ಕೇರಳದಲ್ಲಿ ‘ರಾಜಕೀಯ ಹಿಂಸಾಚಾರ
ThePrint ಕಣ್ಣೂರಿನಲ್ಲಿ ಶುಹೈಬ್ (Shuhaib’s family in Kannur) ಅವರ ಕುಟುಂಬವನ್ನು ಭೇಟಿಯಾದ ದಿನ, ಅದೇ ಜಿಲ್ಲೆಯಲ್ಲಿ 54 ವರ್ಷದ ಸಿಪಿಎಂ ಕಾರ್ಯಕರ್ತ ಹರಿದಾಸನ್ (Haridasan) ಅವರನ್ನು ಹತ್ಯೆ ಮಾಡಲಾಗಿತ್ತು. ಅವರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಬಿಜೆಪಿ ಮತ್ತು ಆರ್ಎಸ್ಎಸ್ (BJP & RSS) ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಕೇರಳ ಕರಾವಳಿಯಲ್ಲಿ (Kerala & Karavali) ಇಂತಹ ಘಟನೆಗಳು ಅಪರೂಪವೇನಲ್ಲ. ಈ ಪ್ರದೇಶದಲ್ಲಿ ನಡೆದ ರಾಜಕೀಯ ಕೊಲೆಗಳು (Political murders) ಸಿಪಿಎಂ, ಆರ್ಎಸ್ಎಸ್, ಮತ್ತು ಪಿಎಫ್ಐ ಮತ್ತದರ ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) (CPM, RSS, PFI and SDPI) ಸೇರಿದಂತೆ ಬಹು ಪಕ್ಷಗಳು ಮತ್ತು ಸಂಘಟನೆಗಳ ಸಂತ್ರಸ್ತರು ಮತ್ತು ಆರೋಪಿಗಳನ್ನು ಒಳಗೊಂಡಿವೆ.
ThePrint ನೊಂದಿಗೆ ಮಾತನಾಡಿದ ಬರಹಗಾರ ಮತ್ತು ರಾಜಕೀಯ ವಿಮರ್ಶಕ ಪೌಲ್ ಜಕಾರಿಯಾ (Paul Zacharia ), ಕಣ್ಣೂರು ಮತ್ತು ನಿರ್ದಿಷ್ಟವಾಗಿ ತಲಶ್ಶೇರಿ ಸಿಪಿಎಂ ಮತ್ತು ಬಿಜೆಪಿಯ ರಣಾಂಗಣವಾಗಿದೆ ಎಂದು ಹೇಳುತ್ತಾರೆ. “ಕಣ್ಣೂರು ಸಿಪಿಎಂನ ಜನ್ಮಸ್ಥಳವಾಗಿದೆ ಮತ್ತು ಇದು ಕಾಸರಗೋಡು ಮತ್ತು ಕೋಯಿಕ್ಕೋಡ್ನಂತಹ ಸುತ್ತಮುತ್ತಲಿನ ಪ್ರದೇಶಗಳಿಗೆ ನೆಲೆಯನ್ನು ವಿಸ್ತರಿಸಲು ಬಯಸುತ್ತದೆ ಮತ್ತು ‘ಪಕ್ಷದ ಹಳ್ಳಿಗಳ’ ಕಡೆ ಗಮನ ಹರಿಸುತ್ತದೆ. ಆದರೆ ಹಲವು ವರ್ಷಗಳಿಂದ ಆರೆಸ್ಸೆಸ್ ಮತ್ತು ಬಿಜೆಪಿ ಎರಡೂ ಜಿಲ್ಲೆಗಳ ಗ್ರಾಮಗಳನ್ನು ವಶಪಡಿಸಿಕೊಳ್ಳಲು ಹೋರಾಟ ನಡೆಸುತ್ತಿದೆ ” ಎಂದು ಜಕರಿಯಾ ಹೇಳುತ್ತಾರೆ. 2016 ರ ಕೇರಳ ಚುನಾವಣೆಯಲ್ಲಿ ಕಾಸರಗೋಡಿನ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕೇವಲ 89 ಮತಗಳಿಂದ ಸೋತಿರುವುದು ಸ್ಪರ್ಧೆಯು ಎಷ್ಟು ನಿಕಟವಾಗಿದೆ ಎಂಬುದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ.
ಜಕಾರಿಯಾ ಉಲ್ಲೇಖಿಸುವ ‘ಪಕ್ಷದ ಹಳ್ಳಿಗಳು’ ಕೇರಳದ ಒಂದು ವಿದ್ಯಮಾನವಾಗಿದ್ದು, ಇಡೀ ಗ್ರಾಮಗಳು ಒಂದು ಪಕ್ಷಕ್ಕೆ ನಿಷ್ಠರಾಗಿ ಮತ್ತು ಸಾಮೂಹಿಕವಾಗಿ ಮತ ಚಲಾಯಿಸುತ್ತವೆ. ಕಣ್ಣೂರಿನ ಗ್ರಾಮಗಳು ಸಾಮಾನ್ಯವಾಗಿ ಸಿಪಿಎಂಗೆ ನಿಷ್ಠರಾಗಿ ಕಂಡುಬರುತ್ತವೆ.
ಸಿಪಿಎಂನ ಕಣ್ಣೂರಿನ ಕಾರ್ಯದರ್ಶಿ ಎಂ.ವಿ.ಜಯರಾಜನ್ ಪ್ರಕಾರ 2018ರಲ್ಲಿ ನಡೆದ ಶುಹೈಬ್ನಂತಹ ರಾಜಕೀಯ ಹಿಂಸಾಚಾರ ಮತ್ತು ಕೊಲೆಗಳಿಗೆ ಪಕ್ಷದ ಕಾರ್ಯಕರ್ತರು ಜವಾಬ್ದಾರರಲ್ಲ, ಆದರೆ ಅವರ ಕಾರ್ಯಕರಗತರು ದಶಕಗಳಿಂದ ಬಲಿಪಶುಗಳಾಗಿದ್ದಾರೆ ಮತ್ತು ಈಗ ವಿಶೇಷವಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೈಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. “ನಾವು 1940 ರಿಂದ ಕೇರಳದಲ್ಲಿ 589 ಕಮ್ಯುನಿಸ್ಟರನ್ನು (communists ) ಕಳೆದುಕೊಂಡಿದ್ದೇವೆ. ಕಣ್ಣೂರಿನಲ್ಲೇ 170 ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ… 2016 ರಿಂದ 22 ಸಿಪಿಎಂ ಕಾರ್ಯಕರ್ತರನ್ನು ಕೊಲ್ಲಲಾಗಿದೆ (ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಾಗ) ಅದರಲ್ಲಿ 16 ಮಂದಿಯನ್ನು ಆರ್ಎಸ್ಎಸ್ ಹತ್ಯೆ ಮಾಡಿದೆ” ಎಂದು ಜಯರಾಜನ್ ಆರೋಪಿಸುತ್ತಾರೆ.
ಆದರೆ, ಇದು ಅಪಪ್ರಚಾರ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಸುರೇಂದ್ರನ್ (P. Surendran, Kerala BJP president) ಹೇಳಿದ್ದಾರೆ. “ಪ್ರತಿಕಾರದ ಕ್ರಮ ಖಂಡಿತಾ ಇದೆ, ನಾನು ಅದನ್ನು ನಿರಾಕರಿಸುವುದಿಲ್ಲ. ಆದರೆ ಬಿಜೆಪಿ ಎಂದಿಗೂ ಯಾವುದೇ ರೀತಿಯ ಹಿಂಸಾಚಾರವನ್ನು ಪ್ರಾರಂಭಿಸುವುದಿಲ್ಲ” ಎಂದು ಸುರೇಂದ್ರನ್ ಹೇಳುತ್ತಾರೆ. ಸಿಪಿಎಂ, ಕಾಂಗ್ರೆಸ್ ಮತ್ತು ಪಿಎಫ್ಐನ ರಾಜಕೀಯ ಹಿಂಸಾಚಾರದಿಂದ ನಾವು ನೂರಾರು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಸಿಪಿಎಂ ‘ಪಕ್ಷದ ಹಳ್ಳಿ’ಗಳಲ್ಲಿ ಪಿಎಫ್ಐ ತನ್ನ ಬೇರುಗಳನ್ನು ಬಲಪಡಿಸುತ್ತಿದೆ ಎಂಬುದನ್ನು ಅರಿತುಕೊಳ್ಳದೆ ಸಿಪಿಎಂ ಬಿಜೆಪಿಯತ್ತ ಮಾತ್ರ ಗಮನಹರಿಸಿದೆ ”ಎಂದು ಅವರು ಹೇಳುತ್ತಾರೆ. ತಮ್ಮಲ್ಲಿರುವ ಐತಿಹಾಸಿಕ ವ್ಯತ್ಯಾಸಗಳ ಹೊರತಾಗಿಯೂ, ಕರಾವಳಿ ಕೇರಳ ಮತ್ತು ಕರ್ನಾಟಕವು ಸಾಮಾನ್ಯವಾಗಿ ಕೆಲವು ಸಾಮಾನ್ಯ ಜನಸಂಖ್ಯಾ ಗುಣಲಕ್ಷಣಗಳನ್ನು ಹೊಂದಿದ್ದು ಅದು ರಾಜಕೀಯ ಹಿಂಸಾಚಾರದ ಪ್ರವೃತ್ತಿಗೆ ಕಾರಣವಾಗಿದೆ.

ಆರ್ಥಿಕ ಪ್ರತಿಪಾದನೆಗಾಗಿ ಹೋರಾಟ
ಅನೇಕ ರಾಜಕೀಯ ವೀಕ್ಷಕರು, ವಿಶ್ಲೇಷಕರು ಮತ್ತು ತಜ್ಞರು ಉತ್ತರ ಮಲಬಾರ್ ಮತ್ತು ಕರ್ನಾಟಕ ಕರಾವಳಿಯು ಆರ್ಥಿಕವಾಗಿ ಪ್ರಬಲ ಮತ್ತು ದೃಢವಾದ ಅಲ್ಪಸಂಖ್ಯಾತ ಸಮುದಾಯಗಳನ್ನು ಹೊಂದಿದ್ದು ಇತರ ಪ್ರದೇಶಗಳಿಂದ ಭಿನ್ನವಾಗಿವೆ ಎಂದು ಒಪ್ಪಿಕೊಳ್ಳುತ್ತಾರೆ.
“ಇತರ ಪ್ರದೇಶಗಳಿಗಿಂತ ಭಿನ್ನವಾಗಿ, ಕರ್ನಾಟಕ ಮತ್ತು ಕೇರಳದ ಕರಾವಳಿ ಬೆಲ್ಟ್ಗಳಲ್ಲಿ ಮುಸ್ಲಿಂ ಸಮುದಾಯವು ಕೇವಲ ಸಂಖ್ಯಾತ್ಮಕವಾಗಿ ಪ್ರಬಲವಾಗಿಲ್ಲ ಆದರೆ ಆರ್ಥಿಕವಾಗಿ ಸ್ವತಂತ್ರವಾಗಿದೆ. ಜನಸಂಖ್ಯೆಯ ಅನುಪಾತದಲ್ಲಿ, ಮುಸ್ಲಿಮರು ಹಿಂದೂಗಳಿಗಿಂತ ಉತ್ತಮ ಜೀವನವನ್ನು ನಡೆಸುತ್ತಾರೆ ”ಎಂದು ಹೋರಾಟಗಾರ ಸುರೇಶ್ ಭಟ್ ಹೇಳುತ್ತಾರೆ. ಈ ಆರ್ಥಿಕ ಅಸಮಾನತೆಯು ಸ್ವಾಭಾವಿಕವಾಗಿ ಅಸಮಾಧಾನವನ್ನು ಉಂಟುಮಾಡಿದೆ. ಇದನ್ನೇ ‘ಮೇಲ್ಜಾತಿ ಮತ್ತು ಶ್ರೀಮಂತ ಹಿಂದೂಗಳು’ ‘ಮುಸ್ಲಿಂ ದ್ವೇಷ’ಕ್ಕೆ ತಿರುಗಿಸಿದ್ದಾರೆ.
ಕರಾವಳಿ ಕರ್ನಾಟಕದ ಆರ್ಥಿಕ ಶ್ರೇಣಿಯು ಮೊದಲಿಗೆ “ಕೋಮು ಸೌಹಾರ್ದತೆಗೆ” ಅಡ್ಡಿಯಾಗದಿದ್ದರೂ, 1990 ರ ದಶಕದಲ್ಲಿ ಹಿಂದುತ್ವ ರಾಜಕೀಯದ ಬೆಳವಣಿಗೆಯೊಂದಿಗೆ ಚಿತ್ರಣಗಳು ಬದಲಾಗತೊಡಗಿದವು.
ಉತ್ತರ ಕನ್ನಡದ (Uttar Kannada) ಭಟ್ಕಳದ ಹಿಂದೂ ‘ನಾಮಧಾರಿ ಸಮುದಾಯ’ದ ಸಂಘದ ಅಧ್ಯಕ್ಷ ಕೃಷ್ಣಾನಾಯ್ಕ್ ಅವರು “ಕೇವಲ ಮೂವತ್ತು ವರ್ಷಗಳ ಹಿಂದೆ, ಹಿಂದೂ ಕುಟುಂಬಗಳು ನವಾಯತ್ (ಮುಸ್ಲಿಂ ಸಮುದಾಯ) ಮನೆಗಳಿಗೆ ಮದುವೆಗೆ ಆಭರಣಗಳನ್ನು ಎರವಲು ಪಡೆಯಲು ಹೋಗುತ್ತಿದ್ದರು. ಅವರು ನಮಗೆ ದುಬಾರಿ, ಸೊಗಸಾದ ಆಭರಣಗಳನ್ನು ಕೊಡುತ್ತಿದ್ದರು ಮತ್ತು ನಮ್ಮ ಹೆಣ್ಣುಮಕ್ಕಳು ಅವರ ಮದುವೆಯ ದಿನದಂದು ಅವುಗಳನ್ನು ಧರಿಸಲು ಹೃದಯ ಪೂರ್ವಕವಾಗಿ ಅವಕಾಶ ಮಾಡಿಕೊಡುತ್ತಿದ್ದರು. ಈ ಆಭರಣಗಳು ನಮ್ಮ ಬಳಿ ದಿನಗಟ್ಟಲೆ ಇರುತ್ತಿದ್ದವು ಮತ್ತು ಅವರು ತಲೆಕೆಡಿಸಿಕೊಳ್ಳುವುತ್ತಿರಲಿಲ್ಲ” ಎಂದು ಹೇಳುತ್ತಾರೆ.
ಆದರೆ ಉತ್ತರ ಕನ್ನಡದಲ್ಲಿ ಪರಸ್ಪರ ಮಧ್ಯೆ ಬೆಳೆದ ಅಪನಂಬಿಕೆಯಿಂದ ಈ ರೀತಿಯ ಪರಿಸರ ಬದಲಾಗಿದೆ. ಇಲ್ಲಿನ ಮುಸ್ಲಿಂ ಬಾಹುಳ್ಯದ ಭಟ್ಕಳ ಪಟ್ಟಣವು 1993ರಲ್ಲಿ ಬಾಬರಿ ಧ್ವಂಸವಾದ ಒಂದು ವರ್ಷದ ನಂತರ ಹಿಂಸಾತ್ಮಕ ಕೋಮುಗಲಭೆಯನ್ನು ಕಂಡಿತು. ಮುಂದಿನ ವರ್ಷ, ಪ್ರಖರ ಹಿಂದುತ್ವವಾದಿ , ಆರೆಸ್ಸೆಸ್ ವ್ಯಕ್ತಿ ಡಾ. ಯು. ಚಿತ್ತರಂಜನ್ ಅವರು ಶಾಸಕರಾಗಿ ಆಯ್ಕೆಯಾದರು, ಆದರೆ 1996 ರಲ್ಲಿ ಅವರನ್ನು ಕೊಲೆ ಮಾಡಲಾಯಿತು (ಯಾರೂ ಸಿಕ್ಕಿಹಾಕಿಕೊಂಡಿಲ್ಲ) ಇದು ಹಿಂದೂಗಳಲ್ಲಿ ವ್ಯಾಪಕ ಕೋಪಕ್ಕೆ ಕಾರಣವಾಯಿತು ಮತ್ತು ಅವರ ಆಪ್ತರಾಗಿದ್ದ ಅನಂತಕುಮಾರ್ ಹೆಗಡೆಯವರ ಬಿಜೆಪಿಯ ರಾಜಕೀಯ ಪ್ರವೇಶಕ್ಕೆ ಕಾರಣವಾಯಿತು.

ಇನ್ನೊಂದೆಡೆ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರಾದ ಯಾಸಿನ್ ಮತ್ತು ರಿಯಾಜ್ ಭಟ್ಕಳ್ ಅವರಿಂದಾಗಿ ಭಟ್ಕಳಕ್ಕೆ ಭಯೋತ್ಪಾದನೆಯ ಟ್ಯಾಗ್ ಸಹ ಅಂಟಿಕೊಂಡಿತು. ಇದು ಎರಡು ಧರ್ಮಗಳ ಮಧ್ಯೆ ಇದ್ದ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿತು. “ಶತಮಾನಗಳಿಂದ ಹೊನ್ನಾವರ, ಭಟ್ಕಳ ಮತ್ತು ಉತ್ತರ ಕನ್ನಡದ ಇತರ ಭಾಗಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಆಪ್ತ ಸಂಬಂಧವು ವ್ಯಾಪಾರಕ್ಕೆ ಲಾಭದಾಯಕವಾಗಿತ್ತು. ಮೀನುಗಾರರು ಮತ್ತು ಕಾರ್ಮಿಕ ವರ್ಗದವರೆಲ್ಲರೂ ಹಿಂದೂ ಸಮುದಾಯದವರಾಗಿದ್ದರೆ ವ್ಯಾಪಾರಿಗಳು ಮತ್ತು ಖರೀದಿದಾರರು ಮುಸ್ಲಿಮರಾಗಿದ್ದರು ”ಎಂದು ಹೇಳುವ ಭಟ್ಕಳದ ಪ್ರಭಾವಿ ಧಾರ್ಮಿಕ ಸಂಸ್ಥೆಯಾದ ಮಜ್ಲಿಸ್-ಎ-ಇಸ್ಲಾಹ್ ಒ ತಂಝೀಮ್ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ ಮುಹಮ್ಮದ್ ಹನೀಫ್ ಶಬಾಬ್ ಅವರು “ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರ ಆರ್ಥಿಕ ಸ್ವಾತಂತ್ರ್ಯವನ್ನು ಹಿಂದೂಗಳ ನಡುವೆ ದ್ವೇಷವನ್ನು ಪ್ರಚೋದಿಸಲು ಬಳಸಲಾಗಿದೆ” ಎನ್ನುತ್ತಾರೆ.
ಈಗಲೂ, ಅನೇಕ ಹಿಂದೂಗಳು ಭಟ್ಕಳದ ಶ್ರೀಮಂತ ನವಾಯತ್ ಮುಸ್ಲಿಮರಿಗಾಗಿ ಕೆಲಸ ಮಾಡುತ್ತಾರೆ, ಆದರೆ ಈ ಸಮೀಕರಣವು ಹಿಂದುತ್ವ ಸಂಘಟನೆಗಳನ್ನು ಆಳವಾಗಿ ಕೆರಳಿಸುತ್ತದೆ. ” ಹಿಂದೂಗಳು ಅವರಿಗಾಗಿ ಕೆಲಸ ಮಾಡಬೇಕು ಎಂಬಂತಿದೆ ಇಲ್ಲಿನ ಮುಸ್ಲಿಮರ ವರ್ತನೆ. ಅವರು ನಮ್ಮನ್ನು ಕೀಳಾಗಿ ನೋಡುತ್ತಾರೆ” ಎಂದು ಕೃಷ್ಣಾನಾಯ್ಕ್ ಹೇಳುತ್ತಾರೆ. ಅನಂತಕುಮಾರ್ ಹೆಗಡೆ ಮುಸ್ಲಿಮರ ವಿರುದ್ಧವಾಗಿ ನಿಲ್ಲುವ ಕಾರಣಕ್ಕಾಗಿ ನಾವು ಆರು ಬಾರಿ ಅವರನ್ನು ಆಯ್ಕೆ ಮಾಡಿದ್ದೇವೆ. ಹಿಂದೂಗಳಿಗೆ ಪರ್ಯಾಯ ಉದ್ಯೋಗ ಸೃಷ್ಟಿಸದಿದ್ದರೂ ಪರವಾಗಿಲ್ಲ. ಮುಸ್ಲಿಮರನ್ನು ನಿಭಾಯಿಸುವ ನಾಯಕ ನಮಗೆ ಬೇಕು ” ಎಂದು ನಾಯಕ್ ಹೇಳುತ್ತಾರೆ.
ಈ ಹೇಳಿಕೆಯು ಕರಾವಳಿ ಕರ್ನಾಟಕದ ಮತದಾರರ ಧ್ರುವೀಕರಣದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಮಾಜಿ ರಾಜ್ಯಪಾಲರು ಮತ್ತು ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವಾ ಅವರು 2004 ರ ಚುನಾವಣೆಯಲ್ಲಿ ಹೆಗ್ಡೆ ವಿರುದ್ಧ ಸೋತಾಗ ಈ ಧ್ರವೀಕರಣವನ್ನು ನೇರವಾಗಿ ಎದುರಿಸಿದ್ದೇನೆ ಎಂದು ಹೇಳುತ್ತಾರೆ.
“2004 ರ ಚುನಾವಣೆಯಲ್ಲಿ, ನಾನು ದಶಕಗಳ ಕಾಲ ಜೊತೆಗೂಡಿ ಕೆಲಸ ಮಾಡಿದ ಮಹಿಳೆಯರು , ನನ್ನ ಸ್ವಂತ ಮತದಾರರು ನನಗೆ ಮತ ಹಾಕಲಿಲ್ಲ. ಕಾರಣ ಬಿಜೆಪಿ / ಆರ್ಎಸ್ಎಸ್ ದೇವಸ್ಥಾನಗಳಲ್ಲಿ ಲಕ್ಷ್ಮಿ ಪೂಜೆ (ಪ್ರಾರ್ಥನಾ ಸಮಾರಂಭ) ಆಯೋಜಿಸಿ ಅವರಿಗೆ ಮೂಗುತಿ ನೀಡಿ ಬಿಜೆಪಿಗೇ ಮತ ಹಾಕುತ್ತೇವೆ ಎಂದು ಪ್ರಮಾಣ ಮಾಡಿಸಿದ್ದರು” ಎಂದು ಆಳ್ವ ಆರೋಪಿಸುತ್ತಾರೆ. “ನಾನು ಮಾಡಿದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ, ಧರ್ಮವು ಆದ್ಯತೆಯನ್ನು ಪಡೆದುಕೊಂಡದ್ದು ನನಗೆ ತುಂಬಾ ನೋವು ಕೊಟ್ಟಿತು” ಎನ್ನುತ್ತಾರೆ.
ಮಂಗಳೂರಿನಲ್ಲಿ ಜನಿಸಿದ ಆಳ್ವ ಅವರ ಪ್ರಕಾರ, ಕರಾವಳಿ ಕರ್ನಾಟಕವು ಎಲ್ಲಾ ಸಮುದಾಯಗಳ ಸಾರಸಂಗ್ರಹಿ ಮಿಶ್ರಣವನ್ನು ಹೊಂದಿರುವ ‘ಅತ್ಯಂತ ಜಾತ್ಯತೀತ ಪ್ರದೇಶ’ ಆಗಿತ್ತು, ಆದರೆ RSS ನ ಉದಯವು ಎಲ್ಲವನ್ನೂ ಬದಲಾಯಿಸಿತು. ಚಿಕ್ಕಮಗಳೂರಿನ ಬಾಬಾಬುಡನ್ಗಿರಿ ದೇಗುಲವನ್ನು ದಕ್ಷಿಣದ ಅಯೋಧ್ಯೆ ಎಂದು ರೂಪಿಸುವ ಬಿಜೆಪಿಯ ಪ್ರಯತ್ನಗಳು ಸಹ ಸೌಹಾರ್ದತೆಗೆ ಅಪಾಯಕಾರಿಯಾಯಿತು ಎನ್ನುತ್ತಾರೆ ಅವರು.

ಪ್ರಸ್ತುತ, ಮುಸ್ಲಿಮ್ ಮತ್ತು ಹಿಂದೂ ಸಂಘಟನೆಗಳು ದಾಳಿಗಳನ್ನು ಹಿಮ್ಮೆಟ್ಟಿಸಲು ತಮ್ಮ ಶಕ್ತಿಗಳನ್ನು ಪ್ರದರ್ಶಿಸಲೇಬೇಕಾದ ಅಗತ್ಯವಿದೆ ಎಂದು ಹೇಳಿಕೊಳ್ಳುತ್ತಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಉಳ್ಳಾಲ, ಬಂಟ್ವಾಳದಂತಹ ಸ್ಥಳಗಳಲ್ಲಿ ನಮ್ಮ ಮೇಲೆ ದಾಳಿ ಮಾಡುವುದು ಅವರಿಗೆ ಸುಲಭವಾಗಿದೆ ಎಂದು ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಆರೋಪಿಸಿದ್ದಾರೆ. ವಾಸ್ತವವಾಗಿ, ಈ ಕೆಲವು ಪ್ರದೇಶಗಳಲ್ಲಿ, ವಿವಾದಾತ್ಮಕ PFI ಮತ್ತು SDPI ನಂತಹ ಮುಸ್ಲಿಂ ಸಂಘಟನೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿವೆ.
“ಎಸ್ಡಿಪಿಐ ಮತ್ತು ಪಿಎಫ್ಐ ದಕ್ಷಿಣ ಕನ್ನಡಕ್ಕೆ ಕೇರಳದಿಂದ ಬಂದಿದ್ದು, ಅಲ್ಲಿ ಅವರ ನೆಲೆ ಪ್ರಬಲವಾಗಿದೆ. ಸಂಘಪರಿವಾರದ ಸಂಘಟನೆಗಳ ನಿರಂತರ ದಾಳಿಯಿಂದಾಗಿ ಮುಸ್ಲಿಮರು ಅನುಭವಿಸುತ್ತಿರುವ ಕೋಪವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ ”ಎಂದು ಮಸೀದಿಗಳು, ಜಮಾತ್ಗಳು ಮತ್ತು ಇಸ್ಲಾಮಿಕ್ ಸಂಘಟನೆಗಳ ಮಾತೃ ಸಂಘಟನೆಯಾದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ. “ನಾವು (ಮುಸ್ಲಿಂ ಒಕ್ಕೂಟ) ಸಮುದಾಯದ ಮೇಲೆ ಅವರ ಪ್ರಭಾವವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದ್ದೇವೆ” ಎಂದೂ ಅವರು ಹೇಳುತ್ತಾರೆ.