ಕೋಲಾರ :ಮಾ;20; ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ನನಗೆ ಗೊತ್ತಿತ್ತು. ಸರ್ವೇ ರಿಪೋರ್ಟ್ ತೆಗೆದುಕೊಂಡಿದ್ದಾರೆ. ಅವರಿಗೆ ಕೋಲಾರ ಕ್ಷೇತ್ರ ಪೂರಕವಾಗಿಲ್ಲ, ಹಾಗಾಗಿ ಚುನಾವಣೆಯಲ್ಲಿ ಗೆಲ್ಲಲು ಆಗಲ್ಲ ಅಂತ ಗೊತ್ತಾಗಿದೆ. ಅದಕ್ಕಾಗಿ ಅವರು ಹೈಕಮಾಂಡ್ ಹೇಗೆ ಹೇಳಿದರೆ ಹಾಗೆ ಎಂದು ಹೇಳುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ವಿಚಾರದಲ್ಲಿ ಅವರೇ ಹೈಕಮಾಂಡ್ ಹೊರತು ಕಾಂಗ್ರೆಸ್ ಪಕ್ಷವಲ್ಲ. ಎಲ್ಲಿ ಸ್ಪರ್ಧೆ ಮಾಡಬೇಕು ಅಂದ್ರೆ ಅಲ್ಲಿ ಸ್ಪರ್ಧೆ ಮಾಡುವ ಶಕ್ತಿ ಅವರಿಗಿದೆ. ಕೋಲಾರದಲ್ಲಿ ಗೆಲ್ಲೋಕೆ ಆಗಲ್ಲ ಅಂತೇಳಿ ಬೇರೆ ಕಡೆ ಹೋಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿಯಾದರೆ ಕೋಲಾರ ಜಿಲ್ಲೆ ಅಭಿವೃದ್ಧಿಯಾಗುತ್ತೆ ಅಂತ ಸಿದ್ದರಾಮಯ್ಯಗೆ ಘಟಬಂಧನ್ ನಾಯಕರು ಹೇಳಿದ್ದಾರೆ. ಆದ್ರೆ ವಾಸ್ತವಾಂಶ ಅದಲ್ಲ. ಸಿದ್ದರಾಮಯ್ಯ ಕೋಲಾರಕ್ಕೆ ಬರುವುದರಿಂದ ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬಹುದು ಅಂತ ಪ್ಲಾನ್ ಮಾಡಿದ್ದರು. ಆದ್ರೆ ಘಟಬಂಧನ್ ಅವರ ಪ್ಲಾನ್ ಫ್ಲಾಪ್ ಆಗಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಬರದಿದ್ರೆ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ವರ್ತೂರು ಪ್ರಕಾಶ್, ಸಿದ್ದರಾಮಯ್ಯ ದೊಡ್ಡವರಾ? ಬ್ಯಾಲಹಳ್ಳಿ ದೊಡ್ಡವರಾ? ಯಾಕಂದ್ರೆ ದೊಡ್ಡವರಾದ ಸಿದ್ದರಾಮಯ್ಯ ಅವರೇ ನನ್ನ ವಿರುದ್ಧ ಸ್ಪರ್ಧಿಸುತ್ತಿಲ್ಲ. ಇನ್ನು ಬ್ಯಾಲಹಳ್ಳಿ ಗೋವಿಂದಗೌಡರು ಯಾವ ಲೆಕ್ಕ. ಕಾಂಗ್ರೆಸ್ ಪಕ್ಷದಿಂದ ನನ್ನ ವಿರುದ್ಧ ಯಾರೇ ಸ್ಪರ್ಧಿಸಲಿ. ನನಗೆ ಯಾವುದೇ ಸಮಸ್ಯೆಯಿಲ್ಲ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತಿದೆ. ಹಾಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳೆಯರಿಗೆ ಸಾಲ ಕೊಟ್ಟಿದ್ದಾರೆ. ಆದ್ರೆ ಮತಗಳನ್ನು ಪಡೆಯಲು ಆಗುವುದಿಲ್ಲ. ಒಂದು ವೇಳೆ ಟಿಕೆಟ್ ಕೊಟ್ಟರೂ ಎದುರಿಸಲು ನಾನು ಸಿದ್ಧನಿದ್ದೇನೆ. ಸಿದ್ದರಾಮಯ್ಯ ಬಂದಾಗ ಯಾರ್ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರೋ ಅವರೆಲ್ಲಾ ಈಗ ನನ್ನ ಸಂಪರ್ಕಕ್ಕೆ ಬಂದಿದ್ದಾರೆ. ಇನ್ನೊಂದು ವಾರದಲ್ಲಿ ಸಂಪೂರ್ಣವಾಗಿ ನನ್ನ ಕಡೆ ಇರುತ್ತಾರೆ. ಈಗಾಗಲೇ ಕ್ಷೇತ್ರದಲ್ಲಿ ನಾನು ಚುನಾವಣೆ ನಡೆಸಿದ್ದೇನೆ. ನಮ್ಮ ಕಾರ್ಯಕರ್ತರು ಮತ ಹಾಕುವುದು ಮಾತ್ರ ಬಾಕಿ ಅಷ್ಟೇ ಎಂದರು.