ಸರಿಸುಮಾರು ಒಂದು ಲಕ್ಷದ ಎಪ್ಪತ್ತು ಸಾವಿರ ಹೊಸ ಪ್ರಕರಣಗಳೊಂದಿಗೆ ಭಾನುವಾರ, ಭಾರತದ ದೈನಂದಿನ ಕರೋನಾ ಪ್ರಕರಣಗಳ ಸಂಖ್ಯೆ ದಾಖಲೆ ನಿರ್ಮಿಸಿದೆ. ಹಾಗೇ ಈವರೆಗೆ ದೇಶದಲ್ಲಿ ಒಂದು ಕೋಟಿ ಮೂವತ್ತೈದು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಕಾಣುವ ಮೂಲಕ ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಬ್ರಿಜಿಲ್ ದೇಶವನ್ನು ಹಿಂದಿಕ್ಕಿ, ಅಮೆರಿಕದ ಬಳಿಕದ ಎರಡನೇ ಸ್ಥಾನಕ್ಕೇ ಏರಿದೆ.
ಆ ಹಿನ್ನೆಲೆಯಲ್ಲಿ ಈ ಹಿಂದೆಯೇ ತಜ್ಞರು ಊಹಿಸಿದಂತೆ ಕರೋನಾ ಎರಡನೇ ಅಲೆ ದೇಶದಲ್ಲಿ ಭಾರೀ ವೇಗದಲ್ಲಿ ವ್ಯಾಪಿಸುತ್ತಿದ್ದು, ಸಾವಿನ ಸಂಖ್ಯೆ ಕೂಡ ದಿಢೀರ್ ಏರಿಕೆ ಕಂಡಿದೆ. ಜಾಗತಿಕವಾಗಿ ವಾಸ್ತವಿಕ ಪ್ರಕರಣಗಳನ್ನು ತೀರಾ ಕಡಿಮೆ ಸಂಖ್ಯೆಯಲ್ಲಿ ವರದಿ ಮಾಡಲಾಗುತ್ತಿದೆ ಎಂಬ ಆಪಾದನೆಯ ಹೊರತಾಗಿಯೂ ಭಾರತದಲ್ಲಿ ಕರೋನಾ ಹೊಸ ಪ್ರಕರಣ ಮತ್ತು ಸಾವಿನ ಪ್ರಕರಣಗಳಲ್ಲಿ ಕಾಣುತ್ತಿರುವ ಈ ಆತಂಕಕಾರಿ ಏರಿಕೆ, ದೇಶ ಕರೋನಾ ನಿರ್ವಹಣೆಯ ವಿಷಯದಲ್ಲಿ ಆರಂಭದಿಂದಲೂ ಹೇಗೆ ಎಡವುತ್ತಿದೆ ಮತ್ತು ದೇಶದ ಚುಕ್ಕಾಣಿ ಹಿಡಿದ ನಾಯಕರು ಜನರ ಜೀವದ ವಿಷಯದಲ್ಲಿ ಎಷ್ಟು ಹೊಣೆಗೇಡಿಗಳಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ಕಣ್ಣಿಗೆ ರಾಚುವಂತೆ ಬೆತ್ತಲುಗೊಳಿಸಿದೆ.
2020ರ ಜನವರಿ 27ರಂದು ದೇಶದ ಮೊಟ್ಟಮೊದಲ ಕರೋನಾ ಪ್ರಕರಣ ವರದಿಯಾದ ದಿನದಿಂದಲೂ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ವಿದೇಶಿ ವಿಮಾನಗಳ ಸಂಚಾರ ನಿರ್ಬಂಧ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಜಾರಿ ಮಾಡುವ ವಿಷಯದಲ್ಲಿ, ಮುನ್ನೆಚ್ಚರಿಕೆಯ ವಿಷಯದಲ್ಲಿ, ಪರೀಕ್ಷೆ, ಚಿಕಿತ್ಸೆ ಮತ್ತು ಸೋಂಕಿತರ ಸಂಪರ್ಕ ಪತ್ತೆ, ಕಂಟೇನ್ ಮೆಂಟ್ ಜೋನ್, ಲಾಕ್ ಡೌನ್ ಹೇರಿಕೆ, ಕೊನೆಗೆ ಕೋವಿಡ್ ಮೃತರ ಶವಸಂಸ್ಕಾರದವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಡವದೇ ಇರುವ ಸಂಗತಿಗಳೇ ಇಲ್ಲ. ಆದರೂ, ಪ್ರತಿ ತಪ್ಪಿನ ಬಳಿಕ ಕಲಿತ ಪಾಠ ಏನು ಎಂದರೆ; ಅದಕ್ಕೆ ಉತ್ತರ ಈ ಎರಡನೇ ಅಲೆಯ ಆಘಾತಕಾರಿ ದಾಳಿಯಲ್ಲಿದೆ.
ದೈಹಿಕ ಅಂತರ, ಮಾಸ್ಕ್ ಧರಿಸುವುದು, ಪದೇ ಪದೆ ಕೈ ತೊಳೆಯುವಂತಹ ವ್ಯಕ್ತಿಗತ ಮುನ್ನೆಚ್ಚರಿಕೆ ಕ್ರಮಗಳಿಂದ ಹಿಡಿದು ಅಂತಾರಾಷ್ಟ್ರೀಯ ಸಂಚಾರ ನಿರ್ಬಂಧದಂತಹ ರಾಷ್ಟ್ರೀಯ ಮಟ್ಟದ ನಿರ್ಧಾರಗಳವರೆಗೆ ಪ್ರಧಾನಿ ಮೋದಿಯವರ ಸರ್ಕಾರದ ಪ್ರತಿ ತಪ್ಪುಗಳೂ ಜನಸಾಮಾನ್ಯರ ಪಾಲಿಗೆ ಎಷ್ಟು ದುಬಾರಿಯಾದವು ಎಂಬುದನ್ನು ಈ ಒಂದು ವರ್ಷದ ಸಾವು, ನೋವು ಮತ್ತು ಆರ್ಥಿಕ ದಿವಾಳಿ ತೋರಿಸಿಕೊಟ್ಟಿದೆ. ಇಷ್ಟಾಗಿಯೂ ಈಗ ಮತ್ತೆ ಎರಡನೇ ಅಲೆಯ ಹೊತ್ತಲ್ಲಿ ಕೂಡ ದೇಶದ ಆಡಳಿತ ಚುಕ್ಕಾಣಿ ಹಿಡಿದವರು ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ತೆಗೆದುಕೊಂಡಿಲ್ಲ ಮತ್ತು ಕರೋನಾ ವಿಷಯವನ್ನೇ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಸದ್ಯದ ದೇಶದ ವೈರುಧ್ಯಗಳೇ ಸಾಕ್ಷಿ.
ಒಂದು ಕಡೆ, ‘ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ವಹಿಸುವುದು, ಸೋಂಕಿತರ ಪತ್ತೆ, ಪರೀಕ್ಷೆ, ಪ್ರತ್ಯೇಕಿಸುವುದು.. ಹೀಗೆ ಕರೋನಾ ಮಣಿಸಲು ನಮಗಿರುವ ಅಸ್ತ್ರಗಳನ್ನು ಪ್ರಯೋಗಿಸೋಣ, ಕರೋನಾ ವಿರುದ್ಧ ಭಾರತದ ದಿಗ್ವಿಜಯ ದಾಖಲಿಸೋಣ’ ಎಂದು ಮನ್ ಕೀ ಬಾತ್ ಆಡುವ ಪ್ರಧಾನಿಗಳೇ, ಕರೋನಾ ಭೀಕರ ಪ್ರಮಾಣದ ಏರಿಕೆಯ ನಡುವೆಯೇ ಹತ್ತಾರು ಚುನಾವಣಾ ರ್ಯಾಲಿಗಳನ್ನು ನಡೆಸಿ, ಯಾವ ಅಂತರವಾಗಲೀ, ಮಾಸ್ಕ್ ಆಗಲೀ ಇಲ್ಲದೆ ನೆರೆದ ಲಕ್ಷಾಂತರ ಜನಸಮೂಹಗಳನ್ನು ಉದ್ದೇಶಿಸಿ ಚುನಾವಣಾ ಭಾಷಣ ಬಿಗಿಯುತ್ತಾರೆ. ಮತ್ತೊಂದು ಕಡೆ, ಕರೋನಾ ನಿಯಂತ್ರಣದ ಮುನ್ನೆಚ್ಚರಿಕೆಯ ಬಿಗಿ ಕ್ರಮಗಳ ಜಾರಿಗೆ ಆದೇಶ ಹೊರಡಿಸುವ ದೇಶದ ಗೃಹ ಸಚಿವ ಅಮಿತ್ ಶಾ ಅವರು, ಅದೇ ಹೆಜ್ಜೆಯಲ್ಲೇ ಸ್ವತಃ ಲಕ್ಷಾಂತರ ಜನರ ಚುನಾವಣಾ ರ್ಯಾಲಿಗಳಲ್ಲಿ ಯಾವ ಮಾಸ್ಕ್ ಧರಿಸದೆ, ದೈಹಿಕ ಅಂತರವಿಲ್ಲದೆ ಕಾಣಿಸಿಕೊಳ್ಳುತ್ತಾರೆ ಮತ್ತು ತಮ್ಮೆದುರು ತಮ್ಮಂತೆಯೇ ಯಾವ ಮಾರ್ಗಸೂಚಿಯ ಪಾಲಿಸದ ಜನರನ್ನುದ್ದೇಶಿಸಿ ಮತಯಾಚಿಸಿ, ಎರಡು ಬೆರಳು ತೋರಿ ವಿಜಯದ ಸಂದೇಶ ರವಾನಿಸುತ್ತಾರೆ!
ಒಂದು ಕಡೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ರ್ಯಾಲಿಗಳು ಮತ್ತು ಕರ್ನಾಟಕದ ಮೂರು ಉಪ ಚುನಾವಣೆಗಳ ಭರ್ಜರಿ ಸಮಾವೇಶಗಳು ದೇಶದ ಕೋವಿಡ್ ಮಾರ್ಗಸೂಚಿಗಳನ್ನು ಅಣಕ ಮಾಡುತ್ತಿದ್ದರೆ, ಮತ್ತೊಂದು ಕಡೆ ಲಕ್ಷಾಂತರ ಮಂದಿಯ ಜನಜಾತ್ರೆಯ ಕುಂಭಮೇಳ ದೇಶದ ಆಡಳಿತದ ಕರೋನಾ ನಿರ್ವಹಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡು ಮಾಡಿದೆ.
ಹಾಗೆ ನೋಡಿದರೆ; ಆಳುವ ಮಂದಿಯ ಇಂತಹ ಹೊಣೆಗೇಡಿ ವರ್ತನೆಗಳು ಕೇವಲ ಕೋವಿಡ್ ಮಾರ್ಗಸೂಚಿ ಪಾಲನೆ, ಕೋವಿಡ್ ನಿರ್ವಹಣೆಯ ವಿಷಯಕ್ಕೆ ಮಾತ್ರ ಸೀಮಿತವೇನಲ್ಲ. ಕೋವಿಡ್ ಲಸಿಕೆಯ ವಿಷಯದಲ್ಲಿ ಕೂಡ ಇಂತಹದ್ದೇ ವರಸೆಗಳು ಮುಂದುವರಿದಿವೆ ಎಂಬುದಕ್ಕೆ ಲಸಿಕೆಯ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ಕೆಸರೆರಚಾಟವೇ ನಿದರ್ಶನ. ದೇಶದ ಮುಂಚೂಣಿ ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಎಚ್ಚರಿಕೆಯ ಹೊರತಾಗಿಯೂ ವಿದೇಶಗಳಿಗೆ ಲಕ್ಷಾಂತರ ಲಸಿಕೆ ನೀಡುವ ಮೂಲಕ ‘ಲಸಿಕೆ ರಾಜತಾಂತ್ರಿಕತೆಯ’ ತಂತ್ರ ಪ್ರದರ್ಶಿಸಿದ ಪ್ರಧಾನಿಗಳು, ದೇಶದ ನಾಗರಿಕರಿಗೆ ನೀಡಲು ಬೇಕಾದ ಲಸಿಕೆಯ ಕೊರತೆ ಇಲ್ಲ ಎನ್ನುತ್ತಿರುವಾಗಲೇ ಅತ್ಯಧಿಕ ಕರೋನಾ ಪ್ರಕರಣಗಳಿಂದ ಕಂಗಾಲಾಗಿರುವ ಮಹಾರಾಷ್ಟ್ರವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಯ ತೀವ್ರ ಕೊರತೆ ಕಾಣಿಸಿಕೊಂಡಿದ್ದು, ನೂರಾರು ಲಸಿಕಾ ಕೇಂದ್ರಗಳನ್ನು ಈಗಾಗಲೇ ಮುಚ್ಚಲಾಗಿದೆ. ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಕೂಡ ಲಸಿಕೆಯ ತೀವ್ರ ಕೊರತೆಯಿದ್ದರೂ, ತಮ್ಮದೇ ಪಕ್ಷದ ದೆಹಲಿ ಸರ್ಕಾರದ ನಾಯಕರನ್ನು ಎದುರು ಹಾಕಿಕೊಳ್ಳಬೇಕಾದ ಭೀತಿಯಿಂದ ರಾಜ್ಯ ಸರ್ಕಾರಗಳು ಬಾಯಿ ಮುಚ್ಚಿಕೊಂಡು ಕೂತಿವೆ ಎಂಬುದು ಕೂಡ ಗುಟ್ಟೇನಲ್ಲ.
ಒಟ್ಟಾರೆ, ಒಂದು ಕಡೆ ಏರುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಿತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸಾಂಕ್ರಾಮಿಕ ರೋಗ ನಿರ್ವಹಣೆ ತಜ್ಞ ಡಾ ರಮಣನ್ ಲಕ್ಷ್ಮಿನಾರಾಯಣನ್, ಅವರಂತೂ “ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತಿ ಹಂತದಲ್ಲಿಯೂ ಸರ್ಕಾರ ಎಡವುತ್ತಲೇ ಇದೆ. ಕರೋನಾದ ವಿಷಯದಲ್ಲಿ ಮುಖ್ಯವಾಗಿ ದೇಶದ ಪ್ರಭಾವಿ ನಾಯಕರ ನಡೆ ಮತ್ತು ನುಡಿ ನಡುವಿನ ವೈರುಧ್ಯಗಳು ಜನರಲ್ಲಿ ರೋಗ, ಅದರ ಮುನ್ನೆಚ್ಚರಿಕೆ, ಚಿಕಿತ್ಸೆ, ಲಸಿಕೆ ಸೇರಿದಂತೆ ಪ್ರತಿ ವಿಷಯದ ಕುರಿತು ಒಂದು ರೀತಿಯ ಅಸಡ್ಡೆಯ ಮನಸ್ಥಿತಿ ಬೆಳೆಸಿವೆ. ಕರೋನಾವನ್ನು ಜನ ಹಾಸ್ಯಾಸ್ಪದ ಸಂಗತಿ ಎಂದು ಭಾವಿಸುವಂತಹ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ದುರಂತವೆಂದರೆ; ಇಂತಹ ಪರಿಸ್ಥಿತಿಯಲ್ಲಿ ದೇಶದ 135 ಕೋಟಿ ಜನ ಕರೋನಾದ ವಿರುದ್ಧ ಸೆಣೆಸಬೇಕಾಗಿದೆ. ಆ ಜನಗಳ ಆ ಹೋರಾಟದ ಮೇಲೆ ದೇಶದ ಭವಿಷ್ಯವಷ್ಟೇ ಅಲ್ಲ; ಕರೋನಾ ವಿರುದ್ಧದ ಜಗತ್ತಿನ ಹೋರಾಟದ ಭವಿಷ್ಯ ಕೂಡ ನಿಂತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
‘ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಭಾರತದ ಕರೋನಾ ನಿರ್ವಹಣೆಯ ಕರುಣಾಜನಕ ವೈರುಧ್ಯಗಳ ಕುರಿತು ಪ್ರಕಟಿಸಿರುವ ಮುಖಪುಟ ಸುದ್ದಿಯಲ್ಲಿ, ಡಾ ರಮಣನ್ ಸೇರಿದಂತೆ ಹಲವು ತಜ್ಞರು ಅಭಿಪ್ರಾಯಗಳನ್ನು ಉಲ್ಲೇಖಿಸಲಾಗಿದ್ದು, ಎಲ್ಲರೂ ದೇಶ ಕರೋನಾ ವಿಷಯದಲ್ಲಿ ಸಾಗುತ್ತಿರುವ ವಿಪರ್ಯಾಸಕರ ಹಾದಿಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಕರೋನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದ್ದರೂ, ದೇಶದ ಜನಸಂಖ್ಯೆಯ ಹಿನ್ನೆಲೆಯಲ್ಲಿ ಭಾರತದ ಕರೋನಾ ಏರುಪೇರುಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕ ಪರಿಣಾಮ ಬೀರುತ್ತವೆ. ದೇಶದ ಕರೋನಾ ನಿಯಂತ್ರಣ, ಲಸಿಕೆ ನೀಡಿಕೆಯಂತಹ ಸಂಗತಿಗಳು ಒಟ್ಟಾರೆ ಜಗತ್ತಿನ ಕರೋನಾ ಸಮರದ ವಿಷಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ಎಲ್ಲವನ್ನೂ ಚುನಾವಣಾ ರಾಜಕಾರಣದ ಲಾಭನಷ್ಟದ ದೃಷ್ಟಿಯಿಂದಲೇ ನೋಡುವ ದೇಶದ ನಾಯಕತ್ವಕ್ಕೆ ಇಂತಹ ಸೂಕ್ಷ್ಮಗಳು ಅರಿವಾಗಬಲ್ಲವೆ? ಎಂಬುದು ಪ್ರಶ್ನೆ.





