ನವದೆಹಲಿ : 2 ಸಾವಿರ ರೂಪಾಯಿಗಿಂತ ಹೆಚ್ಚಿನ ಯುಪಿಐ (UPI) ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court), ಈ ನಿಯಮ ಜಾರಿಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.

ನ್ಯಾಯಾಲಯವು ಈ ಕುರಿತು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶನ ನೀಡಿದೆ.
ಅರ್ಜಿದಾರ ಅಂಜನ್ ದತ್ತಾ ಪರ ವಕೀಲರು ವಾದ ಮಂಡಿಸಿ, ಯಾವುದೇ ಸೂಕ್ತ ಚರ್ಚೆ ಅಥವಾ ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದರಿಂದ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಹೊರೆ ಬೀಳಲಿದ್ದು, ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಜನರು ಮತ್ತೆ ನಗದು ವಹಿವಾಟಿಗೆ ಮರಳುವ ಸಾಧ್ಯತೆಯಿದೆ, ಇದು ಡಿಜಿಟಲ್ ಆರ್ಥಿಕತೆಯ ಗುರಿಗೆ ಧಕ್ಕೆ ತರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಯುಪಿಐ ವ್ಯವಸ್ಥೆಯಿಂದಾಗಿ ಕಪ್ಪುಹಣದ ವಹಿವಾಟು ಗಣನೀಯವಾಗಿ ತಗ್ಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಈ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವೆಂಕಟರಮಣ್ ಅವರು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ತಗಲುವ ವೆಚ್ಚದಂತೆಯೇ ಇದೂ ಕೂಡ ಸೇವಾ ವೆಚ್ಚವಾಗಿದೆ ಎಂದು ಸ್ಪಷ್ಟಪಡಿಸಿದರು. ಇದು ಸರ್ಕಾರ ವಿಧಿಸುತ್ತಿರುವ ಯಾವುದೇ ಶಾಸನಬದ್ಧ ಶುಲ್ಕವಲ್ಲ, ಬದಲಿಗೆ ಬ್ಯಾಂಕುಗಳು ಸೇರಿದಂತೆ ಈ ವಲಯದ ಪಾಲುದಾರರ ನಡುವಿನ ಸೆಟ್ಲ್‌ಮೆಂಟ್ ಶುಲ್ಕವಾಗಿದ್ದು, ಇದನ್ನು ಎನ್‌ಪಿಸಿಐ ಸುಗಮಗೊಳಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಸರ್ಕಾರ ಇದರಲ್ಲಿ ಯಾವುದೇ ಪಾಲನ್ನು ಪಡೆಯುತ್ತಿಲ್ಲ ಮತ್ತು ಶೇಕಡಾ 96 ರಷ್ಟು ಬಳಕೆದಾರರಿಗೆ ಈಗಾಗಲೇ ವಿನಾಯಿತಿ ನೀಡಲಾಗಿದ್ದು, ಅಕ್ಟೋಬರ್ 15 ರ ನಂತರವಷ್ಟೇ ಇದರ ಮೊದಲ ಹಂತ ಜಾರಿಗೆ ಬರಲಿದೆ ಎಂದು ಅವರು ವಾದಿಸಿದರು.

ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಈ ರೀತಿಯ ವಸೂಲಾತಿ ನಡೆಸಲು ಕಾರ್ಯಾಂಗಕ್ಕಿರುವ ವ್ಯಾಪ್ತಿಯ ಬಗ್ಗೆ ಪ್ರಶ್ನಿಸಿದರಾದರೂ, ನಿಯಮ ಜಾರಿಗೆ ಯಾವುದೇ ತಡೆ ನೀಡದೆ ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಇಂದು ವಿಶ್ವ ಹೃದಯ ದಿನ: ಹೃದ್ರೋಗ ತಡೆಗೆ ಜಾಗೃತಿ ಏಕೆ ಮುಖ್ಯ? ತಿಳಿಯಿರಿ ಮಹತ್ವ | World Heart Day






