ಬಿಬಿಎಂಪಿ ಚುನಾವಣೆ (BBMP ELECTION) ನೆನೆಗುದಿಗೆ ಬಿದ್ದಿದ್ದು ಇದೀಗ ಮತ್ತೆ ಬಿಜೆಪಿಯ ಪ್ರಭಾವಿ ಸಚಿವರುಗಳೇ ಚುನಾವಣೆ ಮತ್ತಷ್ಟು ಮುಂದೂಡಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ (Assembly elections) ಮುಗಿಯುವರೆಗೆ ಪಾಲಿಕೆ ಚುನಾವಣೆ ನಡೆಸದೇ ಇರಲು ಬಿಜೆಪಿ ಮುಖಂಡರ ಗೌಪ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಪಾಲಿಕೆ ಸದಸ್ಯರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಬಿಜೆಪಿಯ ಕಾರ್ಪೋರೆಟ್ ಟಿಕೆಟ್ (BJP Corporater Ticket) ಆಕಾಂಕ್ಷೆಗಳು ಚುನಾವಣೆ ನಡೆಸುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಬೆಂಗಳೂರಿನ ಬಿಜೆಪಿ ಶಾಸಕರು (Bengaluru BJP MLA’s) ಹಾಗೂ ಸಚಿವರು ಚುನಾವಣೆ ನಡೆಸದೆ ಇರಲು ತೀರ್ಮಾನ ಮಾಡಿದ್ದಾರೆ. ಖುದ್ದು ಬಿಜೆಪಿ ವರಿಷ್ಠರೇ ಪಾಲಿಕೆ ಚುನಾವಣೆಯಿಂದ ಹಿಂದೇಟು ಹಾಕುತ್ತಿದ್ದು, ಮುಂದಿನ ವರ್ಷದ ಜೂನ್ ನಲ್ಲಿ ಪಾಲಿಕೆ ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡರು (Congress Leaders) ವಿರೋಧ ವ್ಯಕ್ತ ಪಡಿಸುತ್ತಿದ್ದು, ಆದಷ್ಡು ಬೇಗ ಚುನಾವಣೆ ನಡೆಸಲು ಒತ್ತಾಯಿಸಿದ್ದಾರೆ.
ಪಿಸಿ ಮೋಹನ್ (PC Mohan) ಮನೆಯಲ್ಲಿ ಬಿಜೆಪಿ ಮುಖಂಡರ ಗೌಪ್ಯ ಸಭೆ!
ಕಳೆದ ವಾರ ಬಿಜೆಪಿಯ ಕೇಂದ್ರ ಮುಖಂಡರ ಜೊತೆ ರಾಜ್ಯ ಬಿಜೆಪಿ ಮುಖಂಡರ ಚರ್ಚೆ ನಡೆದಿದೆ. ಸಂಸದ ಪಿ ಸಿ ಮೋಹನ್ ಮನೆಯಲ್ಲಿ ನಡೆದ ಔತಣಕೂಟ ನೆಪದಲ್ಲಿ ನಡೆದ ಈ ಸಭೆಯಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ ಸೇರಿ ಕೆಲ ಮಾಜಿ ಕಾರ್ಪೋರೆಟರ್ ಗಳು ಭಾಗಿಯಾಗಿದ್ದರು. ಬಿಬಿಎಂಪಿ ಚುನಾವಣೆ ಬಗ್ಗೆ ಈ ಗೌಪ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ಬೆಂಗಳೂರಿನ ಪ್ರಭಾವಿ ಸಚಿವರು ಯಾವುದೇ ಕಾರಣಕ್ಕೂ ಸದ್ಯಕ್ಕೆ ಚುನಾವಣೆ ಬೇಡ ಅಂತ ಈ ವೇಳೆ ಪಟ್ಟು ಹಿಡಿದಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಪಾಲಿಕೆ ಚುನಾವಣೆ ಬೇಡ ಎಂದು ಸಭೆಯಲ್ಲಿ ಪ್ರಭಾವಿ ಸಚಿವರು ಪ್ರಸ್ತಾಪ ಮಾಡಿದ್ದಾರೆ.
ಶಾಸಕ, ಸಚಿವರ ಮಾತಿಗೆ ಅಸಮಾಧಾನ ಹೊರ ಹಾಕಿದ ಬಿಜೆಪಿ ವಾರ್ಡ್ ಮುಖಂಡರು!
ಸಚಿವರ ಮಾತಿಗೆ ಬೆಂಗಳೂರು ಶಾಸಕರ ಸರ್ವಾನುಮತದ ಸಮ್ಮತಿ ಸೂಚಿಸಿದರೆ ಶಾಸಕರು ಸಚಿವರ ಮಾತು ಕೇಳಿ ಬೇಸರಗೊಂಡ ಕೆಲ ಮಾಜಿ ಕಾರ್ಫೋರೇಟರ್ ಗಳು ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣೆ ನಡೆಸಿ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಆದರೆ ಚುನಾವಣೆ ಬೇಡವೆಂದು ಸಭೆಯಲ್ಲಿ ತೀರ್ಮಾನಿಸಿ ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಹಾಗೂ ಸಂತೋಷ್ ಜಿ ಮುಂದಿಡಲಾಗಿದೆ.
ಈ ವೇಳೆಯ ಸಚಿವರು ಮತ್ತು ಶಾಸಕರ ಸ್ವಹಿತಾಸಕ್ತಿಯ ಮಾತು ಕೇಳಿ ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರುಗಳು ತಬ್ಬಿಬ್ಬಾಗಿದ್ದಾರೆ. ಮುಂದಿನ ವರ್ಷ ಜೂನ್ ತಿಂಗಳಲ್ಲಿ ಬಿಬಿಎಂಪಿ ಚುನವಾಣೆ ನಡೆಸುವ ಅಲೋಚನೆ ಬಿಜೆಪಿ ವರಿಷ್ಠರದ್ದು. ಈಗ ಬಿಬಿಎಂಪಿ ಚುನಾವಣೆ ನಡೆದರೆ ಟಿಕೆಟ್ ಹಂಚಿಕೆ ವಿಚಾರವಾಗಿ ಭಿನ್ನಮತ ಸ್ಪೋಟ ಸಾಧ್ಯತೆ ಇದೆ. ಪ್ರತಿ ಕ್ಷೇತ್ರದಲ್ಲಿ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಯಾರಿಗೂ ಟಿಕೆಟ್ ನೀಡಿದರೂ ಊಳಿದ ಆಕಾಂಕ್ಷಿಗಳು ರೆಬಲ್ ಆಗಿ ಮುನಿಸಿಕೊಳ್ಳುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಾಲಿಕೆ ಚುನಾವಣೆ ಮುಂದೂಡಿಕೆ!
ವಲಸೆ ಶಾಸಕರ ಬೆಂಬಲಿಗರ ಆಕಾಂಕ್ಷಿಗಳಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಮೂಲ ಬಿಜೆಪಿಗರಿಗೆ ಅಸಮಾಧಾನ ಮೂಡಲಿದೆ. ಇದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ವಿಧಾನ ಸಭೆ ಚುನಾವಣೆ ಮುಗಿದ ಮೇಲೆ ಚುನಾವಣೆ ನಡೆಸೋಣ ಎಂದು ಮಾಜಿ ಸದಸ್ಯರನ್ನು ಮವೊಲಿಸಲಾಗಿದೆ. ಆದರೆ ಪ್ರಭಾವಿ ಸಚಿವರ ನಡೆಗೆ ಪಾಲಿಕೆ ಮಾಜಿ ಸದಸ್ಯರು ಹಾಗೂ ಕಾರ್ಪೊರೇಟ್ ಟಿಕೆಟ್ ಆಕಾಂಕ್ಷಿಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.