ಮಾರ್ಚ್ ಎರಡನೇ ವಾರದ ಹೊತ್ತಿಗೆ ದೇಶದಲ್ಲಿ ಆರಂಭವಾದ ಕೋವಿಡ್ ಎರಡನೇ ಅಲೆ, ಈಗಾಗಲೇ ದೇಶದ ಹಳ್ಳಿ ಮೂಲೆ ಮೂಲೆಗೂ ತಲುಪಿ ಬಹುತೇಕ ತಿಂಗಳೇ ಉರುಳಿದೆ.
ಏಪ್ರಿಲ್ನಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಹೇರುವ ಹೊತ್ತಿಗೆ, ಉದ್ಯೋಗ ಅರಸಿ ನಗರಗಳಿಗೆ ಹೋಗಿದ್ದ ಹಳ್ಳಿಗರು ವಾಪಸು ತಮ್ಮ ಮೂಲ ಊರುಗಳತ್ತ ಮುಖಮಾಡುತ್ತಲೇ ಎರಡನೇ ಅಲೆ ಎಬ್ಬಿಸಿದ ರೂಪಾಂತರಿ ಕರೋನಾ ವೈರಸ್ ಕೂಡ ಗ್ರಾಮ-ಗ್ರಾಮಗಳಿಗೆ ತಲುಪಿತ್ತು. ಕಳೆದ ಸುಮಾರು ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ನಗರವಾಸಿಗಳಷ್ಟೇ ಹಳ್ಳಿಗರ ಪಾಲೂ ಇದೆ ಎಂಬುದು ಪ್ರತಿ ದಿನ ಗ್ರಾಮೀಣ ಭಾಗದ ಪ್ರತಿ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳವಾರು ವರದಿಯಾಗುತ್ತಿರುವ ಸೋಂಕು ಪ್ರಕರಣಗಳು ಮತ್ತು ಸಾವುಗಳೇ ಹೇಳುತ್ತಿರುವ ಕಟುವಾಸ್ತವ.
ಕರ್ನಾಟಕದ ಮಟ್ಟಿಗಂತೂ ಗ್ರಾಮೀಣ ಭಾಗದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿತ್ಯ 25-30 ಪ್ರಕರಣಗಳು ದೃಢಪಡುತ್ತಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲೂ 500-600 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ ಕೂಡ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಿದೆ. ಮತ್ತೊಂದು ಗಮನಾರ್ಹ ವಿಷಯವೆಂದರೆ, ಕೋವಿಡ್ ಆಸ್ಪತ್ರೆಗಳು ಇರುವ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಗೆ ತಲುಪುವ ಮುನ್ನವೇ ಸಕಾಲದಲ್ಲಿ ಚಿಕಿತ್ಸೆ ಸಿಗದೆ, ಆಮ್ಲಜನಕ ಸಿಗದೆ, ಹಾಸಿಗೆ ಸಿಗದೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಲಾಕ್ ಡೌನ್ ನಡುವೆ ನಗರಗಳಿಗೆ ತಲುಪಲು ಸಕಾಲದಲ್ಲಿ ಸಾರಿಗೆ ವ್ಯವಸ್ಥೆಗಳಿಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕ ಪಡೆಯಲು ಈಗ ಸಾಮಾನ್ಯವಾಗಿ ಬೇಕಾದ ಪ್ರಭಾವಿಗಳ ಸಂಪರ್ಕವಿರದೆ ಇಂತಹ ಸಾವುಗಳು ಸಂಭವಿಸುತ್ತಿವೆ. ಒಂದು ವೇಳೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಆಮ್ಲಜನಕ ಸಿಕ್ಕಿದ್ದರೆ ಇವರಲ್ಲಿ ಹಲವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇತ್ತು ಎಂಬುದನ್ನು ತಳ್ಳಿಹಾಕಲಾಗದು.
ಆದರೆ, ಕರೋನಾ ಕುರಿತ ಮಾಹಿತಿಯನ್ನು ಮುಚ್ಚಿಡುವುದರಲ್ಲಿ ಆರಂಭದಿಂದಲೂ ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳು ತೋರುತ್ತಿರುವ ನಿಗೂಢ ಆಸಕ್ತಿಯ ಕಾರಣದಿಂದ, ಎರಡನೇ ಅಲೆಯಲ್ಲಿ ಸೋಂಕಿತರು, ಸಾವು ಕಂಡವರ ಕುರಿತ ಕರಾರುವಾಕ್ಕು ವಿವರಗಳು ಒಂದೆಡೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಆಯಾ ತಾಲೂಕುವಾರು ಮಾಹಿತಿಯನ್ನು ತಾಲೂಕು ಆಡಳಿತಗಳು ನಿತ್ಯ ಬಿಡುಗಡೆ ಮಾಡಿದರೂ, ಇಡೀ ರಾಜ್ಯದಲ್ಲಿ ನಿತ್ಯ ವರದಿಯಾಗುತ್ತಿರು ಪ್ರಕರಣಗಳ ಪೈಕಿ ಎಷ್ಟು ಗ್ರಾಮೀಣ ಭಾಗದಲ್ಲಿ ವರದಿಯಾಗಿವೆ? ಆ ಪೈಕಿ ಎಷ್ಟು ಮಂದಿ ಯಾವ ವಯೋಮಾನದವರು, ಅವರು ಗಂಡಸರೇ? ಹೆಂಗಸರೇ? ಕೃಷಿಕರೆ? ಕೃಷಿ ಕಾರ್ಮಿಕರೆ? ಕೂಲಿಗಳೇ? ಮುಂತಾದ ನಿರ್ಣಾಯಕ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.
ಅಷ್ಟೇ ಅಲ್ಲ; ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯ ಆಧಾರ ಸ್ತಂಭಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಲೂ ಕನಿಷ್ಟ ಒಬ್ಬ ವೈದ್ಯರೂ ಇಲ್ಲದೆ, ಕೇವಲ ದಾದಿಯರು ಮತ್ತು ಸಹಾಯಕರೇ ಆಸರೆಯಾಗಿರುವ, ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆಯ ಯಾವ ಸೌಲಭ್ಯಗಳೂ ಇರದ ಹೀನಾಯ ಸ್ಥಿತಿ ಮುಂದುವರಿದಿದೆ. ಇರುವ ಸಿಬ್ಬಂದಿಯನ್ನು ಕೋವಿಡ್ ಲಸಿಕೆ ನೀಡಿಕೆಗೆ ಆದ್ಯತೆಯಾಗಿ ನೇಮಿಸಿರುವುದರಿಂದ, ಕೋವಿಡ್ ಸೋಂಕಿತರ ಐಸೋಲೇಷನ್, ಕ್ವಾರಂಟೈನ್, ಆರೋಗ್ಯ ನಿಗಾದಂತಹ ಕೆಲಸಗಳನ್ನು ಮಾಡಲು ಕೂಡ ಸಿಬ್ಬಂದಿಗಳ ತೀವ್ರ ಕೊರತೆ ಇದೆ. ಆಶಾ ಕಾರ್ಯಕರ್ತೆಯರಿಗೆ ಮತ್ತು ಆ್ಯಂಬುಲೆನ್ಸ್ ಚಾಲಕರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನ ಕೂಡ ನೀಡಿಲ್ಲ ಎನ್ನಲಾಗುತ್ತಿದೆ!
ಸುಮಾರು 20-25 ಸಾವಿರ ಜನಸಂಖ್ಯೆಗೆ ಒಂದು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಕನಿಷ್ಟ ಸೌಲಭ್ಯ ಮತ್ತು ಸಿಬ್ಬಂದಿಯ ವ್ಯವಸ್ಥೆ ಮಾಡದ ಸರ್ಕಾರ, ಈಗಲೂ ಕೇವಲ ಸೋಂಕು ಪತ್ತೆ ಪರೀಕ್ಷೆ, ಸೋಂಕಿತರ ಸಂಪರ್ಕಿತರ ಪತ್ತೆ, ಪ್ರತ್ಯೇಕಿಸುವಿಕೆ(ಕ್ವಾರಂಟೈನ್) ಮಾಡುವುದಕ್ಕೆ ಮಾತ್ರ ತನ್ನ ಕರ್ತವ್ಯವನ್ನು ಸೀಮಿತಗೊಳಿಸಿಕೊಂಡಿದೆ. ಜೊತೆಗೆ ಲಾಕ್ ಡೌನ್ ಹೇರಿ ಕೈತೊಳೆದುಕೊಂಡಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಅಲ್ಲಿನ ಜನಜೀವನ, ವೃತ್ತಿ ಅನಿವಾರ್ಯತೆ, ಕೃಷಿ ಕೆಲಸಗಳ ಹಿನ್ನೆಲೆಯಲ್ಲಿ ಇಂತಹ ಯಾವ ಕ್ರಮಗಳೂ ನಿರೀಕ್ಷಿತ ಫಲ ಕೊಟ್ಟಿಲ್ಲ ಎಂಬುದು ಭಾರೀ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಲೇ ಸಾಬೀತಾಗುತ್ತಿದೆ.
ಇಂತಹ ಚಿಂತಾಜನಕ ಸ್ಥಿತಿಯಲ್ಲಿ ಗ್ರಾಮೀಣ ಆರೋಗ್ಯ ವ್ಯವಸ್ಥೆ ಇರುವಾಗ, ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಗ್ರಾಮೀಣ ಭಾರತ ಸಜ್ಜಾಗಿದೆ ಎಂದು ಮಂಗಳವಾರ ಹೇಳಿದ್ದಾರೆ! ವಾಸ್ತವವಾಗಿ ಗ್ರಾಮೀಣ ಭಾಗಕ್ಕೆ ಎರಡನೇ ಅಲೆ ಕಾಲಿಟ್ಟು, ಸಾವು-ನೋವುಗಳ ಅನಾಹುತ ಸೃಷ್ಟಿಸಿ ಈಗಾಗಲೇ ತಿಂಗಳು ಕಳೆದಿದೆ. ಕೆಲವು ಭಾಗದಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ, ಪಂಚಾಯ್ತಿ ಕೇಂದ್ರದಿಂದ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏಳೆಂಟು ಕಿ.ಮೀ ದೂರದಲ್ಲಿರುವ ಕುಗ್ರಾಮಗಳಲ್ಲಿ ಕೂಡ ಮನೆಮನೆಗೆ ಸೋಂಕು ಲಕ್ಷಣಗಳಸಹಿತ ಕರೋನಾ ಸೋಂಕಿತರಿದ್ದಾರೆ. ಇನ್ನು ಸೋಂಕು ಲಕ್ಷಣರಹಿತ ಸೋಂಕಿತರ ಸಂಖ್ಯೆ ಊಹೆಗೂ ನಿಲುಕದ್ದು, ಹಾಗಾಗಿ ಬಹುತೇಕ ಮಲೆನಾಡು ಭಾಗದಲ್ಲಂತೂ ಕೃಷಿ ಚಟುವಟಿಕೆ ಕೂಡ ಸ್ಥಗಿತವಾಗಿದೆ. ಕೃಷಿ ಕೆಲಸಕ್ಕೆ ಒಂದು ಕಡೆ ಕಠಿಣ ಲಾಕ್ ಡೌನ್ ಅಡ್ಡಿಯಾಗಿದ್ದರೆ ಮತ್ತೊಂದು ಕಡೆ ಅಕ್ಕಪಕ್ಕದ ಮನೆಯವರು ಸೇರಿ ಪರಸ್ಪರದ ಕೆಲಸಕಾರ್ಯ ಮಾಡಲು ಕೂಡ ಕರೋನಾ ಸೋಂಕು ಹಬ್ಬಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ಮೋದಿ, ಗ್ರಾಮೀಣ ಭಾಗದ ವಾಸ್ತವಾಂಶಗಳ ಅರಿವೇ ಇಲ್ಲದಂತೆ ಮತ್ತು ಎರಡನೇ ಅಲೆ ದೇಶದಲ್ಲಿ ಎಷ್ಟು ವ್ಯಾಪಕವಾಗಿದೆ ಎಂಬುದರ ಮಾಹಿತಿಯೇ ಇಲ್ಲದಂತೆ, ಗ್ರಾಮೀಣ ಭಾಗವನ್ನು ಇನ್ನೂ ಬರಲಿರುವ ಎರಡನೇ ಅಲೆಗೆ ಸಜ್ಜುಗೊಳಿಸುವ ಮಾತನಾಡಿರುವುದು ವಿಪರ್ಯಾಸಕರ. ಅಲ್ಲದೆ, ಈಗಲೂ ಅವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಹೇಳಿರುವುದು, ಸೋಂಕಿತರ ಪರೀಕ್ಷೆ, ಪತ್ತೆ, ಕ್ವಾರಂಟೈನ್ ಮೂರೇ ಕರೋನಾ ವಿರುದ್ದದ ಹೋರಾಟದಲ್ಲಿ ಪ್ರಮುಖ ಹೆಜ್ಜೆಗಳು ಎಂದಿದ್ದಾರೆ! ವಾಸ್ತವವಾಗಿ ಗ್ರಾಮೀಣ ಭಾಗದಲ್ಲಿ ಕೂಡ ಈಗಾಗಲೇ ಸೋಂಕು ಒಟ್ಟಾರೆ ಜನಸಂಖ್ಯೆಯ ಶೇ.40ಕ್ಕಿಂತ ಹೆಚ್ಚು ಜನರಿಗೆ ಹರಡಿದೆ ಎಂಬುದನ್ನು ಸೋಂಕು ಪತ್ತೆ ಪರೀಕ್ಷೆಯ ಸಾರಾಂಶವೇ ಹೇಳುತ್ತಿರುವಾಗ, ಈಗಲೂ ಪರೀಕ್ಷೆ, ಸಂಪರ್ಕಿತರ ಪತ್ತೆ, ಐಸೋಲೇಷನ್ ಮಂತ್ರ ಪಠಿಸುವುದೇ ಹಾಸ್ಯಾಸ್ಪದ.
ಬದಲಿಗೆ “ಈಗ ಆಗಬೇಕಿರುವುದು ಕನಿಷ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಂದಂತೆ ಮೊಬೈಲ್ ಕ್ಲಿನಿಕ್ ಗಳನ್ನು ಆರಂಭಿಸುವುದು. ಮತ್ತು ಆ ಮೂಲಕ ಎರಡು-ಮೂರು ವೈದ್ಯಕೀಯ ಸಿಬ್ಬಂದಿ ಮತ್ತು ಕನಿಷ್ಟ ಚಿಕಿತ್ಸಾ ವ್ಯವಸ್ಥೆಯೊಂದಿಗೆ ಮನೆಮನೆಗೆ ಭೇಟಿ ನೀಡಿ ರೋಗ ಲಕ್ಷಣ ಇರುವವರ ಪರೀಕ್ಷೆ, ಅವರಿಗೆ ಆಹಾರ ಮತ್ತು ಆರೋಗ್ಯ ಸಲಹೆ, ಅಗತ್ಯವಿರುವವರ ಆಮ್ಲಜನಕ ಮಟ್ಟದ ಪರಿಶೀಲನೆ ಮತ್ತು ತುರ್ತು ಇದ್ದಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆಗೆ ವ್ಯವಸ್ಥೆ ಮಾಡುವ ವ್ಯವಸ್ಥೆಗಳನ್ನು ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಮಾಡಬೇಕಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಲಭ್ಯವಿರುವ ಅನುದಾನ ಮತ್ತು ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಿರುವ ಸೌಲಭ್ಯಗಳನ್ನೇ ಬಳಸಿಕೊಂಡು ಇಷ್ಟನ್ನು ವ್ಯವಸ್ಥೆ ಮಾಡಲು ಸಾಧ್ಯವಿದೆ. ಹೆಚ್ಚೆಂದರೆ, ಮೊಬೈಲ್ ಕ್ಲಿನಿಕ್ ಗೆ ವಾಹನದ ವ್ಯವಸ್ಥೆ ಮಾಡುವುದು ಕಷ್ಟವಾಗಬಹುದು. ಆಯಾ ವ್ಯಾಪ್ತಿಯ ದಾನಿಗಳು, ಸಾಮಾಜಿಕ ಕಾಳಜಿಯ ಜನರು ಸಹಾಯಹಸ್ತ ಚಾಚಿದರೆ, ಒಂದು ವ್ಯಾನ್ ಅಥವಾ ಜೀಪ್ ವ್ಯವಸ್ಥೆ ಮಾಡುವುದು ಕೂಡ ಕಷ್ಟವಾಗಲಿಕ್ಕಿಲ್ಲ. ಆದರೆ, ಇದೀಗ ಮುಂದಿನ ಹತ್ತು-ಹನ್ನೆರಡು ದಿನಗಳಲ್ಲಿ ಇಂತಹದ್ದೊಂದು ವ್ಯವಸ್ಥೆ ಮಾಡುವುದು ಸಾಧ್ಯವಾದರೆ, ಹಳ್ಳಿಗಾಡಿನ ಬಹಳಷ್ಟು ಜನರ ಜೀವ ಉಳಿಸಲು ಸಾಧ್ಯವಿದೆ. ಅದು ಬಿಟ್ಟು ಈಗಲೂ ಪರೀಕ್ಷೆ, ಪತ್ತೆ, ಪ್ರತ್ಯೇಕತೆಯ ಮಂತ್ರ ಹೇಳುತ್ತಾ ಕುಳಿತರೆ, ಸಾವುಗಳನ್ನು ತಪ್ಪಿಸಲಾಗದು” ಎನ್ನುತ್ತಾರೆ ಖ್ಯಾತ ವೈದ್ಯ ಡಾ ಶ್ರೀನಿವಾಸ ಕಕ್ಕಿಲಾಯ.
ಆದರೆ, ಮಂಗಳವಾರ ಕರ್ನಾಟಕವೂ ಸೇರಿದಂತೆ ತೀವ್ರ ಕೋವಿಡ್ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿಯವರು ನಡೆಸಿದ ಟೆಲಿ ಕಾನ್ಫರೆನ್ಸಿನಲ್ಲಿ ಬಹುತೇಕ ಪ್ರಸ್ತಾಪವಾಗಿದ್ದು ಕಳೆದ ಒಂದು ವರ್ಷದಿಂದ ದೇಶದಲ್ಲಿ ಕರೋನಾ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಲಾಕ್ ಡೌನ್, ಪರೀಕ್ಷೆ, ಪತ್ತೆ, ಕ್ವಾರಂಟೈನ್ನಂತಹ ವಿಷಯಗಳೇ ಹೊರತು, ವಾಸ್ತವವಾಗಿ ಗ್ರಾಮೀಣ ಭಾಗದಲ್ಲಿ ಸದ್ಯದ ಸಿದ್ಧತೆ ಹೇಗಿದೆ? ಯಾವೆಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ? ಮುಂದಿನ ದಿನಗಳಲ್ಲಿ ಮೂರನೇ ಅಲೆಯ ನಿರೀಕ್ಷೆಯ ಹಿನ್ನೆಲೆಯಲ್ಲಿ ಇನ್ನಷ್ಟು ವ್ಯವಸ್ಥೆಗಳೇನು ಆಗಬೇಕಿದೆ? ಎಂಬಂತಹ ಯಾವ ವಿಷಯಗಳೂ ಚರ್ಚೆಗೆ ಬರಲಿಲ್ಲ. ಹಾಲಿ ಇರುವ ವವಸ್ಥೆಯ ಮಿತಿ-ಲೋಪಗಳ ಕುರಿತ ಚರ್ಚೆಯಂತೂ ದೂರವೇ ಉಳಿಯಿತು. ಇನ್ನು ಮೊಬೈಲ್ ಕ್ಲಿನಿಕ್, ಪಂಚಾಯ್ತಿವಾರು ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯುವಂತಹ ಯೋಚನೆಗಳ ಮಾತಂತೂ ದೂರವೇ ಉಳಿಯಿತು.
ಹಾಗಾಗಿ, ಗ್ರಾಮೀಣ ಭಾಗದ ಜನ ಈಗ ಕರೋನಾದ ವಿರುದ್ಧ ಒಂದು ಕಡೆ ದುಡಿಮೆ ಕಸಿದ ಲಾಕ್ ಡೌನ್ ಕರುಣಿಸಿದ ಹಸಿದ ಹೊಟ್ಟೆಯಲ್ಲಿ, ಕನಿಷ್ಟ ವೈದ್ಯಕೀಯ ನೆರವು ಕೂಡ ಇಲ್ಲದೆ ಬರಿಗೈ ಹೋರಾಟ ನಡೆಸುತ್ತಿದ್ದರೆ, ಇತ್ತ ದೇಶದ ಐಷಾರಾಮಿ ಎಸಿ ರೂಮುಗಳಲ್ಲಿ ಕುಳಿತ ಅಧಿಕಾರಸ್ಥರು, ಕರೋನಾ ಎರಡನೇ ಅಲೆಯ ವಿರುದ್ಧ ಸಮರದ ಮಾತನಾಡುತ್ತಿದ್ದಾರೆ!