಾರವನ್ನು ವಿರೋಧ ಮಾಡುವ ವೈದಿಕರ ಗುಂಪೊಂದು ಸಾಮಾಜಿಲ ಜಾಲತಾಣದಲ್ಲಿ ಕೆಲಸ ಮಾಡುತ್ತಿದೆ. ದೇವಸ್ಥಾನಗಳ ಗರ್ಭಗುಡಿಯಿಂದ ಬಡವರನ್ನು ಹೊರಗಿಟ್ಟು ಪೂಜಾಧಿ ಕಾರ್ಯಗಳನ್ನು ಮಾಡುತ್ತ, ನಾವೇ ಶ್ರೇಷ್ಟ ಎಂದು ಬದುಕುತ್ತಿದ್ದವರು ಸಿದ್ದರಾಮಯ್ಯ ಸರ್ಕಾರದ ಸಾಮಾಜಿಕ ಕಾರ್ಯಗಳ ಬಗ್ಗೆ ಲಘುವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ನಾವು ಕಟ್ಟುವ ಟ್ಯಾಕ್ಸ್ ದೇಶದ ಅಭಿವೃದ್ಧಿಗೇ ಹೊರತು, ಸರ್ಕಾರದ ಬಿಟ್ಟಿ ಕಾರ್ಯಕ್ರಮಗಳಿಗೆ ಅಲ್ಲ ಎನ್ನುವ ಪೋಸ್ಟ್ ಅನ್ನು ವೈರಲ್ ಮಾಡ್ತಿದ್ದಾರೆ. ಆದರೆ ನಾವು ದೇವಸ್ಥಾನಕ್ಕೆ ಬಂದ ಬಡವರಿಂದ ಚಿಲ್ಲರೆ ಕಾಸಿಗೆ ಕೈ ಒಡ್ಡುವುದಿಲ್ಲ ಎಂದು ಹೇಳುವ ಧೈರ್ಯ ಮಾತ್ರ ತೋರಿಸುತ್ತಿಲ್ಲ.
ಇಂಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಮಾಡುವ ಹಣವಂತರು ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ಆದರೆ ಓರ್ವ ಕೂಲಿ ಕಾರ್ಮಿಕನೂ ಪರೋಕ್ಷವಾಗಿ ತೆರಿಗೆ ಕಟ್ಟುತ್ತಾನೆ. ನೇರವಾಗಿ ತೆರಿಗೆ ಕಟ್ಟದ ಮಧ್ಯಮ ವರ್ಗ ಹಾಗು ಬಡ ಜನರು ದೇಶದ ಅಭಿವೃದ್ಧಿಗೆ ಕೊಡುಗೆಯನ್ನೇ ಕೊಡುವುದಿಲ್ಲ. ಕೇವಲ ಟ್ಯಾಕ್ಸ್ ಪೇಯರ್ಸ್ ಕೊಡುಗೆ ಎನ್ನುವ ಪೆದ್ದುತನ ಕೆಲವರಲ್ಲಿ ಮನೆ ಮಾಡಿದೆ. ಬೆಳಗ್ಗೆ ಎದ್ದು ಹಾಲು, ಪೇಪರ್ ಕೊಳ್ಳುವವರು ಪರೋಕ್ಷವಾಗಿ ತೆರಿಗೆ ಪಾವತಿ ಮಾಡ್ತಾರೆ. ಒಂದು ಚಾಕೊಲೆಟ್ ಖರೀದಿ ಮಾಡಿದಾಗಲೂ ಇಂತಿಷ್ಟು ಟ್ಯಾಕ್ಸ್ ಸರ್ಕಾರಕ್ಕೆ ಹೋಗುತ್ತದೆ. ಡೈರೆಕ್ಟ್ ಟ್ಯಾಕ್ಸ್ ಹಾಗು ಇಂಡೈರೆಕ್ಟ್ ಟ್ಯಾಕ್ಸ್ ಬಗ್ಗೆ ಗೊತ್ತಿಲ್ಲದ ಮೂರ್ಖರು ಬಡವರಿಗೆ ಕೊಡುತ್ತಿರುವ ಯೋಜನೆಗಳನ್ನು ಸರ್ಕಾರದ ಭಿಕ್ಷೆ ಎನ್ನುವಂತೆ ಬಿಂಬಿಸುತ್ತಿದ್ದಾರೆ.
ಒಂದು ರಾಜ್ಯ ಎಂದ ಮೇಲೆ ಸರ್ಕಾರ ಹಾಗು ವಿರೋಧ ಪಕ್ಷ ಇರಬೇಕು. ಸಮರ್ಥ ವಿರೋಧ ಪಕ್ಷ ಸರ್ಕಾರದ ಅಂಕು ಡೊಂಕುಗಳನ್ನು ತಿದ್ದಬೇಕು. ಆದರೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಒದ್ದಾಡುತ್ತಿರುವ ಬಿಜೆಪಿ, ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಿದೆ. ಮೊದಲಿಗೆ ಗ್ಯಾರಂಟಿಗಳನ್ನು ಜಾರಿ ಮಾಡುವುದೇ ಕಷ್ಟ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು, ಇದೀಗ ಸರ್ಕಾರ ಜಾರಿ ಮಾಡಿರುವ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಕುಸಿತ ಕಾಣುತ್ತದೆ ಎಂದು ವರಸೆ ತೆಗೆದಿದ್ದಾರೆ. ದೇಶದ ಆರ್ಥಿಕತೆ ಬಗ್ಗೆ ಚರ್ಚೆ ಮಾಡುವ ಜನರು, ಭಾರತ ದೇಶದಲ್ಲಿ ಕಳೆದ 9 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿರುವ 1 ಲಕ್ಷ ಕೋಟಿ ಸಾಲದ ಬಗ್ಗೆ ಚಕಾರ ಎತ್ತುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷದಲ್ಲಿ ವಿದೇಶಿ ಪ್ರವಾಸಕ್ಕೆ ವೆಚ್ಚ ಮಾಡಿರುವ 2021 ಕೋಟಿ ವೆಚ್ಚದ ಬಗ್ಗೆ ತುಟಿಕ್ ಪಿಟಿಕ್ ಅನ್ನಲ್ಲ.. ಇದನ್ನೇ ಅಲ್ವಾ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎನ್ನುವುದು. ಮನುವಾದವನ್ನು ಸಮರ್ಥವಾಗಿ ಜಾರಿ ಮಾಡಲು ಕರ್ನಾಟಕದಲ್ಲಿ ಸಾಧ್ಯವಾಗಲಿಲ್ಲ ಎನ್ನುವ ನೋವು ಮೇಲ್ವರ್ಗವನ್ನು ಕಾಡುತ್ತಿದೆ ಎನ್ನುವುದಕ್ಕೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ವಿರೋಧ ಮಾಡುತ್ತಿರುವವರ ಮಾತೇ ಸಾಕ್ಷಿ ಎನ್ನಬಹುದು.
ಕೃಷ್ಣಮಣಿ