ಹೊಸ ಐಟಿ ನಿಯಮಗಳು ಅಸಂವಿಧಾನಿಕ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್

ಶಿವಕುಮಾರ್‌ ಎ

ಇಂದಿನಿಂದ (ಮೇ ೨೬) ಜಾರಿಗೆ ಬರಲಿರುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ಬುಕ್ ಒಡೆತನದ ವಾಟ್ಸಾಪ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ವಾಟ್ಸಾಪ್ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವುದರಿಂದ ಈ ನಿಯಮಗಳು ಅಸಂವಿಧಾನಿಕ ಎಂದು ವಾಟ್ಸಾಪ್ ತನ್ನ ಅರ್ಜಿಯಲ್ಲಿ ತಿಳಿಸಿದೆ. 

ಮಾಹಿತಿಯ ಮೂಲವನ್ನು ಕಂಡುಹಿಡಿಯಲು ಈ ಹೊಸ ನೀತಿಯು ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದೆ. ಒಂದು ವೇಳೆ ಈ ನೀತಿಗಳನ್ನು ಸೋಶಿಯಲ್ ಮೀಡಿಯಾ ಕಂಪೆನಿಗಳು ಒಪ್ಪಿಲ್ಲವಾದರೆ ಅವುಗಳ ಸೇವೆಯನ್ನು ತಡೆ ಹಿಡಿಯುವುದಾಗಿ ಕೇಂದ್ರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ಸುದ್ದಿಯ ಮೂಲವನ್ನು ಪತ್ತೆ ಹಚ್ಚುವುದು ಸಂವಿಧಾನದ ಪ್ರಕಾರ ಪ್ರಜೆಗಳಿಗೆ ನೀಡಲಾಗಿರುವ ಖಾಸಗಿತನದ ಹಕ್ಕನ್ನು ಕಿತ್ತುಕೊಂಡ ಹಾಗೆ ಎಂದು ವಾಟ್ಸಾಪ್ ಅಭಿಪ್ರಾಯಪಟ್ಟಿದೆ. 

ಇನ್ನು ಈ ಹೊಸ ನೀತಿಯನ್ನು ಜಾರಿಗೆ ತರಲು ಪ್ರಾಯೋಗಿಕವಾದಂತಹ ಅಡತಡೆಗಳು ಕೂಡಾ ಇರುವ ಕಾರಣ ಈ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಹೇಳಿದೆ. ವಾಟ್ಸಾಪ್ ನಲ್ಲಿ ಕಳುಹಿಸಲಾಗುವ ಸಂದೇಶಗಳು End-to-end encrypted ಆಗಿರುವ ಕಾರಣ, ಅದರ ಮೂಲವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಒಂದು ವೇಳೆ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬೇಕಾದರೆ, ಸಂದೇಶ ಕಳುಹಿಸುವವರು ಹಾಗೂ ಅದನ್ನು ಸ್ವೀಕರಿಸುವವರ ಖಾಸಗಿತನಕ್ಕೂ ಧಕ್ಕೆ ಉಂಟಾಗುವುದು ಎಂದು ಹೇಳಿದೆ. 

೨೦೧೭ರ ಜಸ್ಟೀಸ್ ಕೆ ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದ ತೀರ್ಪನ್ನು ವಾಟ್ಸಾಪ್ ತನ್ನ ಅರ್ಜಿಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದ ತೀರ್ಪು ನೀಡುವಾಗ ಸುಪ್ರಿಂಕೋರ್ಟ್ ಖಾಸಗಿತನ ಮೂಲಭೂತ ಹಕ್ಕು ಎಂದು ಪರಿಗಣಿಸಿತ್ತು. ಯಾವುದೇ ಮೂಲವನ್ನು ಪತ್ತೆ ಹಚ್ಚುವುದು ಸಂವಿಧಾನ ಬಾಃಇರವಾದ ಕೆಲಸ ಎಂದು ಹೇಳಿತ್ತು. ಈ ತೀರ್ಪಿನ ಆಧಾರದ ಮೇಲೆ ಈಗ ವಾಟ್ಸಾಪ್ ವಾದ ಮಂಡಿಸಲಿದೆ. 

ಈ ಕುರಿತಾಗಿ ಮಾತನಾಡಿರುವ ವಾಟ್ಸಾಪ್ ವಕ್ತಾರರು, ಪ್ರತಿ ಸಂದೇಶವನ್ನು ಟ್ರೇಸ್ ಮಾಡುವುದು ಎಂದರೆ ಪ್ರತಿ ಸಂದೇಶದ ಬೆರಳಚ್ಚುಗಳನ್ನು ಸಂಗ್ರಹಿಸಿದಂತೆ. ಇದು ವಾಟ್ಸಾಪ್’ನ End-to-end encryption ಅನ್ನು ಒಡೆದು ಹಾಕುವುದಷ್ಟೇ  ಅಲ್ಲದೇ, ಬಳಕೆದಾರರ ಖಾಸಗಿತನಕ್ಕೂ ಧಕ್ಕೆ ತರುತ್ತದೆ, ಎಂದಿದ್ದಾರೆ. 

“ಪ್ರಪಂಚದಾದ್ಯಂತ ಖಾಸಗಿತನಕ್ಕೆ ಒತ್ತು ನಿಡುವ ಸಂಸ್ಥೆಗಳೊಂದಿಗೆ ನಾವು ಭಾಗಿಯಾಗಿದ್ದೇವೆ. ಇದರೊಂದಿಗೆ, ಈಗ ಭಾರತದಲ್ಲಿ ಎದುರಾಗಿರುವ ಸಮಸ್ಯೆಗೆ ಪ್ರಾಯೋಗಿಕವಾದ ಪರಿಹಾರ ಪಡೆಯಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಇದರೊಂದಿಗೆ ಅಗತ್ಯವಿರುವ ಕಾನೂನಾತ್ಮ ದಾಖಲೆಗಳನ್ನು ಕುಡಾ ಒದಗಿಸುತ್ತೇವೆ,” ಎಂದು ಅವರು ಹೇಳಿದ್ದಾರೆ. 

ಭಾರತದಲ್ಲಿ ಪ್ರಶ್ನೆಯಾಗಿಯೇ ಉಳಿದ ಖಾಸಗಿತನ ವಿಚಾರ: 

ಈ ಹಿಂದೆ ಆಧಾರ್’ಗೆ ಸಂಬಂಧಪಟ್ಟಂತೆ ಖಾಸಗಿತನದ ವಿಚಾರ ಚರ್ಚೆಗೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿಯೂ ಯಾವ ವಿಚಾರಗಳು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತವೆ ಎಂಬ ಕುರಿತು ಸ್ಪಷ್ಟವಾದ ನಿರ್ಧಾರವನ್ನು ತಾಳಲು ಸಾಧ್ಯವಾಗಿರಲಿಲ್ಲ. 

ಈಗ ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಾ ಹೋದ ಹಾಗೆ ಜನರು ಖಾಸಗಿತನ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲಿ ನಾವು ಇನ್ನೊಬ್ಬರಿಗೆ ಕಳುಹಿಸುವ ಸಂದೇಶಗಳನ್ನು ಸರ್ಕಾರ ಓದಬಹುದು ಎಂಬ ನಿಯಮ ಜಾರಿಗೆ ಬಂದರೆ, ಖಾಸಗಿತನ ಎಲ್ಲಿ ಉಳಿಯಿತು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ವಾಟ್ಸಾಪ್ ಸಂದೇಶಗಳ ಮುಲವನ್ನು ಕಂಡುಹಿಡಿಯಲು ಇರುವ ಮಾನದಂಡಗಳೇನು? ಇದರಿಂದ ಸಂದೇಶ ಕಳುಹಿಸಿದ ಹಾಗು ಅದನ್ನು ಸ್ವೀಕರಿಸಿದ ವ್ಯಕ್ತಿಗಳ ಸಂದೇಶಗಳು ಎಷ್ಟರ ಮಟ್ಟಿಗೆ ಬಹಿರಂಗವಾಗುತ್ತದೆ? ಯಾವ ರೀತಿಯ ಸಂದೇಶಗಳನ್ನು ಸರ್ಕಾರ ಪಡೆಯಬಹುದು? ವಾಟ್ಸಾಪ್ ಹೇಳಿದ ಹಾಗೆ, ಒಂದು ಸಂದೇಶದ ಮೂಲವನ್ನು ಹುಡುಕುತ್ತಾ ಹೋದರೆ, ಆ ಸಂದೇಶ ಸ್ವೀಕರಿಸಿದ ಪ್ರತಿಯೊಬ್ಬರ ಖಾಸಗಿತನಕ್ಕೂ ಧಕ್ಕೆ ಉಂಟಾಗುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. 

ಇದಕ್ಕು ಮಿಗಿಲಾಗಿ, ಒಬ್ಬರು ಇನ್ನೊಬ್ಬರಿಗೆ ವೈಯಕ್ತಿಕವಾಗಿ ಕಳುಹಿಸುವ ಸಂದೇಶಗಳು ಖಾಸಗಿ ಅಲ್ಲದೇ ಹೋದರೆ, ಯಾವ ವಿಚಾರಗಳು ಖಾಸಗಿತನದ ಅಡಿಯಲ್ಲಿ ಬರುತ್ತವೆ ಎಂಬುದನ್ನಾದರೂ ಸ್ಪಷ್ಟಪಡಿಸಬೇಕಿದೆ. 

ಸಾಮಾಜಿಕ ಜಾಲತಾಣ ನಿಯಂತ್ರಿಸುವ ಸೋಗಿನಲ್ಲಿ ತಮ್ಮ ಅಜೆಂಡಾವನ್ನು ಪ್ರತಿಪಾದಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಿರುವಂತೆ ಗೋಚರಿಸುತ್ತಿದೆ. ಈಗಾಗಲೇ ಸರ್ಕಾರದ ವಿರುದ್ದ ದನಿ ಎತ್ತಿದವರನ್ನು ಕರಾಳ ಯುಎಪಿಎ ಕಾಯ್ದೆಯಡಿಯಲ್ಲಿ ವರ್ಷಾನುಗಟ್ಟಲೆ ಬಂಧಿಸಿ ಜೈಲಿನಲ್ಲಿ ಕೊಳೆಸುವ ಪ್ರಯತ್ನಗಳು ನಡೆಯುತ್ತಲೇ ಇರುವ ಬೆನ್ನಲ್ಲೇ, ಜನರ ವಾಕ್ ಸ್ವಾತಂತ್ರ್ಯವನ್ನು ಕೂಡಾ ಕಸಿದುಕೊಳ್ಳುವ ದುರಾಲೋಚನೆಯೂ ಇದರ ಹಿಂದೆ ಅಡಗಿರಬಹುದು. 

ಸಾಮಾನ್ಯ ಜನರಿಗೆ ತಮ್ಮ ನೊವನ್ನು ಹಾಗೂ ಆಕ್ರೋಶವನ್ನು ಹೊರಹಾಕಲು ಸಾಮಾಜಿಕ ಜಾಲತಾಣಗಳು ವೇದಿಕೆಯನ್ನು ಕಲ್ಪಿಸಿವೆ. ಇದರೊಂದಿಗೆ ಸುಳ್ಳು ಸುದ್ದಿಗಳ ಹಾವಳಿಯೂ ಕೂಡಾ ಸಾಮಾಜಿಕ ಜಾಲತಾಣಗಳನ್ನು ಇನ್ನಿಲ್ಲದಂತೆ ಬಾಧಿಸಿವೆ. ಕರೋನಾ ಸಂಕಷ್ಟದಲ್ಲಿ ವ್ಯಾಕ್ಸಿನ್ ಕುರಿತಾಗಿ ಹುಟ್ಟಿಕೊಮಡಿರುವ ಸುಳ್ಳು ಸುದ್ದಿಗಲ ನಿಯಂತ್ರಣ ನಿಜಕ್ಕೂ ಕಠಿಣ. ಹೀಗೆಂದ ಮಾತ್ರಕ್ಕೆ, ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು ಅಪಾಯಕ್ಕೆ ತಳ್ಳುವಂತಹ ನಿಯಮಗಳು ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಿವೆ. 

ಸಾಂವಿಧಾನಿಕವಾಗಿ ಭಾರತದ ಪ್ರಜೆಗಳಿಗೆ ಲಭಿಸಿರುವಂತಹ ಖಾಸಗಿತನದ ಹಕ್ಕು, ಈಗ ಅಪಾಯದಲ್ಲಿರುವುದಂತೂ ನಿಜ. ಇದರೊಂದಿಗೆ ಸ್ವತಂತ್ರ ಮಾಧ್ಯಮಗಳನ್ನು ಕೂಡಾ ನಿಯಂತ್ರಿಸಲು ಈ ಹೊಸ ಐಟಿ ಕಾಯ್ದೆಯ ಮೂಲಕ ಪ್ರಯತ್ನಿಸಲಾಗುತ್ತಿದೆ. ಇದರ ವಿರುದ್ದ ಪ್ರತಿಧ್ವನಿಯೂ ಸೇರಿದಂತೆ ಹಲವು ಸ್ವತಂತ್ರ ಮಾಧ್ಯಮಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಖಾಸಗಿತನದ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡಾ ಹತ್ತಿಕ್ಕುವ ಸರ್ಕಾರದ ಯೋಜನೆಗೆ ನ್ಯಾಯಾಲಯದ ತೀರ್ಪು ಯಾವ ರಿತಿ ಇರಬಹುದು ಎಂಬುದನ್ನು ಕಾದುನೋಡಬೇಕಿದೆ. 

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...