3ನೇ ಹಂತದ ಕರೋನಾ ಲಸಿಕೆ ಅಭಿಯಾನ ಆರಂಭವಾದರೂ ನೀಗದ ಲಸಿಕೆ‌‌ ಕೊರತೆ

[Sassy_Social_Share]

ಜಾಗತಿಕವಾಗಿ ಇದು ಅವಮಾನ, ತಲೆ ತಗ್ಗಿಸಬೇಕಾದಂತಹ ಸಂಗತಿ. ಇಂಥ ಸಂಗತಿಗಳಿಂದಲೇ ದೇಶದಲ್ಲಿ ಕರೋನಾ ಪರಿಸ್ಥಿತಿ ಹದಗೆಟ್ಟಿರುವುದು. ಅಂತಾರಾಷ್ಟ್ರೀಯ ಸಮುದಾಯ ಭಾರತವನ್ನು ‘ಕರೋನಾ ಹರಡುವ ಹಾಟ್ ಸ್ಪಾಟ್’ ಎಂದು ಬಣ್ಣಿಸತೊಡಗಿರುವುದು. ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿರುವುದು. ಇಷ್ಟು ದೊಡ್ಡ ದೇಶ, 35 ಸಾವಿರ ಕೋಟಿ ರೂಪಾಯಿಗಳನ್ನು ಕರೋನಾ ಪರಿಸ್ಥಿತಿ ನಿರ್ವಹಣೆಗೆಂದು ಬಜೆಟ್ ನಲ್ಲಿ ಅಧಿಕೃತವಾಗಿ ಮೀಸಲಿಟ್ಟಿರುವ ದೇಶ ತನ್ನ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡುವ ವಿಚಾರದಲ್ಲಿ ಇನ್ನೂ ಮೀನಾಮೇಷಾ ಎಣಿಸುತ್ತಿದೆ.

ವಾಸ್ತವವಾಗಿ ಇಂದಿನಿಂದ ದೇಶಾದ್ಯಂತ ಕರೋನಾ ಲಸಿಕೆ ಹಾಕುವ ಅಭಿಯಾನ ಆರಂಭ ಆಗಬೇಕಿತ್ತು. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಾಗಿತ್ತು. ಆದರೆ ಹಲವು ರಾಜ್ಯಗಳಿಗೆ ಅಗತ್ಯಕ್ಕೆ ತಕ್ಕಂತೆ ಕರೋನಾ ಲಸಿಕೆ ಪೂರೈಕೆಯಾಗಿಲ್ಲ. ಹಾಗಾಗಿ‌ ಇಂದು‌ ದೇಶದೆಲ್ಲೆಡೆ ಕರೋನಾ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿಲ್ಲ. ‘ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಗತ್ಯ ಇರುವಷ್ಟು‌ ಕರೋನಾ ಲಸಿಕೆ ಪೂರೈಕೆ ಮಾಡಿಲ್ಲ. ಆದುದರಿಂದ ಇಂದಿನಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ’ ಎಂದು 10 ರಾಜ್ಯಗಳು ಅಸಹಾಯಕತೆ ವ್ಯಕ್ತಪಡಿಸಿವೆ.

ಕರ್ನಾಟಕದ ಆರೋಗ್ಯ ಸಚಿವರೂ, ಸ್ವತಃ ವೈದ್ಯರೂ ಆದ ಡಾ‌. ಕೆ. ಸುಧಾಕರ್, ‘ರಾಜ್ಯದಲ್ಲಿ ಕರೋನಾ ಲಸಿಕೆಗಳು ಸಿಕ್ಕಿಲ್ಲ. ಆದುದರಿಂದ ಯಾರೂ ಲಸಿಕಾ ಕೇಂದ್ರಗಳ ಬಳಿ ಬರಬಾರದು’ ಎಂದು ಒಂದು ದಿನ ಮುಂಚೆ ರಾಜ್ಯದ ಜನರೆದುರು ಮನವಿ ಮಾಡಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಬಹುತೇಕ ಇದೇ ರೀತಿ ಆಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ತಮ್ಮ ಸರ್ಕಾರ ಅಗತ್ಯ ಇರುವಷ್ಟು ಲಸಿಕೆ‌ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಲಸಿಕೆ ನೀಡಿದ ಬಳಿಕ ನಾವು ಜನರಿಗೆ ವಿತರಿಸುತ್ತೇವೆ. ಆದುದರಿಂದ ಯಾರೂ ಲಸಿಕಾ ಕೇಂದ್ರಗಳ ಬಳಿ ಬರಬಾರದು’ ಎಂದು ವಿನಂತಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಕಡೆ ಗಳಿಗೆಯಲ್ಲಿ ಗುಜರಾತ್ ಸರ್ಕಾರ ಕೂಡ ‘ಇಂದಿನಿಂದ ಲಸಿಕೆ‌ ನೀಡುವ ಅಭಿಯಾನ ನಡೆಸಲು ಸಾಧ್ಯವಿಲ್ಲ’ ಎಂದಿದೆ.

ಕರ್ನಾಟಕ, ದೆಹಲಿ ಮತ್ತು ಗುಜರಾತ್ ಕಡೆ ಗಳಿಗೆಯಲ್ಲಿ ಕೈಚೆಲ್ಲಿವೆ ಅಷ್ಟೇ. ಇದಕ್ಕೂ ಮುನ್ನವೇ ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್ಗಢ, ಒರಿಸ್ಸಾ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಅಧಿಕಾರಿಗಳು ‘ತಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ಕರೋನಾ ಲಸಿಕೆಗಳನ್ನು ಪೂರೈಕೆ ಮಾಡಿಲ್ಲ. ಆದುದರಿಂದ ಮೇ 1ರಿಂದ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದವು. ಅಂದರೆ ಬರೊಬ್ಬರಿ 10 ರಾಜ್ಯಗಳು ಲಸಿಕೆ ಕೊರತೆ ಬಗ್ಗೆ ಗಮನ ಸೆಳೆದಿವೆ. ಆದರೂ ಕೇಂದ್ರ ಸರ್ಕಾರ ಲಸಿಕೆಗಳನ್ನು ಪೂರೈಸುವ ಬಗ್ಗೆ ಭರವಸೆ ನೀಡಿಲ್ಲ. ಬದಲಾಗಿ ‘ಲಸಿಕೆಗಳ ಕೊರತೆ ಇಲ್ಲ’ ಎಂಬ ಅಸ್ಪಷ್ಟ ಸಮರ್ಥನೆ ನೀಡುತ್ತಾ ಬಂದಿದೆ.

ಲಸಿಕೆಗಳ ಕೊರತೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಗಂಭೀರವಾದ ಮತ್ತು ಗುರುತರವಾದ ಆರೋಪ ಬರುತ್ತಿರುವ ಹಿನ್ನಲೆಯಲ್ಲಿ ಬಹಳ ತಡವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್’ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ. ಎಂದಿನಂತೆ ಅದು ತಮ್ಮ ಮೇಲಿನ‌ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದಕ್ಕೆ ಸೀಮಿತವಾಗಿದೆ. ಇದಕ್ಕೂ ಮೊದಲು ಮೋದಿ ಎರಡು ಬಾರಿ ಕರೋನಾ ಲಸಿಕೆ ಉತ್ಪಾದನಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ್ದರು. ಲಸಿಕೆ ಉತ್ಪಾದನೆ ಹೆಚ್ಚಿಸುವಂತೆ ಕೇಳಿಕೊಂಡಿದ್ದರು. ಆದರೆ ಎಷ್ಟು ಪ್ರಮಾಣದಲ್ಲಿ ಲಸಿಕೆಯ ಉತ್ಪಾದನೆ ಜಾಸ್ತಿಯಾಗಿದೆ. ಅದು ಎಷ್ಟು ಸಹಕಾರಿ ಆಗಲಿದೆ ಎಂಬ ಮಾಹಿತಿಗಳನ್ನು ಕೇಂದ್ರ ಸರ್ಕಾರ ಈವರೆಗೆ ಬಿಟ್ಟುಕೊಟ್ಟಿಲ್ಲ.

ಮತ್ತೊಂದು ಸಂಗತಿ ಏನೆಂದರೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸಂಸ್ಥೆಗಳಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಷ್ಟು ಸಾಮರ್ಥ್ಯ ಎಂಬ ಕಾರಣಕ್ಕೆ ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಗಳನ್ನು ಭಾರತದಲ್ಲಿ ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಸ್ಪುಟ್ನಿಕ್ ವಿ ಲಸಿಕೆಗಳ ಮೊದಲ ಬ್ಯಾಚ್ ಭಾರತಕ್ಕೆ ಬರುವುದೇ ಇವತ್ತು. ಈ ಬಗ್ಗೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ವೆಂಕಟೇಶ್ ವರ್ಮಾ ಅವರು ಮಾಹಿತಿ ನೀಡಿದ್ದು ‘ರಷ್ಯಾದ ಸ್ಫುಟ್ನಿಕ್ ವಿ ಸಂಸ್ಥೆ ಹಂತಹಂತವಾಗಿ ಭಾರತಕ್ಕೆ ಲಸಿಕೆ‌ ಪೂರೈಸಲಿದೆ. ಭಾರತದಲ್ಲಿ ಲಸಿಕೆ ನೀಡುವಲ್ಲಿ ಸ್ಫಟ್ನಿಕ್ ಪ್ರಮುಖ ಪಾತ್ರವಹಿಸಲಿದೆ’ ಎಂದಿದ್ದಾರೆ. ಈ ಮೂಲಕ ಅವರು  ‘ಈಗ ಹೆಚ್ಚು ಲಸಿಕೆಗಳು ಸಿಗೊಲ್ಲ, ಹಂತಹಂತವಾಗಿ ಸಿಗುತ್ತದೆ’ ಎಂದು ಹೇಳಿದ್ದಾರೆ. ಅಗತ್ಯ ಇರುವಷ್ಟು ಲಸಿಕೆಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಬಗ್ಗೆ ಕ್ರಮ ಕೈಗೊಳ್ಳದೆ ಅಭಿಯಾನ‌ ಆರಂಭಿಸಲು ಹೊರಡುತ್ತದೆ ಸರ್ಕಾರ ಎಂದರೆ ಇದಕ್ಕಿಂತ ಬೇಜವಾಬ್ದಾರಿತನ ಇನ್ನೇನಿದೆ? ಇಂಥ ಕ್ರಮಗಳಿಂದಲೇ ಅಲ್ಲವೇ ಕರೋನಾ ಪರಿಸ್ಥಿತಿ ಹದಗೆಡತ್ತಿರುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಮಂಡಿಯೂರಬೇಕಾದ ಪರಿಸ್ಥಿತಿ ಬಂದೊದಗಿರುವುದು. ಅಲ್ಲದೆ ಅಂತಾರಾಷ್ಟ್ರೀಯ ಸಮುದಾಯ ಭಾರತವನ್ನು ‘ಕರೋನಾ ಹರಡುವ ಹಾಟ್ ಸ್ಪಾಟ್’ ಎಂದು‌‌ ಬಣ್ಣಿಸುತ್ತಿರುವುದು.

Related posts

Latest posts

ವಿದ್ಯಾವಂತ ನಿರುದ್ಯೋಗಿ ಪದವೀಧರರ ಬದುಕಿಗೆ ಆಸರೆ -ನರೇಗಾ

ಕರೊನಾ ಮಹಾಮಾರಿ ಮಹಾನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಕಪ್ರ್ಯೂ ಜಾರಿಗೊಳಿಸಿದ್ದರಿಂದ ತಮ್ಮ ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರಿಗೆ ನರೇಗಾ ಕೆಲಸ ಬದುಕಿಗೆ ಆಸರೆಯಾಗಿದೆ. ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಪ್ರದೇಶಗಳ...

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...