ಆಸ್ತಿಗಾಗಿ ಕೊಲೆ ಮಾಡಿದ ಶೃಧ್ಧಾನಂದ ಸ್ವಾಮಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ಅವರು ತಮ್ಮ ವಯಸ್ಸಿನ ಕಾರಣ ಮುಂದಿಟ್ಟು ತಮಗೆ ಸೆರೆವಾಸ ಮುಕ್ತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಮಾಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಶಕೀರಾ ನಮಾಜಿ ಖಲೀಲಿ ಅವರ ಕೊಲೆ ಪ್ರಕರಣದ ಮುಖ್ಯ ಅಪರಾಧಿ ಸ್ವಘೋಷಿತ ಸ್ವಾಮೀಜಿ ಈ ಶೃದ್ಧಾನಂದ. ಆ ಸಮಯದಲ್ಲಿ ಈ ಕೊಲೆ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಈ ಅಪರಾಧಕ್ಕೆ ಶೃದ್ಧಾನಂದನಿಗೆ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾರೆ. ಈಗ ರಾಷ್ಟ್ರಪತಿಗಳು ಕ್ಷಮಾದಾನ ನೀಡುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ.
ಈ ಕುರಿತಾಗಿ ‘ಪ್ರತಿಧ್ವನಿ’ ಕ್ರಿಮಿನಲ್ ವಕೀಲರ ಅಭಿಪ್ರಾಯಗಳನ್ನು ಪಡೆದುಕೊಂಡಿತು. ಶೃದ್ಧಾನಂದನ ಪರ ಡಿಫೆನ್ಸ್ ಮಾಡಿದ್ದ ರಾಜ್ಯದ ಖ್ಯಾತ ಕ್ರಿಮಿನಲ್ ವಕೀಲ ಸಿ.ಎಚ್ ಹನುಮಂತರಾಯರು ಈ ಕೇಸ್ ಬಗ್ಗೆ ನೀಡಿದ ವಿವರಣಗಳು ಕುತೂಹಲಕಾರಿಯಾಗಿವೆ.

ಅದಕ್ಕೂ ಮೊದಲು ಈ ಹೀನಾತಿಹೀನ ಅಪರಾಧದದ ಬಗ್ಗೆ ಒಂದಿಷ್ಟು ವಿವರ ನೋಡೋಣ.
ಇದು 90 ರದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಬರ್ಬರ ಕೊಲೆ. ಕರ್ನಾಟಕದಲ್ಲಿ ನಡೆದ ಈ ಅಮಾನವೀಯ ಘಟನೆ ದೇಶಾದ್ಯಂತ ಸಂಚಲನ ಉಂಟು ಮಾಡಿತ್ತು.
ಶಕೀರಾ, ಶೃದ್ಧಾನಂದ ಯಾರಿವರು?
ಸ್ವಾಮಿ ಶ್ರದ್ಧಾನಂದನ ನೈಜ ಹೆಸರು ಮುರಳಿ ಮನೋಹರ್ ಮಿಶ್ರಾ. ಮಧ್ಯಪ್ರದೇಶ ಮೂಲದವನು.
ಕೊಲೆಯಾದ ಶಕೀರಾ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು. ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದಾಗ ತಮ್ಮ ಜನಪರ ಕೆಲಸಗಳಿಂದ ಅಪಾರ ಗೌರವ ಪಡೆದುಕೊಂಡಿದ್ದರು. ಅವರ ಮೊಮ್ಮಗಳಾದ ಶಕೀರಾ ನಮಾಜಿ ಅವರನ್ನು ಶೃದ್ಧಾನಂದ 1991ರಲ್ಲಿ ಭೀಕರವಾಗಿ ಕೊಲೆ ಮಾಡಿದ್ದ. ಶಕೀರಾ ಹೆಸರಲ್ಲಿದ್ದ ಅಪಾರ ಆಸ್ತಿಯನ್ನು ಕಬಳಿಸಲು ಈ ದುಷ್ಟ ಕೆಲಸ ಮಾಡಿದ್ದ. ಶಕೀರಾಳನ್ನು ಪ್ರಜ್ಞೆ ತಪ್ಪಿಸಿ ಜೀವಂತವಾಗಿ ಹೂಳುವ ಮೂಲಕ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶ್ರದ್ಧಾನಂದ 2001 ರಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ ತವರು ರಾಜ್ಯವಾದ ಮಧ್ಯಪ್ರದೇಶದ ಸಾಗರ್ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ. 83 ವರ್ಷದ ಶ್ರದ್ದಾನಂದ ಕಳೆದ 27 ವರ್ಷಗಳಿಂದ ಜೈಲು ವಾಸಿಯಾಗಿದ್ದಾರೆ. ಆತನಿಗೆ ಜೀವಾವಧಿ, ಅಂದರೆ 30 ವರ್ಷ‍್ಗಳ ಶಿಕ್ಷೆಯಾಗಿದೆ.

ಅಂದು 600 ಕೋಟಿ ರೂ ಮೌಲ್ಯ ಹೊಂದಿದ್ದ ಆಸ್ತಿಯನ್ನು ಹೊಡೆದುಕೊಳ್ಳಲು ಶಕೀರಾ ಅವರನ್ನು ಜೀವಂತವಾಗಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ವೈಭವೋಪೇತ ಬಂಗಲೆಯ ಮಧ್ಯದಲ್ಲಿ ಶವಪೆಟ್ಟಿಗೆಯಲ್ಲಿ ಇಟ್ಟು ಹೂತಿದ್ದಾಗಿ ತನಿಖೆಯ ವೇಳೆ ಶ್ರದ್ಧಾನಂದ ಒಪ್ಪಿಕೊಂಡಿದ್ದರು. ಅಪರಾಧಿಯನ್ನು 1994ರ ಏಪ್ರಿಲ್ 30ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆಸ್ತಿಯ ಅಧಿಕಾರ ಮತ್ತು ವಿಲ್ ಅನ್ನು ಶ್ರದ್ಧಾನಂದ ಹೆಸರಿಗೆ ವರ್ಗಾಯಿಸಿದ ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು ಎಂಬ ವಿಚಾರವನ್ನು ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದರು. ಈ ಘಟನೆಯು ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ಅತ್ಯಂತ ಘೋರ ಪ್ರಕರಣಗಳಲ್ಲಿ ಒಂದಾಗಿ ವರದಿಯಾಗಿದೆ ಎಂದು ಬಾರ್ & ಬೆಂಚ್ ಹೇಳುತ್ತದೆ.
ಅದರ ಪ್ರಕಾರ, ಅಪರಾಧ ಪ್ರಕರಣದಲ್ಲಿ ಮೃತದೇಹವನ್ನು ಹೊರ ತೆಗೆಯುವುದನ್ನು ವಿಡಿಯೊದಲ್ಲಿ ದಾಖಲಿಸಿದ ಮೊದಲ ಪ್ರಕರಣ ಇದಾಗಿದ್ದು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಭೂಮಿಯಿಂದ ಹೊರತೆಗೆಯಲಾದ ಕಳೇಬರದ ವಿಡಿಯೊ ಮತ್ತು ವಂಶವಾಹಿ ಪರೀಕ್ಷೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿದ ದೇಶದ ಮೊದಲ ಪ್ರಕರಣ ಸಹ ಇದು ಎಂದು ದಾಖಲಾಗಿದೆ.
1997ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. 2005ರಲ್ಲಿ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ ಎಸ್ ತೋಟದ್ ಅವರು ಶ್ರದ್ಧಾನಂದಗೆ ಗಲ್ಲು ಶಿಕ್ಷೆ ವಿಧಿಸಿದ್ದರು..
ಮುಂದೆ ಗಲ್ಲು ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀಂಕೋರ್ಟ್ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಶಕೀರಾ ನಮಾಜಿ ಅವರು ತಮ್ಮ ಮೊದಲ ಪತಿಯಾದ, ಇರಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಅಕ್ಬರ್ ಖಲೀಲಿ ಅವರಿಗೆ 1985ರಲ್ಲಿ ವಿಚ್ಚೇದನ ನೀಡಿದ್ದರು. ನಂತರ ಅವರು ಶ್ರದ್ಧಾನಂದ ಅವರನ್ನು ವರಿಸಿದ್ದರು.
ಹನುಮಂತರಾಯರು ಹೇಳುವುದೇನು?
ಈ ಗಂಭೀರ ಪ್ರಕರಣದಲ್ಲಿ ಶೃದ್ಧಾನಂದನ ಪರ ವಕೀಲಿಕೆ ನಡೆಸಿದ್ದ ರಾಜ್ಯದ ಪ್ರಸಿದ್ಧ ಕ್ರಿಮಿನಲ್ ವಕೀಲ ಸಿ.ಎಚ್. ಹನುಮಂತರಾಯರು ‘ಪ್ರತಿಧ್ವನಿ’ಯೊಂದಿಗೆ ಹಲವು ವಿಶೇಷ ವಿಷಯಗಳನ್ನು ಹಂಚಿಕೊಡರು.
‘ಕ್ಷಮಾದಾನ ನೀಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಈ ಕುರಿತಂತೆ ಕೇಂದ್ರ ಸರ್ಕಾರ ಒಂದು ಪ್ರಪೊಸಲ್ ವರದಿ ಕಳಿಸಬೇಕು. ಅದರ ಆಧಾರದಲ್ಲಿ ರಾಷ್ಟ್ರಪತಿ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಸಿ.ಎಚ್ ವಿವರಿಸಿದರು.
‘ಈ ಕೇಸಿನಲ್ಲಿ ನಾನು ಶೃದ್ಧಾನಂದರ ಡಿಫೇನ್ಸ್ ವಕೀಲನಾಗಿದ್ದೆ. ಇದರಲ್ಲಿ ಎರಡು ಇಂಟರ್ಪ್ರಿಟೆಷನ್ ಇದ್ದವು. ಒಂದನೇಯದು, ಕಾಯಿಲೆಯಿಂದ ಬಳಲುತ್ತಿದ್ದ 50 ವರ್ಷ ದಾಟಿದ್ದ ಶಕೀರಾ ಸಹಜ ಸಾವಿಗೆ ಈಡಾಗಿರಬಹುದು. ಎರಡನೇಯದು ಕೊಲೆ ಆಗಿರಲೂಬಹುದು. ನಾನು ಮೊದಲ ದೃಷ್ಟಿಕೋನದಲ್ಲಿ ವಾದ ಮಾಡಿದ್ದೆ’ ಎಂದರು.

‘ಏನೇ ಇರಲಿ ಅಪಾರ ಆಸ್ತಿಯನ್ನು ಹೊಡೆದುಕೊಳ್ಳಲು ಶೃದ್ಧಾನಂದ ಹವಣಿಸಿದ್ದರು ಎಂಬುದಂತೂ ಸತ್ಯ. ಶಕೀರಾ ಸಾವಿನ ನಂತರ ರಿಚ್ಮಂಡ್ ರಸ್ತೆಯ ವುಡ್ಲ್ಯಾಂಡ್ಸ್ ಬಳಿಯಲ್ಲಿದ್ದ ಭಾರಿ ಮೌಲ್ಯದ ಆಸ್ತಿ ಶೃದ್ಧಾನಂದನ ಪಾಲಾಗಿತು. ಆದರೆ ಶಕೀರಾ ಸಾವಿನ ವಿಷಯ ಮುಚ್ಚಿಟ್ಟ ಆತ ಸ್ವಲ್ಪ ಭಾಗವನ್ನು ಹಲವರಿಗೆ ಮಾರಿಕೊಂಡಿದ್ದ . 1991ರಲ್ಲಿ ಶಕೀರಾಳನ್ನು ಹೂಳಲಾಗಿತ್ತು. 1993ರಲ್ಲಿ ಪ್ರಕರಣ ಹೊರಗೆ ಬಂದ ನಂತರ ಹೆಣವನ್ನು ಹೊರ ತೆಗೆದು ಪೋಸ್ಟ್ ಮಾರ್ಟ್‍ಂ ಮಾಡಲಾಗಿತು’ ಎಂದು ವಿವರಿಸುತ್ತಾರೆ ಸಿ.ಎಚ್ ಹನುಮಂತರಾಯ.
ಮುಂದೆ ಶೃದ್ಧಾನಂದ ಮಾರಿದ್ದ ಆಸ್ತಿಗಳನ್ನು ಅನೂರ್ಜಿತಗೊಳಿಸಿ, ಇಡೀ ಆಸ್ತಿಯನ್ನು ಶಕೀರಾ ಅವರ ಹಿಂದಿನ ಗಂಡನ ಮೂರು ಹೆಣ್ಣು ಮಕ್ಕಳಿಗೆ ನೀಡಲಾಗಿತು’ ಎಂದು ಸಿ.ಎಚ್ ಹೇಳಿದರು.
ಕ್ಷಮಾದಾನಕ್ಕೆ ಅರ್ಹನೇ?
ಈಗ ನಮ್ಮ ಮುಂದಿರುವ ಪ್ರಶ್ನೆ, ಕೋರ್ಟಿನ ಪ್ರಕಾರ ಅಪಾರ ಆಸ್ತಿ ಹೊಡೆದುಕೊಳ್ಳಲು ಶಕೀರಾಳನ್ನು ಜೀವಂತವಾಗಿ ಹೂತು ಹಾಕಿದ್ದ ಶೃದ್ಧಾನಂದ ಕ್ಷಮಾದಾನಕ್ಕೆ ಅರ್ಹನೇ?
ವಿಚಾರಣೆ ಇಲ್ಲದೇ, ಆರೋಪ ಸಾಬೀತಾಗದೇ ಇದ್ದರೂ ಮಾನವ ಹಕ್ಕುಗಳ ಹೋರಾಟಗಾರ 86 ವರ್ಷದ ಸ್ಟಾನ್ ಸ್ವಾಮಿಯವರಿಗೆ ಜಾಮೀನು ನೀಡಲು ನಿರಾಕರಿಸುವ ಈ ಪ್ರಭುತ್ವದ ವ್ಯವಸ್ಥೆಯಲ್ಲಿ ಸ್ಟಾನ್ ಸ್ವಾಮಿ ಆರೋಪ ಸಾಬೀತಾಗದೇ ಸಾವಿಗೀಡಾದರು.
ಅಪರಾಧಿ ಎಂದು ಸಾಬೀತಾಗಿ ಸೆರೆವಾಸದಲ್ಲಿರುವ ಶೃದ್ಧಾನಂದರಿಗೆ ವಯಸ್ಸಿನ ಕಾರಣಕ್ಕೆ ಕ್ಷಮಾದಾನ ಸಿಕ್ಕರೆ ಅದೊಂದು ದೊಡ್ಡ ವೈಪರೀತ್ಯ ಅಲ್ಲವೇ?





