ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಆಯೋಜಿಸಿದ್ದ ಬೃಹತ್ ಡ್ರೋನ್ ಪ್ರದರ್ಶನವು ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಈ ಮಹತ್ವದ ಸಾಧನೆ ಹಾಗೂ ನಗರದೆಲ್ಲೆಡೆ ಕಣ್ಮನ ಸೆಳೆದ ಆಕರ್ಷಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (K.J. George) ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಜಂಬೂಸವಾರಿ ಮೆರವಣಿಗೆ ಹಾಗೂ ಡ್ರೋನ್ ಶೋ ವೀಕ್ಷಿಸಿದ ಸಚಿವರು, ದಸರಾ ವೈಭವವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಂಧನ ಇಲಾಖೆ ಹಾಗೂ ಸೆಸ್ಕ್ ಅಧಿಕಾರಿ-ಸಿಬ್ಬಂದಿಯ ಶ್ರಮ ಅನನ್ಯವಾದುದು ಎಂದು ಪ್ರಶಂಸಿಸಿದರು.
3,473 ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಮೂಡಿದ ನವಿಲಿನ ಕಲಾಕೃತಿ
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಡ್ರೋನ್ ಪ್ರದರ್ಶನದಲ್ಲಿ ಒಟ್ಟು 12 ಆಕರ್ಷಕ ದೃಶ್ಯಗಳು ಮೂಡಿಬಂದು ಲಕ್ಷಾಂತರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಪ್ರಮುಖವಾಗಿ 3,473 ಡ್ರೋನ್‌ಗಳನ್ನು ಬಳಸಿಕೊಂಡು ಆಕಾಶದಲ್ಲಿ ನಿರ್ಮಿಸಲಾದ ಬೃಹತ್ ನವಿಲಿನ ಕಲಾಕೃತಿಯು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಯಿತು. ಕಳೆದ ವರ್ಷ ಹುಲಿಯ ಚಿತ್ರಣದೊಂದಿಗೆ ದಾಖಲೆ ನಿರ್ಮಿಸಿದ್ದ ಸೆಸ್ಕ್, ಈ ಬಾರಿ ನವಿಲಿನ ಚಿತ್ತಾರದ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸಾಂಸ್ಕೃತಿಕ ನಗರಿಗೆ ವಿದ್ಯುತ್ ದೀಪಾಲಂಕಾರದ ಮೆರುಗು
ಮೈಸೂರಿನ 146 ಕಿಲೋಮೀಟರ್ ಉದ್ದದ ರಸ್ತೆಗಳು, 123 ವೃತ್ತಗಳು ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಬಣ್ಣಬಣ್ಣದ ದೀಪಗಳಿಂದ 80ಕ್ಕೂ ಹೆಚ್ಚು ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಿರುವುದು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಉತ್ಸವದ ಅವಧಿಯಲ್ಲಿ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸಿದ್ದರೂ ಯಾವುದೇ ತಡೆ ಇಲ್ಲದೆ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ತಾಂತ್ರಿಕ ಸಮನ್ವಯತೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯಶಸ್ಸಿಗೆ ಕಾರಣರಾದ ಸೆಸ್ಕ್ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಸಚಿವರು ಅಭಿನಂದಿಸಿದರು.
ಅಕ್ಟೋಬರ್ 31ರವರೆಗೆ ಮುಂದುವರಿಯಲಿರುವ ದೀಪಾಲಂಕಾರ
ಮುಖ್ಯಮಂತ್ರಿಗಳು ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ದೀಪಾಲಂಕಾರ ಮತ್ತು ಡ್ರೋನ್ ಶೋ ಅತ್ಯಂತ ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಈ ಅದ್ಭುತ ವಿದ್ಯುತ್ ದೀಪಾಲಂಕಾರವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದ್ದು, ಪ್ರತಿಯೊಬ್ಬರೂ ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಪಟಾಕಿ ಸಿಡಿತ : ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಆಕ್ರೋಶ





