ನಾ ದಿವಾಕರ
ಹೆಚ್ಚು ಓದಿದ ಸ್ಟೋರಿಗಳು
ಬೆಂಗಳೂರು:ಮಾ.30: ಶತಮಾನಗಳ ಇತಿಹಾಸ ಇರುವ ಭಾರತದ ಶ್ರೇಣೀಕೃತ ಸಮಾಜದಲ್ಲಿ, ಪ್ರತಿ ವ್ಯಕ್ತಿಯ ಮನಸಿನಲ್ಲೂ ಇಂದಿಗೂ ಕಾಡುವ ಅತ್ಯಂತ ಜಟಿಲ ಪ್ರಶ್ನೆ ಸಹಜೀವಿಗಳನ್ನು, ಮನುಷ್ಯರನ್ನು ಮುಟ್ಟಬಹುದೋ ಮುಟ್ಟಬಾರದೋ ಎನ್ನುವುದು. ಪ್ರಾಣಿಗಳನ್ನು ಮುಟ್ಟಲು ಹಿಂಜರಿಯದ ಮನಸ್ಸು ಮನುಷ್ಯನನ್ನು ಮುಟ್ಟಲು ಏಕೆ ಹಿಂಜರಿಯುತ್ತದೆ ಎಂಬ ಪ್ರಶ್ನೆಗೆ ಉತ್ತರ ಶೋಧಿಸಿದಾಗ ನಾವು ಶ್ರೇಣೀಕೃತ ಜಾತಿ ವ್ಯವಸ್ಥೆಯ ತಳಕ್ಕೆ ತಲುಪುತ್ತೇವೆ. ಸ್ಪರ್ಶ ಎನ್ನುವುದು ಮಾನವ ಸಹಜವಾದ ಪ್ರಕ್ರಿಯೆಯಾಗಬೇಕಾಗಿದ್ದ ಜಗತ್ತಿನಲ್ಲಿ ಸ್ಪರ್ಶವೇ ಮಾನವ ಸಮಾಜವನ್ನು ಬೇರ್ಪಡಿಸುವ ಒಂದು ವಿದ್ಯಮಾನ ಎಲ್ಲಿಯಾದರೂ ಕಾಣಬಹುದಾದರೆ ಅದು ಭಾರತದಲ್ಲಿ ಮಾತ್ರ ಎಂದು ನಿಸ್ಸಂದೇಹವಾಗಿ ಹೇಳಬಹುದು. ನಮ್ಮಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂಬ ಹಮ್ಮುಬಿಮ್ಮುಗಳನ್ನು ಬದಿಗಿಟ್ಟು, ಎದೆ ಮುಟ್ಟಿ ನೋಡಿಕೊಂಡಾಗ, ಇಂದಿಗೂ ಸುದ್ದಿಯಾಗುತ್ತಿರುವ ಜಾತಿ ಆಧರಿತ ಸಾಮಾಜಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆಯ ಪ್ರಕರಣಗಳು ನಮ್ಮ ಅಂತಃಸಾಕ್ಷಿಯನ್ನು ಕಲಕಿಬಿಡುತ್ತವೆ.
ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಮುಂತಾದ ಮನುಜ ಸಹಜ ಭಾವನೆಗಳು ಜಗತ್ತಿನ ಎಲ್ಲ ಸಮಾಜಗಳಲ್ಲೂ ಯಾವುದೋ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಆರ್ಥಿಕ ಸ್ಥಾನಮಾನಗಳು, ಸಾಮಾಜಿಕ ಘನತೆ ಮತ್ತು ಗೌರವ, ಆಸ್ತಿ ಒಡೆತನ ಮತ್ತು ಯಜಮಾನಿಕೆಯ ನೆಲೆಗಳು, ಸಮಾಜದಲ್ಲಿ ಸ್ಥಾನ ಕಲ್ಪಿಸುವ ಅಧಿಕಾರದ ನೆಲೆಗಳು, ಪುರುಷಾಧಿಪತ್ಯ, ತೊಗಲಿನ ಬಣ್ಣ ಹೀಗೆ ಮನುಷ್ಯ ಮನುಷ್ಯನ ನಡುವೆ ಅಂತರವನ್ನು ಸೃಷ್ಟಿಸುತ್ತಲೇ ಈ ಭಾವನೆಗಳು ಸಾಮಾಜಿಕವಾಗಿ ಬೇರೂರುವಂತೆ ಮಾಡುತ್ತಿರುತ್ತವೆ. 20ನೆಯ ಶತಮಾನದ ಆಧುನಿಕತೆಯ ನಡುವೆಯೂ ಆಫ್ರಿಕಾದ ಜನತೆ ಈ ವರ್ಣಭೇದದ ಶಿಕ್ಷೆ ಅನುಭವಿಸಿರುವುದಕ್ಕೆ ಸಮಕಾಲೀನ ಇತಿಹಾಸವೇ ಸಾಕ್ಷಿಯಾಗಿದೆ. ಭಾರತದ ಜಾತಿ ಶ್ರೇಣೀಕೃತ ಸಮಾಜದ ವೈಶಿಷ್ಟ್ಯ ಎಂದರೆ ಇಲ್ಲಿ ಮನುಷ್ಯನ ಹುಟ್ಟಿನ ಮೂಲ ಮತ್ತು ಬಹುಮಟ್ಟಿಗೆ ತೊಗಲಿನ ಬಣ್ಣ, ಈ ತಾರತಮ್ಯದ ಮೂಲ ಸೆಲೆಯಾಗಿದೆ. ಈ ತಾರತಮ್ಯದ ಭಾವನೆಗಳನ್ನು ಮತ್ತಷ್ಟು ಬೇರೂರುವಂತೆ ಮಾಡಲು ಮುಟ್ಟುವ-ಮುಟ್ಟಿಸಿಕೊಳ್ಳುವ ಸಾಮಾಜಿಕ ನಿಬಂಧನೆಗಳು ನೆರವಾಗುತ್ತವೆ.
ಸಾಮಾಜಿಕ ಬಹಿಷ್ಕಾರದ ನೆಲೆಗಳು

ಸಾಮಾಜಿಕ ಬಹಿಷ್ಕಾರ ಎರಡು ನೆಲೆಗಳಲ್ಲಿ ವ್ಯಕ್ತವಾಗುತ್ತದೆ. ಕೌಟುಂಬಿಕ ನೆಲೆಯಲ್ಲಿ, ವ್ಯಕ್ತಿಗತ ಬದುಕನ್ನು ರೂಪಿಸುವ ಮನೆಗಳಲ್ಲಿ ಪ್ರಕಟಗೊಳ್ಳುವ ಸಾಮಾಜಿಕ ಬಹಿಷ್ಕಾರವನ್ನು ಮೇಲ್ನೋಟಕ್ಕೆ ಗುರುತಿಸುವುದು ಕಷ್ಟವಾದರೂ, ಜಾತಿ ವ್ಯವಸ್ಥೆ ರೂಪಿಸಿರುವ ಸಂಪ್ರದಾಯಗಳು, ಸೃಷ್ಟಿಸಿರುವ ನಂಬಿಕೆಗಳು ಮತ್ತು ರೂಢಿಗತಗೊಳಿಸಿರುವ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೇಲ್ಜಾತಿ ಕುಟುಂಬಗಳಲ್ಲೂ ಸಹ ಕುಟುಂಬ ಸದಸ್ಯರನ್ನು ದೂರ ಇಡುವ ಒಂದು ಸುದೀರ್ಘ ಪರಂಪರೆಯನ್ನು ಗುರುತಿಸಬಹುದು. ಮುಟ್ಟುವುದನ್ನು ನಿರ್ಬಂಧಿಸುವುದು ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ʼ ಬಹಿಷ್ಕಾರ ʼ ಎಂಬ ಕಠೋರ ಪದದ ವ್ಯಾಪ್ತಿಗೆ ಒಳಪಡುವುದೋ ಇಲ್ಲವೋ ಎಂಬ ಜಿಜ್ಞಾಸೆಯೊಂದಿಗೆ, ಮನೆಗಳಲ್ಲಿ ನಿತ್ಯ ಜೀವನದ ನಡುವೆಯೇ ಉದ್ಭವಿಸುವ ಮುಟ್ಟುವ-ಮುಟ್ಟಿಸಿಕೊಳ್ಳದ ಸನ್ನಿವೇಶಗಳನ್ನು ಗಮನಿಸಿದಾಗ, ತಮ್ಮ ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಮಾನಸಿಕ ತುಮುಲಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾದೀತು. ಬಾವಿ ಅಥವಾ ಸಾರ್ವಜನಿಕ ಕೊಳಾಯಿ ಅಥವಾ ಮನೆಯೊಳಗಿನ ತೊಟ್ಟಿಯೊಳಗಿನ ನೀರು ಬಚ್ಚಲು ಮನೆಯ ಹಂಡೆಯಲ್ಲಿ ಸ್ಥಾನಪಡೆದ ಕೂಡಲೇ ಮನೆಯ ಕೆಲವು ಸದಸ್ಯರಿಂದ ಮಾತ್ರ ಮುಟ್ಟಿಸಿಕೊಳ್ಳುವಂತಾಗಿಬಿಡುತ್ತದೆ. ಮುಟ್ಟಾದ ಹೆಣ್ಣುಮಗಳು ಮನೆಯ ಸಕಲ ಸದಸ್ಯರಿಗೂ ಅಸ್ಪೃಶ್ಯಳಾಗಿಬಿಡುತ್ತಾಳೆ. ಪೂಜೆ ಪುನಸ್ಕಾರಗಳ ಸಂದರ್ಭಗಳಲ್ಲಿ ಮಡಿ ಉಟ್ಟ ತಂದೆ ತಾಯಿ ಮಕ್ಕಳಿಂದಲೂ ಅಂತರ ಕಾಪಾಡಿಕೊಳ್ಳುತ್ತಾರೆ. ಮೂಲತಃ ವೈದಿಕ ಸಂಪ್ರದಾಯದಿಂದಲೇ ಪ್ರೇರಿತವಾದರೂ, ಈ ಆಚರಣೆಗಳನ್ನು ಎಲ್ಲ ಜಾತಿಗಳಲ್ಲೂ ಕಾಣಬಹುದಾಗಿದೆ.
ಮನುಷ್ಯನಾದವನು ಮತ್ತೊಬ್ಬ ಮನುಷ್ಯನನ್ನು ಮುಟ್ಟದಿರುವಂತಹ ನಿರ್ಬಂಧಗಳನ್ನು ವಿಧಿಸಿಕೊಳ್ಳುವುದೂ ಸಾಧ್ಯ ಎನ್ನುವುದನ್ನು ಈ ಸಾಂಪ್ರದಾಯಿಕ ವಿಧಿವಿಧಾನಗಳು ನಿರೂಪಿಸುತ್ತವೆ. ತನ್ನ ಋತುಚಕ್ರದ ಸಂದರ್ಭದಲ್ಲಿ ತನ್ನ ತಪ್ಪಿಲ್ಲದೆಯೇ ಸಾಮಾಜಿಕ ಅಂತರದ ಬಹಿಷ್ಕೃತ ಭಾವನೆಗೆ ಒಳಗಾಗುವ ಹೆಣ್ಣು ಮಕ್ಕಳ ಮನದಾಳದ ತುಮುಲಗಳನ್ನು ಅರ್ಥಮಾಡಿಕೊಂಡರೆ, ಬಹುಶಃ ನಮಗೆ ಬಾಹ್ಯ ಸಮಾಜದಲ್ಲಿ ಬಹಿಷ್ಕೃತವಾಗುವ ಸಮುದಾಯಗಳ ತಲ್ಲಣಗಳೂ ಅರ್ಥವಾಗುತ್ತದೆ. ಮುಟ್ಟಾದ ಹೆಣ್ಣುಮಕ್ಕಳನ್ನು ಅಂತರದಲ್ಲಿಡಲು ವೈಜ್ಞಾನಿಕ ಕಾರಣಗಳನ್ನು ಮುಂದೊಡ್ಡುವ ಅವೈಚಾರಿಕ ಮನಸ್ಥಿತಿಯೇ ಬಾಹ್ಯ ಸಮಾಜದಲ್ಲಿ ʼ ಅಂತರ ಕಾಪಾಡಿಕೊಳ್ಳುವುದಕ್ಕೂ ʼ ವೈಜ್ಞಾನಿಕ ಕಾರಣಗಳನ್ನು ಮುಂದೊಡ್ಡುತ್ತವೆ. ಮೂಲೆಯಲ್ಲಿ ಕುಳಿತ ಒಂದು ಹೆಣ್ಣು ಮಗು ಮನೆಯವರ ಸಂತಸದ ಕ್ಷಣಗಳಲ್ಲಿ ನಲಿವಿನಿಂದ ಆನಂದಿಸುವ ಅವಕಾಶವನ್ನೇ ಕಳೆದುಕೊಳ್ಳುವ ಸನ್ನಿವೇಶವನ್ನು, ಊರ ಜಾತ್ರೆಯ ಸಂದರ್ಭದಲ್ಲಿ ಸಾಮಾಜಿಕ ಜಾತಿ ಕಾರಣಕ್ಕಾಗಿ ಬಹಿಷ್ಕಾರಕ್ಕೊಳಗಾಗುವ ಸಮುದಾಯದ ಜನರ ಮನಸ್ಥಿತಿಯೊಂದಿಗೆ ಹೋಲಿಸಿ ನೋಡಿದಾಗ, ಸಾಮಾಜಿಕ ಬಹಿಷ್ಕಾರ ಎನ್ನುವುದು ಎಷ್ಟು ಕ್ರೂರ ಎಂದು ಅರ್ಥವಾಗುತ್ತದೆ.
ಮುಟ್ಟಲೊಲ್ಲದವರಲ್ಲಿ ಮನೆಮಾಡಿರುವ ಕಲ್ಪಿತ ಶುದ್ಧತೆಯ ಭಾವನೆ ಮತ್ತು ಶ್ರೇಷ್ಠತೆಯ ಅಹಮಿಕೆ ಮುಟ್ಟಬಾರದ ಮನುಷ್ಯರನ್ನು ಸಮಾಜದ ಪ್ರತಿಯೊಂದು ಸ್ತರದಲ್ಲೂ ಸೃಷ್ಟಿಸುತ್ತದೆ. ಕುಟುಂಬದ ಚೌಕಟ್ಟುಗಳೊಳಗೆ ಹೆಣ್ಣುಮಕ್ಕಳಿಗೆ ಇದು ಮಾಸಿಕ ಸಮಸ್ಯೆಯಾದರೆ, ಉಳಿದವರಿಗೆ ಹಬ್ಬಹರಿದಿನಗಳು, ಸಮಾರಂಭಗಳು, ನಿತ್ಯದ ಪೂಜಾ ವಿಧಿವಿಧಾನಗಳು ಮತ್ತು ಬಾಹ್ಯ ಸಮಾಜದಲ್ಲಿ ಧಾರ್ಮಿಕ ಆಚರಣೆಗಳು ಈ ʼ ಹೊರಗುಳಿಸುವ ʼ ಭಾವನೆಗಳನ್ನು ಉದ್ಧೀಪನಗೊಳಿಸುತ್ತವೆ. ನಿಂತ ನೆಲ, ನದಿಯ ನೀರು, ಮರದ ಎಲೆಗಳು ಮತ್ತು ಹೂಗಳೂ ಸಹ ತಮ್ಮ ಸಾರ್ವತ್ರಿಕ ಅಸ್ಮಿತೆಯನ್ನು ಕಳೆದುಕೊಂಡು, ಸಾರ್ವಜನಿಕ ವಲಯದಲ್ಲೇ ಲಕ್ಷ್ಮಣ ರೇಖೆಗಳಲ್ಲಿ ನಿರ್ಬಂಧಿಸಲ್ಪಡುತ್ತವೆ. ಈ ವಸ್ತುಗಳನ್ನು ಪೂರೈಸಿದವರಿಗೂ ಅದೇ ವಸ್ತುಗಳು ಕೆಲ ಕ್ಷಣಗಳ ಕಾಲವಾದರೂ ನಿರ್ಬಂಧಿತವಾಗಿ ಮುಟ್ಟಲಾರದಂತಾಗುತ್ತವೆ. ಶುದ್ಧತೆ, ಮಡಿ, ಮೈಲಿಗೆ ಮತ್ತು ಈ ಪ್ರಾಚೀನ ನಡವಳಿಕೆಗಳನ್ನು ಸಮರ್ಥಿಸಲು ಬಳಸಲಾಗುವ ಶುಚಿತ್ವದ ಪ್ರತಿಪಾದನೆಗಳು, ಸಮಾಜದಲ್ಲಿ ಮುಟ್ಟಬಹುದಾದ-ಮುಟ್ಟಬಾರದ ಸ್ಥಾವರಗಳನ್ನು, ವಸ್ತುಗಳನ್ನು ಸೃಷ್ಟಿಸುತ್ತವೆ. ಈ ಸ್ಥಾವರ ವಸ್ತುಗಳ ಚೌಕಟ್ಟಿನೊಳಗೇ ವ್ಯಕ್ತಿ-ಸಮುದಾಯ-ಗುಂಪುಗಳೂ ಸಹ ಸ್ಪರ್ಶಮುಕ್ತವಾಗುತ್ತವೆ ಅಸ್ಪೃಶ್ಯವೂ ಆಗುತ್ತವೆ.

ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಾಂಪ್ರದಾಯಿಕ ಕೌಟುಂಬಿಕ ನೆಲೆಯಲ್ಲೇ ಬಾಲ್ಯಾವಸ್ಥೆಯನ್ನು ಕಳೆಯುವುದರಿಂದ ಭಾರತದ ಬಹುಪಾಲು ಜನರಲ್ಲಿ ಈ ತಾರತಮ್ಯಗಳನ್ನು, ಸಾತ್ವಿಕ ಬಹಿಷ್ಕಾರಗಳನ್ನು, ದೈಹಿಕ ಅಂತರದ ನೆಪದಲ್ಲಿ ಸ್ಪರ್ಶಾತೀತತೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಸಹಜವಾಗಿಯೇ ಬೇರೂರಿರುತ್ತದೆ. ವೈಚಾರಿಕತೆ ಮತ್ತು ವೈಜ್ಞಾನಿಕ ಪರಿಜ್ಞಾನ ಬೆಳೆಸಿಕೊಳ್ಳದೆ ಹೆಣ್ಣುಮಕ್ಕಳೂ ಸಹ ಇಂದಿಗೂ ಮುಟ್ಟಿನ ದಿನಗಳ ಮಾಸಿಕ ಶಿಕ್ಷೆ ಅನುಭವಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಮುಟ್ಟಾದ ಹೆಣ್ಣು ಮಕ್ಕಳನ್ನು ಊರಾಚೆ ಇಡುವ ಪದ್ಧತಿಯನ್ನೂ ಕೆಲವು ಜಾತಿ ಗುಂಪುಗಳಲ್ಲಿ ಅನುಸರಿಸಲಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತವೆ. ಉಳಿದ ಮಕ್ಕಳೆಲ್ಲರೂ ಕೈಕೈ ಹಿಡಿದು ಆಟ ಆಡುತ್ತಿರುವಾಗ ತಾನೊಬ್ಬಳೇ ದೂರದಲ್ಲಿ ಕುಳಿತು ವೀಕ್ಷಿಸಬೇಕಾದ ಕಠೋರ ಪರಿಸ್ಥಿತಿ ಎದುರಿಸುವ ಯಾವುದೇ ಹೆಣ್ಣು ಮಗುವಿನ ಮನದಾಳದಲ್ಲಿ ಉಂಟಾಗುವ ವೇದನೆ, ತಲ್ಲಣ ಮತ್ತು ನೋವನ್ನು ಅರ್ಥಮಾಡಿಕೊಂಡಲ್ಲಿ, ಜಾತ್ರೆ, ಉತ್ಸವ, ಸಮಾರಂಭಗಳಿಂದ ಬಹಿಷ್ಕೃತವಾಗುವ ನಿರ್ದಿಷ್ಟ ಜಾತಿಗುಂಪು ಅಥವಾ ಸಮುದಾಯದೊಳಗಿನ ತಲ್ಲಣಗಳನ್ನೂ ಅರ್ಥಮಾಡಿಕೊಳ್ಳುವುದು ಸಾಧ್ಯ.
ಸುಧಾರಣೆ ಮತ್ತು ಪರಿವರ್ತನೆ
ಎರಡು ಶತಮಾನಗಳ ಸಮಾಜ ಸುಧಾರಣೆಯ ಇತಿಹಾಸ ಇರುವ ಭಾರತೀಯ ಸಮಾಜದಲ್ಲಿ ಅಸಮಾನತೆ ಮತ್ತು ತಾರತಮ್ಯಗಳನ್ನು ಪೋಷಿಸುವ, ಒಳಗು-ಹೊರಗುಗಳನ್ನು ಸೃಷ್ಟಿಸುವ ಈ ಮನಸ್ಥಿತಿ ಕೊಂಚಮಟ್ಟಿಗಾದರೂ ಸುಧಾರಿಸಿದೆ ಎಂದು ನಿಟ್ಟುಸಿರು ಬಿಡುವ ಮುನ್ನ, ಸುತ್ತಲಿನ ಸಮಾಜದಲ್ಲಿ ಯುವ ಸಮೂಹದ ಮೇಲೆ , ಅವರ ಕುಟುಂಬಗಳ ಮೇಲೆ ಹೇರಲಾಗುತ್ತಿರುವ ಸಾಮಾಜಿಕ ಬಹಿಷ್ಕಾರದ ಪ್ರಕರಣಗಳತ್ತ ಒಮ್ಮೆ ಗಮನಹರಿಸುವುದು ಒಳಿತು. ಇತ್ತೀಚೆಗೆ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಗೋವಿಂದರಾಜು ಎಂಬ ಉಪ್ಪಾರ ಸಮುದಾಯದ ಯುವಕ ದಲಿತ ಯುವತಿಯನ್ನು ವಿವಾಹವಾದ ಕಾರಣ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗಿತ್ತು. ಸಮುದಾಯದ ಮುಖಂಡರು ಈ ʼ ಅಪರಾಧ ʼ ಕ್ಕಾಗಿ ಬಹಿಷ್ಕಾರದೊಂದಿಗೆ ಆರು ಲಕ್ಷ ರೂಗಳ ದಂಡವನ್ನೂ ವಿಧಿಸಿದ್ದರು. ಭಾರತದ ಸಂವಿಧಾನ ಅಂತರ್‌ಜಾತಿ ವಿವಾಹಕ್ಕೆ ಆಸ್ಪದ ನೀಡುವುದೇ ಅಲ್ಲದೆ, ಕಾನೂನಾತ್ಮಕ ರಕ್ಷಣೆ, ಉತ್ತೇಜನವನ್ನೂ ನೀಡುತ್ತದೆ. ಆದರೂ ಇಂತಹ ಘಟನೆಗಳು ನಮ್ಮ ನಡುವೆ ಸಂಭವಿಸುತ್ತಲೇ ಇವೆ. ಊರ ಜಾತ್ರೆಗಳಲ್ಲಿ ವಿಭಿನ್ನ ಕಾರಣಗಳಿಗಾಗಿ, ಅಸ್ಪೃಶ್ಯ ಸಮುದಾಯಗಳನ್ನು ದೂರ ಇಡುವ ಪ್ರಸಂಗಗಳು ನಡೆಯುತ್ತಲೇ ಇವೆ.

ಒಂದು ಜಾತಿ ಗುಂಪು ಅಥವಾ ಸಮುದಾಯ ಇಡಿಯಾಗಿ ಮತ್ತೊಂದು ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹೇರುವುದು ಅಸಾಂವಿಧಾನಿಕ, ಕಾನೂನುಬಾಹಿರ ಎನ್ನುವುದು ದಿಟ. ಆದರೆ ಭಾರತದ ಸಂವಿಧಾನದ ತಳಹದಿಯ ಮೇಲೆಯೇ ರೂಪುಗೊಂಡಿರುವ ಗ್ರಾಮ ಪಂಚಾಯತಿ ಅಥವಾ ಮಂಡಲ ಪಂಚಾಯತಿಗಳ ಸುಪರ್ದಿಯಲ್ಲೇ ಪ್ರಬಲ ಜಾತಿ ಗುಂಪುಗಳು ಈ ರೀತಿಯಾಗಿ ಸಾಮಾಜಿಕ ಬಹಿಷ್ಕಾರ ಹೇರುವುದು ವ್ಯಾಪಕವಾಗುತ್ತಿದೆ. ಜನರಿಂದಲೇ ಚುನಾಯಿತವಾಗುವ ಈ ಪ್ರಜಾಪ್ರಾತಿನಿಧ್ಯದ ಸಂಸ್ಥೆಗಳಿಗೆ ಸಾಂವಿಧಾನಿಕ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲವೇ ? ಅಥವಾ ಭಾರತೀಯ ಸಮಾಜದಲ್ಲಿ ಇಂದಿಗೂ ತನ್ನ ಪರಮಾಧಿಪತ್ಯವನ್ನು ಸಾಧಿಸಿರುವ ಜಾತಿ ಶ್ರೇಷ್ಠತೆ ಮತ್ತು ಪಾರಮ್ಯ ಈ ಸಾಂವಿಧಾನಿಕ ನೆಲೆಗಳನ್ನೂ ಅತಿಕ್ರಮಿಸಿ ಮೆರೆಯಲು ಅವಕಾಶ ಇರುವುದೇ ? ಸಾಮಾಜಿಕ ಬಹಿಷ್ಕಾರ ಹೇರುವ ಒಂದು ಜಾತಿ ಗುಂಪಿನ ಮೇಲೆ ಸಾಂವಿಧಾನಿಕವಾಗಿಯೇ ಕ್ರಮ ಜರುಗಿಸುವ ಅಧಿಕಾರವ್ಯಾಪ್ತಿ ಗ್ರಾಮ/ಜಿಲ್ಲಾ ಪಂಚಾಯತಿಗಳಿಗೆ, ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಗಳಿಗೆ ಇರುವುದಿಲ್ಲವೇ ?
ಈ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದ ಹೊರತು, ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವುದು ಸುಲಭವಲ್ಲ. ಉತ್ತರಭಾರತದಲ್ಲಿ ಇಂದಿಗೂ ಸಹ ನ್ಯಾಯಾಂಗದ ವ್ಯಾಪ್ತಿಯನ್ನೂ ಮೀರಿದ ಖಾಪ್‌ಪಂಚಾಯತ್‌ಗಳು ಅಧಿಕೃತವಾಗಿಯೇ ಕಾರ್ಯನಿರ್ವಹಿಸುತ್ತವೆ. ಈ ಖಾಪ್‌ಪಂಚಾಯತ್‌ಗಳು ಮೂಲತಃ ಜಾತಿ ಕೇಂದ್ರಿತ ಕೂಟಗಳಾಗಿದ್ದು, ಪ್ರಬಲ ಮೇಲ್ಜಾತಿಗಳ ಆಧಿಪತ್ಯಕ್ಕೆ ಒಳಪಟ್ಟಿರುತ್ತವೆ. ಚುನಾವಣಾ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಈ ಜಾತಿ ಕೂಟಗಳನ್ನು ಭಂಗಗೊಳಿಸಲು ಯಾವುದೇ ರಾಜಕೀಯ ಪಕ್ಷವೂ ಇಚ್ಚಿಸುವುದಿಲ್ಲ. ಸಾಮಾಜಿಕ ಸ್ಥಾನಮಾನ, ಆರ್ಥಿಕ ಸಬಲತೆ ಮತ್ತು ಸಾರ್ವಜನಿಕ ಸಂಪತ್ತಿನ ಮೇಲೆ, ಉತ್ಪಾದನೆಯ ಮೂಲಗಳ ಮೇಲೆ ಹಿಡಿತ ಸಾಧಿಸುವುದರಿಂದಲೇ ಈ ಪ್ರಬಲ ಮೇಲ್ಜಾತಿ ಗುಂಪುಗಳು, ಸಂಪತ್ತಿನಿಂದ ವಂಚಿತರಾದ, ಅಂಚಿಗೆ ತಳ್ಳಲ್ಪಟ್ಟ, ಅವಕಾಶವಂಚಿತ ಸಮುದಾಯಗಳ ಮೇಲೆ ತಮ್ಮ ದಬ್ಬಾಳಿಕೆ ನಡೆಸುತ್ತವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸ್ವಾಭಾವಿಕವಾಗಿಯೇ ದಲಿತ ಸಮುದಾಯಗಳು ಈ ದಬ್ಬಾಳಿಕೆ ಮತ್ತು ದಮನಕ್ಕೆ ಒಳಗಾಗುತ್ತವೆ.
ಮರೆಯಾಗುತ್ತಿರುವ ಸೂಕ್ಷ್ಮತೆಗಳು

ಸಾಮಾಜಿಕ ಬಹಿಷ್ಕಾರವನ್ನು ಸಹಿಸಿಕೊಳ್ಳುವ ಒಂದು ಸಾತ್ವಿಕ ಮನೋಧರ್ಮವನ್ನೂ ನಮ್ಮ ಸಮಾಜದಲ್ಲಿ ಕಾಣಬಹುದಾದರೆ ಅದರ ಮೂಲ ಧಾತುವನ್ನು, ಮೇಲೆ ಉಲ್ಲೇಖಿಸಿರುವಂತೆ ಕೌಟುಂಬಿಕ ನೆಲೆಗಳ ಸಂಪ್ರದಾಯಗಳಲ್ಲಿ, ಆಚರಣೆಗಳಲ್ಲಿ ಗುರುತಿಸಲು ಸಾಧ್ಯ. ತನ್ನದೇ ಕುಟುಂಬದಲ್ಲಿ ತನ್ನ ಮೇಲೆ ಹೇರಲಾಗುವ ದೈಹಿಕ ಅಂತರದ ಶಿಕ್ಷೆಯನ್ನು ಸಾಮಾಜಿಕ ಬಹಿಷ್ಕಾರದ ಒಂದು ಸ್ವರೂಪ ಎಂದು ಭಾವಿಸಲು ಹೆಣ್ಣುಮಕ್ಕಳು ಭಾವಿಸದೆ ಮೌನವಾಗಿ ನೋವು ಅನುಭವಿಸುವ ಹಾಗೆಯೇ ವಿಶಾಲ ಸಮಾಜದಲ್ಲೂ ಒಂದು ಇಡೀ ಸಮುದಾಯ ಅಥವಾ ಜಾತಿ ಗುಂಪು, ಇಂತಹ ಬಹಿಷ್ಕಾರಗಳನ್ನು ಸಂಪ್ರದಾಯದ ಹೆಸರಿನಲ್ಲಿ ಸಹಿಸಿಕೊಳ್ಳುತ್ತಿರುತ್ತವೆ. ಹೆಣ್ಣು ಮಕ್ಕಳು ಈ ರೀತಿಯ ಬಹಿಷ್ಕಾರವನ್ನು ಮುಟ್ಟಿನ ಸಮಯದಲ್ಲಿ ಮಾತ್ರವೇ ಅಲ್ಲದೆ, ವಿಧವೆ-ಬಂಜೆ-ಅವಿವಾಹಿತೆ ಮುಂತಾದ ಹೆಸರುಗಳನ್ನು ಹೊತ್ತ ಪ್ರಾಚೀನ ಆಚರಣೆಗಳ ನೆಲೆಯಲ್ಲೂ ಅನುಭವಿಸುತ್ತಲೇ ಇದ್ದಾರೆ. ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಈ ಹಣೆಪಟ್ಟಿಗಳು ಪುರುಷ ಸಮಾಜಕ್ಕೆ ಅನ್ವಯಿಸುವುದಿಲ್ಲ. ಮತ್ತೊಂದೆಡೆ ಇದರಿಂದ ಉದ್ಭವಿಸುವ ಸಾಮಾಜಿಕವಾಗಿ ಹೊರಗಿಡುವ ಪ್ರವೃತ್ತಿಗೆ ಬಲಿಯಾಗುವುದು ತಳಸಮುದಾಯಗಳೇ ಹೆಚ್ಚು. ಇಂತಹ ಮಾನಸಿಕ ಕ್ಷೋಭೆಯನ್ನು ಅನುಭವಿಸುವ ಮೇಲ್ಜಾತಿಯ ಹೆಣ್ಣುಮಕ್ಕಳಿಗೆ, ಕೆಳಸ್ತರದ ತಳಸಮುದಾಯಗಳ ಹೆಣ್ಣು ಮಕ್ಕಳು ಅನುಭವಿಸುವ ಹೆಚ್ಚುವರಿ ಸಾಮಾಜಿಕ ಬಹಿಷ್ಕಾರದ, ಅಸ್ಪೃಶ್ಯತೆಯ ಹಿಂದಿನ ನೋವು ಏಕೆ ಅರ್ಥವಾಗುವುದಿಲ್ಲ ?
ಭಾರತೀಯ ಸಮಾಜದಲ್ಲಿ ಮಹಿಳಾ ಸಂವೇದನೆಯ ಧ್ವನಿಗೆ ಶತಮಾನಗಳ ಚರಿತ್ರೆ ಇದ್ದರೂ, ಬಸವ-ಅಲ್ಲಮ-ಅಕ್ಕಮಹಾದೇವಿಯವರಿಂದ ಫುಲೆ ದಂಪತಿಗಳು-ಅಂಬೇಡ್ಕರ್‌ವರೆಗೆ ಈ ಸಂವೇದನಾಶೀಲ ಧ್ವನಿಗಳು ವಿಸ್ತರಿಸಿದ್ದರೂ, 21ನೆಯ ಶತಮಾನದ ಅತ್ಯಾಧುನಿಕ ಡಿಜಿಟಲ್‌ಯುಗದಲ್ಲೂ ʼ ಸಾಮಾಜಿಕ ಬಹಿಷ್ಕಾರ ʼ ದಂತಹ ʼ ಅಸ್ಪೃಶ್ಯತೆ ʼಯಂತಹ ಅಮಾನುಷ ಪದ್ಧತಿ ಏಕೆ ಜಾರಿಯಲ್ಲಿದೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಸಾಮಾಜಿಕ ಬಹಿಷ್ಕಾರದ ಹೆಜ್ಜೆಗಳನ್ನು ಗಮನಿಸುವಾಗ ಅಂತರ್‌ಜಾತಿ ವಿವಾಹವೊಂದೇ ಕಾಣುವುದಿಲ್ಲ. ಇದರೊಂದಿಗೆ ಜಾತಿ ಶ್ರೇಷ್ಠತೆ ಮತ್ತು ಪಾರಮ್ಯವನ್ನು ಭಂಗಗೊಳಿಸುವಂತಹ ಮಾನವ ಸಹಜ ನಡವಳಿಕೆಗಳೂ ಕಾಣುತ್ತವೆ. ಎರಡೂ ವಿದ್ಯಮಾನಗಳಲ್ಲಿ ಸಮಾನವಾಗಿ ಕಾಣುವ ಅಂಶವೆಂದರೆ ಮುಟ್ಟುವ ಮತ್ತು ಮುಟ್ಟಬಾರದ ಪರಿಕಲ್ಪನೆಗಳು. ಹಾಗಾಗಿಯೇ ಅಸ್ಪೃಶ್ಯ ಜಾತಿಯ ಮಹಿಳೆ ತನ್ನ ಕುಟುಂಬದೊಳಗೇ ಸಾಮಾಜಿಕ ಬಹಿಷ್ಕಾರವನ್ನು ಮೌನವಾಗಿ ಸಹಿಸಿಕೊಳ್ಳುತ್ತಲೇ ಬಾಹ್ಯ ಸಮಾಜದ ಸಾರ್ವಜನಿಕ ಬಹಿಷ್ಕೃತೆಯಾಗಿಯೂ ಬದುಕಬೇಕಾಗುತ್ತದೆ.
ಸಂಪತ್ತಿನ ಒಡೆತನ, ಉತ್ಪಾದನಾ ಮೂಲಗಳ ಮೇಲಿನ ಹಿಡಿತ ಮತ್ತು ಇದರಿಂದ ಒದಗಿಬರುವ ಸಾಮಾಜಿಕ ಸ್ಥಾನಮಾನಗಳಿಗೂ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿನ ಶ್ರೇಷ್ಠ-ಕನಿಷ್ಠದ ಪರಿಕಲ್ಪನೆಗಳಿಗೂ, ಎಲ್ಲ ಸಮುದಾಯಗಳಲ್ಲೂ ಸಾರ್ವತ್ರಿಕವಾಗಿ ಕಾಣಬಹುದಾದ ಪಿತೃಪ್ರಧಾನತೆಗೂ ಇರುವ ಸಂಕೀರ್ಣ ಸಂಬಂಧವನ್ನು ಮರುಶೋಧಿಸುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಈ ಮೂರೂ ನೆಲೆಗಳನ್ನು ಪ್ರತ್ಯೇಕಿಸಿ ನೋಡಿದಾಗ ಕಾಣುವ ವಾಸ್ತವಗಳಿಗಿಂತಲೂ ಕಠೋರವಾದ ಸತ್ಯಾಸತ್ಯತೆಗಳನ್ನು, ಒಟ್ಟಾಗಿಸಿ ನೋಡಿದಾಗ ಕಾಣಲು ಸಾಧ್ಯ. ಜಾತಿ ವಿನಾಶ ಅಥವಾ ಜಾತಿ ವಿರೋಧಿ ಹೋರಾಟದಲ್ಲಿ ವರ್ಗಪ್ರಜ್ಞೆಯನ್ನು ಪ್ರಧಾನವಾಗಿ ಪರಿಗಣಿಸುವುದೇ ಅಲ್ಲದೆ , ಲಿಂಗ ಸೂಕ್ಷ್ಮತೆಯನ್ನೂ, ಮಹಿಳಾ ಸಂವೇದನೆಯನ್ನೂ ಮೂಡಿಸಲು ಹಾಗೂ ಪಿತೃಪ್ರಧಾನತೆಯನ್ನು ಹೋಗಲಾಡಿಸಲು ನಾವು ನಿರಂತರ ಪ್ರಯತ್ನಗಳನ್ನು ಮಾಡಬೇಕಿದೆ. ಪ್ರತ್ಯೇಕವಾಗಿಯೂ ಪ್ರಧಾನವಾಗಿ ಕಾಣಬಹುದಾದ ಈ ವಿದ್ಯಮಾನಗಳನ್ನು ಒಂದೇ ಆವರಣದಲ್ಲಿಟ್ಟು ನೋಡಿದಾಗ ನಮ್ಮ ಸಮಾಜದ ಅಂತರಂಗವನ್ನು ಸುಲಭವಾಗಿ ಭೇದಿಸಬಹುದು. ಪರಿಹಾರೋಪಾಯಗಳತ್ತ ಯೋಚಿಸಬಹುದು.
-೦-೦-೦-೦-೦-