ಚುನಾವಣೆ ಕರ್ತವ್ಯದಲ್ಲಿ ದುಡಿದ ಮತ್ತು ವಿದ್ಯಾಗಮ ಯೋಜನೆ ಮೂಲಕ ಪಾಠ ಮಾಡಿದ ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ ಕಡೆ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ ಪರಿಹಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
145ಕ್ಕೂ ಹೆಚ್ಚು ಶಿಕ್ಷಕರು ಹೈದರಾಬಾದ್-ಕರ್ನಾಟಕದಲ್ಲಿ ಅಂದರೆ ಕಲ್ಯಾಣ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಟ್ಟ ಆದೇಶ ಪಾಲಿಸಿ ರಾಜ್ಯದಾದ್ಯಂತ ಇನ್ನೂ ಹಲವು ಶಿಕ್ಷಕರ ಪ್ರಾಣ ಹೋಗಿದೆ.
ಶಿಕ್ಷಕರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು. ಇನ್ನೂ ಸಾವಿರಾರು ಶಿಕ್ಷಕರು ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರ್ಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಹೆಚ್ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.