ಚಿತ್ರದುರ್ಗದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಪ್ರತಿಭಟನೆ ನಡೆಸಲಾಗಿದೆ. ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಪ್ರವಾಸಿ ಮಂದಿರದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಮಾಡಿರುವ ಅಭಿಮಾನಿಗಳು, MLC ಸಿಟಿ ರವಿಯನ್ನು ಗಲ್ಲಿಗೇರಿಸಿ ಎಂದು ಆಗ್ರಹ ಮಾಡಿದ್ದಾರೆ. ಕೂಡಲೇ MLC ಸಿಟಿ ರವಿಯವರನ್ನು ಶಾಸಕ ಸ್ಥಾನದಿಂದ ವಜಾಮಾಡಬೇಕು ಎಂದು ಜಿಲ್ಲಾಧಿಕಾರಿ ರಾಜ್ಯಪಾಲರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ಪರಿಷತ್ ಸಭಾಪತಿಗಳಿಗೆ ಮನವಿ ಪತ್ರ ರವಾನೆ ಮಾಡಿದ್ದಾರೆ.
ಬೆಳಗಾವಿಯಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದು, ಸಿ ಟಿ ರವಿ ವಜಾಗೆ ಆಗ್ರಹಿಸಿ ಡಿಸಿ ಮೂಲಕ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ, ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್, ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಡಿಸಿ ಮಹ್ಮದ್ ರೋಷನ್ ಮೂಲಕ ಮನವಿ ಸಲ್ಲಿಸಿದ್ದಾರೆ ಹೆಬ್ಬಾಳ್ಕರ್ ಅಭಿಮಾನಿಗಳು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅವಹೇಳನಕಾರಿ ಪದ ಬಳಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಷ್ಟೇ ಅಲ್ಲ ಇಡೀ ಮಹಿಳಾ ಕುಲಕ್ಕೆ ಸಿ.ಟಿ ರವಿ ಮಾತಿನಿಂದ ಅವಮಾನವಾಗಿದೆ. ಈ ಕಾರಣಕ್ಕೆ ಸಿ.ಟಿ ರವಿ ವಜಾ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಸದನದಲ್ಲಿ ಸಿಟಿ ರವಿ ಅಶ್ಲೀಲ ಪದ ಬಳಕೆ ಮತ್ತು ಬಂಧನ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿರುವ ಸಭಾಪತಿ ಬಸವರಾಜ ಹೊರಟ್ಟಿ, ನಮ್ಮಲ್ಲಿ ಈ ಹಿಂದೆ ಮೂವತ್ತು ವರ್ಷದಿಂದ ಒಂದು ಕಾನೂನು ಇತ್ತು. ಜನಪ್ರತಿನಿಧಿ ಯಾರೇ ತಪ್ಪು ಮಾಡಿದ್ರು ಮೊದಲು ಗಮನಕ್ಕೆ ತಂದು ಬಂಧನ ಮಾಡ್ತಿದ್ರು. ಆದ್ರೀಗ ಮೊದಲು ಬಂಧಿಸಿ ಆಮೇಲೆ ಯಾವ ಸೆಕ್ಷನ್ ಹಾಕಿ ಬಂಧಿಸಿದ್ದೀವಿ ಅಂತಾ ತಿಳಿಸ್ತಾರೆ. ಅಶ್ಲೀಲ ಪದ ಬಳಕೆ ವಿಚಾರದಲ್ಲಿ ನಾವು ನಮ್ಮದೆ ಚಾನೆಲ್ ಹಾಗೂ ಸೋರ್ಸ್ ಮೂಲಕ ನಾಲ್ಕು ಜನ ಸೇರಿ ಪರಿಶೀಲನೆ ಮಾಡಿದ್ದೀವಿ. ಆದರೆ ಯಾವುದೇ ಆಡಿಯೋ ವಿಡಿಯೋ ಸಿಗಲಿಲ್ಲ ಎಂದಿದ್ದಾರೆ.
ಇನ್ನು ನಾವು ಹುಡುಕಿದಾಗ ಸಿಗಲಿಲ್ಲ, ಈಗ ಅವ್ರು ಬೇರೆ ಬೇರೆ ಚಾನೆಲ್ನಲ್ಲಿ ಬಂದಿದೆ ಅಂತಾ ದೂರು ಕೊಟ್ಟವರೆ. ಇನ್ನು ಕಾಲ ಮಿಂಚಿಲ್ಲ, ಅವುಗಳನ್ನು ಪರಿಶೀಲನೆ ಮಾಡ್ತೀವಿ, ಆ ರೀತಿ ಇದ್ದರೆ ಕ್ರಮ ಕೈಗೊಳ್ತಿವಿ ಅಂತಾ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಸಭಾಪತಿಗಳು ತೆಗೆದುಕೊಂಡ ನಿರ್ಧಾರ ಸರಿಯಿಲ್ಲ. ಸದನದಲ್ಲಿ ಹೇಳಿದ ಬಳಿಕ ಆ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡಬೇಕಿತ್ತು. ಸಭಾಪತಿ ಯಾವುದೇ ಪಕ್ಷದ ಪರ ಇರಲ್ಲ. ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕಿತ್ತು. ಅವರ ಕಾರ್ಯವೈಖರಿ ನನಗೆ ಇಷ್ಟ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.