ಬೆಂಗಳೂರು : ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಮಾಫಿ ಸಾಕ್ಷಿ ಪ್ರದೂಷ್ (Pradoosh) ವಿಚಾರಣೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ನ್ಯಾಯಾಲಯವು ಪ್ರಕರಣದ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದು, ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಅಧಿಕೃತವಾಗಿ ಪ್ರಕ್ರಿಯೆಯನ್ನು ಆರಂಭಿಸಿದೆ.

ವಿಚಾರಣೆ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ನೇರವಾಗಿ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದೆಲ್ಲರೂ ಕೋರ್ಟ್ ಹಾಲ್‌ನಿಂದ ಹೊರಹೋಗುವಂತೆ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ನಡುವೆಯೇ ಪ್ರದೂಷ್ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಗೆ ಕೋರ್ಟ್ ಚಾಲನೆ ನೀಡಿದೆ. ಇನ್ನು ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾಗೌಡ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಹಾಜರಾಗಿದ್ದು, ಉಳಿದ ಆರೋಪಿಗಳು ಕೂಡ ಕೋರ್ಟ್ ಎದುರು ವಿಚಾರಣೆಗೆ ಉಪಸ್ಥಿತರಾಗಿದ್ದಾರೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ವಕೀಲರು, ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ಮುಂದೂಡಬೇಕು ಎಂದು ಕೋರಿ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿರುವ ವಿಷಯವನ್ನು ಸೆಷನ್ಸ್ ನ್ಯಾಯಾಲಯದ ಗಮನಕ್ಕೆ ತಂದು ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಇದೇ ರೀತಿಯ ಮನವಿಯನ್ನು ಕೋರ್ಟ್ ಶನಿವಾರವೇ ತಿರಸ್ಕರಿಸಿದೆ ಎಂದು ನೆನಪಿಸಿದ ಅವರು, ಸುಪ್ರೀಂಕೋರ್ಟ್ ಮಾರ್ಗಸೂಚಿ ಅನ್ವಯ ಆರೋಪಿಗಳ ಪರ ವಕೀಲರು ತ್ವರಿತ ವಿಚಾರಣೆಗೆ ಸಹಕರಿಸಬೇಕು ಎಂದು ಪ್ರಬಲವಾಗಿ ವಾದಿಸಿದರು.
ಇತ್ತಂಡಗಳ ವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಮುಂದುವರಿಸಲು ನಿರ್ಧರಿಸಿದರು. ಗೌಪ್ಯ ವಿಚಾರಣೆ ಹಿನ್ನೆಲೆಯಲ್ಲಿ ಕೇಸ್‌ಗೆ ಸಂಬಂಧಿಸಿದ ವಕೀಲರು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಕೋರ್ಟ್ ಹಾಲ್‌ನಿಂದ ಹೊರಹೋಗುವಂತೆ ನ್ಯಾಯಾಧೀಶರು ಸೂಚನೆ ನೀಡಿದರು. ಬಳಿಕ ನ್ಯಾಯಾಲಯವು ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಮಾಫಿ ಸಾಕ್ಷಿ ಪ್ರದೂಷ್‌ನ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿತು.






