
ಬೆಂಗಳೂರು : ಮೋಡ ಕವಿದ ವಾತಾವರಣ, ಬಿರು ಬಿರು ಬಿಸಿಲಿನ ನಡುವೆಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಮುಂಜಾನೆಯಿಂದಲೇ ಜನ ಸಾಗರ ಹರಿದುಬಂದಿತ್ತು. ಸಾಲು ಸಾಲು ರಜೆ ಇರುವುದರಿಂದ ಎಂಟನೇ ದಿನವಾದ ಶುಕ್ರವಾರಕ್ಕೆ ಲಕ್ಷಾಂತರ ಜನ ಆಗಮಿಸಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಅನಾವರಣಗೊಂಡು ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಮಕ್ಕಳು, ಪೋಷಕರು, ಯುವಕರು, ಯುವತಿಯರು ವೃದ್ಧರೂ ಸೇರಿದಂತೆ ಕುಟುಂಬ ಸಮೇತರಾಗಿ ಸಸ್ಯಕಾಶಿಗೆ ಆಗಮಿಸಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಸಸ್ಯಕಾಶಿಗೆ ಇದುವರೆಗೆ 3 ಲಕ್ಷ ಜನರು ಭೇಟಿ ನೀಡಿದ್ದು, ಬರೋಬ್ಬರಿ 1 ಕೋಟಿ 3 ಲಕ್ಷ 76 ಸಾವಿರ ರೂಪಾಯಿ ಆದಾಯ ಹರಿದು ಬಂದಿದೆ. ನಿನ್ನೆ ಒಂದು ದಿನ ಸಾಯಂಕಾಲ 4 ಗಂಟೆ ಸಮಯಕ್ಕೆ 1 ಲಕ್ಷ 15 ಸಾವಿರದಷ್ಟು ಜನರು ಭೇಟಿ ನೀಡಿದ್ದರು ಎಂದು ವರದಿಯಾಗಿದೆ.




