ಪಂಜಾಬ್ ವಿಧಾನಸಭೆ ಚುನಾವಣೆಗೆ ಸಮೀಪಿಸಿರುವಾಗಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಹೈ ಕಮಾಂಡ್ಗೆ ಮತ್ತೊಂದು ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಪಂಜಾಬ್ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಪಂಜಾಬಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುವುದು ಪಂಜಾಬಿನ ಜನರೇ ಹೊರೆತು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ ಎಂದು ಹೇಳುವ ಮೂಲಕ ಮತ್ತೆ ಕಾಂಗ್ರೆಸ್ ಹೈಕಮಾಂಡ್ಗೆ ಸಿದ್ದು ಪರೋಕ್ಷ ಟಾಂಗ್ ನೀಡಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್ ನಲ್ಲಿ ತಮ್ಮ ವಶದಲ್ಲಿರುವ ರಾಜ್ಯವೊಂದನ್ನು ಉಳಿಸಿಕೊಳ್ಳುವ ಬಗ್ಗೆ ದೇಶಾದ್ಯಂತ ಕಾಂಗ್ರೆಸಿಗರು ಚಿಂತಿಸುತ್ತಿದ್ದಾರೆ. ಈತ್ತ ಆಮ್ ಆದ್ಮಿ ಪಕ್ಷ ದಿನದಿಂದ ದಿನಕ್ಕೆ ತಮ್ಮ ಬೇರನ್ನು ಗಟ್ಟಿಗೊಳಿಸುತ್ತಿದೆ. ಆಂತರಿಕ ಕಲಹದಿಂದಾಗಿ ಅಮರಿಂಧರ್ ಸಿಂಗ್ ರನ್ನು ಈಗ ಕಾಂಗ್ರೆಸ್ ಕಳೆದುಕೊಂಡಿದೆ.
2017ರಲ್ಲಿ ಕಾಂಗ್ರೆಸ್ ಸೇರಿದ ಸಿಧು ವಿಧಾನಸಭೆಗೆ ಆಯ್ಕೆಯಾಗಿ, ಅಮರೀಂದರ್ ಸಂಪುಟದಲ್ಲಿ ಡಿಸಿಎಂ ಪಟ್ಟಕ್ಕಾಗಿ ಪಟ್ಟುಹಿಡಿದು ನಂತರದಲ್ಲಿ ಪದೇ ಪದೇ ಅಮರೀಂದರ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದರು. ಸಚಿವ ಹುದ್ದೆಯಲ್ಲಿದ್ದರೂ ಸರ್ಕಾರವನ್ನು ಟೀಕಿಸುವುದು ಬಿಡಲಿಲ್ಲ.
ಈ ನಡುವೆ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸಿಧು ಸ್ಕೆಚ್ ಹಾಕಿ ಹೈಕಮಾಂಡ್ ಒಪ್ಪದಿದ್ದಾಗ ಆಮ್ಆದ್ಮಿ ಸೇರಲು ಸಿದ್ಧತೆ ನಡೆಸಿದ್ದರು. ಕೊನೆಗೆ ರಾಜ್ಯದಲ್ಲಿ ಪಕ್ಷ ಉಳಿಸಿಕೊಳ್ಳುವ ಸಲುವಾಗಿ ಸಿಧುಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಯಿತು. ಆ ಹುದ್ದೆ ವಹಿಸಿಕೊಂಡ ಬಳಿಕವೂ ಆಡಳಿತ ವಿರುದ್ಧವಾಗಿ ಚಟುವಟಿಕೆ ನಡೆಸಿಕೊಂಡೇ ಬಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ.
ಸಿಧು ಬಿಸಿತುಪ್ಪವಾಗಿ ಕಾಂಗ್ರೆಸನ್ನು ಕಾಡುತ್ತಿದ್ದು, ಬರುವ ಚುನಾವಣೆಯಲ್ಲಿ ಪಂಜಾಬ್ ಅನ್ನು ಕಳೆದುಕೊಳ್ಳುವಂತಹ ಬೆಳವಣಿಗೆಗಳು ಕಾಂಗ್ರೆಸಲ್ಲಿ ನಡೆಯುತ್ತಿರುವುದು ನಿಂತಿಲ್ಲ. ಮೊದಲು ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಅವರ ವಿರುದ್ದ ಮುನಿಸಿಕೊಂಡಿದ್ದ ಸಿಧು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ತಣ್ಣಗಾಗಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದ್ದರೂ ಆದರ ನಂತರ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ತಾರಕಕ್ಕೇರಲಾರಂಭಿಸುತ್ತಿದೆ.
ರಾಜ್ಯ ಪೊಲೀಸ್ ಮಾಹಾ ನಿರ್ದೇಶಕ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಆನೆ ನಡೆದದ್ದೇ ದಾರಿ ಎಂಬಂತೆ ಸಿಧು ತಾನೋರ್ವ ಪಕ್ಷದ ರಾಜ್ಯಾಧ್ಯಕ್ಷ ಎಂಬುದನ್ನು ಮರೆತು ವರ್ತಿಸಿದ್ದೇ ಅಧಿಕವಾಗಿದೆ. ಅಮರಿಂಧರ್ ಸಿಂಗರನ್ನು ಸಿಧುಗಾಗಿ ಕಾಂಗ್ರೆಸ್ ಕಳೆದುಕೊಂಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ರಾಜೀನಾಮೆಗೆ ಪ್ರಮುಖ ಕಾರಣಕರ್ತರಾದ ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಇದೀಗ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವ ವಿಚಾರದಲ್ಲಿ ಹೈಕಮಾಂಡ್ ತಲೆಬಿಸಿಯಾಗುವ ಹೇಳಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್ ವಕ್ತಾರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮುಂಬರುವ ಚುನಾವಣೆಗೆ ಪಂಜಾಬ್ನಲ್ಲಿ ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಸುನೀಲ್ ಜಾಖರ್ ಒಟ್ಟಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರೆ .ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುರವರ ಪತ್ರಿಕಾಗೋಷ್ಠಿಯ ಬ್ಯಾನರ್ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಭಾವಚಿತ್ರಗಳು ಇರಲೇ ಇಲ್ಲ. ಇದು ಈಗಲೂ ಪಂಜಾಬ್ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳಿದ್ದಲ್ಲದೆ ಚರಣ್ ಚಿತ್ ಸಿಂಗ್ ಚನ್ನಿಯವರಿಗೆ ಭಾರಿ ಮುಖಭಂಗ ಮಾಡಿದೆ.
ಮುಂದಿನ ತಿಂಗಳು ಪಂಜಾಬ್ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಪಕ್ಷದಲ್ಲಿ ಆಂತರಿಕ ಗೊಂದಲ ಉಂಟಾದರೆ, ಚುನಾವಣೆಯನ್ನು ಗೆಲ್ಲುವುದು ಕಷ್ಟ ಎಂದು ಸಾಧ್ಯವಾದಷ್ಟು ಸ್ಥಳೀಯ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡುತ್ತಿದ್ದಾರೆ. ಆದರೆ, ಸಿಧು ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ಆಗುಹೋಗುಗಳ ಮೇಲೆ ಹಿಡಿತ ಸಾಧಿಸಲು ನಿತ್ಯ ಒಂದೊಂದು ವರಸೆ ತೋರಿಸುತ್ತಿದ್ದಾರೆ.
ಒಟ್ಟಿನಲ್ಲಿ ಸಿಧು ಕಾಂಗ್ರೆಸಿಗೆ ಹಾನಿಯಾಗುವಂತಹ ಆಂತರಿಕ ಕಲಹಕ್ಕೆ ಬಹಳಷ್ಟು ಕೊಡುಗೆ ನೀಡಿದವರಾಗಿದ್ದಾರೆ. ಈಗಿನ ಹೇಳಿಕೆಯೂ ನಾನು ಹೈಕಮಾಡನ್ನೇ ಕೇರ್ ಮಾಡಲ್ಲ ಎಂಬ ಸಂದೇಶವಾಗಿದೆ. ಚುನಾವಣಾ ಹೊಸ್ತಿಲಲ್ಲಿರುವ ಪಂಜಾಬ್ ಕಾಂಗ್ರೆಸಿನ ಭದ್ರಕೋಟೆಯಾಗಿಯೇ ಇರಲು ಸಿಧು ವರ್ತನೆ ಬದಲಾಯಿಸಬೇಕು ಎಂಬುದು ರಾಜಕೀಯ ಚಾಣಾಕ್ಷರ ಅಭಿಮತವಾಗಿದೆ. ಪಕ್ಷದ ರಾಷ್ತ್ರೀಯ ನಾಯಕರನ್ನು ಒಪ್ಪದ ರಾಜ್ಯ ನಾಯಕರು ಯಾವತ್ತೂ ಆ ಪಕ್ಷಕ್ಕೆ ಅಪಾಯಕಾರಿ ಎಂಬ ಮಾತೂ ಸಿಧುಗೆ ಅನ್ವಯಿಸುತ್ತದೆ.