ನಮ್ಮ ನೆರೆಯ ಮ್ಯಾನ್ಮಾರ್ ದೇಶದಲ್ಲಿ ನಿತ್ಯವೂ ಸೇನೆ ಮತ್ತು ನಾಗರಿಕರ ನಡುವೆ ಘರ್ಷಣೆ ನಡೆಯುತ್ತಿದೆ. ಅಲ್ಲಿ ಮಿಲಿಟರಿಯು ಆಡಳಿತವನ್ನು ಕೈಗೆ ತೆಗೆದುಕೊಂಡಿರುವುದನ್ನು ವಿರೋಧಿಸಿ ಪ್ರಜೆಗಳು ಬೀದಿಗಿಳಿದು ಪ್ರತಿಭಟಿಸುತಿದ್ದಾರೆ. ಅವರನ್ನು ಹತ್ತಿಕ್ಕಲು ಸೇನೆ ನಿರ್ದಾಕ್ಷಿಣ್ಯವಾಗಿ ಅಸ್ತ್ರ ಪ್ರಯೋಗ ಮಾಡುತಿದ್ದು, ಈವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ಶನಿವಾರ ಒಂದೇ ದಿನ 82 ಪ್ರತಿಭಟನಾಕಾರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ಮಾರ್ಚ್ 27 ರಂದು ಮ್ಯಾನ್ಮಾರ್ ಸೇನಾ ಪಡೆಯು ತನ್ನ 76 ನೇ ವಾರ್ಷಿಕ ದಿನಾಚರಣೆಯನ್ನು ಆಚರಿಸಿಕೊಂಡಿತು ಅದರಲ್ಲಿ ರಷ್ಯಾ, ಚೀನಾ, ಥೈಲ್ಯಾಂಡ್ ಮತ್ತು ಬೆರಳೆಣಿಕೆಯಷ್ಟು ಏಷ್ಯಾದ ದೇಶಗಳು ಮಾತ್ರ ಆಧುನಿಕ ಯುದ್ಧ ಯಂತ್ರಗಳನ್ನು ಪ್ರದರ್ಶಿಸುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಗಳನ್ನು ಕಳುಹಿಸಿದವು. ಮ್ಯಾನ್ಮಾರ್ ರಷ್ಯಾ ಮತ್ತು ಚೀನಾದಿಂದ ಆಮದು ಮಾಡಿಕೊಂಡಿದ್ದ ಯುದ್ದೋಪಕರಣಗಳ ಮೌಲ್ಯ ಯುಎಸ್ $ 2.4 ಬಿಲಿಯನ್ ಆಗಿದೆ ಎನ್ನಲಾಗಿದೆ. ಎರಡು ತಿಂಗಳ ಹಿಂದಿನ ದಂಗೆಯಿಂದ ಮ್ಯಾನ್ಮಾರ್ ಮಿಲಿಟರಿ ನಾಗರಿಕರನ್ನು ಭಯಭೀತಗೊಳಿಸುತ್ತಿದೆ ಫೆಬ್ರವರಿ 1 ರ ದಂಗೆಯ ನಂತರ ಮ್ಯಾನ್ಮಾರ್ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಏಷ್ಯಾದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಮ್ಯಾನ್ಮಾರ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಾಡುವ ವೆಚ್ಚದ ಎರಡು ಪಟ್ಟು ಹೆಚ್ಚು ಮಿಲಿಟರಿಗೆ ಖರ್ಚು ಮಾಡುತ್ತದೆ. ಮ್ಯಾನ್ಮಾರ್ ಸುಮಾರು 5 ಲಕ್ಷ ಸೈನಿಕರನ್ನು ಹೊಂದಿದ್ದು ವಿಶ್ವದ 38 ನೇ ಪ್ರಬಲ ಮಿಲಿಟರಿಯನ್ನು ಹೊಂದಿದೆ. ಮ್ಯಾನ್ಮಾರಿನ ಮಿಲಿಟರಿ ಮೊದಲು ದಮನಕಾರಿ ಶಕ್ತಿಯಾಗಿರಲಿಲ್ಲ. ಬರ್ಮಾದ ಮೊದಲ ರಾಷ್ಟ್ರೀಯ ಸೈನ್ಯವು ಎರಡನೆಯ ಮಹಾಯುದ್ಧ ಮತ್ತು ಸ್ವಾತಂತ್ರ್ಯದ ಹೋರಾಟದ ಫಲವಾಗಿ ಆಸ್ತಿತ್ವಕ್ಕೆ ಬಂದಿತು.
ಜಪಾನಿಯರಿಂದ ಮಿಲಿಟರಿ ತರಬೇತಿ ಪಡೆದ 30 ಒಡನಾಡಿಗಳು ಎಂಬ ಗುಂಪಿನ ನೇತೃತ್ವದಲ್ಲಿ ಬರ್ಮಾ ಸೇನೆಯು ಬ್ರಿಟಿಷರ ವಿರುದ್ಧ ಹೋರಾಡಲು ಜಪಾನ್ ನೊಂದಿಗೆ ಮೈತ್ರಿ ಮಾಡಿಕೊಂಡಿತು. ಈ ಕ್ರಾಂತಿಕಾರಿ ಶಕ್ತಿಯನ್ನು ಬೆಂಬಲಿಸಲು ಬರ್ಮಾ ನಾಗರಿಕರು ತಮ್ಮ ಚಿನ್ನ, ಆಭರಣಗಳನ್ನು ಮಾರಿ ಹಣ ನೀಡಿದರು. ಬರ್ಮಾ ಸ್ವಾತಂತ್ರ್ಯ ಸೇನೆಯು 1941 ರಲ್ಲಿ ಬ್ರಿಟಿಷರನ್ನು ಬಲವಂತವಾಗಿ ಹೊರಹಾಕಿತು. ನಂತರ ಜಪಾನಿಯರು ಬ್ರಿಟನ್, ಯು.ಎಸ್ ಮತ್ತು ಇತರ ಮಿತ್ರ ಪಡೆಗಳೊಂದಿಗೆ ಹೋರಾಡಿ ಬರ್ಮವನ್ನು ಆಕ್ರಮಿಸಿಕೊಂಡರು. ನಂತರ ಬರ್ಮಾದ ಸೈನ್ಯವು ಜಪಾನ್ ಅನ್ನು ಬರ್ಮಾದಿಂದ ಹೊರಹಾಕಲು ಯತ್ನಿಸಿದರು. ಗ್ರಾಮೀಣ ಗಡಿ ಪ್ರದೇಶಗಳಿಂದ ಬಂದ ಸಾವಿರಾರು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಬರ್ಮಾ ಸೈನ್ಯಕ್ಕೆ ಸೇರಿದರು.
ಜಪಾನಿಯರು 1945 ರಲ್ಲಿ ಮಿತ್ರಪಕ್ಷಗಳಿಗೆ ಶರಣಾದರು ಮತ್ತು ಬರ್ಮ ಸೇರಿದಂತೆ ಎಲ್ಲಾ ಆಕ್ರಮಿತ ಪ್ರದೇಶಗಳಿಂದ ಹಿಂದೆ ಸರಿದರು. ಆಗ ಬರ್ಮಾವನ್ನು ಮತ್ತೆ ಬ್ರಿಟಿಷರ ಕೈಗೆ ಒಪ್ಪಿಸಲಾಯಿತು. ಆದರೆ ಬ್ರಿಟಿಷರು ಬರ್ಮಾಗೆ ಸ್ವಾತಂತ್ರ್ಯವನ್ನು ನೀಡುವ ಮೊದಲು, ದೇಶದ ಬಹುಸಂಖ್ಯಾತ ಬೌದ್ದರು ಮತ್ತು ಅಲ್ಪಸಂಖ್ಯಾತ ಗುಂಪುಗಳು ಸಹ ಒಂದೇ ರಾಷ್ಟ್ರವಾಗಿ ಸ್ವಾತಂತ್ರ್ಯವನ್ನು ಬಯಸಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಬರ್ಮಾದ ಕ್ರಾಂತಿಕಾರಿ ಸೇನಾ ನಾಯಕ ಆಂಗ್ ಸ್ಯಾನ್ ಅವರು ಏಕೀಕೃತ, ಸ್ವತಂತ್ರ ಬರ್ಮ ದೇಶ ರಚನೆ ಬಗ್ಗೆ ಮಾತುಕತೆ ನಡೆಸಲು ವಿವಿಧ ಜನಾಂಗಗಳ ಮುಖಂಡರೊಂದಿಗೆ ಪಾಂಗ್ಲಾಂಗ್ ಪಟ್ಟಣದಲ್ಲಿ ಶೃಂಗಸಭೆಯನ್ನು ಕರೆದರು. ಆದರೆ ದೇಶದ ಆಗ್ನೇಯ ಭಾಗದಿಂದ ಹೆಚ್ಚಾಗಿ ಕ್ರಿಶ್ಚಿಯನ್ ಜನಸಂಖ್ಯೆಯಾದ ಕರೆನ್ಗೆ ತಮ್ಮದೇ ಆದ ಮುಕ್ತ ರಾಷ್ಟ್ರವನ್ನು ಸ್ಥಾಪಿಸುವಲ್ಲಿ ಬ್ರಿಟಿಷ್ ಸಹಾಯದ ಭರವಸೆ ನೀಡಲಾಗಿತ್ತು. ಕರೆನ್ ನಾಯಕರು 1947 ರ ಪ್ಯಾನ್ಲಾಂಗ್ ಒಪ್ಪಂದಕ್ಕೆ ಸೇರಲು ನಿರಾಕರಿಸಿದರು. 1948 ರಲ್ಲಿ ಬರ್ಮಾ ಸ್ವತಂತ್ರವಾಯಿತು. ಮುಂದಿನ ವರ್ಷ, ಕರೆನ್ ಪಡೆಗಳು ಹೊಸ ರಾಷ್ಟ್ರೀಯ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಯನ್ನು ನಡೆಸಿದವು. ಅಂದಿನಿಂದ, ಮ್ಯಾನ್ಮಾರ್ನ ಮಿಲಿಟರಿಯು , ಮೂಲಭೂತವಾಗಿ ಮ್ಯಾನ್ಮಾರ್ನ ಅಲ್ಪಸಂಖ್ಯಾತರ ವಿರುದ್ಧ ಹೋರಾಡಲು ಮಾತ್ರ ಅಸ್ತಿತ್ವದಲ್ಲಿದೆ.
ಸ್ವಾತಂತ್ರ್ಯದ ನಂತರ ಸುಮಾರು ಒಂದು ದಶಕದಿಂದ ಬರ್ಮಾದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿತ್ತು. ಆದರೆ ಸೈನ್ಯವು ಹೆಚ್ಚು ಶಕ್ತಿಯುತವಾಗಿತ್ತು. 1962 ಮತ್ತು 2010 ರ ನಡುವೆ, ಬರ್ಮಾ ಮಿಲಿಟರಿ ಸರ್ವಾಧಿಕಾರವಾಗಿತ್ತು. ಸಾಂದರ್ಭಿಕ ದಂಗೆಗಳು, ಚುನಾವಣೆಗಳು ಮತ್ತು ಹಲವಾರು ದಂಗೆಗಳ ಮೂಲಕ ಮಿಲಿಟರಿ ಆಡಳಿತವು ಅಸ್ತಿತ್ವದಲ್ಲಿತ್ತು, ಇದರಲ್ಲಿ ಒಂದು ಗುಂಪಿನ ಜನರಲ್ಗಳು ಇನ್ನೊಂದನ್ನು ಉರುಳಿಸಿದರು. ಸೇನಾಡಳಿತವು ಮ್ಯಾನ್ಮಾರ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿತು. ಮೊದಲಿಗೆ, ಇದು ತನ್ನ ಆಂತರಿಕ ಯುದ್ದಕ್ಕೆ ಅಕ್ಕಿ ರಫ್ತು ಮಾಡಲು ಮತ್ತು ಯು.ಎಸ್ ಮತ್ತು ಸೋವಿಯತ್ ಒಕ್ಕೂಟದಿಂದ ಸಾಲ ಪಡೆಯಿತು. 1962 ರಲ್ಲಿ, ಮಿಲಿಟರಿ ಆಡಳಿತವು ಲಂಡನ್ನಲ್ಲಿ ಬರ್ಮಾ ಟ್ರೇಡ್ ಲಿಮಿಟೆಡ್ ಅನ್ನು ಸ್ಥಾಪಿಸಿತು. ಇದು ದೇಶದ ರಫ್ತು ವಹಿವಾಟು ನಿಯಂತ್ರಿಸುತಿತ್ತು. ಮಿಲಿಟರಿ-ನಿಯಂತ್ರಿತ ಈ ಆರ್ಥಿಕತೆಯು ಬರ್ಮಾದ ಜನರಲ್ಗಳನ್ನು ಶ್ರೀಮಂತಗೊಳಿಸಿತು, ಆದರೆ ಹಣವು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೆ ಬಳಕೆ ಆಗಲಿಲ್ಲ. 1987 ರಲ್ಲಿ, ವಿಶ್ವಸಂಸ್ಥೆಯು ವಿಶ್ವದ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ” ಬರ್ಮವನ್ನು ಗುರುತಿಸಿದೆ. ಬರ್ಮಾದ ಹೆಸರನ್ನು 1989 ರಲ್ಲಿ ಮ್ಯಾನ್ಮಾರ್ ಎಂದು ಬದಲಾಯಿಸಲಾಯಿತು.
ಇಂದು, ಮ್ಯಾನ್ಮಾರ್ನಲ್ಲಿ ದೂರಸಂಪರ್ಕದಿಂದ ಹಿಡಿದು ಔಷಧಿಗಳವರೆಗೆ ಸಂಪೂರ್ಣ ವಹಿವಾಟನ್ನು ಅಲ್ಲಿನ ಮಿಲಿಟರಿ ನಿಯಂತ್ರಿಸುತ್ತದೆ. ಮಿಲಿಟರಿಯ ವಿಸ್ತಾರವಾದ ವ್ಯಾಪಾರ ಜಾಲಗಳನ್ನು ಹೊಂದಿದೆ. ಉದಾಹರಣೆಗೆ, 2008 ರಲ್ಲಿ, ಮ್ಯಾನ್ಮಾರ್ ಮಿಲಿಟರಿ ಹೊಸ ಸಂವಿಧಾನಕ್ಕೆ ಅಧಿಕೃತವಾಗಿ ಸಂಸತ್ತಿನಲ್ಲಿ 75% ಸ್ಥಾನಗಳನ್ನು ನಾಗರಿಕ ರಾಜಕಾರಣಿಗಳಿಗೆ ನೀಡಿತು ಮತ್ತು 25% ಸೈನ್ಯದ ಪ್ರತಿನಿಧಿಗಳಿಗೆ ಮೀಸಲಿಟ್ಟಿತು. ಅನಧಿಕೃತವಾಗಿ, ಮಿಲಿಟರಿಯು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದಿತ್ತು. ಏಳು ದಶಕಗಳಿಂದ ಸೇನೆಯ ದಬ್ಬಾಳಿಕೆಯ ವಿರುದ್ದ ತಮ್ಮ ದಂಗೆಯನ್ನು ನಡೆಸುತ್ತಿರುವ ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತ ಗುಂಪುಗಳಲ್ಲಿ ರೋಹಿಂಗ್ಯಾ ಮುಸ್ಲಿಮರು ಸೇರಿದ್ದಾರೆ. 2015 ರ ಚುನಾವಣೆಗಳು ಈ ಅರೆ-ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮಹತ್ವದ ಘಟ್ಟವನ್ನು ತಲುಪಬೇಕಿತ್ತು. ಇದರಲ್ಲಿ ಕ್ರಾಂತಿಕಾರಿ ಆಂಗ್ ಸಾನ್ ಅವರ ಪುತ್ರಿ ಮತ್ತು ಮೊದಲಿನ ಪ್ರಜಾಪ್ರಭುತ್ವ ದಂಗೆಯ ನಾಯಕಿ ಆಂಗ್ ಸಾನ್ ಸೂಕಿ ಮತ್ತು ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಭರ್ಜರಿ ಜಯಗಳಿಸಿತು. ಮಿಲಿಟರಿಯು ರೋಹಿಂಗ್ಯಾಗಳ ವಿರುದ್ದ ನಡೆಸಿದ ಆಕ್ರಮಣಗಳನ್ನು ತಡೆಯುವಲ್ಲಿ ವಿಫಲವಾದ ಕಾರಣ ಸೂಕಿ ಟೀಕೆಗಳನ್ನು ಎದುರಿಸಬೇಕಾಯಿತು, . ಹಾಗಿದ್ದರೂ, ಫೆಬ್ರವರಿ 2021 ರ ದಂಗೆಯಲ್ಲಿ ಅವರನ್ನು ಪದಚ್ಯುತಗೊಳಿಸಲಾಯಿತು ಮತ್ತು ಈಗ ಅಜ್ಞಾತ ಸ್ಥಳದಲ್ಲಿ ಬಂಧಿಸಿಡಲಾಗಿದೆ. ಮಿಲಿಟರಿ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ನಾಗರಿಕರು ಕರೆನ್ ಪ್ರದೇಶ ಮತ್ತು ಇತರ ಬಂಡುಕೋರರ ಹಿಡಿತದಲ್ಲಿರುವ ಜನಾಂಗೀಯ ಪ್ರದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.
ಮ್ಯಾನ್ಮಾರ್ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬರ್ಮಾದ ಮೇಲೆ ಕಠಿಣವಾದ ನಿರ್ಬಂಧಗಳನ್ನು ವಿಧಿಸಲು ಮತ್ತು ಕಂಪನಿಗಳು ವ್ಯಾಪಾರವನ್ನು ಕಡಿದುಕೊಳ್ಳಲು ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ಜಪಾನ್ನ ಕಿರಿನ್ ಬಿಯರ್ ಮತ್ತು ಜರ್ಮನ್ ಕಂಪನಿಯೊಂದು ಮ್ಯಾನ್ಮಾರ್ನೊಂದಿಗೆ ಸಂಬಂಧವನ್ನು ಕಡಿದುಕೊಂಡಿವೆ. ಈ ನಡುವೆ ದೇಶದೊಳಗೆ ಅಸಹಕಾರ ಚಳುವಳಿ ಮುಂದುವರೆದಿದೆ. ಮಿಲಿಟರಿಯ ಆರ್ಥಿಕತೆಗೆ ಹೊಡೆತ ನೀಡಿದರೆ ಅದರ ಪ್ರಾಬಲ್ಯ ಕುಗ್ಗಿಸಿ ಪ್ರಜಾ ಸರ್ಕಾರ ರಚಿಸಬಹುದಾಗಿದೆ ಎಂದು ನಾಗರಿಕ ಅಭಿಪ್ರಾಯವಾಗಿದೆ.





