ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಹತ್ವದ ನಿರ್ಧಾರಕ್ಕೆ ಅನುಗುಣವಾಗಿ, ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಮುಂದುವರಿಸಲು ರಾಜ್ಯ ಸರ್ಕಾರವು ಏಪ್ರಿಲ್ 27, 2026ರಂದು ಆದೇಶ ಹೊರಡಿಸಿದೆ.

ಉಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಶೇ.50 ಮೀಸಲಾತಿ ಮಿತಿಯನ್ನು ತಾತ್ಕಾಲಿಕವಾಗಿ ಪಾಲಿಸಿಕೊಂಡು, ಪರಿಶಿಷ್ಟ ಜಾತಿಗೆ ಮೀಸಲಾದ ಶೇ.15ರೊಳಗೆ ಒಳಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಪ್ರವರ್ಗ–ಎ ಮತ್ತು ಪ್ರವರ್ಗ–ಬಿಗೆ ತಲಾ ಶೇ.5.25ರಷ್ಟು ಹಾಗೂ ಪ್ರವರ್ಗ–ಸಿಗೆ ಶೇ.4.5ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.

ಇದರ ಜೊತೆಗೆ, ಪ್ರವರ್ಗ–ಸಿಗೆ ಲಭ್ಯವಾಗುವ ಹುದ್ದೆಗಳು ಹಾಗೂ ಪ್ರವೇಶಾತಿ ಸೀಟುಗಳಲ್ಲಿ ಶೇ.20ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಲ್ಲಿನ ಅತ್ಯಂತ ಹಿಂದುಳಿದ 59 ಜಾತಿಗಳಿಗೆ ಮೀಸಲಿರಿಸಲು ಸರ್ಕಾರ ನಿರ್ಧರಿಸಿದೆ.ಇದಲ್ಲದೆ, ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ 56,432 ಹುದ್ದೆಗಳ ನೇರ ನೇಮಕಾತಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.

ಈ ಕ್ರಮದ ಮೂಲಕ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ತೋರಿದ್ದು, “ಸರ್ವರಿಗೂ ಸಮಪಾಲು, ಸಮಬಾಳು” ಎಂಬ ತತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.





