ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಮುಂದುವರೆದಿದೆ. ನಿನ್ನೆಯಷ್ಟೇ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ನಡುವರಸ್ತೆಯಲ್ಲೇ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಮೊಟ್ಟೆ ಹಾಗೂ ಕಲ್ಲು ತೂರಾಟ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ದೌರ್ಜನ್ಯ ನಡೆಸಿದ್ದರು.

ಆದರೆ ಇದಾದ ಬಳಿಕ ಇಂದು ಇನ್ನೊಬ್ಬ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿಯಾಗಿದ್ದು, ತಲೆಗೆ ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ. ಚುನಾವಣೆ ಬಳಿಕ ಟಿಎಂಸಿ ಕಾರ್ಯಕರ್ತರ ಸರಣಿ ಬಂಧನ ವಿರೋಧಿಸಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂಡಿತಾಲ ಪೊಲೀಸ್ ಠಾಣೆ ಎದುರು ಟಿಎಂಸಿ ಪಕ್ಷದ ನಿಯೋಗ ಪ್ರತಿಭಟನೆ ನಡೆಸುತ್ತಿತ್ತು.
ಈ ವೇಳೆ ಕೆಲ ಪ್ರತಿಭಟನಾಕಾರರು ಕಪ್ಪು ಧ್ವಜ ತೋರಿಸಿ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ “ಕಳ್ಳರು” ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ : “ಈ ಅಭಿವೃದ್ಧಿಯ ಬಂಡಿ ಮುಂದಕ್ಕೆ ಎಳೆಯುವ ಜವಾಬ್ದಾರಿ ನಿಮ್ಮ ಹೆಗಲಿಗಿದೆ, ಆ ಬದ್ದತೆ, ಸಾಮರ್ಥ್ಯ ಮುನ್ನೋಟ ನಿಮ್ಮಲ್ಲಿದೆ”
“ನಾನು ಒಬ್ಬಂಟಿಯಾಗಿ ಬರುತ್ತಿದ್ದೆ, ನನ್ನೊಂದಿಗೆ ಯಾರೂ ಇರಲಿಲ್ಲ. ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳನ್ನು ಬಳಸಿ ನನ್ನ ತಲೆಗೆ ಡ್ಯೂಸ್ ಚೆಂಡಿನಿಂದ ಹಲ್ಲೆ ಮೇಲೆ ನಡೆಸಿದರು. ನನ್ನ ತಲೆಯಲ್ಲಿ ರಕ್ತಸ್ರಾವವಾಗುತ್ತಿದೆ, ಈಗ ಸಂಸದರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವುದು ಸರಿಯೋ ತಪ್ಪೋ ಎಂದು ಜನರು ನಿರ್ಧರಿಸುತ್ತಾರೆ ಎಂದು ದಾಳಿಯ ಬಳಿಕ ಕಲ್ಯಾಣ್ ಬ್ಯಾನರ್ಜಿ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಬ್ಯಾನರ್ಜಿ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮುಂದಿನ ಬಾರಿ ತಮ್ಮ ನಾಟಕವನ್ನು ಚೆನ್ನಾಗಿ ಕಲಿತುಕೊಳ್ಳಬೇಕಿದೆ. ಬಿಜೆಪಿ ಕಾರ್ಯಕರ್ತರು ತಮ್ಮನ್ನು ಹೊಡೆದಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ತಕ್ಷಣವೇ ಅವರು ನಾಟಕೀಯವಾಗಿ ನೆಲಕ್ಕೆ ಬಿದ್ದು, ಕಿವಿಗೆ ಫೋನ್ ಒತ್ತಿಕೊಂಡು ಮಾತನಾಡುತ್ತಲೇ ಇದ್ದಾರೆ ಎಂದು ಬ್ಯಾನರ್ಜಿ ನಡೆಯನ್ನು ಟೀಕಿಸಿದೆ.






