ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದಲ್ಲಿ ಆರ್ಥಿಕತೆ ಚೇತರಿಕೆಯಲ್ಲಿದೆ ಎಂಬುದನ್ನು ಪ್ರತಿಬಿಂಬಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದೆ. ಈ ಪೈಕಿ ಷೇರುಪೇಟೆಯೂ ಒಂದು. ಜಿಡಿಪಿ ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಲೇ ಇದೆ. ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರುತ್ತಲೇ ಇದೆ. ಓಮಿಕ್ರಾನ್ ಹಿನ್ನೆಲೆಯಲ್ಲಿ ಕೊಂಚ ಇಳಿಜಾರಿಗೆ ಸರಿದಿದ್ದರೂ ಒಟ್ಟಾರೆ ಏರು ಹಾದಿಯಲ್ಲಿದೆ. ಇದರರ್ಥ ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂದೇ? ಹಾಗಂತ ಮೋದಿ ಸರ್ಕಾರ ಮತ್ತು ಮೋದಿ ಸರ್ಕಾರ ನೇಮಿಸಿರುವ ಆರ್ಥಿಕ ತಜ್ಞರು ಬಿಂಬಿಸುತ್ತಿದ್ದಾರೆ.
ವಾಸ್ತವಿಕವಾಗಿ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವುದು ಕೋವಿಡ್ ಸೋಂಕಿನಿಂದ ತೀವ್ರವಾಗಿ ಕುಸಿದ ಮಟ್ಟದಿಂದಲೇ ಹೊರತು, ಕೋವಿಡ್ ಪೂರ್ವದಲ್ಲಿದ್ದ ಮಟ್ಟದಿಂದ ಅಲ್ಲ. ದೇಶದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆಯೇ ಎಂಬುದನ್ನು ಕಂಡುಕೊಳ್ಳಲು ಆರ್ಥಿಕ ತಜ್ಞರಿಗೆ ಬೇರೆ ಮಾನದಂಡಗಳಿವೆ. ಈ ಪೈಕಿ ವಿತ್ತೀಯ ಕೊರತೆ, ವ್ಯಾಪಾರ ಕೊರತೆ ಪ್ರಮಾಣ ಮತ್ತು ಕರೆನ್ಸಿ ಮೌಲ್ಯ ಏರಿಳಿತ.
ಈಗಾಗಲೇ ವಿತ್ತೀಯ ಕೊರತೆ ಮತ್ತು ವ್ಯಾಪಾರ ಕೊರತೆ ಹಿಗ್ಗಿದೆ. ರುಪಾಯಿ ಕೂಡಾ ಸತತವಾಗಿ ಕುಸಿಯುತ್ತಲೇ ಬಂದಿದೆ. ಪ್ರಸ್ತುತ ಏಷಿಯಾದ ಕರೆನ್ಸಿಗಳ ಪೈಕಿ ಅತಿ ಕಳಪೆ ಸಾಧನೆ ಮಾಡಿರುವುದು ಭಾರತೀಯ ರೂಪಾಯಿ.
ಪ್ರಸ್ತುತ ಪ್ರತಿ ಡಾಲರ್ ಗೆ 75.40 ರಷ್ಟಿದೆ. ಡಿಸೆಂಬರ್ 17ರಂದು ಸರ್ವಕಾಲಿಕ ಕನಿಷ್ಠ ಮಟ್ಟವಾದ 76.40ಕ್ಕೆ ಕುಸಿದಿತ್ತು. ಮತ್ತಷ್ಟು ಕುಸಿಯುವ ಅಪಾಯದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ವಿದೇಶಿ ಮೀಸಲು ನಿಧಿಯಿಂದ 5 ಬಿಲಿಯನ್ ಡಾಲರ್ ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತು. ಡಾಲರ್ ಮಾರುಕಟ್ಟೆಯಲ್ಲಿ ಲಭ್ಯವಾದ ಹಿನ್ನೆಲೆಯಲ್ಲಿ ರುಪಾಯಿ ಮೌಲ್ಯ ಒಂದಷ್ಟು ಚೇತರಿಸಿಕೊಂಡು ಈಗ 75.40ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಆದರೆ, ಮಾರ್ಚ್ ಅಂತ್ಯದ ವೇಳೆಗೆ 78ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಕ್ವಿಂಟಾರ್ಟ್ ಮಾರ್ಕೆಟ್ ಸಲುಷನ್ ಅಂದಾಜಿಸಿದೆ.
ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವುದನ್ನು ತಡೆಯುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 5 ಬಿಲಿಯನ್ ಡಾಲರ್ ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಪರಿಣಾ ತಾತ್ಕಾಲಿಕವಾಗಿ ರುಪಾಯಿ ಕುಸಿತಕ್ಕೆ ತಡೆ ಬಿದ್ದಿದೆ, ಇದು ಶಾಶ್ವತ ಪರಿಹಾರವಲ್ಲ ಮತ್ತು ಸದಾಕಾಲ ರೂಪಾಯಿ ಮೌಲ್ಯವನ್ನು ಸ್ಥಿರವಾಗಿಟ್ಟುಕೊಳ್ಳುವ ಕೆಲಸ ಆರ್ಬಿಐನದೂ ಅಲ್ಲ. ಅಂದರೆ ಸದಾಕಾಲ RBI ತನ್ನ ವಿದೇಶಿ ಮೀಸಲು ನಿಧಿಯಿಂದ ಡಾಲರ್ ಮಾರಾಟ ಮಾಡಲು ಸಾಧ್ಯವಿಲ್ಲ.

2020 ಮಾರ್ಚ್ 19ರಂದು ದಿನದ ವಹಿವಾಟಿನಲ್ಲಿ ರುಪಾಯಿ ಮೌಲ್ಯವು ಮೊದಲಬಾರಿಗೆ ಸರ್ವಕಾಲಿಕ ಕನಿಷ್ಠಮಟ್ಟ 75ಕ್ಕೆ ಇಳಿದಿತ್ತು. ನಂತರದ ದಿನಗಳಲ್ಲಿ ರುಪಾಯಿ ಮತ್ತಷ್ಟು ಕುಸಿಯುತ್ತಲೇ ಇದೆ. ಈಗ ಸರ್ವಕಾಲಿಕ ಕನಿಷ್ಠ ಮಟ್ಟವು 76.40ಕ್ಕೆ ಇಳಿದಿದೆ.
ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಕುಸಿದರೆ ಅನುಕೂಲ ಮತ್ತು ಅನನಕೂಲ ಎರಡೂ ಇದೆ. ಆದರೆ, ದೇಶದ ಪ್ರಸಕ್ತ ಸ್ಥಿತಿಯಲ್ಲಿ ರುಪಾಯಿ ಮೌಲ್ಯ ಕುಸಿತವು ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮ ದೇಶದ ಆಮದು ಪ್ರಮಾಣವು ರಫ್ತು ಪ್ರಮಾಣಕ್ಕಿಂತ ಹೆಚ್ಚಿದೆ. ಹೀಗಾಗಿ ಆಮದು ಮತ್ತು ರಫ್ತು ವಹಿವಾಟು ಡಾಲರ್ ನಲ್ಲಿ ನಡೆಯುವುದರಿಂದ ರುಪಾಯಿ ಮೌಲ್ಯ ಕುಸಿತವು ನಮ್ಮ ಆಮದು ಬಿಲ್ಲಿನ ಭಾರವನ್ನು ಹೆಚ್ಚಿಸುತ್ತದೆ. ಅಂದರೆ, ನಾವು ಹೆಚ್ಚಿನ ರುಪಾಯಿ ವಿನಿಯೋಗಿಸಿ, ಡಾಲರ್ ಖರೀದಿಸಿ ಪಾವತಿ ಮಾಡುವುದರಿಂದ ನಾವು ಆಮದು ಮಾಡಿಕೊಳ್ಳುವ ವಸ್ತುವಿನ ಬೆಲೆಯು ವಾಸ್ತವಿಕ ಬೆಲೆಗಿಂತ ಹೆಚ್ಚಾಗುತ್ತದೆ. ಕಚ್ಚಾ ತೈಲ ದರವು 25 ಡಾಲರ್ ಗೆ ಕುಸಿದಿದ್ದರೂ, ನಮ್ಮ ರುಪಾಯಿಯ ಡಾಲರ್ ಖರೀದಿಸುವ ಶಕ್ತಿ ಕುಂದಿರುವುದರಿಂದ ವಾಸ್ತವಿಕವಾಗಿ ನಾವು ಕಚ್ಚಾ ತೈಲಕ್ಕೆ ಪಾವತಿಸುವ ದರವು ಹೆಚ್ಚಿರುತ್ತದೆ.
ಕಳೆದೊಂದು ವರ್ಷದಲ್ಲಿ ರುಪಾಯಿ ಮೌಲ್ಯವು ಶೇ.10ರಷ್ಟು ಕುಸಿತ ದಾಖಲಿಸಿದೆ. 2019 ಜುಲೈ ತಿಂಗಳಲ್ಲಿ ವರ್ಷದ ಗರಿಷ್ಠಮಟ್ಟ 68.40 ಇತ್ತು. ನಂತರ ತ್ವರಿತಗತಿಯಲ್ಲಿ ರುಪಾಯಿ ಮೌಲ್ಯ ಸುಮಾರು 6.59ರಷ್ಟು ಕುಸಿದಿದ್ದು ಮಾರ್ಚ್ 19 ರಂದು ಐತಿಹಾಸಿಕ ಮಟ್ಟವಾದ 75ಕ್ಕೆ ಕುಸಿದಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 4.2 ಬಿಲಿಯನ್ ಡಾಲರ್ ನಷ್ಟು ಷೇರುಪೇಟೆಯಿಂದ ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ ಈ ತ್ರೈಮಾಸಿಕದಲ್ಲಿ ರುಪಾಯಿ ಶೇ.1.9ರಷ್ಟು ಕುಸಿತ ದಾಖಲಿಸಿದೆ. ಈ ನಡುವೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡುವ ಮುನ್ಸೂಚನೆ ನೀಡಿದೆ. ಒಂದು ವೇಳೆ ಬಡ್ಡಿ ಏರಿಕೆ ಮಾಡಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತಷ್ಟು ಹೂಡಿಕೆಯನ್ನು ಹಿಂಪಡೆಯುವ ನಿರೀಕ್ಷೆ ಇದೆ. ಡಾಲರ್ ಮತ್ತಷ್ಟು ಪ್ರಬಲಗೊಳ್ಳುವದರಿಂದ ರುಪಾಯಿ ಕುಸಿಯುವ ಸಾಧ್ಯತೆ ನಿಚ್ಛಳವಾಗಿದೆ.
ಭಾರತದ ವಿತ್ತೀಯ ಕೊರತೆ ಹಿಗ್ಗುತ್ತಿದೆ. ಅಲ್ಲದೇ ವ್ಯಾಪಾರ ಕೊರತೆ (ಅಂದರೆ, ಆಮದು ಪ್ರಮಾಣ ಹೆಚ್ಚಿ ರಫ್ತು ಪ್ರಮಾಣ ಕುಗ್ಗುತ್ತಿರುವುದರಿಂದ ಆಗುತ್ತಿರುವ ಅಸಮತೋಲನ) ಹೆಚ್ಚುತ್ತಿರುವುದರಿಂದ ವಿವಿಧ ರೇಟಿಂಗ್ ಏಜೆನ್ಸಿಗಳು ಭಾರತೀಯ ಹಣಕಾಸು ಮಾರುಟ್ಟೆ ಮುನ್ನೋಟವನ್ನು ನೇತ್ಯಾತ್ಮಕವಾಗಿ ನೀಡಿವೆ. ಇದರರ್ಥ ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುವುದು ಖಚಿತ.