ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ವಿವರಿಸುವ ಬಿಬಿಸಿ ಸಾಕ್ಷ್ಯಚಿತ್ರವನ್ನು ವಿರೋಧ ಪಕ್ಷಗಳು, ವಿವಿಧ ಹೋರಾಟಗಾರರು ದೇಶದ ಹಲವೆಡೆ ಪ್ರದರ್ಶಿಸಿದ್ದಾರೆ. ಕೇಂದ್ರ ಸರ್ಕಾರವು ಬಿಬಿಸಿ ಸಾಕ್ಷ್ಯಚಿತ್ರವನ್ನು ಸುಳ್ಳು ಮತ್ತು ಅಜೆಂಡಾ ಎಂದು ಹೇಳಿ ನಿಷೇಧಿಸಿದೆಯಾದರೂ, ವಿರೋಧ ಪಕ್ಷಗಳು ದೇಶದ ಹಲವೆಡೆ ಅದನ್ನು ಪ್ರದರ್ಶಿಸಿದೆ.
ಇದೇ ಹಿನ್ನೆಲೆಯಲ್ಲಿ ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಕೆ ಆಂಟನಿ ಅವರು ಪಕ್ಷದ ನಿಲುವನ್ನು ಧಿಕ್ಕರಿಸಿ ರಾಜಿನಾಮೆ ಕೊಟ್ಟಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ದೇಶದ ಸಂಸ್ಥೆಗಳ ಬಗ್ಗೆ ಅತ್ಯಂತ ಅಪಾಯಕಾರಿ ಅಭಿಪ್ರಾಯ ಮೂಡಿಸುತ್ತದೆ ಹಾಗೂ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರವನ್ನು ಅಪಾಯಕಾರಿ, ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂಬ ಅನಿಲ್ ಆಂಟೋನಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ತಿರುವನಂತಪುರಂನ ಲೋಕಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಅನಿಲ್ ಅವರ ವಾದವು “ಅಪ್ರಬುದ್ಧ” ಎಂದು ಹೇಳಿದ್ದಾರೆ.
ಬಿಬಿಸಿಯ ಡಾಕ್ಯುಮೆಂಟರಿಯನ್ನು ನೋಡಬೇಕೋ ನೋಡಬಾರದೋ ಎಂಬ ಆಯ್ಕೆಯ ಸ್ವಾತಂತ್ರ್ಯ ದೇಶದ ಜನಕ್ಕೆ ಇದೆ. ಯಾವುದೇ ವಿಷಯದ ಬಗ್ಗೆ ಡಾಕ್ಯುಮೆಂಟರಿ ಮಾಡುವ ಹಕ್ಕು ಬ್ರಿಟೀಶ್ ಪ್ರಸಾರ ಸಂಸ್ಥೆಗೆ ಇಲ್ಲ ಎಂದು ಯಾರು ಹೇಳಲು ಸಾಧ್ಯ? ಡಾಕ್ಯುಮೆಂಟರಿ ವೀಕ್ಷಿಸುವುದಕ್ಕೆ ದೇಶದ ಸಂವಿಧಾನ ಎಲ್ಲಾ ರೀತಿಯ ಹಕ್ಕನ್ನು ನೀಡಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
“ಅನಿಲ್ ದೃಷ್ಟಿಕೋನವನ್ನು ನಾನು ಒಪ್ಪುವುದಿಲ್ಲ. ಅವರದು ಅಪಕ್ವ ನಿಲುವು. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಸಾಕ್ಷ್ಯಚಿತ್ರದಿಂದ ಧಕ್ಕೆಯಾಗುವಷ್ಟು ದುರ್ಬಲವಾಗಿದೆಯೇ?” ಎಂದು ತರೂರ್ ಪ್ರಶ್ನಿಸಿದ್ದಾರೆ.