ಅಸಮರ್ಥ ನಾಯಕತ್ವ, ಅಧಿಕಾರದ ಮಹದಾಸೆ, ಗುರಿಯಿಲ್ಲದ ದೂರದೃಷ್ಟಿತ್ವದಿಂದಾಗಿ ಈಗಾಗಲೇ ಭಾರತ ಕರೋನಾ ಸೋಂಕಿನ ಕರಿನೆರಳಿಗೆ ತುತ್ತಾಗಿ ಒದ್ದಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾದ ಕರೋನಾ ಪ್ರಕರಣಗಳ ಸಂಖ್ಯೆ, ಒಂದು ತಿಂಗಳಲ್ಲಿ ದಾಖಲಾಗುವ ಮಟ್ಟಕ್ಕೆ ದೇಶದಲ್ಲಿ ಸೋಂಕು ಹಬ್ಬಿದೆ. ಸರ್ಕರವೇ ಹೇಳುವಂತೆ ಸೋಂಕು ತಡೆಗಟ್ಟಲು ಇರುವ ಮಾರ್ಗವೆಂದರೆ ಕೋವಿಡ್ ಲಸಿಕೆ ಪಡೆಯುವುದು. ಈಗ ಆ ಲಸಿಕೆಯ ಅಭಾವವು, ದೇಶವನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ತಳ್ಳಿದೆ.

ರಾಜ್ಯಗಳಿಗೆ ಬೇಕಾಗುವಷ್ಟು ಲಸಿಕೆಗಳನ್ನು ಆಯಾ ರಾಜ್ಯಗಳೇ ಖರೀದಿಸಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದ್ದರೂ, ಲಸಿಕೆಗಳ ಕೊರತೆ ರಾಜ್ಯ ಸರ್ಕಾರಗಳ ಕೈ ಕಟ್ಟಿ ಹಾಕಿದೆ. ಈಗಾಗಲೇ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್’ಗಳ ಕೊರತೆ ಭಾರತವನ್ನು ಇನ್ನಿಲ್ಲದಂತೆ ಬಾಧಿಸುತ್ತಿದ್ದರೆ, ಅಂತರಾಷ್ಟ್ರೀಯ ಲಸಿಕಾ ತಯಾರಕರು, ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಸಲು ಹಿಂದೇಟು ಹಾಕುತ್ತಿವೆ.
ದೇಸೀಯ ಲಸಿಕಾ ತಯಾರಕರು ಪ್ರತಿ ತಿಂಗಳು ಸುಮಾರು ಎಂಬತ್ತು ಮಿಲಿಯನ್ ಡೋಸ್’ಗಳನ್ನು ಉತ್ಪಾದಿಸುತ್ತಿದ್ದರೂ, ಭಾರತದ ಬೃಹತ್ ಜನಸಂಖ್ಯೆಗೆ ಅದು ಸಾಲುತ್ತಿಲ್ಲ. ಈಗ ಅನಿವಾರ್ಯವಾಗಿ ವಿದೇಶಿ ಲಸಿಕೆ ತಯಾರಕರ ಮೊರೆ ಹೋಗುವ ಸಂದರ್ಭ ಎದುರಾಗಿದೆ. ಆದರೆ, ಅಮೇರಿಕಾ ಮೂಲದ ಲಸಿಕೆ ತಯಾರಕಾ ಸಂಸ್ಥೆಯಾದ ಮೋಡೆರ್ನಾ, ಪಂಜಾಬ್ ರಾಜ್ಯ ಸರ್ಕಾರಕ್ಕೆ ಲಸಿಕೆ ಪೂರೈಸುವುದಿಲ್ಲ ಎಂದು ಹೇಳಿದೆ. ಬದಲಾಗಿ ಕೇಂದ್ರ ಸರ್ಕಾರದೊಂದಿಗೆ ಮಾತ್ರ ವ್ಯವಹಾರವನ್ನು ಇಟ್ಟುಕೊಳ್ಳುವುದಾಗಿ ನೇರ ಮಾತುಗಳನ್ನಾಡಿದೆ.
27 ಮಿಲಿಯನ್ ಜನಸಂಖ್ಯೆ ಇರುವಂತಹ ಪಂಜಾಬ್ ರಾಜ್ಯದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಈಗಾಗಲೇ ನಿಂತು ಹೋಗಿದೆ. ಕೇಂದ್ರ ಸರ್ಕಾರದಿಂದ ಕೇವಲ 4.4 ಮಿಲಿಯನ್ ಡೋಸ್ ಲಸಿಕೆ ಪಡೆದಿದ್ದ ಪಂಜಾಬ್ ಸರ್ಕಾರ, ಲಸಿಕೆ ಖರೀದಿಗಾಗಿ ಮೋಡೆರ್ನಾ ಸಂಸ್ಥೆಯನ್ನು ಸಂಪರ್ಕಿಸಿತ್ತು. ಆದರೆ, ಪಂಜಾಬ್ ಮನವಿಗೆ ಸಕಾಲದಲ್ಲಿ ಸ್ಪಂದಿಸದ ಮೋಡೆರ್ನಾ, ನಂತರ ಕೇವಲ ಕೇಂದ್ರ ಸರ್ಕಾರದೊಂದಿಗೆ ವ್ಯವಹಾರ ಇಟ್ಟುಕೊಳ್ಳುವುದಾಗಿ ಹೇಳಿತ್ತು.
ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿರುವ ಪಂಜಾಬ್’ನ ಉನ್ನತ ಪಟ್ಟದ ಅಧಿಕಾರಿಯಾಗಿರುವ ವಿಕಾಸ್ ಗರ್ಗ್ ಅವರು, ಪಂಜಾಬ್ ಸರ್ಕಾರದ ಪರವಾಗಿ ಫೈಜರ್, ಜೋನ್ಸನ್ & ಜೋನ್ಸನ್ ಕಂಪನಿಗಳಿಗೆ ಕೂಡಾ ಮನವಿ ಸಲ್ಲಿಸಲಾಗಿತ್ತು. ಆದರೆ, ಅವರಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.
ಇದು ಕೇವಲ ಪಂಜಾಬ್ ಪರಿಸ್ಥಿತಿ ಮಾತ್ರವಲ್ಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 18-44ರ ಒಳಗಿನವರಿಗೆ ಲಸಿಕೆ ನಿಡುವುದನ್ನು ತಡೆಹಿಡಿಯಲಾಗಿದೆ. ಲಸಿಕೆಗಳ ಕೊರತೆ ಕರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ದೇಶವಾದ ಭಾರತದಲ್ಲಿ ಈವರೆಗೆ ಕೇವಲ 41.6 ಮಿಲಿಯನ್ ಜನರಿಗಷ್ಟೇ ಲಸಿಕೆ ತಲುಪಿದೆ. ಅಂದರೆ, ಭಾರತದ ಒಟ್ಟು ಜನಸಂಖ್ಯೆಯ 3.8% ಜನರು ಮಾತ್ರ ಲಸಿಕೆಯನ್ನು ಪಡೆದಿದ್ದಾರೆ. ಉಳಿದವರೆಲ್ಲರೂ, ಈಗಲೂ ಕರೋನಾ ಸೋಂಕಿಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.
ಇನ್ನು ಭಾರತಕ್ಕೆ ಫೈಜರ್ ಲಸಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಇನ್ನು ಕೂಡಾ ಮಾತುಕತೆಗಳು ನಡೆಯುತ್ತಿದ್ದು, ಯಾವುದೇ ನಿರ್ಣಾಯಕ ಹಂತ ತಲುಪಲಾಗಿಲ್ಲ. ಇದಕ್ಕೂ ಹಿಂದೆ, ಫೈಜರ್ ಕುಡಾ ತಾನು ಕೇಂದ್ರ ಸರ್ಕಾರದೊಂದಿಗೆ ಮಾತ್ರ ವ್ಯವಹಾರವನ್ನು ಇಟ್ಟುಕೊಳ್ಳುವುದಾಗಿ ಹೇಳಿತ್ತು.

ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಲಸಿಕೆಯನ್ನು ಪಡೆಯಲು ಅವಕಾಶ ನೀಡದಿದ್ದರೆ, ರಾಜ್ಯಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಲಿದೆ.
ಈಗಾಗಲೇ ಕರ್ನಾಟಕವು ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿಯೂ 18-44 ವರ್ಷದೊಳಗಿನವರಿಗೆ ಲಸಿಕೆಯನ್ನು ನೀಡಲಾಗುತ್ತಿಲ್ಲ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಸೋಂಕು ಹರಡುವ ವೇಗ ಕಡಿಮೆಯಾಗಿದ್ದರೂ, ಮರಣ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಕೋವಿಡ್ ಮೂರನೇ ಅಲೆ ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ, ದೇಶದ ಬಹುಪಾಲು ಜನರಿಗೆ ಲಸಿಕೆ ಲಭ್ಯವಾಗಬೇಕಿದೆ.







