ಮುಂಬೈ : ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಪ್ರಕರಣದ ನಂತರ ಮುಂಬೈ ಪೊಲೀಸರು ನಟ ಸಲ್ಮಾನ್ ಖಾನ್ (Salman Khan) ಅವರ ಬಾಂದ್ರಾ ನಿವಾಸದ ಸುತ್ತ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಅನಿಲ್ ಪಂಡಿತ್ ಎಂಬಾತ ಸಲ್ಮಾನ್ ಖಾನ್ ಜೊತೆ ಸಂಪರ್ಕದಲ್ಲಿರುವ ಬಾಲಿವುಡ್ ಗಣ್ಯರಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಗೂ ಬಿಗಿ ಕಾವಲು ನಿಯೋಜಿಸಲಾಗಿದೆ.
ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಸುತ್ತ ಸಂಚಾರ ನಿರ್ಬಂಧ
ಬುಧವಾರದಿಂದಲೇ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿ ಮೆಷಿನ್ ಗನ್ ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳೊಂದಿಗೆ ಹದ್ದಿನ ಕಣ್ಣಿಟ್ಟಿದ್ದಾರೆ. ನಟನನ್ನು ನೋಡಲು ಅಪಾರ್ಟ್‌ಮೆಂಟ್ ಎದುರು ಜಮಾಯಿಸುತ್ತಿದ್ದ ಅಭಿಮಾನಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಕಟ್ಟಡದ ಮುಂಭಾಗ ವಾಹನಗಳನ್ನು ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಟನ ಮನೆಯ ಕಿಟಕಿಗಳಿಗೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಶೂಟರ್‌ಗಳ ಮೂಲ ಗುರಿ ಸಲ್ಮಾನ್ ಖಾನ್ ಆಗಿದ್ದರು
ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ‘ವೈ-ಪ್ಲಸ್’ (Y-Plus) ಶ್ರೇಣಿಯ ಭದ್ರತೆ ಇದೆ. ಮೂಲಗಳ ಪ್ರಕಾರ, ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳ ಮೂಲ ಗುರಿ ಸ್ವತಃ ಸಲ್ಮಾನ್ ಖಾನ್ ಆಗಿದ್ದರು. ದಾಳಿಕೋರರು ಸಲ್ಮಾನ್ ಅವರ ನಿವಾಸದ ಸುತ್ತ ಪರಿಶೀಲನೆ (ರೆಕ್ಕಿ) ನಡೆಸಿದ್ದರಾದರೂ, ಅಲ್ಲಿನ ಬಿಗಿ ಭದ್ರತೆಯನ್ನು ಭೇದಿಸಲು ಸಾಧ್ಯವಾಗದೆ ತಮ್ಮ ಯೋಜನೆಯನ್ನು ಕೈಬಿಟ್ಟಿದ್ದರು. ನಂತರ ಟೈಗರ್ ಶ್ರಾಫ್ ಅವರ ಸಾಮಾಜಿಕ ಜಾಲತಾಣದ ಚಲನವಲನಗಳನ್ನು ಗಮನಿಸಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ರೋಹಿತ್ ಶೆಟ್ಟಿ, ಶಾರುಖ್ ಹಾಗೂ ಆಮಿರ್ ಖಾನ್‌ಗೂ ಭದ್ರತೆ ಹೆಚ್ಚಳ
ಬೆದರಿಕೆ ಹಿನ್ನೆಲೆಯಲ್ಲಿ ರೋಹಿತ್ ಶೆಟ್ಟಿ, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಅವರ ಸುರಕ್ಷತೆಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ತಮ್ಮ ಮನೆಯ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಶಾರುಖ್ ಖಾನ್ ಸದ್ಯ ಪಾಲಿ ಹಿಲ್‌ನಲ್ಲಿ ನೆಲೆಸಿದ್ದರೆ, ಆಮಿರ್ ಖಾನ್ ಪಾಲಿ ಹಿಲ್‌ನಿಂದ ಕೊಲಾಬಾ ಪ್ರದೇಶಕ್ಕೆ ವಾಸ್ತವ್ಯ ಬದಲಾಯಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ನಿಕಟ ಸಂಪರ್ಕ ಹೊಂದಿರುವ ಚಿತ್ರರಂಗದ ಪ್ರಮುಖರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಅಪಾಯವಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ಗಸ್ತು ತೀವ್ರಗೊಳಿಸಿದ್ದಾರೆ.
ಬಿಗ್ ಬಾಸ್ 20 ‘ವೀಕೆಂಡ್ ಕಾ ವಾರ್’ಗೆ ಸಲ್ಮಾನ್ ಗೈರು ಸಾಧ್ಯತೆ
ಸುರಕ್ಷತಾ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸಲ್ಮಾನ್ ಖಾನ್ ಮುಂಬೈ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಾರಿಯ ‘ಬಿಗ್ ಬಾಸ್ 20’ ಕಾರ್ಯಕ್ರಮದ ‘ವೀಕೆಂಡ್ ಕಾ ವಾರ್’ ಸಂಚಿಕೆಯನ್ನು ಸಲ್ಮಾನ್ ಬದಲಿಗೆ ನಿರ್ದೇಶಕ ರೋಹಿತ್ ಶೆಟ್ಟಿ ನಿರೂಪಣೆ ಮಾಡಲಿದ್ದಾರೆ ಎಂದು ಖಚಿತಪಟ್ಟಿದೆ. ಆದರೆ, ತಾವು ಮೊದಲೇ ನಿಗದಿಪಡಿಸಿಕೊಂಡಿದ್ದ ಇತರ ಕಾರ್ಯಕ್ರಮಗಳ ಕಾರಣದಿಂದ ಈ ವಾರದ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ-2026: ಮತದಾನಕ್ಕೆ ಈ 10 ಪರ್ಯಾಯ ಗುರುತಿನ ಚೀಟಿಗಳ ಬಳಕೆಗೆ ಅವಕಾಶ






