ಕೊಪ್ಪಳ: ಐತಿಹಾಸಿಕ ಮೈಸೂರು ದಸರಾ (Mysuru Dasara) ಮಹೋತ್ಸವವನ್ನು ಉದ್ಘಾಟಿಸಲು ಸಮ್ಮತಿಸಿರುವ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು (Gavisiddeshwara Mahaswamiji) ಇಂದು ಮಠದಲ್ಲಿ ಭೇಟಿ ಮಾಡಿದ ಸಚಿವ ಶಿವರಾಜ್ ತಂಗಡಗಿ ಶ್ರೀಗಳ ಆಶೀರ್ವಾದ ಪಡೆದು ಫಲಪುಷ್ಪ ನೀಡಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯವರ ಸಾನ್ನಿಧ್ಯ ಹಾಗೂ ಆಶೀರ್ವಾದ ದೊರಕಿರುವುದು ಮಹೋತ್ಸವಕ್ಕೆ ಮತ್ತಷ್ಟು ಮೆರುಗು, ಶೋಭೆ ಮತ್ತು ಪಾವಿತ್ರ್ಯವನ್ನು ತರಲಿದೆ. ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಪೂಜ್ಯ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದು, ಅತ್ಯಂತ ಪ್ರೀತಿ-ವಿಶ್ವಾಸದಿಂದಲೇ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಶ್ರೀಗಳ ದಿವ್ಯ ಹಸ್ತದಿಂದ ದಸರಾ ಉದ್ಘಾಟನೆಯಾಗುತ್ತಿರುವುದು ಕೊಪ್ಪಳ ಜಿಲ್ಲೆಗೆ ಒಲಿದ ದೊಡ್ಡ ಸೌಭಾಗ್ಯ ಹಾಗೂ ನಮ್ಮ ಸರ್ಕಾರಕ್ಕೆ ಅಪಾರ ಹೆಮ್ಮೆ ತರುವ ವಿಚಾರ ಎಂದು ತಿಳಿಸಿದರು.

ಇದೇ ವೇಳೆ ಶ್ರೀಗಳ ಬಗ್ಗೆ ಕೇಳಿಬರುತ್ತಿರುವ ವದಂತಿಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಭಿನವ ಗವಿಸಿದ್ದೇಶ್ವರ ಶ್ರೀಗಳು ಅತ್ಯಂತ ಸೂಕ್ಷ್ಮ ಹಾಗೂ ಸರಳ ಸ್ವಭಾವದವರು. ಶ್ರೀಗಳು ಎಂದಿಗೂ ಅದ್ಧೂರಿತನವನ್ನು ಬಯಸುವುದಿಲ್ಲ, ಇದನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಇಂತಹ ಮಹಾನ್ ಸಂತರ ಬಗ್ಗೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ನೋಟಿಸ್ ಜಾರಿ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಈ ಆಹ್ವಾನ ಸಲ್ಲಿಕೆ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು.






