ರಾಜಧಾನಿ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸುರಕ್ಷತೆ ಕುರಿತು ಹೊಸ ಆತಂಕ ಎದುರಾಗಿದೆ. ನಗರದ ವಿವಿಧ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ಸಾವನ್ನಪ್ಪಿದ ಘಟನೆಗಳ ಬೆನ್ನಲ್ಲೇ, ಜಲಮೂಲಗಳ ಕಲುಷಿತಗೊಳ್ಳುವಿಕೆಯ ಕುರಿತು ನಡೆದ ಅಧ್ಯಯನದಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರು ನಗರದ ಪ್ರಮುಖ ಕೆರೆಗಳಾದ ಜಕ್ಕೂರು, ಯಲಹಂಕ, ಲಕ್ಷ್ಮೀಪುರ, ರಾಮಸಂದ್ರ, ಹೆಸರಘಟ್ಟ, ಹಲಸೂರು, ಮಡಿವಾಳ, ವರ್ತೂರು ಹಾಗೂ ಘಟ್ಟಹಳ್ಳಿ ಕೆರೆಗಳ ನೀರಿನ ಮಾದರಿಗಳನ್ನು ಪರೀಕ್ಷೆ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಕೆಲವು ಕೆರೆಗಳಲ್ಲಿ ಅಪಾಯಕಾರಿ ಹೆವಿ ಮೆಟಲ್‌ಗಳ ಅಂಶಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ವಿಶೇಷವಾಗಿ ವರ್ತೂರು ಕೆರೆ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಂಡಿರುವುದು ಗಮನಕ್ಕೆ ಬಂದಿದ್ದು, ಸಂಸ್ಕರಿಸದ ತ್ಯಾಜ್ಯ ನೀರು ಹಾಗೂ ಕೈಗಾರಿಕಾ ಮಲಿನ ಕೆಸರು (ಸ್ಲಡ್ಜ್) ಕೆರೆಗಳಿಗೆ ಸೇರುತ್ತಿರುವುದು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೆರೆಗಳ ಮಾಲಿನ್ಯವು ಮೇಲ್ಮೈ ನೀರಿಗೆ ಮಾತ್ರ ಸೀಮಿತವಾಗದೆ, ಅಂತರ್ಜಲದ ಮೇಲೆಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ಅಧ್ಯಯನ ಸೂಚಿಸಿದೆ. ಕೆರೆಗಳ ಸುತ್ತಮುತ್ತಲಿನ ಕೆಲವು ಬೋರ್‌ವೆಲ್‌ಗಳ ನೀರಿನ ಗುಣಮಟ್ಟದ ಕುರಿತು ಸಹ ಆತಂಕ ವ್ಯಕ್ತವಾಗಿದ್ದು, ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ನಗರದ ಒಳಚರಂಡಿ ವ್ಯವಸ್ಥೆ, ಕೈಗಾರಿಕಾ ತ್ಯಾಜ್ಯ ನಿರ್ವಹಣೆ ಹಾಗೂ ಜಲಮೂಲಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಸರ ತಜ್ಞರು ಒತ್ತಾಯಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ನೀರಿನ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.






