Blurb ಕೃಷಿ ಉತ್ಪನ್ನ ಖರೀದಿ ಕೇಂದ್ರಗಳ ಆರಂಭ ವಿಳಂಬವಾಗುತ್ತಿರುವುದರಿಂದ ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಯನ್ನು ಮಾರಿ ನಷ್ಟಕ್ಕೀಡಾಗುತ್ತಿದ್ದಾರೆ, ಹೀಗಾಗಿ ಮುಂದಿನ ದಿನಗಳಲ್ಲಿ ಕಟಾವಿನ ಪೂರ್ವದಲ್ಲಿಯೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿರುವಂತ ಕಾನೂನನ್ನು ರೂಪಿಸಿ, ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಬೇಕು ಎಂದು ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನೂತನ ಕೃಷಿ ಮಸೂದೆ, ಅದರ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನದ ಹಿನ್ನೆಲೆಯಲ್ಲಿ ರೈತರ ಪರವಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ರೈತರು ಬೆಳೆಯುವ ತರಕಾರಿ, ಹಣ್ಣುಗಳು, ಧಾನ್ಯಗಳು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಸರ್ಕಾರವೇ ಖರೀದಿಸಬೇಕು ಹಾಗೂ ಇದಕ್ಕಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಹಾಗೂ, ಕೃಷಿ ಉತ್ಪನ್ನ ಖರೀದಿ ಕೇಂದ್ರಗಳ ಆರಂಭ ವಿಳಂಬವಾಗುತ್ತಿರುವುದರಿಂದ ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಯನ್ನು ಮಾರಿ ನಷ್ಟಕ್ಕೀಡಾಗುತ್ತಿದ್ದಾರೆ, ಹೀಗಾಗಿ ಮುಂದಿನ ದಿನಗಳಲ್ಲಿ ಕಟಾವಿನ ಪೂರ್ವದಲ್ಲಿಯೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಅಲ್ಲದೆ, ಕೇರಳ ಹಾಗೂ ಪಂಜಾಬ್ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿರುವಂತ ಕಾನೂನನ್ನು ರೂಪಿಸಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿವೆ. ಸರ್ಕಾರ ನಮ್ಮಲ್ಲೂ ಅದೇ ರೀತಿಯ ಕಾನೂನನ್ನು ರೂಪಿಸಿ, ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಪ್ರವಾಹ ಬಂದಿದ್ದರಿಂದ ನಿರೀಕ್ಷೆಗಿಂತ 10 ಲಕ್ಷ ಟನ್ ಆಹಾರ ವಸ್ತುಗಳ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಬಹುತೇಕ ರೈತರು ನಷ್ಟದಲ್ಲಿದ್ದಾರೆ. ಸರ್ಕಾರ ಈ ವರೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದು ನಾಡಿನ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭತ್ತಕ್ಕೆ ಬೆಂಬಲ ಬೆಲೆ ಪ್ರತೀ ಕ್ವಿಂಟಾಲ್ ಗೆ ರೂ.1,868 ಇದೆ, ಮಾರುಕಟ್ಟೆ ಮೌಲ್ಯ ರೂ.1,200 ರಿಂದ ರೂ.1,300 ಇದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭತ್ತದ ಕಟಾವು ಕಾರ್ಯ ಮುಗಿದಿದ್ದು, ಸರ್ಕಾರ ಇನ್ನೂ ಖರೀದಿ ಕೇಂದ್ರ ತೆರೆಯದೆ ಇರುವುದರಿಂದ ಮಾರುಕಟ್ಟೆ ಬೆಲೆಗೆ ರೈತರು ತಮ್ಮ ಬೆಳೆಯನ್ನು ಮಾರುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಭತ್ತಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಮೇಲೆ ಹೆಚ್ಚುವರಿಯಾಗಿ ರೂ.700 ನೀಡಿ ಮಹಾರಾಷ್ಟ್ರ ಸರ್ಕಾರ ಅಲ್ಲಿನ ರೈತರಿಂದ ಖರೀದಿಸುತ್ತಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ನಮ್ಮಲ್ಲೂ ಹೀಗೆ ಹೆಚ್ಚುವರಿ ಹಣ ನೀಡಿ ಭತ್ತ ಖರೀದಿಸಬಹುದು. ಈ ಇಚ್ಛಾಶಕ್ತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಮೂರು ಬಾರಿ ಪತ್ರ ಬರೆದಿದ್ದೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇನೆ, ಈ ವರೆಗೆ ಇಬ್ಬರು ಒಂದು ಪತ್ರಕ್ಕೂ ಉತ್ತರಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳೇ ಪ್ರತಿಪಕ್ಷ ನಾಯಕರ ಪತ್ರಕ್ಕೆ ಉತ್ತರಿಸುವುದಿಲ್ಲ ಅಂತಾದರೆ ಇನ್ನು ಪ್ರಧಾನಿಗಳು ಉತ್ತರಿಸುತ್ತಾರಾ? ಎಂದು ಕೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆಂದು ಭರವಸೆ ನೀಡ್ತಾರೆ. ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲೇ ಅವೈಜ್ಞಾನಿಕತೆ ಇದೆ. ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಸರಿಸಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟಾಗಲು ಸಾಧ್ಯವೇ? ಅನೇಕ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಿಂದ ಹೊರಗಿಡಲಾಗಿದೆ. ಸಜ್ಜೆ, ಅವರೆ, ಸಾಸಿವೆ, ಕಬ್ಬು ಸೇರಿ ಹಲವು ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲ ಮಾಡಿ ಕೃಷಿ ಮಾಡುವ ರೈತರು ಅಗ್ಗದ ಬೆಲೆ ಉತ್ಪನ್ನಗಳನ್ನು ಮಾರಿ, ಸಾಲದ ಮೇಲಿನ ಬಡ್ಡಿ ಕಟ್ಟಲೂ ಆಗದ ಸ್ಥಿತಿಗೆ ತಲುಪಿದ್ದಾರೆ.
ಈ ವರ್ಷ 12.87 ಲಕ್ಷ ಟನ್ ಹತ್ತಿ ಬೆಳೆ ಬರಬಹುದೆಂಬ ನಿರೀಕ್ಷೆಯಿತ್ತು. ಪ್ರವಾಹದ ಪರಿಣಾಮವಾಗಿ ಕೇವಲ 2 ಲಕ್ಷ ಟನ್ ಹತ್ತಿ ಬೆಳೆ ಕೈಗೆ ಬಂದಿದೆ. ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಸರ್ಕಾರ ನ್ಯಾಯಯುತ ಬೆಲೆ ಕೊಡಿಸಲ್ಲ ಅಂತಾದರೆ ರೈತರಿಗೆ ಯಾರು ದಿಕ್ಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.