ಠಾಣೆಯಲ್ಲಿ 1 ಲಕ್ಷ ಲಂಚ ಪಡೆಯುತ್ತಿದ್ದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯಾ ಮತ್ತು ಹೆಡ್ ಕಾನ್ ಸ್ಟೆಬಲ್ ಜಯಪ್ರಕಾಶ್ ರೆಡ್ಡಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬಂಧಿಸಿದೆ.
ಚಾಮರಾಜಪೇಟೆಯ ನಿವಾಸಿಯೊಬ್ಬರು ಇತ್ತೀಚೆಗೆ ಸೆಕಂಡ್ ಹ್ಯಾಂಡ್ ಮೊಬೈಲ್ ಒಂದನ್ನು ಖರೀದಿಸಿದ್ದರು. ಇದು ಕಳ್ಳತನಗೊಂಡಿದ್ದ ಮೊಬೈಲ್ ಆಗಿದ್ದು, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೊಬೈಲ್ ಖರೀದಿಸಿದವರ ಪತ್ನಿಯನ್ನು ಸಂಪರ್ಕಿಸಿರುವ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್ಸ್ಟೇಬಲ್ ಜಯಪ್ರಕಾಶ್ ರಡ್ಡಿ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನನ್ನು ಬಂಧಿಸುವುದಾಗಿಯೂ, ಅಥವಾ 2 ಲಕ್ಷ ರುಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಇದರ ವಿರುದ್ಧ ಎಸಿಬಿ ಮೊರೆ ಹೋದ ಸಂತ್ರಸ್ತರು, ಎಸಿಬಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಟ್ರ್ಯಾಪ್ನಲ್ಲಿ ಸೌಮ್ಯ ಅವರ ಪರವಾಗಿ ಜಯಪ್ರಕಾಶ್ ರೆಡ್ಡಿ ದೂರುದಾರಿಂದ ಮುಂಗಡವಾಗಿ 1 ಲಕ್ಷ ರುಪಾಯಿ ಪಡೆಯುತ್ತಿರುವ ಸಂಧರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸದ್ಯ ಸೌಮ್ಯ ಹಾಗೂ ಜಯಪ್ರಕಾಶ್ ರೆಡ್ಡಿಯವರನ್ನು ಬಂಧಿಸಿದ್ದು, ಲಂಚದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.