ರಾಜ್ಯದಲ್ಲಿ ಲಸಿಕೆ ಹಾಹಾಕಾರ: ಹಸೀಸುಳ್ಳಿಗೆ ಅಂಟಿಕೊಂಡ ಸರ್ಕಾರ..!

ಆಮ್ಲಜನಕ, ಆಸ್ಪತ್ರೆಗಳ ಹಾಸಿಗೆಯ ಕೊರತೆಯಿಂದಾಗಿ ನಿತ್ಯ ನೂರಾರು ಸಾವುಗಳು ಸಂಭವಿಸುತ್ತಿರುವ ನಡುವೆ, ಇದೀಗ ರಾಜ್ಯದಲ್ಲಿ ಲಸಿಕೆ ಹಾಹಾಕಾರ ಉಂಟಾಗಿದೆ.

ಬೆಂಗಳೂರು ನಗರ, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ, ಬೀದರ್ ,.. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ನಡುವೆಯೂ ಜನ ಕಷ್ಟಪಟ್ಟು ಲಸಿಕೆ ಕೇಂದ್ರಗಳಿಗೆ ಹೋಗುವುದು, ಲಸಿಕೆ ಸಿಗದೇ ವಾಪಸು ಬರುವುದು ಸಾಮಾನ್ಯವಾಗಿದೆ. ನಿತ್ಯ ಪ್ರತಿ ಜಿಲ್ಲೆಯಲ್ಲಿ ಆಪ್ ಮೂಲಕ ಹತ್ತಾರು ಸಾವಿರ ಮಂದಿ ಲಸಿಕೆಗಾಗಿ ಹೆಸರು ನೋಂದಾಯಿಸಿ, ಲಸಿಕೆ ಕೇಂದ್ರ ಮತ್ತು ದಿನಾಂಕದ ಮಾಹಿತಿ ಪಡೆಯುತ್ತಿದ್ದರೂ, ಬೆಂಗಳೂರು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ತಲಾ ಲಭ್ಯವಿರುವ ಲಸಿಕೆ ಪ್ರಮಾಣ 10-15 ಸಾವಿರಕ್ಕಿಂತ ಹೆಚ್ಚಿಲ್ಲ!

ಹಾಗಾಗಿ, ಸಹಜವಾಗೇ ಪ್ರತಿ ದಿನವೂ ಲಸಿಕೆ ಪಡೆಯಲು ಅಧಿಕೃತ ಆಪ್ ಮೂಲಕ ಮಾಹಿತಿ ಪಡೆದು ಲಸಿಕಾ ಕೇಂದ್ರಕ್ಕೆ ಹೋದವರು, ಬೆಳಗ್ಗೆಯಿಂದ ತಾಸುಗಟ್ಟಲೆ ಕಾದು ಬರಿಗೈಲಿ ವಾಪಸು ಬರುತ್ತಿರುವುದು ಸಾಮಾನ್ಯವಾಗಿದೆ.

ಕರೋನಾ ಸಾಂಕ್ರಾಮಿಕದ ಭೀಕರ ಎರಡನೇ ಅಲೆಯಲ್ಲಿ ಸಿಕ್ಕು ಇಡೀ ದೇಶವೇ ಅಪಾರ ಸಾವು ನೋವಿನಲ್ಲಿ ಬೇಯುತ್ತಿರುವಾಗ, ತಜ್ಞರ ಎಚ್ಚರಿಕೆಯನ್ನು ಬದಿಗೊತ್ತಿ, ರೋಗ ತಡೆ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ, 137 ಕೋಟಿ ಭಾರತೀಯರ ಜೀವಕ್ಕೆ ಸಂಚಕಾರ ತಂದ ಬಿಜೆಪಿ ಆಡಳಿತ, ಕನಿಷ್ಟ ಕರೋನಾ ಲಸಿಕೆಯ ವಿಷಯದಲ್ಲಿ ಕೂಡ ಕೈಗೊಳ್ಳಬಹುದಾಗಿದ್ದ ಮಂಜಾಗ್ರತೆಯನ್ನು, ವ್ಯವಸ್ಥಿತ ಕಾರ್ಯಯೋಜನೆಯನ್ನು ಕೈಗೊಳ್ಳಲಿಲ್ಲ ಎಂಬುದಕ್ಕೆ ಲಸಿಕೆಯ ವಿಷಯದಲ್ಲಿ ಈಗ ಎದ್ದಿರುವ ಹಾಹಾಕಾರ ನಿದರ್ಶನ.

60 ವರ್ಷ ಮೇಲ್ಟಟ್ಟವರು, 44 ವರ್ಷ ಮೇಲ್ಪಟ್ಟವರು ಮತ್ತು 18 ವರ್ಷ ಮೇಲ್ಟಟ್ಟವರು ಎಂದು ಮೂರು ಗುಂಪುಗಳನ್ನಾಗಿ ದೇಶದ ಲಸಿಕೆ ಪಡೆಯಲು ಅರ್ಹರನ್ನು ವಿಂಗಡಿಸಿದ ಸರ್ಕಾರ, ಆಯಾ ಗುಂಪಿನವರ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಲಸಿಕೆಗಳನ್ನು ಕಾಯ್ದಿರಿಸುವ ಕಾಳಜಿ ತೋರಲಿಲ್ಲ. ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ ಸರಿಯಾಗಿ ನಾಲ್ಕು ತಿಂಗಳು ಕಳೆದರೂ(ಜನವರಿ 16ಕ್ಕೆ ಅಭಿಯಾನ ಆರಂಭಿಸಲಾಗಿತ್ತು), ಈವರೆಗೆ ದೇಶದ 60 ವರ್ಷ ಮೇಲ್ಪಟ್ಟ, (ಮೂರು ಗುಂಪುಗಳ ಪೈಕಿ ಅತಿ ಕಡಿಮೆ ಜನಸಂಖ್ಯೆಯ ಗುಂಪಿನ) ಶೇ.50ರಷ್ಟು ಮಂದಿಗೂ ಲಸಿಕೆ ನೀಡಲು ಲಸಿಕೆಗಳು ಲಭ್ಯವಿಲ್ಲದ ಹೀನಾಯ ಸ್ಥಿತಿ ಇದೆ.

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರವೇ ರಾಜ್ಯದಲ್ಲಿ ಈವರೆಗೆ ಒಟ್ಟು 1,07,91,698 ಮಂದಿಗೆ ಲಸಿಕೆ ಹಾಕಲಾಗಿದ್ದು, ಅದರಲ್ಲಿ 18ರ ವರ್ಷ ಮೇಲ್ಪಟ್ಟವರೆಲ್ಲರೂ ಸೇರಿದ್ದಾರೆ. ಆ ಪೈಕಿ 22,41,042 ಮಂದಿ ಎರಡೂ ಡೋಸ್ ಪಡೆದಿದ್ದು, ಪೂರ್ಣ ಲಸಿಕೆ ಪಡೆದವರಾಗಿದ್ದರೆ, 85,50,656 ಕೇವಲ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.

ಆದರೆ, ಸದ್ಯ ರಾಜ್ಯದ ಲಸಿಕೆ ಅಭಿಯಾನದ ಸ್ಥಿತಿಯಂತೂ, ಗೊಂದಲದ ಗೂಡಾಗಿದೆ. ಒಂದು ಕಡೆ ರಾಜ್ಯದ ಮೂಲೆಮೂಲೆಯಲ್ಲಿ ಕಳೆದ 20 ದಿನಗಳಿಂದ ಲಸಿಕೆ ಹಾಹಾಕಾರ ಉಂಟಾಗಿದೆ. ಜನ ನಿತ್ಯ ಲಸಿಕಾ ಕೇಂದ್ರಗಳಿಗೆ ಹೋಗಿ ವಾಪಸ್ಸಾಗುತ್ತಿದ್ದಾರೆ. ಲಸಿಕೆ ಲಭ್ಯತೆ ಕೊರತೆಯ ಹಿನ್ನೆಲೆಯಲ್ಲಿ ಆನ್ ಲೈನ್ ನೋಂದಣಿ ಮಾಡಿಸುವವರು ತಮ್ಮ ವಾಸಸ್ಥಳದಿಂದ 70-80 ಕಿಮೀ ದೂರದ ಲಸಿಕಾ ಕೇಂದ್ರಗಳಲ್ಲಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಅಷ್ಟಾಗಿಯೂ ನಿಗದಿಯಾದ ದಿನ ಅಲ್ಲಿಗೆ ಹೋದರೆ ಲಸಿಕೆ ಸಿಗುವುದು ಕೂಡ ಖಾತ್ರಿ ಇಲ್ಲ! ಆದರೆ, ಆರೋಗ್ಯ ಸಚಿವ ಡಾ ಸುಧಾಕರ್ ಮತ್ತು ಲಸಿಕೆ ನಿರ್ವಹಣೆಯ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ್ ಅವರು, ಮಾಧ್ಯಮಗಳ ಮುಂದೆ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ ಎಂಬ ಹಸೀಸುಳ್ಳನ್ನು ತೇಲಿಬಿಟ್ಟಿದ್ದಾರೆ.

ಮೊದಲನೆಯದಾಗಿ ಸರ್ಕಾರದ ಬಳಿ ನಿತ್ಯದ ಬೇಡಿಕೆಗೆ ತಕ್ಕಷ್ಟು ಲಸಿಕೆ ಇಲ್ಲ ಎಂಬುದನ್ನು ಇದೇ ಸಚಿವರೇ ಒಂದು ದಿನದ ಹಿಂದಷ್ಟೇ ಹೇಳಿದ್ದಾರೆ. ಆದರೆ, ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಸಿಕೆ ಸಿಗದೆ ಜನ ವಾಪಸ್ಸಾಗುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಲಸಿಕೆ ಕೊರತೆಯೇ ಇಲ್ಲ ಎಂದು ರಾಜ್ಯದ ಜನತೆಯ ದಾರಿತಪ್ಪಿಸಿದ್ದಾರೆ.

ಎರಡನೆಯದಾಗಿ, ಲಸಿಕೆ ನೀಡಿಕೆಯ ವಿಷಯದಲ್ಲಿ ಸರ್ಕಾರದ ಬಳಿ ಯಾವುದೇ ಸ್ಪಷ್ಟ ಯೋಜನೆ ಎಂಬುದೇ ಇಲ್ಲ. ಏಕೆಂದರೆ, ಲಸಿಕೆ ಉತ್ಪಾದನಾ ಕಂಪನಿಗಳ ಕಡೆಯಿಂದಲೇ ಲಸಿಕೆ ಸರಬರಾಜಾಗುವುದು ವ್ಯತ್ಯಯವಾಗಿದ್ದರೆ, ಆಗ ಕೂಡಲೇ ಲಸಿಕೆ ನೀಡಿಕೆಯ ವಿಷಯದಲ್ಲಿ ಆದ್ಯತೆಯ ಗುಂಪುಗಳನ್ನು ಪರಿಗಣಿಸಿ ಅವರಿಗೆ ಆದ್ಯತೆ ನೀಡಲು ಸೂಚನೆ ನೀಡಬೇಕಿತ್ತು. ಆದರೆ, ಅದಕ್ಕೆ ಬದಲಾಗಿ, ಲಸಿಕೆ ಕೊರತೆಯ ನಡುವೆಯೂ 18-44ರ ವಯೋಮಾನದವರಿಗೂ ಲಸಿಕೆ ನೀಡುವುದಾಗಿ ಘೋಷಿಸಿ, ಅವರು ಆನ್ ಲೈನ್ ನೋಂದಣಿ ಮಾಡಿಕೊಂಡು ಲಸಿಕಾ ಕೇಂದ್ರಕ್ಕೆ ಬರಲು ಸರ್ಕಾರವೇ ಹೇಳಿತು. ಹಾಗೆ ನೋಡಿದರೆ, ಏಪ್ರಿಲ್ 20ರ ಸುಮಾರಿಗೇ ರಾಜ್ಯದಲ್ಲಿ ಲಸಿಕೆ ಅಭಾವ ಕಾಣಿಸಿಕೊಂಡಿತ್ತು. 60 ಮತ್ತು 45 ರ ವಯೋಮಾನದ ಗುಂಪುಗಳಲ್ಲೇ ನೋಂದಾಯಿತ ಶೇ. 50ಕ್ಕಿಂತ ಅಧಿಕ ಮಂದಿಗೆ ಲಸಿಕೆ ಸಕಾಲದಲ್ಲಿ ಲಭ್ಯವಿರಲಿಲ್ಲ. ಜೊತೆಗೆ ಎರಡನೇ ಡೋಸ್ ಲಸಿಕೆಯ ಪಡೆಯುವವರೂ ಲಸಿಕಾ ಕೇಂದ್ರಗಳಿಗೆ ಬರತೊಡಗಿದ್ದರು(ಅಷ್ಟರಲ್ಲಿ 28 ದಿನ ಪೂರೈಸಿದ್ದರಿಂದ).

ವಾಸ್ತವಾಂಶಗಳು ಹಾಗಿರುವಾಗ, ಸರ್ಕಾರ ಲಸಿಕೆ ಲಭ್ಯತೆಯ ಮೇಲೆ ಆದ್ಯತೆಯನ್ನು ಪರಿಗಣಿಸಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು ಅವರಲ್ಲೂ ಎರಡನೇ ಡೋಸ್  ಪಡೆಯುವವರಿಗೆ ಮೊದಲ ಆದ್ಯತೆ, ಆ ಬಳಿಕ 45 ವರ್ಷದ ಗುಂಪಿನವರಿಗೆ ಆದ್ಯತೆ ಎಂಬುದನ್ನು ಲಸಿಕಾ ಸಿಬ್ಬಂದಿಗೆ ಸ್ಪಷ್ಟ ಮಾರ್ಗಸೂಚಿಯ ಮೂಲಕ ತಿಳಿವಳಿಕೆ ನೀಡಬೇಕಿತ್ತು. ಆದರೆ, ಸರ್ಕಾರ ಕಣ್ಣುಮುಚ್ಚಿ ಕುಳಿತಿತ್ತು. ಈಗಲೂ ಕೂಡ ಲಸಿಕೆಯ ತೀವ್ರ ಕೊರತೆಯ ನಡುವೆಯೂ ಈಗಾಗಲೇ ಮೊದಲ ಡೋಸ್ ಪಡೆದುಕೊಂಡಿರುವ ಮತ್ತು ಎರಡನೇ ಡೋಸ್ ಪಡೆಯುವ ಅವಧಿ ಮೀರುತ್ತಿರುವವರಿಗೆ ಆದ್ಯತೆಯಾಗಿ ಲಸಿಕೆ ನೀಡುವ ವ್ಯವಸ್ಥೆ ಮಾಡದೇ, ಸರ್ಕಾರ ಜನರಲ್ಲಿ ಇನ್ನಷ್ಟು ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.

ಬುಧವಾರ ಕೂಡ ಹಾಸನ ಜಿಲ್ಲೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಲಸಿಕೆ ನೀಡಲಾಗುವುದಿಲ್ಲ ಎಂದು ಲಸಿಕಾ ಕೇಂದ್ರಗಳ ಮುಂದೆ ಬೋರ್ಡ್ ಹಾಕಲಾಗಿತ್ತು! ಅಂದರೆ, ಒಂದು ಕಡೆ ಮೊದಲ ಡೋಸ್ ಪಡೆದು ಕನಿಷ್ಟ 28 ದಿನವಾದವರು ಗರಿಷ್ಠ 48 ದಿನದ ಒಳಗೆ ಎರಡನೇ ಡೋಸ್ ಸಕಾಲದಲ್ಲಿ ಪಡೆಯದೇ ಹೋದರೆ, ಮೊದಲ ಡೋಸ್ ಪಡೆದೂ ಪ್ರಯೋಜನವಿಲ್ಲ ಎಂದು ಆರೋಗ್ಯ ಇಲಾಖೆಯೇ ಹೇಳುತ್ತದೆ. ಮತ್ತೊಂದು ಕಡೆ ಎರಡನೇ ಡೋಸ್ ಲಸಿಕೆ ಕೊಡುವುದಿಲ್ಲ ಎಂದು ಬೋರ್ಡ್ ಹಾಕುತ್ತದೆ!

ಇದು ಸರ್ಕಾರ, ಲಸಿಕೆಯನ್ನು ಯಾವ ವಯೋಮಾನದವರಿಗೆ ಯಾವಾಗ ನೀಡಬೇಕು. ಆ ವಯೋಮಾನದವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಮತ್ತು ಅವರಿಗೆ ಲಸಿಕೆ ಎಷ್ಟು ಬೇಕಾಗುತ್ತದೆ? ಅವರುಗಳಿಗೆ ನಿತ್ಯ ನೀಡುವ ಲಸಿಕೆಯ ಆಧಾರದ ಮೇಲೆ ಎರಡನೇ ಡೋಸ್ ಗೆ ಯಾವಾಗ ಬೇಡಿಕೆ ಬರುತ್ತದೆ? ಹಾಗಾದರ ಮೊದಲ ಮತ್ತು ಎರಡನೇ ಡೋಸ್ ಬೇಡಿಕೆಯನ್ನು ಆ ಆದ್ಯತೆಯ ಗುಂಪಿಗೆ ನೀಡಿದ ಬಳಿಕ ಉಳಿದವರಿಗೆ ಎಷ್ಟು ಲಸಿಕೆ ನೀಡಬಹುದು? ಉಳಿದ ವಯೋಮಾನದವರ ಗುಂಪಿನಲ್ಲಿ ಎಷ್ಟು ಮಂದಿ ಇದ್ದಾರೆ ಮತ್ತು ಎಷ್ಟು ಲಸಿಕೆ ಬೇಕಾಗುತ್ತದೆ? ಹೀಗೆ ರಾಜ್ಯದ ಜನರ ವಯೋಮಾನವಾರು ಸಂಖ್ಯಾಬಲ ಮತ್ತು ಲಭ್ಯ ಲಸಿಕೆಗಳ ಪ್ರಮಾಣದ ಮೇಲೆ ಒಂದು ಸ್ಪಷ್ಟ ಕಾರ್ಯಯೋಜನೆಯನ್ನು ಸರ್ಕಾರ ಇಟ್ಟುಕೊಳ್ಳದೆ ಕೇವಲ ಪ್ರಚಾರಕ್ಕಾಗಿ ಲಸಿಕೆ ಅಭಿಯಾನವನ್ನು ಮೇಲಿಂದ ಮೇಲೆ ವಿವಿಧ ವಯೋಮಾನದವರಿಗೆ ಘೋಷಿಸಿದ ಪರಿಣಾಮ ಇದೀಗ ಎರಡನೇ ಅಲೆಯ ಸೋಂಕಿನ ಭೀಕರತೆಯ ನಡುವೆ ಜನ ಲಸಿಕಾ ಕೇಂದ್ರಕ್ಕೂ ಮನೆಗೂ ಅಲೆದಾಡಬೇಕಾದ ದುಃಸ್ಥಿತಿ ಬಂದಿದೆ.

ಈಗಲೂ ಸರ್ಕಾರದ ಸಚಿವರು ಮತ್ತು ಡಿಸಿಎಂಗಳು ಲಸಿಕೆಯ ಕೊರತೆ ಇದೆ ಎಂಬ ವಾಸ್ತವಾಂಶಕ್ಕೆ ಕುರುಡಾಗಿದ್ದು, ಹಸೀಸುಳ್ಳುಗಳ ಮೇಲೆ ಎಲ್ಲವನ್ನೂ ನಿಭಾಯಿಸುವ ತಮ್ಮ ಎಂದಿನ ವರಸೆಯನ್ನೇ ಮುಂದುವರಿಸಿದ್ದಾರೆ. ಕಳೆದ 20 ದಿನಗಳಿಂದಲೂ ಆರೋಗ್ಯ ಸಚಿವರು ಒಂದೆರಡು ದಿನಗಳಲ್ಲಿ ಲಸಿಕೆ ಸಮಸ್ಯೆ ಬಗೆಹರಿಯಲಿದೆ. ಕೇಂದ್ರ ಸರ್ಕಾರದೊಂದಿಗೆ ಮಾತನಾಡಿದ್ದೇವೆ. ಅಲ್ಲಿಂದ ಲಸಿಕೆ ಬರುತ್ತದೆ ಎಂದೇ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಲಸಿಕೆ ಹಂಚಿಕೆ ಮತ್ತು ಸರಬರಾಜು ವಿಷಯದಲ್ಲಿ ರಾಜ್ಯಗಳಿಗೇ ಸಂಪೂರ್ಣ ಹೊಣೆಗಾರಿಕೆ ವಹಿಸಿ ಕೇಂದ್ರ ಸರ್ಕಾರ ಜಾಣತನದಿಂದ ಜಾರಿಕೊಂಡು ಹಲವು ದಿನಗಳೇ ಆಗಿವೆ!

ಹಾಗಾಗಿ, ತೀವ್ರ ಕೊರತೆ ಇರುವ ಕೋವಾಕ್ಸಿನ್ ಮತ್ತು ಇದೀಗ ಅತಿ ಹೆಚ್ಚು ಬಳಕೆಯಲ್ಲಿರುವ ಕೋವಿಶೀಲ್ಡ್ ಲಸಿಕೆಗಳನ್ನು ರಾಜ್ಯದ ಸಂಪೂರ್ಣ ಲಸಿಕೆಗೆ ಅರ್ಹರ ಸಂಖ್ಯಾಬಲಕ್ಕೆ ತಕ್ಕಂತೆ ಖರೀದಿಸಿ ಸಕಾಲದಲ್ಲಿ ಅದು ಸರಬರಾಜಾಗುವಂತೆ ನೋಡಿಕೊಳ್ಳದೇ, ಹೀಗೆ ವಾಸ್ತವಾಂಶಗಳಿಗೆ ಕುರುಡಾಗಿ, ಹಸೀಸುಳ್ಳುಗಳ ಮೂಲಕವೇ ಎಲ್ಲವನ್ನೂ ನಿಭಾಯಸಬಹುದು ಎಂದುಕೊಂಡರೆ, ಈಗಾಗಲೇ ಇಂತಹದ್ದೇ ವರಸೆಯಿಂದ ಸೃಷ್ಟಿಯಾಗಿರುವ ಎರಡನೇ ಅಲೆಯ ನರಕಕ್ಕಿಂತ ಭೀಕರ ದುರಂತಗಳಿಗೆ ಸರ್ಕಾರ ತಲೆಕೊಡಬೇಕಾಗುತ್ತದೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...