ಬೆಂಗಳೂರು : ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಆದರೆ ಇದಕ್ಕೆ ಅವರು ಒಪ್ಪಿಗೆ ನೀಡಿಲ್ಲ, ಸಾರಾಸಗಟಾಗಿ ತಳ್ಳಿ ಹಾಕಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ನಡುವೆಯೇ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್‌ಗೆ ಸಂತೋಷ್ ಲಾಡ್ ಶುಭಾಶಯ : ಸಚಿವ ಸ್ಥಾನದ ಬಗ್ಗೆ ಏನಂದ್ರು..?
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಆಗ್ರಹಿಸಿರುವ ಕೊಂಡಜ್ಜಿ, ನಮ್ಮೆಲ್ಲರ ನೆಚ್ಚಿನ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯಸಭೆ ಗೆ ಹೋಗಲು ಮನಸ್ಸು ಮಾಡಬೇಕು ಎಂದು ಅತ್ಯಂತ ವಿನಯವಾಗಿ ಹಾಗೂ ಗೌರವದಿಂದ ಒತ್ತಾಯಿಸುತ್ತೇನೆ. ಅವರು ಅಲ್ಲಿದ್ದುಕೊಂಡು ಲೋಹಿಯಾ ಅವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕು, ತಳಸಮುದಾಯಗಳ ಏಳಿಗೆಗೆ ಶ್ರಮಿಸಬೇಕು. ಇವೆಲ್ಲ ಸಿದ್ಧಾಂತಗಳನ್ನು ಪ್ರಭಲವಾಗಿ ನಂಬಿರುವ ರಾಹುಲ್ ಗಾಂಧಿ ಅವರ ಜೊತೆಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ತಮ್ಮ ತೀರ್ಮಾನವನ್ನು ಮರುಪರಿಶೀಲಿಸುವಂತೆ ಕೋರಿದ್ದೇನೆ. ಅವರು ತಮ್ಮ ನಿರ್ಧಾರ ಬದಲಿಸಿ ರಾಜ್ಯಸಭೆ ಗೆ ಹೋಗುತ್ತಾರೆ, ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ, ಕಾಂಗ್ರೆಸ್ಸಿನ ರಾಷ್ಟ್ರಮಟ್ಟದ ನಾಯಕರಾಗಿ ಜನಸೇವೆಯಲ್ಲಿ ತೊಡಗುತ್ತಾರೆ ಎಂಬ ನಂಬಿಕೆ ನನಗಂತೂ ಇದೆ.
ಶುಭಸಮಾಚಾರಕ್ಕೆ ಕಾದು ನೋಡೋಣ ಎಂದು ಮೋಹನ್ ಕೊಂಡಜ್ಜಿ ಶುಭಕೋರಿದ್ದಾರೆ.






