ಪಾಟ್ನಾ: ಬಿಹಾರದ ಬಂಕಿಪುರ ವಿಧಾನಸಭೆ ಉಪಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷದ ನಾಯಕ, ದೇಶದ ಪ್ರಸಿದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಸುಮಾರು 30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಬಂಕಿಪುರ ಕ್ಷೇತ್ರದಲ್ಲಿ ಈ ಗೆಲುವು ದೊಡ್ಡ ರಾಜಕೀಯ ಬೆಳವಣಿಗೆಯಾಗಿ ಗಮನ ಸೆಳೆದಿದೆ.

ಈ ಜಯದೊಂದಿಗೆ ಜನ್ ಸುರಾಜ್ ಪಕ್ಷ ತನ್ನ ಮೊದಲ ಚುನಾವಣಾ ಗೆಲುವನ್ನು ದಾಖಲಿಸಿದೆ. ಚುನಾವಣಾ ತಂತ್ರಜ್ಞರಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಇದೀಗ ಜನಪ್ರತಿನಿಧಿಯಾಗಿ ಮೊದಲ ಬಾರಿ ಗೆಲುವು ಸಾಧಿಸಿದ್ದಾರೆ.

ಈ ಫಲಿತಾಂಶ ಬಿಹಾರದ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ, ಆರ್‌ಜೆಡಿ, ಜೆಡಿಯು ಹಾಗೂ ಜನ್ ಸುರಾಜ್ ಪಕ್ಷಗಳ ಮುಂದಿನ ರಾಜಕೀಯ ತಂತ್ರಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ಮಧ್ಯಪ್ರದೇಶದ ದತಿಯಾ ಉಪಚುನಾವಣೆಯಲ್ಲೂ ಬಿಜೆಪಿ ಸೋಲು ಕಂಡಿದ್ದು, ಉಪಚುನಾವಣೆ ಫಲಿತಾಂಶಗಳು ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಿವೆ.







