ರಾಜ್ಯದಲ್ಲಿ ಕೋವಿಡ್‌ ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಪಡೆಯಲು ಕೊರತೆ ಎದುರಾಗಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೊದಲ ಸುತ್ತಿನಲ್ಲಿ ಹಿರಿಯರಿಗೆ ಹಾಗೂ ಕರೋನಾ ವಾರಿಯರ್ಸ್ ಪಟ್ಟಿಯಲ್ಲಿದ್ದ ಪೊಲೀಸರು ನರ್ಸ್, ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಕೊಡಲಾಗಿದೆ. ಇದೀಗ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ದಿಲ್ಲದೇ ಕೋವಿಶೀಲ್ಡ್ ಬಳಕೆಗೆ ಅವಕಾಶ ನೀಡಲಾಗಿದೆ. ಕೋವ್ಯಾಕ್ಸಿನ್ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಪೂರಕೆ ಮಾಡದ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ ಕರೋನಾ ಮಹಾಮಾರಿ ವಿರುದ್ಧ ಆರಂಭವಾಗಿದ್ದ ಲಸಿಕೆ ಅಭಿಯಾನಕ್ಕೆ ಬಹುದೊಡ್ಡ ತೊಡಕು ಎದುರಾಗಿದೆ.

 ರಾಜ್ಯದಲ್ಲಿ ಈವರೆಗೆ 84,06, 980 ಮಂದಿ ಮೊದಲನೇ ಡೋಸ್ ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಾರೆ. ಎರಡನೇ ಡೋಸ್ ಪಡೆದುಕೊಂಡವರು 18,45,420. ಮಂದಿ ಮೊದಲನೇ ಹಂತದ ಲಸಿಕೆ ಅಭಿಯಾನದಲ್ಲಿ ಜನರು ಪಡೆದಿರುವುದು ಕೋವ್ಯಾಕ್ಸಿನ್ ಮಾತ್ರ. ಮೊದಲನೇ ಡೋಸ್ ಕೋವ್ಯಾಕ್ಸಿನ್ ಪಡೆದವರು 28 ದಿನದೊಳಗೆ ವ್ಯಾಕ್ಸಿನ್ ಪಡೆಯುವುದು ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರು ಎರಡನೇ ಡೋಸ್ ಕಾಲಮಿತಿಯಲ್ಲಿ ಪಡೆಯಲಾಗದೇ ಗಾಬರಿಯಾಗಿದ್ದಾರೆ.

 ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಲಸಿಕೆ ಅಭಿಯಾನ ನಡೆದಿದ್ದು, ಮೊದಲ ಸುತ್ತಿನಲ್ಲಿ ಕೋವ್ಯಾಕ್ಸಿನ್ ಪಡೆದಿದ್ದ ಮಂದಿ ಇವತ್ತು ಎರಡನೇ ಸುತ್ತಿನ ವ್ಯಾಕ್ಸಿನ್‌ಗಾಗಿ ಬಂದಿದ್ದರು. ಮೊದಲ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದವರಿಗೆ ಕೋವಿಶೀಲ್ಡ್ ನೀಡಲಾಗುತಿತ್ತು. ಈ ವೇಳೆ ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದೆ ಎಂದು ವೈದ್ಯರು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು.

ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿದಾಗ ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈವರೆಗೂ ನಡೆಸಿದ ಲಸಿಕೆ ಅಭಿಯಾನದಲ್ಲಿ ಕೋವ್ಯಾಕ್ಸಿನ್ ನೀಡಲಾಗಿದೆ. ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಹೀಗಾಗಿ ಹೊಸದಾಗಿ ವ್ಯಾಕ್ಸಿನ್ ಪಡೆದುಕೊಳ್ಳವರಿಗೆ ಕೋವಿಶೀಲ್ಡ್ ನೀಡಲಾಗುತ್ತಿದೆ. ಮೊದಲ ಡೋಸ್ ಯಾವ ವ್ಯಾಕ್ಸಿನ್ ಪಡೆಯುತ್ತೇವೆಯೋ ಎರಡನೇ ಡೋಸ್ ಕೂಡ ಅದೇ ವ್ಯಾಕ್ಸಿನ್ ಪಡೆಯಬೇಕು. ಮೊದಲ ಡೋಸ್ ಪಡೆದ ನಾಲ್ಕನೇ ವಾರ ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕು. ಕೋವಿಶೀಲ್ಡ್ ಆಗಿದ್ದಲ್ಲಿ ಎರಡನೇ ಡೋಸ್ ಐದನೇ ವಾರ ಪಡೆಯಬೇಕು. ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರು ಇದೀಗ ಎರಡನೇ ಡೋಸ್ ಕಾಲಮಿತಿಯಲ್ಲಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಈವರೆಗೂ ಕೋವ್ಯಾಕ್ಸಿನ್ ನೀಡಲಾಗಿದೆ. ರಾಜ್ಯದಲ್ಲಿ ಇನ್ನೂ 60 ಲಕ್ಷ ಮಂದಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಹತ್ತು ದಿನದಲ್ಲಿ ಪಡೆಯಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವ್ಯಾಕ್ಸಿನ್‌ಗಾಗಿ ಜನರು ಪರದಾಡುವಂತಾಗಿದೆ. ಖಾಸಗಿಯಾಗಿ ಕೋವ್ಯಾಕ್ಸಿನ್ ಲಭ್ಯವಿಲ್ಲದ ಕಾರಣ ಇದೀಗ ಎರಡನೇ ಡೋಸ್ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ. ಕೋವ್ಯಾಕ್ಸಿನ್ ಇಲ್ಲದ ಕಾರಣ ಇದೀಗ ಕೋವಿಶೀಲ್ಡ್ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಇದರಿಂದ ಲಕ್ಷಾಂತರ ಮಂದಿ ಎರಡನೇ ಡೋಸ್ ಪಡೆಯಲು ಆಗುತ್ತಿಲ್ಲ. ಹೀಗಾಗಿ ಅವರು ಪಡೆದ ಮೊದಲನೇ ಡೋಸ್ ಕೂಡ ನಿಷ್ಪ್ರಯೋಜಕ ಆಗಬಹುದು.

ಕೋವ್ಯಾಕ್ಸಿನ್ ಎರಡು ಡೋಸ್ ಕೊಡಬೇಕು. ಅದರಲ್ಲೂ ಕಾಲಮಿತಿಯಲ್ಲಿ ಕೊಡಬೇಕು ಎಂಬ ಸಾಮಾನ್ಯ ಜ್ಞಾನ ಇದ್ದಿದ್ದರೆ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರಿಗೆ ಕಾಲಮಿತಿಯಲ್ಲಿ ಎರಡನೇ ಡೋಸ್ ಕೊಡುವ ಬಗ್ಗೆ ಕೋವ್ಯಾಕ್ಸಿನ್ ಮೀಸಲಿಡಬೇಕಿತ್ತು. ಮೊದಲ ಡೋಸ್ ಯಾವ ವ್ಯಾಕ್ಸಿನ್ ಪಡೆಯುತ್ತಾರೋ ಎರಡನೇ ಡೋಸ್ ಅದೇ ಕೊಡಬೇಕಲ್ಲವೇ ? ಈ ಸೂಕ್ಷ್ಮತೆ ಮರೆತ ಕಾರಣ ಇದೀಗ ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯಲಾಗದೇ ಒದ್ದಾಡುತ್ತಿದ್ದಾರೆ. ಮಾನ್ಯ ಆರೋಗ್ಯ ಸಚಿವರು ಈ ಸಮಸ್ಯೆ ಪರಿಹರಿಸಲು ಯಾವ ಮೊರೆ ಹೋಗುತ್ತಾರೋ ಕಾದು ನೋಡಬೇಕು.

 ಈ ಕುರಿತು ಮಾತನಾಡಿದ ಆರೋಗ್ಯ ತಜ್ಞರು ರೋಗದ ವಿರುದ್ಧ ಗರಿಷ್ಠ ರಕ್ಷಣೆಗಾಗಿ ಲಸಿಕೆಗಳ ಎರಡೂ ಪ್ರಮಾಣಗಳು ಕಡ್ಡಾಯವಾಗಿದೆ ಎಂದು  ಹೇಳಿದ್ದಾರೆ. ಹಾಗಾದರೆ ಒಬ್ಬರು ತಮ್ಮ ಲಸಿಕೆಯ ಎರಡನೇ ಪ್ರಮಾಣವನ್ನು ತಪ್ಪಿಸಿಕೊಂಡಾಗ ಏನಾಗುತ್ತದೆ? ತಕ್ಷಣದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಖ್ಯಾತ ಭಾರತದ ವೈರಾಲಜಿಸ್ಟ್ ಡಾ.ಗಗನ್‌ದೀಪ್ ಕಾಂಗ್ ಹೇಳುತ್ತಾರೆ. ಡೋಸೇಜ್ ಅನ್ನು ಕಳೆದುಕೊಂಡಿರುವುದು ಪ್ರತಿಕಾಯಗಳ ವರ್ಧನೆಯನ್ನು ವಿಳಂಬಗೊಳಿಸುತ್ತದೆ ಮತ್ತು ಅಲ್ಪಾವಧಿಯಲ್ಲಿ ವೈರಸ್ ವಿರುದ್ಧ ಯಾವುದೇ ಗಮನಾರ್ಹವಾದ ರಕ್ಷಣೆಯ ನಷ್ಟಕ್ಕೆ ಕಾರಣವಾಗುವುದಿಲ್ಲ ಎಂದು ಅವರು  ತಿಳಿಸಿದರು. ನಿಮ್ಮ ಮೊದಲ ಡೋಸ್ ಅನ್ನು ನೀವು ಪಡೆದರೆ ಮತ್ತು ಒಂದೆರಡು ವರ್ಷಗಳವರೆಗೆ ನೀವು ಎರಡನೇ ಡೋಸ್ ಅನ್ನು ಪಡೆಯದಿದ್ದರೆ, ನೀವು ಬಹುಶಃ ನಿಮ್ಮ ಮೊದಲ ಡೋಸ್ ಅನ್ನು ಪುನರಾವರ್ತಿಸಬೇಕಾಗುತ್ತದೆ. ಇದು ವಾರಗಳ ವಿಷಯವಾಗಿದ್ದರೆ, ನೀವು ಖಂಡಿತವಾಗಿಯೂ ಚಿಂತಿಸಬೇಕಾಗಿಲ್ಲ. ಆದರೆ ತಿಂಗಳು, ವರ್ಷಗಳೇ ಆದರೆ ಪುನಃ ಮೊದಲ ಡೋಸ್‌ಪಡೆಯಬೇಕಾಗುತ್ತದೆ ಎಂದು ಡಾ. ಕಾಂಗ್ ಹೇಳಿದರು.

ಈಗಾಗಲೇ ಎರಡೂ ಡೋಸ್‌ಪಡೆದಿರುವವರೂ ಕೋವಿಡ್‌ ಸೋಂಕಿಗೆ ಬಲಿಯಾಗಿ ಮೃತರಾಗಿದ್ದಾರೆ. ಇನ್ನು ಒಂದು ಕೋವ್ಯಾಕ್ಸಿನ್‌ ಡೋಸ್‌ಪಡೆದವರಿಗೆ ಎರಡನೇ ಡೋಸ್‌ಪಡೆಯಲು ವಿಳಂಬ ಅದರೆ ಅದರ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಮೊದಲೇ ಲಸಿಕೆ ಕೊರತೆ ಎದುರಾಗಿರುವಾಗ ಮೊದಲು ಪಡೆದವರಿಗೂ ಮತ್ತೆ ಲಸಿಕೆ ನೀಡಲು ಸಾದ್ಯವೇ ? ಇದರಿಂದ ಬೊಕ್ಕಸಕ್ಕೆ ಹೊರೆ ಆಗಲಿದೆ . ರಾಜ್ಯ ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಬೇಕಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...