ಹಿಂಡೆನ್ಬರ್ಗ್ ರಿಸರ್ಚ್ ವರದಿಯ ವಿರುದ್ಧ ಅಮೇರಿಕ ಮತ್ತು ಭಾರತೀಯ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅದಾನಿ ಸಮೂಹ ಹೇಳಿದ ಬೆನ್ನಲ್ಲೇ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆಯು ತನ್ನ ವರದಿಯನ್ನು ಸಮರ್ಥಿಸಿದೆ. ಅಲ್ಲದೆ, ತಾನು ಯಾವುದೇ ರೀತಿಯ ಕಾನೂನು ಕ್ರಮವನ್ನು ಎದುರಿಸುತ್ತೇವೆ, ಸಾಧ್ಯವಿದ್ದರೆ ಅಮೆರಿಕಾದಲ್ಲೂ ನಮ್ಮ ವಿರುದ್ಧ ಮೊಕದ್ದೆ ಹೂಡಲಿ ಎಂದು ಸವಾಲು ಹಾಕಿದೆ.
ಅದಾನಿ ಗ್ರೂಪ್ ವಿರುದ್ಧ ಹಲವು ಆರೋಪಗಳನ್ನು ಹೊಂದಿರುವ ಹಿಂಡೆನ್ಬರ್ಗ್ ವರದಿ ಬಿಡುಗಡೆಯಾದ ಬೆನ್ನಲ್ಲೇ ಕಂಪೆನಿಯ ಷೇರುಗಳ ಮೇಲೆ ನೇರ ಪರಿಣಾಮ ಬೀರಿದ್ದು, ಅದಾನಿ ಗ್ರೂಪ್ ಷೇರು ಬೆಲೆಗಳು ಭಾರೀ ಕುಸಿದಿವೆ.
ಅದಾನಿ ಗ್ರೂಪ್ನ ಏಳು ಕಂಪೆನಿಗಳಲ್ಲಿ ಒಂದೇ ದಿನ ರೂ 46,086 ಕೋಟಿ ಕಳೆದುಕೊಂಡಿದೆ. ಅದಾನಿ ಟೋಟಲ್ ಗ್ಯಾಸ್ ರೂ. 12,366 ಕೋಟಿ ಕಳೆದುಕೊಂಡಿದ್ದರೆ ಅದಾನಿ ಪೋರ್ಟ್ಸ್ ರೂ 8,342 ಕೋಟಿ ಹಾಗೂ ಅದಾನಿ ಟ್ರಾನ್ಸ್ಮಿಷನ್ ರೂ 8,039 ಕೋಟಿ ಕಳೆದುಕೊಂಡಿದೆ.
ಒಂದೇ ಒಂದು ತನಿಖಾ ವರದಿಗೆ ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬರಾದ ಗೌತಮ್ ಅದಾನಿಯ ಉದ್ಯಮ ಸಾಮ್ರಾಜ್ಯ ನಲುಗಿ ಹೋಗಿದೆ. ವರದಿ ಹೊರಬಿದ್ದ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಏಷ್ಯಾದ ನಂ.1 ಶ್ರೀಮಂತರೂ ಆಗಿರುವ ಅದಾನಿ ಭಾರೀ ನಷ್ಟ ಅನುಭವಿಸಿದ್ದಾರೆ. ಅವರ ಸಂಪತ್ತು ಬುಧವಾರ 6.2 ಬಿಲಿಯನ್ ಡಾಲರ್ ಇಳಿಕೆಯಾಗಿದ್ದು 119 ಬಿಲಿಯನ್ ಡಾಲರ್ಗೆ ಕುಸಿದಿದೆ. ಈ ಮೂಲಕ ಅವರು ನಾಲ್ಕನೇ ಸ್ಥಾನಕ್ಕೆ ಜಾರಿದ್ದು ಜೆಫ್ ಬೆಜೋಸ್ (120 ಬಿಲಿಯನ್ ಡಾಲರ್) ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಈ ಬೆಳವಣಿಗೆಗೆ ಕಾರಣವಾದ ಹಿಂಡೆನ್ಬರ್ಗ್ ಸಂಶೋಧನಾ ವರದಿಯನ್ನು ಎರಡು ವರ್ಷಗಳ ಕೂಲಂಕಷ ಅಧ್ಯಯನ ಮತ್ತು ತನಿಖೆಯ ನಂತರ ಈ ಫೊರೆನ್ಸಿಕ್ ಫಿನಾನ್ಶಿಯಲ್ ರಿಸರ್ಚ್ ಸಂಸ್ಥೆ ಸಿದ್ಧಪಡಿಸಿದೆ. ಈ ಕುರಿತು ಹಿಂಡೆನ್ಬರ್ಗ್ ರಿಸರ್ಚ್ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದೆ.
“ನಾವು ನಮ್ಮ ವರದಿಯನ್ನು ಬಿಡುಗಡೆ ಮಾಡಿದ 36 ಗಂಟೆಗಳಲ್ಲಿ, ಅದಾನಿ ನಾವು ಎತ್ತಿದ ಒಂದೇ ಒಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿಲ್ಲ. ನಮ್ಮ ವರದಿಯ ಕೊನೆಯಲ್ಲಿ, ಕಂಪನಿಯು ಪಾರದರ್ಶಕವಾಗಿರಲು ಅವಕಾಶವನ್ನು ನೀಡುತ್ತದೆ ಎಂದು ನಾವು ನಂಬುವ 88 ನೇರ ಪ್ರಶ್ನೆಗಳನ್ನು ಕೇಳಿದ್ದೇವೆ. ಇಲ್ಲಿಯವರೆಗೆ, ಅದಾನಿ ಈ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಬದಲಾಗಿ, ನಿರೀಕ್ಷೆಯಂತೆ, ಅದಾನಿ ಬೊಬ್ಬಿಡಲು ಮತ್ತು ಬೆದರಿಕೆಗಳನ್ನು ಆಶ್ರಯಿಸಿದ್ದಾರೆ. ಇಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಅದಾನಿ ನಮ್ಮ ವರದಿಯನ್ನು “ಸಂಶೋಧನೆ ಮಾಡದ” (ವರದಿ) ಎಂದು ಉಲ್ಲೇಖಿಸಿದ್ದಾರೆ ಮತ್ತು ಅದು ನಮ್ಮ ವಿರುದ್ಧ ಪರಿಹಾರ ಮತ್ತು ದಂಡನಾತ್ಮಕ ಕ್ರಮಕ್ಕಾಗಿ ಯುಎಸ್ ಮತ್ತು ಭಾರತೀಯ ಕಾನೂನುಗಳ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಿದೆ. ಕಂಪನಿಯ ಕಾನೂನು ಕ್ರಮದ ಬೆದರಿಕೆಗಳಿಗೆ ಸಂಬಂಧಿಸಿದಂತೆ, ಸ್ಪಷ್ಟವಾಗಿ ಹೇಳಬೇಕೆಂದರೆ, ನಾವು ಅದನ್ನು ಸ್ವಾಗತಿಸುತ್ತೇವೆ. ನಾವು ಸಂಪೂರ್ಣವಾಗಿ ನಮ್ಮ ವರದಿಗೆ ಬದ್ಧರಾಗಿರುತ್ತೇವೆ ಮತ್ತು ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವು ಅರ್ಹವಲ್ಲ ಎಂದು ನಂಬುತ್ತೇವೆ. ಅದಾನಿ ಈ ವಿಚಾರದಲ್ಲಿ ಗಂಭೀರವಾಗಿದ್ದರೆ, ನಾವು ಕಾರ್ಯನಿರ್ವಹಿಸುವ ಅಮೆರಿಕದಲ್ಲಿಯೂ ಮೊಕದ್ದಮೆ ಹೂಡಬೇಕು.” ಎಂದು ತನ್ನ ಹೇಳಿಕೆಯಲ್ಲಿ ಸಂಸ್ಥೆಯು ಹೇಳಿದೆ.